Thursday, September 19, 2024

ಪ್ರಾಯೋಗಿಕ ಆವೃತ್ತಿ

ಪತ್ರಕರ್ತರ ಮೇಲೆ ದೊಡ್ಡ ಜವಾಬ್ದಾರಿ ಇದೆ : ನಿರ್ಮಲಾನಂದಶ್ರೀ

ಪತ್ರಕರ್ತರು ಸ್ಥಿತ ಪ್ರಜ್ಞೆ ಮಾದರಿಯಲ್ಲಿ ವೃತ್ತಿಜೀವನ ಮಾಡಬೇಕು, ಸಮಾಜದಲ್ಲಿ ಪತ್ರಕರ್ತರ ಮೇಲೆ ದೊಡ್ಡ ಜವಾಬ್ದಾರಿ ಇದೆ. ಕ್ಷಣ ಕ್ಷಣಕ್ಕೂ ಮಾಹಿತಿ ಅಂಗೈ ಸೇರುವ ಸಮಯದಲ್ಲಿಯೂ ಮುಂಜಾನೆ ಪತ್ರಿಕೆ ಓದಲು ಜನರು ಹಾತೊರೆಯುವ ಪರಿಸ್ಥಿತಿಯನ್ನು ಈಗಲೂ ಉಳಿಸಿಕೊಂಡಿದ್ದೀರಿ, ಇದಕ್ಕೆ ನಿಮ್ಮ ವೃತ್ತಿ ನಿಷ್ಠೆ ಕಾರಣವಾಗಿದೆ ಎಂದು ಆದಿಚುಂಚನಗಿರಿ ಮಠದ ಡಾ. ಶ್ರೀನಿರ್ಮಲಾನಂದನಾಥ ಸ್ವಾಮಿ ಹೇಳಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಮಂಡ್ಯ ಜಿಲ್ಲಾ ಘಟಕದ ಸಹಯೋಗದಲ್ಲಿ ಮಂಡ್ಯ ನಗರದ ಅಂಬೇಡ್ಕರ್ ಭವನದಲ್ಲಿ ನಡೆದ ಪತ್ರಿಕಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ಪತ್ರಕರ್ತರ ಸೇವೆ ಉತ್ತಮ, ಆದರೆ ಪ್ರಸ್ತುತ ಸಮಾಜದಲ್ಲಿ ಬೆವರು ಸುರಿಸಿ ರೈತ ಬೆಳೆದ ಬೆಳೆಗೆ ಬೆಲೆ ಸಿಗುತ್ತಿಲ್ಲ, ಪತ್ರಕರ್ತರಿಗೆ ಜೀವನ ಭದ್ರತೆ ಇಲ್ಲವಾಗಿದೆ, ಅವರನ್ನು ಕಂಡರೆ ಏನೋ ಒಂದು ರೀತಿ ಆತಂಕ ಮೂಡಲಿದೆ, ಸಂಕಷ್ಟದಲ್ಲಿಯೂ ಅವರು ವೃತ್ತಿಜೀವನ ಮಾಡುತ್ತಿದ್ದಾರೆ ಎಂದು ಹೇಳಿದರು.

ಸಾಹಿತ್ಯ, ಸಂಗೀತ, ಧಾರ್ಮಿಕ ಸುದ್ದಿಗಳಿಗೂ ಆದ್ಯತೆ ಇರಬೇಕು. ಸಮಕಾಲಿನ ಸುದ್ದಿಗಳ ಜೊತೆಗೆ ಅಂತರಂಗದ ಶುದ್ದಿಕರಣಕ್ಕೂ ಮಾಧ್ಯಮ ಪ್ರಾಧ್ಯಾನತೆ ನೀಡಬೇಕು. ಪತ್ರಕರ್ತರು ವಸ್ತು ನಿಷ್ಠವಾಗಿ ವರದಿಗಾರಿಕೆ ಮಾಡಬೇಕು, ಒಬ್ಬರು ಒಳ್ಳೆಯದಾಗಿ ಗ್ರಹಿಸಿದರೆ ಮತ್ತೊಬ್ಬರು ಸ್ವೀಕರಿಸದ ಮನಸ್ಥಿತಿಯಲ್ಲಿರುತ್ತಾರೆ, ಇದನ್ನೆಲ್ಲಾ ಮನಸ್ಸಿಗೆ ಹಾಕಿಕೊಳ್ಳಬಾರದು, ನಾನು ಮಾಡಿರುವ ವರದಿ ಸತ್ಯನಿಷ್ಠವಾಗಿದೆ ಎಂಬುದು ಮನಸ್ಸಿನಲ್ಲಿರಬೇಕು, ಯಾವುದೇ ಕಾರಣಕ್ಕೂ ಮತ್ತೊಬ್ಬರ ಒತ್ತಡ ಶಿಫಾರಸ್ಸಿಗೆ ಒಳಗಾಗಿ ವರದಿಗಾರಿಕೆ ಮಾಡಬಾರದು, ವಸ್ತು ನಿಷ್ಠತೆ, ನ್ಯಾಯಯುತವಾಗಿ ವೃತ್ತಿನಿರತ ರಾಗಬೇಕು ಎಂದು ಸಲಹೆ ನೀಡಿದರು.

