Wednesday, October 23, 2024

ಪ್ರಾಯೋಗಿಕ ಆವೃತ್ತಿ

ಬಿಜೆಪಿ ಅಭಿವೃದ್ಧಿ ಕಾರ್ಯ ಗಳೇ ನನಗೆ ಶ್ರೀರಕ್ಷೆ:ಮೈ.ವಿ.ರವಿಶಂಕರ್

ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರ್ಕಾರದ ಅಭಿವೃದ್ಧಿ ಕಾರ್ಯಗಳೇ ನನ್ನ ಗೆಲುವಿಗೆ ಶ್ರೀರಕ್ಷೆಯಾಗಲಿದೆ ಎಂದು ದಕ್ಷಿಣ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮೈ.ವಿ.ರವಿಶಂಕರ್ ವಿಶ್ವಾಸ ವ್ಯಕ್ತಪಡಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರ ಸರ್ವಸ್ಪರ್ಶಿ, ಸರ್ವವ್ಯಾಪಿ ಅಭಿವೃದ್ಧಿ ಕಾರ್ಯಗಳು ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜನಪರ ಆಡಳಿತ ನನ್ನ ಗೆಲುವಿಗೆ ಶ್ರೀರಕ್ಷೆಯಾಗಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.

ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಈಗಾಗಲೇ 1,33,034 ಮಂದಿ ಪದವೀಧರರು ನೋಂದಾಣಿಯಾಗಿದ್ದು, ಈ ಪೈಕಿ 21 ರಿಂದ 30 ವಯೋಮಾನದ 80 ಸಾವಿರ, 45 ಸಾವಿರ ಮಹಿಳಾ ಮತದಾರರು ಸೇರಿದಂತೆ ಸರ್ಕಾರಿ ನೌಕರರು, ಶಿಕ್ಷಕರು, ಸ್ವಯಂ ಉದ್ಯೋಗಿಗಳು ಹಾಗೂ ಕೃಷಿಕರ ಜೊತೆ ಇತರೆ ವೃತ್ತಿಪರ ಪದವೀಧರರ ನೋಂದಣಿ ಹೆಚ್ಚಿನ ಸಂಖ್ಯೆಯಲ್ಲಿ ಆಗಿರುವುದು ಉತ್ತಮ ಬೆಳವಣಿಗೆ ಎಂದರು.

ಪಕ್ಷದ ವತಿಯಿಂದ 63 ಸಾವಿರ ಪದವೀಧರರನ್ನು ನೋಂದಾಯಿಸಲಾಗಿದೆ. ಕಳೆದ ಚುನಾವಣೆಯಲ್ಲಿ 183 ಅತ್ಯಲ್ಪ ಮತಗಳ ಅಂತರದಿಂದ ಪರಾಜಿತನಾಗಿರುವ ನನಗೆ ಈ ಭಾರಿ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸವಿದೆ ಎಂದು ಭರವಸೆ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರದ ಮಾದರಿಯಲ್ಲಿ ವೇತನ ಹಾಗೂ ಇನ್ನಿತರೆ ಭತ್ಯೆ ನೀಡಬೇಕೆಂಬ ರಾಜ್ಯ ಸರ್ಕಾರಿ ನೌಕರರ ಬಹುದಿನದ ಬೇಡಿಕೆ ಸಂಬಂಧ ರಾಜ್ಯ ಸರ್ಕಾರ ಆಯೋಗ ರಚಿಸಿದೆ. ಅತಿಥಿ ಉಪನ್ಯಾಸಕರ ಬಹುಪಾಲು ಬೇಡಿಕೆ ಈಡೇರಿಸಲಾಗಿದೆ. ಇದರ ಜೊತೆ ನನ್ನ 30 ವರ್ಷದ ಬಿಜೆಪಿ ಪಕ್ಷದ ಸೇವೆಯನ್ನು ಮನಗಂಡು ಪಕ್ಷದ ಅಭ್ಯರ್ಥಿಯಾಗಿರುವ ನನ್ನನ್ನು ಬೆಂಬಲಿಸುವ ವಿಶ್ವಾಸವಿದೆ ಎಂದರು.

ಸಿಂಡಿಕೇಟ್ ಸದಸ್ಯ ಈ.ಸಿ.ನಿಂಗರಾಜುಗೌಡ ಮಾತನಾಡಿ, ಕಳೆದ ಮೂರು ದಶಕದಿಂದ ಸಂಘ ಪರಿವಾರದ ಸಂಘಟನೆಯಲ್ಲಿ ಕಾರ್ಯ ನಿರ್ವಹಿಸಿದ್ದೇನೆ.

ಆಕಾಂಕ್ಷಿತ ಅಭ್ಯರ್ಥಿಯಾಗಿ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರವಾಸ ಮಾಡಿ ಸಾವಿರಾರು ಮಂದಿ ಪದವೀಧರರನ್ನು ನೋಂದಾಯಿಸಿದ್ದೆ. ಪಕ್ಷ ನನಗೆ ಅವಕಾಶ ಕಲ್ಪಿಸುವ ವಿಶ್ವಾಸವಿತ್ತು, ಅಂತಿಮವಾಗಿ ಕಳೆದ ಚುನಾವಣೆಯಲ್ಲಿ ಕಡಿಮೆ ಮತಗಳ ಅಂತರದಿಂದ ಪರಾಜಿತರಾಗಿದ್ದ ಮೈ.ವಿ.ರವಿಶಂಕರ್ ಅವರಿಗೆ ಅವಕಾಶ ನೀಡಿದ್ದು, ವ್ಯಕ್ತಿಗಿಂತ ಪಕ್ಷ ಮುಖ್ಯ ಎಂಬ ನಾಣ್ನುಡಿಯಂತೆ ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸುವುದಾಗಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ವಿಜಯ ಕುಮಾರ್, ಮನ್‌ಮುಲ್ ನಿರ್ದೇಶಕ ಎಸ್.ಪಿ.ಸ್ವಾಮಿ, ಮುಖಂಡರಾದ ಅಶೋಕ್ ಜಯರಾಂ,ಇಂದ್ರೇಶ್, ಕಾಡೇನಹಳ್ಳಿ ನಾಗಣ್ಣಗೌಡ, ಎನ್.ಶಿವಣ್ಣ, ವಿವೇಕ್ ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!