Friday, May 17, 2024

ಪ್ರಾಯೋಗಿಕ ಆವೃತ್ತಿ

ಜೆಡಿಎಸ್ ಶವಪೆಟ್ಟಿಗೆಗೆ ಮೊದಲ ಮೊಳೆ ಜಡಿದರಾ ಮೋದಿ!!??…. ಸೀಟು ಹಂಚಿಕೆಯಲ್ಲಿ ಜೆಡಿಎಸ್‌ಗೆ ಕೇವಲ 1 ಸ್ಥಾನ!!??….

✍️ ಮಾಚಯ್ಯ ಎಂ ಹಿಪ್ಪರಗಿ

ಇದು ಬಿಜೆಪಿಯ ದಿಲ್ಲಿ ಮೂಲಗಳಿಂದಲೇ ಬಂದ ಮಾಹಿತಿ. ಸೀಟು ಹಂಚಿಕೆ ಮಾಡಿಕೊಳ್ಳಲೆಂದೇ ಇಡೀ ಜೆಡಿಎಸ್ ‘ಕುಟುಂಬ ನಿಯೋಗ’ ಪ್ರಧಾನಿ ಮೋದಿಯವರನ್ನು ಭೇಟಿಯಾಗಿ ಬಂದಿದೆ. ಈ ಎರಡೂ ಪಕ್ಷಗಳ ನಡುವೆ ಮೈತ್ರಿ ಮಾತುಕತೆ ಶುರುವಾದ ದಿನದಿಂದಲೂ, ಈ ಮೈತ್ರಿಯಿಂದ ಬಿಜೆಪಿಗೆ ಎಷ್ಟು ಲಾಭವಾಗಲಿದೆಯೋ, ಅಷ್ಟೇ ದೊಡ್ಡ ಮತ್ತು irreversible ಡ್ಯಾಮೇಜ್ ಜೆಡಿಎಸ್‌ಗೆ ಆಗಲಿದೆ ಎಂದು ರಾಜಕೀಯ ವಿಶ್ಲೇಷಕರು ಭವಿಷ್ಯ ನುಡಿಯುತ್ತಿದ್ದಾರೆ. ಈ ಮೊದಲು, ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ಅವಸಾನದ ಅಂಚು ತಲುಪಿದ ಶಿವಸೇನೆ, ಅಕಾಲಿದಳ, ಡಿಎಂಕೆ, ಬಿಎಸ್‌ಪಿ ಮೊದಲಾದ ರಾಜಕೀಯ ಪಕ್ಷಗಳ ನಿದರ್ಶನಗಳನ್ನಿಟ್ಟುಕೊಂಡು ನೋಡಿದಾಗ ಅದು ನಿಜ ಅನ್ನಿಸದಿರದು.

ಗೌಡರ ಫ್ಯಾಮಿಲಿಯ ದಿಲ್ಲಿ ಭೇಟಿಯ ನಂತರ ಅದು ನಿಜವಾಗುವ ಮೊದಲ ಸೂಚನೆ ಗೋಚರಿಸಲಾರಂಭಿಸಿದೆ. ಮೈತ್ರಿಯ ಮಾತುಕತೆ ಶುರುವಾದಾಗ ಜೆಡಿಎಸ್ ಆರು ಸ್ಥಾನಗಳನ್ನು ಕೇಳಲಿದೆ ಎಂಬ ಸುದ್ದಿಗಳು ಹರಿದಾಡಿದ್ದವು. ನಂತರ ಅದು ನಾಲ್ಕು ಸ್ಥಾನಗಳಿಗೆ ಕುಸಿದಿತ್ತು. ಆಮೇಲೆ ಹಾಸನ, ಮಂಡ್ಯ, ಬೆಂಗಳೂರು ಉತ್ತರ ಅಥವಾ ಚಿಕ್ಕಬಳ್ಳಾಪುರ (ಎರಡರಲ್ಲಿ ಒಂದು) ಹೀಗೆ ಮೂರು ಕ್ಷೇತ್ರಗಳಿಗಷ್ಟೇ ಜೆಡಿಎಸ್‌ಗೆ ಅವಕಾಶ ಸಿಗಲಿದೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ ಈಗ ಬಂದಿರುವ ಸುದ್ದಿಯನ್ನು ನಂಬುವುದಾದರೆ, 28 ಲೋಕಸಭಾ ಸ್ಥಾನಗಳ ಪೈಕಿ 27 ಸ್ಥಾನಗಳನ್ನು ತಾನಿಟ್ಟುಕೊಂಡಿರುವ ಬಿಜೆಪಿ, ಜೆಡಿಎಸ್‌ಗೆ ಕೇವಲ ಒಂದು ಸ್ಥಾನವನ್ನಷ್ಟೇ ಬಿಟ್ಟುಕೊಡುವ ಷರತ್ತು ಒಡ್ಡಿದೆಯಂತೆ. ಈ ಪ್ರಸ್ತಾಪಕ್ಕೆ ಗೌಡರ ಕುಟುಂಬವನ್ನು ಹೆಚ್ಚೂಕಮ್ಮಿ ಒಪ್ಪಿಸಿರುವ ಮೋದಿ ಆ ಮೂಲಕ ಜೆಡಿಎಸ್ ಪಕ್ಷದ ಅಸ್ತಿತ್ವನ್ನು ಮಟ್ಟಹಾಕುವ ಮೊದಲ ಹೆಜ್ಜೆಯನ್ನಿರಿಸಿದ್ದಾರೆ.