ವಿಭಾಗೀಯ ಮಟ್ಟದ ಪತ್ರಕರ್ತರ ಸಮ್ಮೇಳನ

ವಿಭಾಗೀಯ ಮಟ್ಟದ ಪತ್ರಕರ್ತರ ಸಮ್ಮೇಳನವನ್ನು ಮಂಡ್ಯ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸುವುದಾಗಿ ತಿಳಿಸಿದ್ದು, ಸಮ್ಮೇಳನವನ್ನು ಆದಿಚುಂಚನಗಿರಿಯಲ್ಲಿ ನಡೆಸಿದರೆ ನಮ್ಮ ಸಂಪೂರ್ಣ ಸಹಕಾರ ನಿಮಗೆ ನೀಡಲಿದ್ದೇವೆ ಎಂದು ನಿರ್ಮಲಾನಂದಶ್ರೀ ಭರವಸೆ ನೀಡಿದರು.

ಸಮಾಜದ ಯಾವುದೇ ಉದ್ಯಮದಲ್ಲಿ ಕೌಶಲ್ಯತೆ ಇದ್ದವರಿಗೆ ಮಾನ್ಯತೆ ಹೆಚ್ಚು, ಕೌಶಲತೆ ಇಲ್ಲದಿದ್ದರೆ ಬೆಳವಣಿಗೆ ಅಸಾಧ್ಯ, ಉತ್ತಮ ಕೌಶಲ್ಯದ ತರಬೇತಿ ಇದ್ದರೆ ಆಯಾ ಕಾಲಘಟ್ಟದಲ್ಲಿ ಯಶಸ್ಸು ಸಾಧ್ಯ, ಪತ್ರಕರ್ತರಿಗೆ ಕಾಲಕಾಲಕ್ಕೆ ತರಬೇತಿ ದೊರೆತರೆ ಪ್ರಬುದ್ಧತೆಯ ಬರಹ ಹೊರಹೊಮ್ಮಲ್ಲಿದೆ, ಇದರಿಂದ ಸಮಾಜಕ್ಕೂ ಪ್ರಯೋಜನವಾಗಲಿದೆ ಎಂದು ಹೇಳಿದರು.

ಕಾರ್ಯನಿರತ ಪತ್ರಕರ್ತರ ಸಂಘದ ಜೀವ ಮಾನವ ಸಾಧನ ಪುರಸ್ಕಾರವನ್ನು ಹಿರಿಯ ಪತ್ರಕರ್ತ ಚಂದ್ರಶೇಖರ್ ಅವರಿಗೆ ನೀಡಿ ಗೌರವಿಸಲಾಯಿತು ಪತ್ರಕರ್ತರಾದ ಚಿಕ್ಕಮರಳಿ ಸೋಮಶೇಖರ್, ಎಚ್.ಶಿವರಾಜ್, ಎಂ.ಕೆ.ಹರಿ ಚರಣ್ ತಿಲಕ್, ಮಂಜುನಾಥ ಶಾಸ್ತ್ರಿ, ಟಿ.ಕೆ.ಗೋಪಾಲ್ ಅವರಿಗೆ ಸಂಘದ ವಾರ್ಷಿಕ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.

ಶಾಸಕ ಸಿ.ಎಸ್ ಪುಟ್ಟರಾಜು ಸಮಾರಂಭ ಉದ್ಘಾಟಿಸಿದರು, ಸಚಿವರಾದ ಕೆ ಗೋಪಾಲಯ್ಯ, ಕೆ.ಸಿ. ನಾರಾಯಣಗೌಡ, ಮಾಜಿ ಸಚಿವ ಎನ್.ಚೆಲುವರಾಯಸ್ವಾಮಿ, ಪಿ.ಎಂ ನರೇಂದ್ರಸ್ವಾಮಿ, ಕಾಂಗ್ರೆಸ್ ಮುಖಂಡ ಸಿದ್ದಾರೂಢ ಸತೀಶ್, ಬಿಜೆಪಿ ಮುಖಂಡ ಅಶೋಕ್ ಜಯರಾಮ್. ಪತ್ರಕರ್ತರ ಸಂಘದ ಮತ್ತಿಕೆರೆ ಜಯರಾಮ್, ಸೋಮಶೇಖರ್ ಕೆರಗೋಡು, ಪಿ.ಜೆ ಚೈತನ್ಯ ಕುಮಾರ್, ಡಿಎಲ್ ಲಿಂಗರಾಜು ಇತರರಿದ್ದರು, ಸಂಘದ ಅಧ್ಯಕ್ಷ ಕೆ. ಸಿ.ಮಂಜುನಾಥ್ ಪ್ರಾಸ್ತಾವಿಕ ನುಡಿ ನುಡಿದರು. ಪ್ರಧಾನ ಕಾರ್ಯದರ್ಶಿ ನವೀನ್ ಕುಮಾರ್ ಸ್ವಾಗತಿಸಿದರು..

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!