Thursday, September 19, 2024

ಪ್ರಾಯೋಗಿಕ ಆವೃತ್ತಿ

ಬಿಜೆಪಿ ಸೇರ್ಪಡೆಗೆ ಸಿದ್ಧ ಮಂಡ್ಯದ ಯುವನಾಯಕ…

ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಪಕ್ಷಕ್ಕೆ ಭದ್ರ ಬುನಾದಿ ಹಾಕಲು ಅಮಿತ್ ಷಾ ಬ್ಲೂ ಪ್ರಿಂಟ್ ರೆಡಿ ಮಾಡಿದ್ದಾರೆ. ಆ ಪ್ರಕಾರ ಒಕ್ಕಲಿಗ ಸಮುದಾಯದ ಪ್ರಾಬಲ್ಯವಿರುವ ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿ ಪಕ್ಷಕ್ಕೆ ಪ್ರಭಾವಿ ರಾಜಕೀಯ ಯುವನಾಯಕರನ್ನು ಸೆಳೆಯುವುದು ಪ್ರಮುಖ ಅಜೆಂಡಾ.

ಆ ಅಜೆಂಡಾದ ಭಾಗವಾಗಿ ಮಂಡ್ಯದ ರಾಜಕೀಯ ಇತಿಹಾಸದಲ್ಲಿ ತಮ್ಮ ವ್ಯಕ್ತಿತ್ವದ ಕಾರಣಕ್ಕಾಗಿ ಇಂದಿಗೂ ಜನಮಾನಸದಲ್ಲಿ ಉಳಿದಿರುವ ಜನಪರ ರಾಜಕಾರಣಿ ಎಂದೇ ಜನರಿಂದ ಕರೆಸಿಕೊಳ್ಳುವ ದಿವಂಗತ ಎಸ್.ಡಿ ಜಯರಾಂ ಅವರ ಪುತ್ರ ಅಶೋಕ್ ಜಯರಾಮ್ ಅವರನ್ನು ಬಿಜೆಪಿ ತನ್ನ ಬತ್ತಳಿಕೆಗೆ ಹಾಕಿಕೊಂಡಿದ್ದು, ಇಂದು ಅವರು ಅಧಿಕೃತವಾಗಿ ಬೆಂಗಳೂರಿನಲ್ಲಿ ಸಿಎಂ‌ ಬಸವರಾಜ ಬೊಮ್ಮಾಯಿ ಸಮ್ಮುಖದಲ್ಲಿ ಪಕ್ಷ ಸೇರ್ಪಡೆಗೊಳ್ಳಲಿದ್ದಾರೆ.

ಕಳೆದ ಹಲವು ದಿನಗಳಿಂದ ಅಶೋಕ್ ಜಯರಾಮ್ ಬಿಜೆಪಿ ಸೇರುತ್ತಾರೆ ಎಂಬ ವಿಚಾರ ಎಲ್ಲೆಡೆ ಜನರ ಬಾಯಲ್ಲಿ ಹರಿದಾಡುತ್ತಿತ್ತು. ಬಿಜೆಪಿ ನಾಯಕರ ಸಮಾರಂಭ, ಸುದ್ದಿಗೋಷ್ಠಿಯಲ್ಲಿ ಕಾಣಿಸಿಕೊಳ್ಳುತ್ತಿದ್ದ ಅಶೋಕ್ ಜಯರಾಮ್ ಜನರ ಮನಸ್ಸಿನಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದ್ದರು. ಆ ಎಲ್ಲಾ ಪ್ರಶ್ನೆಗಳಿಗೆ ಇಂದು ಉತ್ತರ ಸಿಗಲಿದೆ.

ತಮ್ಮ ಜನಪರ ನಿಲುವು,ದಿಟ್ಟ ವ್ಯಕ್ತಿತ್ವದ ಕಾರಣಕ್ಕಾಗಿ ಮಂಡ್ಯದ ರಾಜಕೀಯ ಇತಿಹಾಸದಲ್ಲಿ ಇಂದಿಗೂ ಚಿರಸ್ಥಾಯಿಯಾದ ಹೆಸರು ಎಸ್.ಡಿ. ಜಯರಾಮ್ ಅವರದ್ದು. ಜೆಡಿಎಸ್ ಪಕ್ಷದಿಂದ ಶಾಸಕರಾಗಿ, ಸಚಿವರಾಗಿ ಕಾರ್ಯನಿರ್ವಹಿಸಿದ್ದ ಜಯರಾಮ್ ತಮ್ಮ ಜನಪರ ಕಾರ್ಯಗಳಿಂದ ಇಂದಿಗೂ ಮಂಡ್ಯದ ಜನರ ಮನಸ್ಸಿನಲ್ಲಿ ಉಳಿದಿದ್ದಾರೆ.

