Wednesday, September 18, 2024

ಪ್ರಾಯೋಗಿಕ ಆವೃತ್ತಿ

ಬಿಜೆಪಿ ಶಾಸಕ ಮುನಿರತ್ನ ಸೇರಿದಂತೆ ನಾಲ್ವರ ಮೇಲೆ ಎಫ್ಐಆರ್

ಘನತ್ಯಾಜ್ಯ ವಿಲೇವಾರಿ ಗುತ್ತಿಗೆ ನೀಡಲು 30 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟು ಬೆದರಿಕೆ ಹಾಕಿದ್ದಾರೆ ಎಂಬ ಆರೋಪದ ಅಡಿ ಬೆಂಗಳೂರಿನ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ಸೇರಿದಂತೆ ನಾಲ್ವರ ವಿರುದ್ಧ ವೈಯ್ಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಬಿಬಿಎಂಪಿ ಗುತ್ತಿಗೆದಾರ ಚೆಲುವರಾಜು ನೀಡಿದ ದೂರು ಆಧರಿಸಿ ಮುನಿರತ್ನ, ಸರ್ಕಾರಿ ಅಧಿಕಾರಿ ವಿಜಯ್‌ಕುಮಾರ್, ಕಾರ್ಯದರ್ಶಿ ಅಭಿಷೇಕ್ ಹಾಗೂ ಶಾಸಕರ ಆಪ್ತ ವಸಂತಕುಮಾರ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ಜಾತಿ ನಿಂದನೆ ಆರೋಪದ ಅಡಿ ಇದೇ ಠಾಣೆಯಲ್ಲಿ ಶಾಸಕ ಮುನಿರತ್ನ ವಿರುದ್ಧ ಮತ್ತೊಂದು ಎಫ್‌ಐಆರ್ ದಾಖಲಾಗಿದೆ. ವೇಲುನಾಯಕ್ ಎಂಬುವವರು ನೀಡಿದ ದೂರು ಆಧರಿಸಿ ಪೊಲೀಸರು ಪ್ರಕರಣ ದಾಖಲು‌‌‌ ಮಾಡಿಕೊಂಡಿದ್ದಾರೆ.

ಜೀವ ಬೆದರಿಕೆ ಆರೋಪ

“ಬಿಜೆಪಿ ಶಾಸಕ ಮುನಿರತ್ನ ಮತ್ತು ಅವರ ಆಪ್ತ ವಸಂತ್ ಕುಮಾರ್ ನನಗೆ ಜೀವ ಬೆದರಿಕೆ ಹಾಕಿದ್ದಾರೆ. ರೇಣುಕಾಸ್ವಾಮಿ ರೀತಿಯಲ್ಲೇ ನಿನ್ನ ಕೊಲೆ ಮಾಡುತ್ತೇವೆ ಎಂದು ಹೆದರಿಸಿದ್ದಾರೆ” ಎಂದು ಬಿಬಿಎಂಪಿ ಗುತ್ತಿಗೆದಾರ ಚೆಲುವರಾಜು ಬೆಂಗಳೂರು ಪ್ರೆಸ್‌ ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಗಂಭೀರ ಆರೋಪ ಮಾಡಿದ್ದರು.

“ಹಣ ವಸೂಲಿ ಮಾಡಲು ಜಾತಿ ನಿಂದನೆ ಮಾಡಿ, ಹೆಂಡತಿ ಮತ್ತು ತಾಯಿ ಬಗ್ಗೆ ಅತ್ಯಂತ ಅಶ್ಲೀಲ ಭಾಷೆಯಲ್ಲಿ ನಿಂದಿಸಿ ತಮಗೆ ಜೀವ ಬೆದರಿಕೆಯೊಡ್ಡಿದ್ದಾರೆ. ಮುಂದೆ ನಾನು‌ ಜೀವಂತವಾಗಿ ಇರ್ತಿನೋ ಇಲ್ವೋ ಗೊತ್ತಿಲ್ಲ. ನನ್ನ ಜಾತಿ ಬಳಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ನನ್ನ ಹೆಂಡತಿ ಫೋಟೋ ತೋರಿಸು ಹೇಗಿದ್ದಾಳೆ ಎನ್ನುತ್ತಾರೆ. ಮುನಿರತ್ನ ನನ್ನ ಹೆಂಡತಿಯನ್ನು ಮಂಚಕ್ಕೆ ಕಳುಹಿಸು ಎಂದಿದ್ದಾರೆ. ನನ್ನ ತಾಯಿಯ ಬಗ್ಗೆ ಅಸಹ್ಯವಾಗಿ ಮಾತಾಡಿದ್ದಾರೆ” ಎಂದು ಆರೋಪಿಸಿ, ಮುನಿರತ್ನ ಮಾತನಾಡಿದ್ದಾರೆ ಎನ್ನಲಾದ ಆಡಿಯೋಗಳನ್ನು ಬಿಡುಗಡೆ ಮಾಡಿದ್ದರು.

“ಮುನಿರತ್ನ ನನ್ನನ್ನು ಏನಾದ್ರೂ ಮಾಡುವಷ್ಟು ಪ್ರಭಾವಿ. ನನ್ನ ಜೀವಕ್ಕೆ ಅಪಾಯವಿದೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ, ಗೃಹ ಸಚಿವ ಪರಮೇಶ್ವರ್‌ ಹಾಗೂ ಪೊಲೀಸ್ ಕಮಿಷನರ್‌ ಅವರನ್ನು ಭೇಟಿ ಆಗಿ ದೂರು ಕೊಡುವೆ” ಎಂದು ತಿಳಿಸಿದ್ದರು.

ಮುನಿರತ್ನ ಗುತ್ತಿಗೆದಾರ ಚೆಲುವರಾಜು ಅವರಿಗೆ ಅಶ್ಲೀಲ ಭಾಷೆಯಲ್ಲಿ ನಿಂದಿಸಿದ್ದು ಎನ್ನಲಾದ ಆಡಿಯೋವನ್ನು ಕಾಂಗ್ರೆಸ್ ನಾಯಕಿ ಹಾಗೂ ರಾಜರಾಜೇಶ್ವರಿ ಕ್ಷೇತ್ರದ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಕುಸುಮ ಅವರು ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!