Thursday, November 19, 2026

ಪ್ರಾಯೋಗಿಕ ಆವೃತ್ತಿ

ಭೂತಾನ್ ದೇಶವೂ…. ನಮ್ಮ ಪ್ರಯಾಣವೂ…..

✍️ ಚೇತನ್ ಕಾಗೇಪುರ

ಭೂತಾನ್ ದೇಶದೊಳಗೆ ಹೋದದ್ದೇ ನಮಗೆ ಹೊಸ ಸಾರಿಗೆ ನಿಯಮಗಳ ಹಾಗೂ ಅಧಿಕಾರಿಗಳ ವರ್ತನೆಗಳ ಪರಿಚಯ ವಿಸ್ಮಿತರನ್ನಾಗಿಸಿತ್ತು.

ಇನ್ನು ನಮ್ಮ ಪ್ರಯಾಣ ಭೂತಾನ್ ನ ರಾಜಧಾನಿ ಥಿಂಪು (Thimphu) ಕಡೆಗೆ ಸ್ವಲ್ಪ ಆತುರದಲ್ಲಿಯೇ ಆರಂಭವಾಯಿತು, ಏಕೆಂದರೆ ನಮಗೆ ಫ್ಯೂಸಲಿಂಗ್ ನಗರದಲ್ಲಿ ದೊರಕಿದ್ದ ಪರ್ಮಿಟ್ ಕೇವಲ ರಾಜಧಾನಿವರೆಗೆ ಪ್ರಯಾಣಿಸಲು ಮಾತ್ರ, ಇನ್ನುಳಿದ ದೇಶದ ಯಾವುದೇ ಪ್ರದೇಶಕ್ಕೆ ಹೋಗಲು ನಾವು ರಾಜಧಾನಿಯಲ್ಲಿದ್ದ ಮುಖ್ಯ ಇಮಿಗ್ರೇಸನ್ ಕಛೇರಿಯಲ್ಲಿ ಮತ್ತೆ ಅನುಮತಿ ಪಡೆಯಬೇಕಿತ್ತು. ಅದರಲ್ಲಿ ನಾವು ಆ ದೇಶದೊಳಗೆ ಯಾವ ಯಾವ ಪ್ರದೇಶಗಳಿಗೆ ಭೇಟಿಕೊಡಲಿದ್ದೇವೆ ಎನ್ನುವುದನ್ನು ಮೊದಲೇ ತಿಳಿಸಿ ಅನುಮತಿ ಪಡೆಯಬೇಕಿತ್ತು.

ಮೊದಲೇ ಹೇಳಿದಂತೆ ಅಲ್ಲಿಯ ಕಛೇರಿಯ ಸಮಯ ಮಧ್ಯಾಹ್ನ 3:30 ಕ್ಕೆ ಮುಗಿಯುತ್ತಿತ್ತು, ಹಾಗಾಗಿ ಫ್ಯೂಸೆಲಿಂಗ್ ನಿಂದ ತಿಮ್ಫುಗೆ ಸುಮಾರು 145 ಕಿ.ಮಿ. ದೂರದ ಪ್ರಯಾಣವನ್ನು ನಾವು ಬೆಳಿಗ್ಗೆ ಸುಮಾರು 10 ಘಂಟೆಗೆ ಆರಂಭಿಸಿ ಕಛೇರಿ ಮುಚ್ಚುವುದರೊಳಗಾಗಿ ತಲುಪಬೇಕಾಗಿತ್ತು. ಇಡೀ 145 ಕಿ.ಮಿ.ರಸ್ತೆಯೂ ಅಂಕು ಡೊಂಕಾದದ್ದು, ಹಾವು ಹರಿದಂತೆ ಬೆಟ್ಟ ಗುಡ್ಡ ಒಂದು ಬದಿಗಾದರೆ ಮತ್ತೊಂದು ಬದಿಗೆ ದೊಡ್ಡ ಪ್ರಪಾತ,ದಟ್ಟ ಕಾಡಿನ ನಡುವೆ ವಾಹನ ಚಾಲನೆ ಮಾಡುವಾಗ ಸ್ವಲ್ಪ ಎಚ್ಚರ ತಪ್ಪಿದರೂ ಅಪಘಾತ ಕಟ್ಟಿಟ್ಟ ಬುತ್ತಿ.