ಅಶೋಕ್ ಜಯರಾಮ್ ಅವರ ತಾಯಿ ಪ್ರಭಾವತಿ ಕೂಡ ಶಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ತಂದೆ ತಾಯಿಯ ರಾಜಕಾರಣವನ್ನು ಬಹಳ ಹತ್ತಿರದಿಂದ ಕಂಡಿರುವ ಅಶೋಕ್ ಜಯರಾಮ್ ಬಿಜೆಪಿ ಪಕ್ಷಕ್ಕೆ ಬಂದರೆ ಪಕ್ಷ ಪ್ರಬಲವಾಗುತ್ತದೆ ಎನ್ನುವ ಉದ್ದೇಶದಿಂದ ಅಮಿತ್ ಷಾ ರಾಜ್ಯ ನಾಯಕರಿಗೆ ಗುಪ್ತ ಕಾರ್ಯಸೂಚಿ ವಿವರಿಸಿದ್ದರು. ಅದರಂತೆ ಅಶೋಕ್ ಜಯರಾಮ್ ಬಿಜೆಪಿ ಸೇರ್ಪಡೆಯಾಗುತ್ತಿದ್ದಾರೆ.

ಅಶೋಕ್ ಜಯರಾಂ ಬಿಜೆಪಿ ಸೇರ್ಪಡೆಯಿಂದ ಮಂಡ್ಯದಲ್ಲಿ ಬಿಜೆಪಿಗೆ ಬಲ ಬರುವುದಂತೂ ಖಚಿತ. ತಂದೆ ಜಯರಾಂ ಅವರ ಜನಪರ ಕಾರ್ಯಗಳನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸುವುದಾಗಿ ಅಶೋಕ್ ಹೇಳುತ್ತಾರೆ. ಆದರೆ ಜಾತ್ಯಾತೀತ ಜನತಾದಳದ ಪ್ರಾಬಲ್ಯವಿರುವ ಮಂಡ್ಯದಲ್ಲಿ ಅಶೋಕ್ ಜಯರಾಂ ಕೂಡ ಸಮರ್ಥ ಅಭ್ಯರ್ಥಿ. ಒಕ್ಕಲಿಗ ಪಾಳೇಪಟ್ಟಿನ ಮಂಡ್ಯದಲ್ಲಿ ಬಿಜೆಪಿಗೆ ಒಕ್ಕಲಿಗ ಸಮುದಾಯದ ಪ್ರಬಲ ಯುವನಾಯಕ ಅಶೋಕ್ ಜಯರಾಂ ಸೇರುತ್ತಿರುವುದು ಸಾಕಷ್ಟು ದೊಡ್ಡ ಶಕ್ತಿಯನ್ನು ತಂದು ಕೊಡಲಿದೆ.

ಇಂಜಿನಿಯರಿಂಗ್ ಪದವಿ ಪಡೆದಿರುವ ಅಶೋಕ್ ಜಯರಾಮ್ ಬಹಳ ಸಂಭಾವಿತ ಯುವಕ. ರಾಜಕಾರಣದಲ್ಲಿ ತಂದೆ- ತಾಯಿಯಂತೆ ಉತ್ತಮ ಕೆಲಸ ಮಾಡಿ ಜನರ ವಿಶ್ವಾಸ ಗಳಿಸಲು ಸದಾ ಹಾತೊರೆಯುತ್ತಿರುವ ವ್ಯಕ್ತಿ. ಜೆಡಿಎಸ್ ಪಕ್ಷದಲ್ಲಿದ್ದುಕೊಂಡು ಕೆಲಸ ಮಾಡುತ್ತಿದ್ದ ಅಶೋಕ್ ಜಯರಾಮ್ 2018ರ ಚುನಾವಣೆಯಲ್ಲಿ ಪಕ್ಷದ ಟಿಕೆಟ್ ಸಿಗುತ್ತದೆಂಬ ಅತಿಯಾದ ಆತ್ಮವಿಶ್ವಾಸ ಹೊಂದಿದ್ದರು. ಆದರೆ ಜೆಡಿಎಸ್ ಟಿಕೆಟ್ ಸಿಗದ ಪರಿಣಾಮ ಪಕ್ಷದ ಚಟುವಟಿಕೆಗಳಲ್ಲಿ ಭಾಗವಹಿಸದೇ ಸುಮ್ಮನಿದ್ದು ಬಿಟ್ಟಿದ್ದರು.

