Friday, September 20, 2024

ಪ್ರಾಯೋಗಿಕ ಆವೃತ್ತಿ

ಮೂಢನಂಬಿಕೆಗಳ ಮೂಲಕ ಹೆಣ್ಣುಮಕ್ಕಳ ಶೋಷಣೆ: ಬಿ.ಟಿ.ವಿಶ್ವನಾಥ್

ಸಮಾಜದಲ್ಲಿ ಮೂಢನಂಬಿಕೆ ಕಂದಾಚಾರಗಳ ಮೂಲಕವು ಹೆಣ್ಣನ್ನು ಶೋಷಣೆಗೆ ಗುರಿ ಮಾಡಲಾಗುತ್ತಿದೆ. ಅಲ್ಲದೇ ದೊಡ್ಡ ದೊಡ್ಡ ಮಠಗಳಲ್ಲಿಯೂ ಕೂಡ ದೇವರು, ಧರ್ಮದ ಹೆಸರಲ್ಲಿ ಹೆಣ್ಣಿನ ಮೇಲೆ ದೌರ್ಜನ್ಯ, ಅತ್ಯಾಚಾರಗಳು ನಡೆಯುತ್ತಿರುವುದು ಆತಂಕದ ವಿಷಯ ಎಂದು ಪ್ರಗತಿಪರ ನ್ಯಾಯವಾದಿ ಬಿ.ಟಿ.ವಿಶ್ವನಾಥ್ ತಿಳಿಸಿದರು.

ಅಂತರಾಷ್ಟ್ರೀಯ ಮಹಿಳಾದಿನಾಚರಣೆಯ ಸಪ್ತಾಹದ ಭಾಗವಾಗಿ ಮಹಿಳಾ ಮುನ್ನಡೆ ಮತ್ತು ಅತ್ಯಾಚಾರ ವಿರೋಧಿ ಆಂದೋಲನದ ವತಿಯಿಂದ ಮಂಡ್ಯನಗರದ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ನಡೆದ ಹೆಣ್ಣುಭ್ರೂಣ ಹತ್ಯೆ ಮತ್ತು ಅತ್ಯಾಚಾರಗಳ ವಿರುದ್ಧ ಅರಿವಿನ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಮಾಜದಲ್ಲಿ ಹೆಣ್ಣನ್ನು ಆಸ್ತಿ ಮತ್ತು ಹಣ, ಸಂಪತ್ತಿನಂತೆ ಭೋಗಕ್ಕೆ ಇರುವ ವಸ್ತುಗಳ ರೀತಿಯಲ್ಲಿ ಪರಿಗಣಿಸುತ್ತಾ ,ಎರಡನೆ ದರ್ಜೆಯ ಪ್ರಜೆಯಾಗಿಯೇ ನೋಡುತ್ತಾ ಬರಲಾಗುತ್ತಿದೆ. ಹೆಣ್ಣು ಮಕ್ಕಳು ಮೌಢ್ಯಕ್ಕೆ ದಾಸರಾಗದೇ ಸರಿ ತಪ್ಪುಗಳನ್ನು ತಿಳಿದುಕೊಳ್ಳಬೇಕು. ತಪ್ಪನ್ನು ಯಾರೇ ಮಾಡಿದರೂ ಧೈರ್ಯವಾಗಿ ಖಂಡಿಸಬೇಕೆಂದು ಸಲಹೆ ನೀಡಿದರು.

ಪೋಕ್ಸೊ ಕಾಯ್ದೆ ಮತ್ತು ಹೆಣ್ಣು ಭ್ರೂಣ ಹತ್ಯೆಯ ಕಾಯ್ದೆಗಳ ಬಗ್ಗೆ ತಿಳಿಸಿದ ಅವರು, ಹೆಣ್ಣುಭ್ರೂಣ ಹತ್ಯೆಗಳು ಈಗೆ ಮುಂದುವರೆದರೆ ಮತ್ತೊಮ್ಮೆ ಮಹಾಭಾರತ ಕಥನ ಪ್ರಾರಂಭವಾಗುತ್ತದೆ. ಹಿಂದೆ ದ್ರೌಪದಿಗೆ 5 ಜನ ಗಂಡಂದಿರು ಎಂಬ ಕಥೆಗಳನ್ನು ನಾವು ಓದಿದ್ದೇವೆ. ಮುಂದೆ ಹೆಣ್ಣು ಸಂತತಿ ನಾಶವಾಗಿ ಒಂದು ಹೆಣ್ಣನ್ನು ಐದು ಮಂದಿ ಪುರುಷರು ಮದುವೆಯಾಗುವಂತಹ ದಿನಗಳು ಬರಬಹುದು, ಆದ್ದರಿಂದ ಹೆಣ್ಣುಭ್ರೂಣ ಹತ್ಯೆ ತಡೆಗೆ ಬಹಳ ಗಂಭೀರವಾಗಿ ಚಿಂತಿಸಬೇಕು. ಹೆಣ್ಣು ತಾಯಿಯಾಗಿ ಬೇಕು, ಹೆಂಡತಿಯಾಗಿ ಬೇಕು, ಆದರೆ ಮಗಳಾಗಿ ಮಾತ್ರ ಬೇಡ ಎನ್ನುವ ಮನೋಭಾವ ಹೋಗಬೇಕು. ಆರೋಗ್ಯಕರ ಸಮಾಜದ ನಿರ್ಮಾಣ ನಮ್ಮೆಲ್ಲರ ಹೊಣೆ ಎಂದು ಮಕ್ಕಳಿಗೆ ಮನವರಿಕೆ ಮಾಡಿಕೊಟ್ಟರು.

ಮಹಿಳಾ ಮುನ್ನಡೆಯ ರಾಜ್ಯ ಕಾರ್ಯದರ್ಶಿ ಪೂರ್ಣಿಮಾ  ಮಕ್ಕಳೊಂದಿಗೆ ಸಂವಾದ ನಡೆಸಿದರು. ಲೈಂಗಿಕ ಕಿರುಕುಳ ಮತ್ತು ಭ್ರೂಣಹತ್ಯೆಯ ಆಯಾಮಗಳನ್ನು ತಿಳಿಸಿಕೊಡುವ ‘ನೀಲಿ ರಿಬ್ಬನ್’ ಕಿರುನಾಟಕವನ್ನು
ಮಹಿಳಾ ಮುನ್ನಡೆಯ ಶಿಲ್ಪ ಮಕ್ಕಳ ಮುಂದೆ ಪ್ರದರ್ಶಿಸಿದರು.

ಕಾರ್ಯಕ್ರಮದಲ್ಲಿ ನಿಲಯ ಪಾಲಕರಾದ ಲತಾ ಜ್ಯೋತಿ ಹಾಗೂ ಶೀಲಾ ಮತ್ತು ಮಹಿಳಾ ಮುನ್ನಡೆಯ ಅಂಜಲಿ ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!