ಇದನ್ನೂ ಓದಿರಿ : ನಮ್ಮ ರಸ್ತೆ ಸಂಚಾರವೂ… ಪಕ್ಕದಲ್ಲಿರುವ ಭೂತಾನ್ ಪುಟ್ಟ ದೇಶವು…

ಪ್ರಯಾಣದಲ್ಲಿ ರಸ್ತೆಯ ಒಂದು ಕಡೆಯಲ್ಲಿ ಮರಗಳನ್ನು ಕಡಿದು ಅಲ್ಲಿಯೇ ಬಿಟ್ಟಿದ್ದದೃಶ್ಯ ಕಾಣಿಸಿತು. ವಿಶೇಷತೆ ಏನೆಂದರೆ, ನಮ್ಮಲ್ಲಿ ಯಾವುದೇ ಮರವನ್ನು ಕಡಿದರೆ ಅದನ್ನು ಅಲ್ಲಿಂದ ಸಾಮಿಲ್ಲಿಗೆ ಸಾಗಿಸಿ ಅಲ್ಲಿ ಅದನ್ನು ಸುತ್ತಲೂ ಅತ್ರಿ ಹೊಡೆಸಿ ಮರದ ಸುತ್ತಲಿನ ತೊಗಟೆ ತೆಗೆದು ನಂತರ ಬೇಕಾದ ಆಕಾರಕ್ಕೆ ಕತ್ತರಿಸುತ್ತಾರೆ. ಆದರೆ ಅಲ್ಲಿ ಕತ್ತರಿಸಿ ಬಿದ್ದಿದ್ದ ಮರಗಳು ಕತ್ತರಿಸಿದ್ದ ಸ್ಥಳದಲ್ಲೇ ಚೌಕಾಕಾರಕ್ಕೆ ಕತ್ತರಿಸಿ ಹಾಕಲಾಗಿತ್ತು. ಇದು ನನಗಂತೂ ಹೊಸತನವಾಗಿ ಕಾಣುತ್ತಿತ್ತು, ಇರಲಿಯೆಂದು ಫೋಟೊ ತೆಗೆದುಕೊಂಡೆ. ನನೊಂದಿಗೆ ಬಂದಿದ್ದ ಮೂವರು ಸ್ನೇಹಿತರೂ ಬೆಂಗಳೂರಿಗರು ಅವರು ಯಾಕೆ ಫೋಟೋ ತೆಗೆದುಕೊಂಡದ್ದು , ಅದರಲ್ಲೇನು ವಿಶೇಷತೆ? ಎಂದರು. ಅವರಿಗೆ ಎಲ್ಲವನ್ನು ವಿವರಿಸಿ ಹೇಳಿ ಮುಂದೆ ಹೊರಟೆವು.