ಹೌದು, ಜೆಡಿಎಸ್ ಕೌಟುಂಬಿಕ ನಿಯೋಗ ದಿಲ್ಲಿಗೆ ತೆರಳುವ ಮುನ್ನ ರಾಜ್ಯ ರಾಜಕಾರಣದ ಮೊಗಸಾಲೆಯಲ್ಲಿ ಒಂದು ವಿಷಯ ಮುನ್ನೆಲೆಗೆ ಬಂದಿತ್ತು. ಕುಮಾರಸ್ವಾಮಿಯವರು ಲೋಕಸಭಾ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಹಾಗೂ ಎನ್‌ಡಿಎ ಕೂಟ ಮತ್ತೆ ಅಧಿಕಾರಕ್ಕೇರಿದರೆ ಕೇಂದ್ರ ಮಂತ್ರಿಯಾಗಲಿದ್ದಾರೆ ಎಂಬುದು ಆ ಚರ್ಚೆ. ಬಿಜೆಪಿಯ ಕೆ ಎಸ್ ಈಶ್ವರಪ್ಪ ಕೂಡಾ ‘ಕುಮಾರಸ್ವಾಮಿಯವರು ಕೇಂದ್ರ ಮಂತ್ರಿಯಾಗುವುದಾದರೆ ಸ್ವಾಗತಿಸುತ್ತೇನೆ’ ಎಂದು ಹೇಳುವ ಮೂಲಕ ಆ ಚರ್ಚೆಗೆ ಅಧಿಕೃತ ಮುದ್ರೆಯೊತ್ತಿದ್ದರು. ಹಾಗಾಗಿ ಜೆಡಿಎಸ್‌ಗೆ ಏನಿಲ್ಲವೆಂದರು ಎರಡು ಸ್ಥಾನಗಳು ಸಿಗಲಿವೆ ಎಂಬ ನಿರೀಕ್ಷೆ ಇತ್ತು. ಎಷ್ಟೇ ಸ್ಥಾನ ಸಿಕ್ಕರೂ ಜೆಡಿಎಸ್‌ನಲ್ಲಿ ಸ್ಪರ್ಧಿಸುವ ಹುರಿಯಾಳುಗಳು ಅಂತ ಇರೋದು ಅವರ ಕುಟುಂಬ ಸದಸ್ಯರು ಮಾತ್ರ!