ಕಳೆದ ಮೂರು ತಿಂಗಳ ಹಿಂದೆ ರಾಜ್ಯ ಒಕ್ಕಲಿಗರ ಸಂಘದ ಚುನಾವಣೆಯಲ್ಲಿ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸುವ ಮೂಲಕ ಮತ್ತೆ ಜನರ ಬಳಿ ಬಂದರು. ಮಂಡ್ಯದ ಜಿಲ್ಲೆಯ ಜನ ಎರಡೂ ಕೈಗಳಿಂದ ಅಶೋಕ್ ಜಯರಾಂ ರವರನ್ನು ಬಾಚಿ ತಬ್ಬಿ ಕೊಂಡರು. ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿ ಶಾಸಕರಾಗುವುದು ಬಿಟ್ಟು ಒಕ್ಕಲಿಗರ ಸಂಘದ ನಿರ್ದೇಶಕ ಸ್ಥಾನಕ್ಕೆ ಏಕೆ ಬಂದಿರೆಂದು ಕೇಳಿದ ಮಂಡ್ಯದ ಒಕ್ಕಲಿಗರು ಆಗಲಿ, ನಿಮ್ಮ ತಂದೆ ಜಯರಾಮ್ ಅವರ ಮುಖ ನೋಡಿಕೊಂಡು ನಿಮಗೊಂದು ವೋಟನ್ನು ಖಂಡಿತಾ ಕೊಡ್ತೀವಿ ಎಂದು ಹೇಳಿ ಭಾರೀ ಬಹುಮತದಿಂದ ಅವರನ್ನು ನಿರ್ದೇಶಕರನ್ನಾಗಿ ಆಯ್ಕೆ ಮಾಡಿದರು.

ಜಾತ್ಯಾತೀತ ನಿಲುವಿನ ಅಶೋಕ್ ಜಯರಾಂ ಸುತ್ತ ಎಲ್ಲಾ ವರ್ಗದ ಜನರೂ ಇದ್ದಾರೆ. ಆದರೆ ಬಿಜೆಪಿ ಸೇರುತ್ತಿರುವುದರಿಂದ ಅಲ್ಪಸಂಖ್ಯಾತ ಸಮುದಾಯದ ಜನರು ಅಶೋಕ್ ಜಯರಾಂ ಅವರ ನಿಲುವಿನ ಬಗ್ಗೆ ಏನಂತಾರೊ ಗೊತ್ತಿಲ್ಲ.

ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿ ಪಕ್ಷಕ್ಕೆ ಭದ್ರವಾದ ಬುನಾದಿ ಇಲ್ಲ. ಕಳೆದ ಉಪಚುನಾವಣೆಯಲ್ಲಿ ಕೆ.ಆರ್.ಪೇಟೆಯಲ್ಲಿ ಜೆಡಿಎಸ್ ಪ್ರಾಬಲ್ಯವಿದ್ದರೂ ಬಿಜೆಪಿಯ ನಾರಾಯಣಗೌಡ ಗೆಲ್ಲುವ ಮೂಲಕ ರಾಜ್ಯದ ಇತಿಹಾಸದಲ್ಲಿ ಹೊಸ ದಾಖಲೆ ಬರೆದರು.

ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿಗೂ ಚಿಕ್ಕ ಈ ಗೆಲುವು ಹೈಕಮಾಂಡ್ ನಾಯಕರ ಕಣ್ಣು ತೆರೆಸಿ ದಕ್ಷಿಣಭಾಗದಲ್ಲಿ ಬಿಜೆಪಿ ಸಂಘಟಿಸುವ ಪ್ರಯತ್ನಕ್ಕೆ ಮುನ್ನುಡಿ ಬರೆಯಿತು. ಅದರಂತೆ ಹಳೆ ಮೈಸೂರು ಭಾಗದಲ್ಲಿ ಎಲ್ಲೆಡೆ ಬಿಜೆಪಿ ಗಟ್ಟಿಗೊಳಿಸಲು ನಿರ್ಧರಿಸಿದ್ದು, ಮಂಡ್ಯದಲ್ಲೂ ಅಶೋಕ್ ಜಯರಾಂ, ಇಂಡುವಾಳು ಸಚ್ಚಿದಾನಂದ, ಸುಮಲತಾ ಅಂಬರೀಶ್ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಮೂಲಕ ದಕ್ಷಿಣ ಭಾಗದಲ್ಲೂ ಗಣನೀಯವಾಗಿ ಶಾಸಕರ ಸಂಖ್ಯೆ ಹೆಚ್ಚಿಸಿಕೊಳ್ಳುವುದು ಅಮಿತ್ ಷಾ ಗುರಿ. ಅದರ ಭಾಗವಾಗಿ ಇಂದು ಅಶೋಕ್ ಜಯರಾಂ ಸೇರ್ಪಡೆಯಾಗುತ್ತಿದ್ದಾರೆ.ಮುಂದೆ ಯಾರ್ಯಾರು ಬಿಜೆಪಿ ಸೇರುತ್ತಾರೋ ಎಂಬುದು ಕುತೂಹಲ ಮೂಡಿಸಿರೋದಂತೂ ಸತ್ಯ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!