Thursday, September 19, 2024

ಪ್ರಾಯೋಗಿಕ ಆವೃತ್ತಿ

ಗಡಿವಿವಾದದ ಬಗ್ಗೆ ಕೇಂದ್ರಕ್ಕೆ ಮಾಹಿತಿ ನೀಡಲಿದ್ದೇನೆ : ಸಿಎಂ ಬೊಮ್ಮಾಯಿ

ಗಡಿವಿವಾದದ ಬಗ್ಗೆ ಚರ್ಚಿಸಲೆಂದೇ ಎರಡೂ ರಾಜ್ಯಗಳ ಮುಖ್ಯಮಂತ್ರಿಗಳನ್ನು ಗೃಹ ಸಚಿವರು ದೆಹಲಿಗೆ ಕರೆದಿದ್ದಾರೆ. ಅಲ್ಲಿ ನಮ್ಮ ನಿಲುವಿನ ಬಗ್ಗೆ ಸ್ಪಷ್ಟತೆ ನೀಡುತ್ತೇವೆ. ರಾಜ್ಯ ಪುನರ್ ವಿಂಗಡನಾ ಕಾಯ್ದೆ, ಸುಪ್ರೀಂ ಕೋರ್ಟ್‌ನಲ್ಲಿರುವ ಪ್ರಕರಣ ಸೇರಿದಂತೆ ಎಲ್ಲ ಮಾಹಿತಿಯನ್ನು ಗೃಹ ಸಚಿವರಿಗೆ ನೀಡಲಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಹೇಳಿದರು.

ಮಂಗಳವಾರ ಮೈಸೂರು ವಿಮಾನ ನಿಲ್ದಾಣದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬೊಮ್ಮಾಯಿ, “ಸಂವಿಧಾನದಲ್ಲಿನ ಅವಕಾಶಗಳು ಮತ್ತು 2004ರ ಪ್ರಕರಣವನ್ನು ಸುಪ್ರೀಂ ಕೋರ್ಟ್ ಕೈಗೆತ್ತಿಕೊಂಡೇ ಇಲ್ಲ ಎಂಬ ಬಗ್ಗೆ ಗೃಹ ಕಾರ್ಯದರ್ಶಿಗಳಿಗೆ ಮನವಿ ಮಾಡಿಕೊಡಲಿದ್ದೇನೆ” ಎಂದರು.

“ಚಾಮರಾಜನಗರ ಜಿಲ್ಲೆಯೂ 31 ಜಿಲ್ಲೆಗಳ ಪೈಕಿ ಮಹತ್ವದ ಜಿಲ್ಲೆಯಾಗಿದೆ. ನಿಸರ್ಗಭರಿತ, ಐತಿಹಾಸಿಕ ಮಹತ್ವವುಳ್ಳ ಗಡಿ ಜಿಲ್ಲೆಯಾಗಿದೆ. ಅಭಿವೃದ್ಧಿಗೆ ಮಹತ್ವ ಕೊಟ್ಟೇ ಕೊಡುತ್ತೇವೆ” ಎಂದು ತಿಳಿಸಿದರು.

ಮಾಂಡೌಸ್‌ ಚಂಡಮಾರುತದಿಂದ ಬೆಳೆ ಹಾನಿಯಾದ ಬಗ್ಗೆ ಪ್ರತಿಕ್ರಿಯೆ ನೀಡಿದ ಬೊಮ್ಮಾಯಿ, ”ಮಾಂಡೌಸ್‌ ಚಂಡ ಮಾರುತದಿಂದ ಭಾರಿ ತೊಂದರೆಗಳಾಗಿವೆ. ಬೆಳೆಗಳ ಹಾನಿ ಬಗ್ಗೆ ಸಮೀಕ್ಷೆ ನಡೆಸಲಾಗುತ್ತಿದೆ. ರಾಗಿ ಬೆಳೆದು ನಿಂತಿದ್ದು, ಕಟಾವು ಮಾಡಿದವರಿಗೆ ಕಷ್ಟವಾಗುತ್ತಿದೆ ಎಂಬ ವರದಿ ಬಂದಿದೆ. ಕೃಷಿ ಇಲಾಖೆಯಿಂದ ಸಂಪೂರ್ಣ ಮಾಹಿತಿ ತರಿಸಿಕೊಳ್ಳಲಾಗುತ್ತಿದೆ” ಎಂದರು.

ಸಚಿವ ಸಂಪುಟ ವಿಸ್ತರಣೆ ಬಗ್ಗೆ ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ, “ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ದೆಹಲಿಗೆ ಹೋಗುತ್ತಿದ್ದೇವೆ. ಅಲ್ಲಿ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆಯಾಬಹುದು. ಆದ್ದರಿಂದ ಆ ಬಗ್ಗೆಯೂ ಸಿದ್ಧತೆ ಮಾಡಿಕೊಂಡೇ ಹೋಗಿರುತ್ತೇವೆ” ಎಂದು ಮಾಹಿತಿ ನೀಡಿದರು.

ಚೀನಾ ಮತ್ತು ಭಾರತದ ಸೈನಿಕರ ನಡುವೆ ಸಂಘರ್ಷ ಉಂಟಾಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ”ರಕ್ಷಣಾ ಪಡೆಗಳೂ ಸನ್ನದ್ಧವಾಗಿವೆ. ಹಿಂದೆ ಯಾವುದೇ ತಯಾರಿಗಳಿರಲಿಲ್ಲ. ವಿವಾದವಿದ್ದ ಸಂದರ್ಭದಲ್ಲಿ ಚೀನಾ ಮುನ್ನುಗ್ಗಿದಾಗ ಅಂದಿನ ನಾಯಕತ್ವ ರಕ್ಷಣಾ ಪಡೆಗಳಿಗೆ ನಿರ್ದೇಶನ ನೀಡುತ್ತಿರಲಿಲ್ಲ. ಈಗ ಸ್ಪಷ್ಟ ನಿರ್ದೇಶನವಿದೆ. ರಸ್ತೆ, ಸೇತುವೆ, ಸಲಕರಣೆ ಮುಂತಾದ ಸಂಪರ್ಕ ಸಾಧನಗಳನ್ನು ಬಲಪಡಿಸಲಾಗಿದೆ. ಚೀನಾವನ್ನು ಸಮರ್ಥವಾಗಿ ಹಿಮ್ಮೆಟ್ಟಿಸುತ್ತೇವೆ ಎಂಬ ವಿಶ್ವಾಸವಿದೆ” ಎಂದು ಹೇಳಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!