ಆದರೆ ಮೋದಿ ಭೇಟಿ ಮಾಡಿ ಹೊರಬಂದ ಕುಮಾರಸ್ವಾಮಿ ’ನಾನು ಈ ಸಲ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದ್ದಾರೆ. ಅಲ್ಲದೇ, ತಮ್ಮ ಮಗ ನಿಖಿಲ್ ಕೂಡಾ ಸ್ಪರ್ಧಿಸುವುದಿಲ್ಲ ಎಂದಿದ್ದಾರೆ. ಇನ್ನು ದೇವೇಗೌಡರಿಗಂತೂ, ವಯಸ್ಸಾಗಿರುವ ಕಾರಣ ಅವರೂ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ರೇವಣ್ಣನಂತೂ ಹೊಳೆನರಸೀಪುರ ಅಸೆಂಬ್ಲಿ ಕ್ಷೇತ್ರದಾಚೆಗೆ ಕಾಲಿಡುವ ಸಾಹಸಕ್ಕೆ ಯಾವತ್ತೂ ಮುಂದಾದವರಲ್ಲ. ತೀರಾ ಇತ್ತೀಚೆಗೆ ತಾನಾಗಿಯೇ ಮಾಡಿಕೊಂಡ ‘ಒಂದು ಕೋಟಿ ಕಾರಿನ ಅವಾಂತರ’ದಿಂದ, ಭವಾನಿ ರೇವಣ್ಣ ಸ್ಪರ್ಧಿಸಿದರೂ ಗೆಲ್ಲುವ ಸಾಧ್ಯತೆ ಕಷ್ಟಸಾಧ್ಯ. ಆ ರಿಸ್ಕ್ ಅನ್ನು ಬಿಜೆಪಿ ಸುತಾರಾಂ ತೆಗೆದುಕೊಳ್ಳುವುದಿಲ್ಲ. ಮಂಡ್ಯದಲ್ಲಿ ಸಿ ಎಸ್ ಪುಟ್ಟರಾಜು ಜೆಡಿಎಸ್‌ನಿಂದ ಸ್ಪರ್ಧಿಸುವ ಆಕಾಂಕ್ಷಿಯಾಗಿದ್ದಾರಾದರೂ, ಈಗ ಬಿಜೆಪಿ ಸೇರಿಕೊಂಡಿರುವ ಸುಮಲತಾರನ್ನು ಸೈಡ್‌ಲೈನ್ ಮಾಡಿ ಅಂಬರೀಷ್ ವರ್ಚಸ್ಸನ್ನು ಕಳೆದುಕೊಳ್ಳುವುದು ಬಿಜೆಪಿಗೆ ಇಷ್ಟವಿಲ್ಲ. ಕೊನೆಗೆ, ಜೆಡಿಎಸ್ ಅಂಗಳದಲ್ಲಿ ಉಳಿಯುವುದು ಪ್ರಜ್ವಲ್ ರೇವಣ್ಣ ಮಾತ್ರ!

ಹಾಗಾಗಿ ಗೆಲ್ಲುವ ಸಾಧ್ಯತೆಯಿರುವ ಅಭ್ಯರ್ಥಿಗಳೇ ಇಲ್ಲದಂತಾಗಿರುವ ಜೆಡಿಎಸ್‌ಗೆ ಕೇವಲ ಒಂದು ಸ್ಥಾನ ಮಾತ್ರ (ಕಳೆದ ಸಲ ಜೆಡಿಎಸ್ ಗೆದ್ದಿದ್ದು ಕೂಡಾ 1 ಸ್ಥಾನದಲ್ಲೆ) ಬಿಟ್ಟುಕೊಡಲು ಒಪ್ಪಂದವಾಗಿದೆ ಎನ್ನುತ್ತವೆ ಮೂಲಗಳು. ರಾಜ್ಯ ಬಿಜೆಪಿ ನಾಯಕರ ತೀವ್ರ ವಿರೋಧದ ನಡುವೆಯೂ ಆರೆಸ್ಸೆಸ್ ಮತ್ತು ಬಿಜೆಪಿ ಹೈಕಮಾಂಡ್ ಜೆಡಿಎಸ್ ಜೊತೆಗೆ ಮೈತ್ರಿ ಮಾಡಿಕೊಂಡಿದ್ದೇ, ಹಳೇ ಮೈಸೂರು ಸೀಮೆಯಲ್ಲಿರುವ ಒಕ್ಕಲಿಗ ಮತಗಳನ್ನು ತಮ್ಮತ್ತ ಸೆಳೆದುಕೊಳ್ಳಬೇಕು ಎಂಬ ಉದ್ದೇಶದಿಂದ. ಜೆಡಿಎಸ್ ಪಕ್ಷವನ್ನು ಕೇವಲ ಹಾಸನಕ್ಕೆ ಮಾತ್ರ ಸೀಮಿತಗೊಳಿಸಿ, ಅದರ ಪ್ರಭಾವದ ಮೇಲೆ ಹಳೇ ಮೈಸೂರು ಭಾಗದ ಒಕ್ಕಲಿಗ ಮತಗಳನ್ನು ತಾನು ಸೆಳೆದುಕೊಂಡರೆ, ಭವಿಷ್ಯದಲ್ಲಿ ಅವೆಲ್ಲ ಬಿಜೆಪಿ ಮತಗಳಾಗಿ ಪರಿವರ್ತನೆಗೊಳ್ಳಲಿವೆ. ಆನಂತರ ಜೆಡಿಎಸ್ ಅನ್ನು ಮೂಲೆಗುಂಪು ಮಾಡಬಹುದೆನ್ನುವುದು ಬಿಜೆಪಿ ಲೆಕ್ಕಾಚಾರ. ಅದನ್ನು ಕಾರ್ಯಗತಗೊಳಿಸುವ ಸಲುವಾಗಿಯೇ ಒಂದು ಸ್ಥಾನವನ್ನು ಮಾತ್ರ ಜೆಡಿಎಸ್‌ಗೆ ನೀಡಲು ಒಪ್ಪಂದ ಮಾಡಿಕೊಳ್ಳಲಾಗಿದೆ ಎನ್ನಲಾಗುತ್ತಿದೆ.

