Thursday, September 19, 2024

ಪ್ರಾಯೋಗಿಕ ಆವೃತ್ತಿ

60 ವರ್ಷ ಆಳಿದ ಕಾಂಗ್ರೆಸ್ ಆಸ್ತಿ ₹600 ಕೋಟಿ;15 ವರ್ಷ ಆಡಳಿತ ನಡೆಸಿದ ಬಿಜೆಪಿ ಆಸ್ತಿ ₹5,000 ಕೋಟಿ: ಇವರಲ್ಲಿ ಯಾರು ಪ್ರಾಮಾಣಿಕರು ?

ಭಾರತದಲ್ಲಿ 60 ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷದ ಆಸ್ತಿ ₹600 ಕೋಟಿ ಇದ್ದರೆ, ಕೇವಲ 15 ವರ್ಷ ಆಡಳಿತ ನಡೆಸಿದ ಬಿಜೆಪಿ ಆಸ್ತಿ ₹5000 ಕೋಟಿ ಆಗಿದೆ, ಹೀಗಿರುವಾಗ ಎರಡು ಪಕ್ಷದಲ್ಲಿ ಯಾರು ಪ್ರಾಮಾಣಿಕರು ಎಂಬುದನ್ನು ಜನತೆ ಆಲೋಚಿಸಿ ಮತಚಲಾಯಿಸಬೇಕೆಂದು ಕಾಂಗ್ರೆಸ್ ನಾಯಕ ಹಾಗೂ ಮಳವಳ್ಳಿ ಶಾಸಕ ನರೇಂದ್ರಸ್ವಾಮಿ ಮನವಿ ಮಾಡಿದರು.

ಮದ್ದೂರು ಪಟ್ಟಣದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಇಂದು ಅಘೋಷಿತ ತುರ್ತು ಪರಿಸ್ಥಿತಿ ಇದೆ. ದೇಶ ಉಳಿಸುವ ಕೆಲಸವಾಗಬೇಕು. ದೇಶ ಉಳಿಸಲು ರಾಹುಲ್ ಗಾಂಧಿ ಹೋರಾಟ ಮಾಡುತ್ತಿದ್ದಾರೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಪಾದಯಾತ್ರೆ ಮಾಡಿದ್ದಾರೆ. ಅವರೊಂದಿಗೆ ದೇಶದ ಜನತೆ ಕೈಜೋಡಿಸಬೇಕೆಂದು ಕೋರಿದರು.

ಮಂಡ್ಯದ ಆಡಳಿತ ಹಿಡಿದಿದ್ದವರಿಗೆ ಮಾತೇ ಮಾರಕ ಆಯ್ತು. ನಮ್ಮ ತಂದೆಯನ್ನು, ನನ್ನನ್ನು ಸಲಹಿದ್ದೀರಿ ಎಂದು ಚನ್ನಪಟ್ಟಣದಲ್ಲಿ ಹೇಳಿದ್ದಾರೆ. ಈಗ ಇಲ್ಲಿ ಏನ್ ಹೇಳ್ತಾರೋ ಗೊತ್ತಿಲ್ಲ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಕುರಿತು ವ್ಯಂಗ್ಯವಾಡಿದರು.

ಪಪ್ರಚಾರಕ್ಕೆ ಕಿವಿ ಕೊಡಬೇಡಿ

ಮದ್ದೂರು ಶಾಸಕರಾದ ಉದಯ್ ಮಾತನಾಡಿ, ವಿಧಾನಸಭೆ ಚುನಾವಣೆಯಲ್ಲಿ ನನ್ನನ್ನು ಬೆಂಬಲಿಸಿದಂತೆ ಈ ಬಾರಿ ಸ್ಟಾರ್ ಚಂದ್ರು ಅವರನ್ನು ಅತಿ ಹೆಚ್ಚು ಲೀಡ್ ನಲ್ಲಿ ಗೆಲ್ಲಿಸಬೇಕು. ಗೊಂದಲಕ್ಕೆ ಒಳಗಾಗಬೇಡಿ ಅಪಪ್ರಚಾರಕ್ಕೆ ಕಿವಿ ಕೊಡಬೇಡಿ. ಬೇರೆಯವರ ಶಕ್ತಿ ಕುಂದಿದೆ ಎಂದರು.

