Thursday, September 19, 2024

ಪ್ರಾಯೋಗಿಕ ಆವೃತ್ತಿ

ಗೋ ಮಾಂಸ ಸಾಗಾಟ| ಶ್ರೀರಾಮಸೇನೆ ಕಾರ್ಯಕರ್ತರಿಂದ ಹಲ್ಲೆ- ಕಾರಿಗೆ ಬೆಂಕಿ

ಅಕ್ರಮವಾಗಿ ಗೋ ಮಾಂಸ ಸಾಗಾಟ ಮಾಡುತ್ತಿದ್ದ ಆರೋಪದಲ್ಲಿ ವಾಹನಗಳನ್ನು ತಡೆದ ಶ್ರೀರಾಮಸೇನೆ ಕಾರ್ಯಕರ್ತರು ಗೋಸಾಗಾಟಗಾರರ ಮೇಲೆ ಹಲ್ಲೆ ನಡೆಸಿ ಕಾರೊಂದಕ್ಕೆ ಬೆಂಕಿ ಹಚ್ಚಿದ ಘಟನೆ ದೊಡ್ಡಬಳ್ಳಾಪುರ ನಗರದಲ್ಲಿ ಇಂದು ಮುಂಜಾನೆ ನಡೆದಿದೆ.

ದೊಡ್ಡಬಳ್ಳಾಪುರ ನಗರದ ಐಬಿ ವೃತ್ತದ ಬಳಿ ಇಂದು ಬೆಳಗ್ಗೆ ಗೋ ಮಾಂಸ ಸಾಗಾಟ ಮಾಡುತ್ತಿದ್ದ ವಾಹನವನ್ನು ಶ್ರೀ ರಾಮ ಸೇನೆ ಕಾರ್ಯಕರ್ತರು ತಡೆದಿದ್ದಾರೆ. ಬಳಿಕ ವಾಹನಗಳಲ್ಲಿದ್ದವರ ಮೇಲೆ ಹಲ್ಲೆ ನಡೆಸಿದ್ದಲ್ಲದೆ, ಆ ವಾಹನ ಚಾಲಕರ ತಲೆಯ ಮೇಲೆ ಗೋವಿನ ತಲೆಯನ್ನು ಇಡುವಂತೆ ಬಲವಂತ ಮಾಡಿದ್ದಾರೆ.

ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವಿಡಿಯೋದಲ್ಲಿ ಶ್ರೀರಾಮ ಸೇನೆ ಕಾರ್ಯಕರ್ತರು ಜೈಶ್ರೀರಾಂ ಎಂದು ಜೈಕಾರ ಹಾಕುತ್ತಿರುವುದು, ಮಾಂಸಗಳನ್ನು ವಾಹನದಿಂದ ಕೆಳಕ್ಕೆ ಎಸೆದಿರುವುದು ಕಂಡು ಬಂದಿದೆ.

ಆಂಧ್ರಪ್ರದೇಶದಿಂದ ಗೋಮಾಂಸವನ್ನು ಯಲಹಂಕ ರಾಜ್ಯ ಹೆದ್ದಾರಿ ಮಾರ್ಗವಾಗಿ ಅಕ್ರಮವಾಗಿ ಸಾಗಿಸುತ್ತಿದ್ದರು ಎಂದು ಆರೋಪಿಸಲಾಗಿದೆ.

ಶ್ರೀರಾಮ ಸೇನೆ ಕಾರ್ಯಕರ್ತರು ಈ ವೇಳೆ ಕಾರೊಂದಕ್ಕೆ ಬೆಂಕಿ ಹಚ್ಚಿದ್ದು, ಸಂಪೂರ್ಣ ಸುಟ್ಟು ಭಸ್ಮವಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ.

ಈ ಘಟನೆಯಿಂದ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು. ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಗುಂಪನ್ನು ಚದುರಿಸಿದ್ದಾರೆ. ಗೋ ಮಾಂಸ ಸಾಗಾಟ ಮಾಡುತ್ತಿದ್ದ ಐದು ವಾಹನ ಹಾಗೂ ಅವುಗಳ ಚಾಲಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಈ ಘಟನೆಯ ಹಿನ್ನೆಲೆಯಲ್ಲಿ ನಗರದೆಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!