ಜೆಡಿಎಸ್‌ಗೆ ಮಾರಕವಾಗುವುದಾದರೆ ಈ ಪ್ರಸ್ತಾಪಕ್ಕೆ ದಳಪತಿಗಳು ಸಮ್ಮತಿಸಿದ್ದು ಏಕೆ?

ಈ ಪ್ರಶ್ನೆ ಇಲ್ಲಿ ಕಾಡದೆ ಇರಲಾರದು. ಸೋಲಿನ ಹತಾಶೆ ಮತ್ತು ಸಿದ್ದರಾಮಯ್ಯನವರ ಮೇಲಿನ ವೈಯಕ್ತಿಕ ಜಿದ್ದಿಗೆ ಬಿದ್ದಿರುವ ಕುಮಾರಸ್ವಾಮಿಯವರು ಈಗ ಎಂಥಾ ಆತುರದಲ್ಲಿದ್ದಾರೆಂದರೆ, ಅವರನ್ನು ಇಂತಹ ಪ್ರಸ್ತಾಪಕ್ಕೆ ಒಪ್ಪಿಸುವುದು ಬಿಜೆಪಿಗೇನು ಕಷ್ಟವಾಗಿರಲಿಕ್ಕಿಲ್ಲ. ಆದರೆ ಮಕ್ಕಳು-ಮೊಮ್ಮಕ್ಕಳ ಭವಿಷ್ಯದ ಬಗ್ಗೆ ಈ ಇಳಿ ವಯಸ್ಸಿನಲ್ಲೂ ಅಷ್ಟೆಲ್ಲ ಕಾಳಜಿ ಹೊಂದಿರುವ ದೇವೇಗೌಡರಂತಹ ನುರಿತ ರಾಜಕಾರಣಿ ಇದಕ್ಕೆ ಒಪ್ಪಿದ್ದು ಹೇಗೆ? ಬಿಜೆಪಿ ಮೂಲಗಳ ಪ್ರಕಾರ, ಗೌಡರನ್ನು ಒಪ್ಪಿಸಲು ಬಿಜೆಪಿ ಇನ್ನೊಂದು ಆಫರ್ ಅನ್ನು ಮುಂದಿಟ್ಟಿದೆಯಂತೆ. ‘ಜೆಡಿಎಸ್ ಕೇವಲ ಒಂದು ಸ್ಥಾನಕ್ಕೆ ಒಪ್ಪಿಕೊಂಡಿದ್ದೇ ಆದಲ್ಲಿ, ಕುಮಾರಸ್ವಾಮಿಯವರನ್ನು ರಾಜ್ಯಸಭಾ ಸದಸ್ಯರನ್ನಾಗಿ ಆಯ್ಕೆ ಮಾಡಿ, ಕೇಂದ್ರ ಮಂತ್ರಿ ಮಾಡುತ್ತೇವೆ’ ಎಂಬುದು ಬಿಜೆಪಿಯ ಆ ಆಫರ್! ಹಠ ಹಿಡಿದಿದ್ದರೆ ಮೂರು ಸ್ಥಾನಗಳನ್ನಾದರೂ ಜೆಡಿಎಸ್ ಪಡೆದುಕೊಳ್ಳಬಹುದಿತ್ತು. ಆದರೆ ಸ್ವತಃ ಕುಮಾರಸ್ವಾಮಿಯವರು ನಿಂತರೂ ಗೆಲ್ಲುತ್ತಾರೆಂಬ ವಿಶ್ವಾಸವಿಲ್ಲ. ಹಾಗಾಗಿ ಒಂದೇ ಸ್ಥಾನ ಒಪ್ಪಿಕೊಂಡು, ಮಗನನ್ನು ಕೇಂದ್ರ ಮಂತ್ರಿ ಮಾಡುವ ಕಾರಣಕ್ಕೆ ದೇವೇಗೌಡರು ಸಮ್ಮತಿ ಸೂಚಿಸಿದ್ದಾರೆ ಎನ್ನಲಾಗುತ್ತಿದೆ.