ನಿಮ್ಮೆಲ್ಲರ ಆಶೀರ್ವಾದ ನಮ್ಮ ಮೇಲಿರಲಿ

ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಮಾತನಾಡಿ, ನಿಮ್ಮೆಲ್ಲರ ಆಶೀರ್ವಾದ ನಮ್ಮ ಮೇಲಿರಲಿ. ಕೇಂದ್ರದಲ್ಲಿ ರಾಜ್ಯದ ಜನತೆ ಪರ ದನಿ ಎತ್ತಲು ಬೆಂಬಲಿಸಬೇಕು ಎಂದು ವಿನಂತಿಸಿಕೊಂಡರು.

ಅಭಿವೃದ್ಧಿ ಅಂದರೆ ಕಾಂಗ್ರೆಸ್

ವಿಧಾನಪರಿಷತ್ ಸದಸ್ಯರಾದ ದಿನೇಶ್ ಗೂಳಿಗೌಡ ಮಾತನಾಡಿ, ಮಂಡ್ಯ ಜಿಲ್ಲೆಯಲ್ಲಿ ಇದು ಪ್ರಮುಖ ಚುನಾವಣೆ. ಅಭಿವೃದ್ಧಿ ಅಂದರೆ ಕಾಂಗ್ರೆಸ್. ಚುನಾವಣೆಗೂ ಮುನ್ನ ಐದು ಗ್ಯಾರಂಟಿ ಜನರ ಮುಂದಿಟ್ಟಿದ್ದು, ಇಂದು ಅವುಗಳ ಅನುಷ್ಠಾನವೂ ಆಗಿದೆ ಎಂದರು.

ಇದುವರೆಗೂ 186 ಕೋಟಿ ಮಹಿಳೆಯರು ಉಚಿತ ಪ್ರಯಾಣ ಮಾಡಿದ್ದರೆ, 1.21 ಕೋಟಿ ಮಹಿಳೆಯರಿಗೆ 2 ಸಾವಿರ ಹಣವನ್ನು ಅವರ ಖಾತೆಗೆ ಜಮೆ ಮಾಡಲಾಗಿದೆ. 1.67 ಕೋಟಿ ಮನೆಗಳಿಗೆ ಉಚಿತ ವಿದ್ಯುತ್, 4.87 ಕೋಟಿ ಪಡಿತರ ಕಾರ್ಡ್ ಗಳಿಗೆ ಐದು ಕೆಜಿ ಅಕ್ಕಿ ನೀಡಲಾಗಿದೆ. 1.40 ಲಕ್ಷ ಪದವೀಧರರು ನಿರುದ್ಯೋಗ ಭತ್ಯೆ ಪಡೆದುಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.

ರಾಜ್ಯದ 340 ತಾಲೂಕುಗಳಲ್ಲಿ ಬರ ಇದ್ದು 220 ತಾಲೂಕುಗಳಲ್ಲಿ ತೀವ್ರ ಬರ ಇದೆ. ಆದಾಗ್ಯೂ ಕೇಂದ್ರ ಸರ್ಕಾರ ಒಂದು ಪೈಸೆ ಬಿಡುಗಡೆ ಮಾಡಿಲ್ಲ. ಮಂಡ್ಯ ಜಿಲ್ಲೆಯ ಅಭಿವೃದ್ಧಿಗೆ 3 ಸಾವಿರ ಕೋಟಿ ರೂ. ಅನುದಾನ ತರಲಾಗಿದೆ. ಅಭಿವೃದ್ಧಿಗೆ ಪ್ರೋತ್ಸಾಹಿಸಲು, ಸಿಎಂ, ಡಿಸಿಎಂ ಕೈ ಬಲಪಡಿಸಲು ಕಾಂಗ್ರೆಸ್ ಬೆಂಬಲಿಸಿ ಎಂದು ಮನವಿ ಮಾಡಿದರು.