145 ಕಿ.ಮಿ. ಪ್ರಯಾಣಕ್ಕೆ ಗೂಗಲ್ ಮ್ಯಾಪ್ ತೋರಿಸುತ್ತಿದ್ದ ಅವಧಿ ಒಟ್ಟು ನಾಲ್ಕು ಮುಕ್ಕಾಲು ಘಂಟೆಗಳು. ಅದರಂತೆ ಮಧ್ಯಾಹ್ನ 3ಕ್ಕೆ ತಿಮ್ಫು ನಗರವನ್ನು ತಲುಪಿ ಅಲ್ಲಿಯ ಸ್ಥಳೀಯರನ್ನು ಇಂಗ್ಲಿಷ್ ನಲ್ಲಿ ಕೇಳಿ ಇಮಿಗ್ರೇಸನ್ ಕಛೇರಿ ಮುಟ್ಟಿದೆವು. ಇನ್ನು ಅರ್ಧಘಂಟೆಯಲ್ಲಿ ಕಛೇರಿ ಮುಚ್ಚುವುದರಲ್ಲಿತ್ತು ಆದಷ್ಟು ಬೇಗ ದೇಶದೊಳಗೆ ಸುತ್ತಾಡಲು ಅನುಮತಿ ಪಡೆಯುವ ಆತುರ ನಮಗೆ. ಅಲ್ಲಿಯ ಅಧಿಕಾರಿಯೊಬ್ಬರೊಂದಿಗೆ ಮಾತನಾಡಿ ಎಲ್ಲರೂ ಫಾರ್ಮ್ ತುಂಬಿ ನಮ್ಮ ಗುರುತಿನ ಚೀಟಿಯೊಂದಿಗೆ ಕೊಟ್ಟು, ಅವರು ನಮ್ಮನ್ನು ಕರೆಯುವವರೆಗೆ ಹೊರಗೆ ಕಾಯುವ ಸ್ಥಳದಲ್ಲಿ ಹಾಕಿದ್ದ ಎಲ್ಲಾ ಕುರ್ಚಿಗಳು ಇತರೆ ಪ್ರವಾಸಿಗರಿಂದ ಈಗಾಗಲೇ ತುಂಬಿದ್ದುದರಿಂದ ನಾವು ನಾಲ್ಕೂ ಜನರು ಮಾತನಾಡುತ್ತಾ ನಿಂತೆವು. ಅಷ್ಟರಲ್ಲಿ ಒಬ್ಬಳು ಯುವತಿ ನಮ್ಮಲ್ಲಿಗೆ ಬಂದು ನೀವು ಕರ್ನಾಟಕದವರಾ ಎಂದರು.ನಮ್ಮ ನಮ್ಮಲ್ಲಿ ಮಾತನಾಡಿಕೊಳ್ಳುವುದನ್ನು ಬಿಟ್ಟು, ಕನ್ನಡ ಭಾಷೆ ಕೇಳಿ 5 -6 ದಿನಗಳಾಗಿದ್ದ ನಮಗೆ ಆಕೆ ಕನ್ನಡದಲ್ಲಿ ಮಾತನಾಡಿಸಿದ್ದು ಕೇಳಿ ಆಶ್ಚರ್ಯ ಜೊತೆಗೆ ಸಂತೋಷ.

ಹೌದೆಂದು ಎಲ್ಲರೂ ಪರಿಚಯಿಸಿಕೊಂಡೆವು, ಆಗ ಮತ್ತೂ ಆಶ್ಚರ್ಯ ಕಾದಿತ್ತು. ಅದು ಆಕೆ ನಮ್ಮ ಕರ್ನಾಟಕದ ಪುತ್ತೂರಿನವಳು. ಇನ್ನೂ ಆಶ್ಚರ್ಯವೆಂದರೆ ಒಬ್ಬಳೇ ಏಕಾಂಗಿಯಾಗಿ ಅಲ್ಲಿಗೆ ಸುತ್ತಲು ತನ್ನ ಕ್ಯಾಮರಾ ದೊoದಿಗೆ ಬಂದಿದ್ದಳು. ಅವಳಲ್ಲಿಗೆ ಬರುವಷ್ಟರಲ್ಲಿ ನಮ್ಮ ದೇಶದ ಸಪ್ತ ಸುಂದರಿಯರೆಂದು ಕರೆಯಲ್ಪಡುವ ಈಶಾನ್ಯ ರಾಜ್ಯಗಳನ್ನೆಲ್ಲಾ ಸುತ್ತಿಕೊಂಡು ಭೂತಾನ್ ಪ್ರವೇಶ ಪಡೆದಿದ್ದಳು. ಅಷ್ಟೂ ಪ್ರಯಾಣವನ್ನು ಸಾರ್ವಜನಿಕ ಸಾರಿಗೆಗಳಲ್ಲೇ ಮುಗಿಸಿದ್ದಳು.

ಮುಂದುವರೆಯುವುದು………

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