ಈ ಆಫರ್‌ಗೆ ಒಪ್ಪಿಕೊಂಡಿರುವುದರಿಂದಲೇ, ತಾನು ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಹೇಳುವ ಸಂದರ್ಭದಲ್ಲಿ ’ನೀವು ಕೇಂದ್ರ ಮಂತ್ರಿಯಾಗುವಿರಾ?’ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಯನ್ನು ನಿರಾಕರಿಸದ ಕುಮಾರಸ್ವಾಮಿ ’ಯಾರ ಹಣೆಯಲ್ಲಿ ಏನು ಬರೆದಿದೆಯೋ ಕಾದು ನೋಡೋಣ’ ಎಂಬ ಹಾರಿಕೆಯ ಉತ್ತರ ನೀಡಿದ್ದಾರೆ. ಆದರೆ ಪ್ರಶ್ನೆ ಇರೋದು, ತನ್ನ ಅಗತ್ಯ ತೀರಿದ ಬಳಿಕ ಮಿತ್ರಪಕ್ಷಗಳನ್ನು ಬಳಸಿ ಬಿಸಾಡುತ್ತಾ ಬಂದಿರುವ ಬಿಜೆಪಿ, ಕುಮಾರಸ್ವಾಮಿಯವರನ್ನು ಕೇಂದ್ರ ಮಂತ್ರಿ ಮಾಡ್ತಾರಾ? ಅಥವಾ ಮಂತ್ರಿ ಮಾಡ್ತೀವಿ ಅನ್ನೋ ತುಪ್ಪವನ್ನು ಮೂಗಿಗೆ ಸವರಿ ಕೇವಲ ಒಂದು ಸ್ಥಾನಕ್ಕಷ್ಟೇ ಜೆಡಿಎಸ್ ಅನ್ನು ಒಪ್ಪಿಸಲಾಗಿದೆಯಾ?

ಕುಮಾರಸ್ವಾಮಿಯವರೇ ಹೇಳಿದಂತೆ ಕಾದು ನೋಡಬೇಕಷ್ಟೆ….. ಆದರೆ ಒಂದಂತೂ ಸತ್ಯ; ಜೆಡಿಎಸ್ ಅನ್ನು ಅಡ್ಡಡ್ಡ ಮಲಗಿಸಲು ಬಿಜೆಪಿ ತೋಡಿದ ಖೆಡ್ಡಾದೊಳಕ್ಕೆ ಗೌಡರ ಫ್ಯಾಮಿಲಿ ಅನಾಯಾಸವಾಗಿ ಬೊಕ್ಕಬೋರಲು ಬಿದ್ದಿದೆ… ಸೀಟು ಹಂಚಿಕೆಯಲ್ಲಿ ಕೇವಲ ಒಂದು ಸ್ಥಾನಕ್ಕೆ ಒಪ್ಪಿಕೊಂಡಿದ್ದು ನಿಜವೇ ಆಗಿದ್ದಲ್ಲಿ!

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!