ಕಾಂಗ್ರೆಸ್ ಪಕ್ಷಕ್ಕೆ ದ್ರೋಹ ಮಾಡಲ್ಲ

ವಿಧಾನ ಪರಿಷತ್ ಸದಸ್ಯ ಮಧು ಮಾದೇಗೌಡ ಮಾತನಾಡಿ, ನಾನು ಜೆಡಿಎಸ್ ಪರವಾಗಿ ಕೆಲಸ ಮಾಡುತ್ತೇನೆ ಎಂಬ ಮಾತನ್ನು ಕ್ಷೇತ್ರದಲ್ಲಿ ಹರಿಬಿಟ್ಟಿದ್ದಾರೆ. ತಾಲೂಕಿನಲ್ಲಿ ನಮ್ಮ ತಂದೆ ಮಾದೇಗೌಡ ಅವರು ಕಟ್ಟಿದ ಕಾಂಗ್ರೆಸ್ ಪಕ್ಷಕ್ಕೆ ನಾನು ದ್ರೋಹ ಮಾಡಲ್ಲ ಎಂದು ಸ್ಪಷ್ಟಪಡಿಸಿದರು.

ಮಾಜಿ ವಿಧಾನಪರಿಷತ್ ಸದಸ್ಯರಾದ ಮರಿತಿಬ್ಬೇಗೌಡ ಮಾತನಾಡಿ, ಮದ್ದೂರು ತಾಲೂಕು ರಾಜಕಾರಣದಲ್ಲಿ ವಿಶಿಷ್ಟ ಸ್ಥಾನ ಪಡೆದುಕೊಂಡಿದೆ. ಕಾಂಗ್ರೆಸ್ ಸರ್ಕಾರ ಬಡವರ ಪರ, ಬಿಜೆಪಿ ಶ್ರೀಮಂತ ಪರ. ಈಗ ಜೆಡಿಎಸ್ ಬಿಜೆಪಿ ಜೊತೆ ಹೋಗಿದೆ. ಅಭ್ಯರ್ಥಿ ಯಾರು ನಿಲ್ಲಬೇಕು ಅಂತ ಮೋದಿ ತೀರ್ಮಾನ ಮಾಡುವ ಮಟ್ಟಿಗೆ ಆ ಪಕ್ಷ ಬಂದಿದೆ. ಈ ಜಿಲ್ಲೆಯ ಮಣ್ಣಿನ ಮಗನೇ ಲೋಕಸಭೆಗೆ ಹೋಗಬೇಕು ಕಣ್ಣೀರು ಸುರಿಸುವವರು ಬೇಕಾಗಿಲ್ಲ, ಕಣೀರಧಾರೆಗೆ ಸೊಪ್ಪು ಹಾಕಬೇಡಿ ಎಂದು ಕರೆಕೊಟ್ಟರು.

ಸಭೆಯಲ್ಲಿ ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ, ಮಾಜಿ ಶಾಸಕರಾದ ರಾಮಕೃಷ್ಣ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಸಿ.ಡಿ.ಗಂಗಾಧರ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಅಂಜನಾ ಶ್ರೀಕಾಂತ್, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಚಿದಂಬರಂ, ಕೆಎಂಎಫ್ ನಿರ್ದೇಶಕ ಹರೀಶ್ ಬಾಬು, ಬಸವರಾಜ್, ರಾಜೀವ್ ಸೇರಿದಂತೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಮುಖಂಡರು, ಕಾರ್ಯಕರ್ತರು ಸೇರಿದಂತೆ ಹಲವರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!