Thursday, September 19, 2024

ಪ್ರಾಯೋಗಿಕ ಆವೃತ್ತಿ

ಅಮೃತ ಕಾಲಕ್ಕೆ ಭದ್ರ ಬುನಾದಿ ಹಾಕುವ ಬಜೆಟ್

ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಅಮೃತ ಕಾಲಕ್ಕೆ ಭದ್ರ ಬುನಾದಿ ಹಾಕುವ ಬಜೆಟ್ ಮಂಡಿಸಿದ್ದು,ಇದರಿಂದ ಎಲ್ಲ ವರ್ಗದ ಜನರಿಗೆ ನೆರವಾಗಲಿದೆ ಎಂದು ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಡಾ.ಸಿದ್ದರಾಮಯ್ಯ ತಿಳಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, 45 ಲಕ್ಷ ಕೋಟಿ ರೂ. ಮೊತ್ತದ ಬಜೆಟ್ ದೇಶದ ಆರ್ಥಿಕ ಬೆಳವಣಿಗೆಗೆ ಪೂರಕವಾಗಿದೆ. ಪ್ರಗತಿಪರ, ಸರ್ವ ಸ್ಪರ್ಶಿ ಮತ್ತು ಸರ್ವ ವ್ಯಾಪಿ ಬಜೆಟ್ ಇದಾಗಿದೆ. ಇದರಲ್ಲಿ ಪ್ರಧಾನಿ ಮೋದಿ ಅವರ ದೂರದೃಷ್ಟಿತ್ವ ಎದ್ದು ಕಾಣುತ್ತಿದೆ.ಸೂಕ್ಷ್ಮಾತಿ ಸೂಕ್ಷ್ಮ ವಿಚಾರದಿಂದ ಆರಂಭಿಸಿ ದೊಡ್ಡದಾದ ದೂರದೃಷ್ಟಿಯ ಚಿಂತನೆಗಳೊಂದಿಗೆ ಮೋದಿಯವರು ವಿವಿಧ ಯೋಜನೆಗಳನ್ನು ಬಜೆಟ್‌ನಲ್ಲಿ ಸೇರಿಸಿದ್ದಾರೆ ಎಂದು ಶ್ಲಾಘಿಸಿದರು.

ಭಾರತವನ್ನು ವೇಗವಾಗಿ ಪ್ರಗತಿಪಥದಲ್ಲಿ ಕೊಂಡೊಯ್ಯುವ ಅಂಶಗಳು ಬಜೆಟ್‌ನಲ್ಲಿವೆ. ಬಜೆಟ್‌ನಲ್ಲಿ ಕರ್ನಾಟಕಕ್ಕೂ ಸಾಕಷ್ಟು ಅನುದಾನ ಹಂಚಿಕೆಯಾಗಿದೆ. ಬಜೆಟ್‌ನ ಅತ್ಯುತ್ತಮ ಅಂಶಗಳಿಂದ ಪ್ರತಿಪಕ್ಷಗಳು ನಿರಾಸೆಗೊಂಡಿವೆ. ಇದರಿಂದ ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿವೆ ಎಂದು ಅವರು ಆರೋಪಿಸಿದರು.

ಭದ್ರ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂ. ಅನುದಾನ ಬಂದಿದೆ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಅನುದಾನ ಬಂದಿರುವುದು ಪ್ರತಿಪಕ್ಷಗಳಿಗೆ ಹಿನ್ನಡೆಯಾಗಿದೆ. ರಾಜ್ಯದಲ್ಲಿ ಎಸ್.ನಿಜಲಿಂಗಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗಿನಿಂದಲೂ ಭದ್ರಾ ಮೇಲ್ದಂಡೆ ಯೋಜನೆಗೆ ಬೇಡಿಕೆಯಿತ್ತು. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದಾಗ ಯೋಜನೆಗೆ ಚಾಲನೆ ಸಿಕ್ಕಿತ್ತು. ಈಗ ಅನುದಾನವೂ ಸಿಕ್ಕಿದೆ ಎಂದು ತಿಳಿಸಿದರು.

ಕರ್ನಾಟಕ ರೈಲ್ವೆ ಕ್ಷೇತ್ರಕ್ಕೂ 7,561ಕೋಟಿ ರೂ. ಅನುದಾನ ಬರಲಿದೆ. ಇದು ಹಳಿಗಳ ಡಬ್ಲಿಂಗ್, ವಿದ್ಯುದೀಕರಣ, ಹೊಸ ಯೋಜನೆ ಅನುಷ್ಠಾನ ಸೇರಿದಂತೆ ಅಭಿವೃದ್ಧಿಗೆ ಪೂರಕವಾಗಿದೆ. ರೈಲ್ವೆಯಲ್ಲಿ 1 ಲಕ್ಷ ಕೋಟಿ ರೂ. ಹೂಡಿಕೆ ಹೆಚ್ಚಾಗಲಿದೆ. ಬಜೆಟ್ ಮೂಲಕ ಬಹುತೇಕ ಯೋಜನೆಗಳಲ್ಲೂ ಕರ್ನಾಟಕದ ಪಾಲು ಬಂದೇ ಬರುತ್ತದೆ. ಕೃಷಿ, ಕೈಗಾರಿಕೆ, ಸಣ್ಣ ಮತ್ತು ಕಿರು ಉದ್ಯಮ, ಗ್ರಾಮೀಣಾಭಿವೃದ್ಧಿ, ಜಲಜೀವನ ಮಿಷನ್, ಪ್ರಧಾನಮಂತ್ರಿ ಆವಾಸ್ ಯೋಜನೆ, ನಗರ ಮೂಲಸೌಕರ್ಯ ಹೀಗೆ ಹತ್ತಾರು ಯೋಜನೆಗಳಿಂದ ರಾಜ್ಯಕ್ಕೆ ಹೆಚ್ಚಿನ ಅನುದಾನ ಸಿಗಲಿದೆ ಎಂದು ವಿವರಿಸಿದರು.

ಮಧ್ಯಮ ವರ್ಗದ ಜನರ ವೈಯಕ್ತಿಕ ಆದಾಯ ತೆರಿಗೆ ಮಿತಿ ಹೆಚ್ಚಳದಿಂದ ಹೆಚ್ಚಿನ ಹಣ ಉಳಿತಾಯವಾಗಲಿದೆ. ಇದು ಆರ್ಥಿಕತೆಗೆ ಅನುಕೂಲಕವಾಗಿದೆ. ಜನರ ಕೈಯಲ್ಲಿ ಹೆಚ್ಚು ಹಣವಿದ್ದಾಗ ಕೊಳ್ಳುವ ಶಕ್ತಿಯೂ ಹೆಚ್ಚಾಗಲಿದೆ. ಇದು ಆರ್ಥಿಕತೆ ಬೆಳವಣಿಗೆಗೆ ಪೂರಕವಾಗಿದೆ. ಕೃಷಿ ಕ್ಷೇತ್ರಕ್ಕೆ 20 ಲಕ್ಷ ಕೋಟಿ ರೂ. ಮೀಸಲಿಡಲಾಗಿದೆ. ಕೌಶಲ್ಯಾಭಿವೃದ್ಧಿಗೆ ಒತ್ತು ನೀಡಲಾಗಿದೆ. ಕಾನೂನು ತಿದ್ದುಪಡಿಗಳ ಮೂಲಕ ಸುಧಾರಿತ ಬ್ಯಾಂಕ್ ಆಡಳಿತ ಮತ್ತು ಹೂಡಿಕೆದಾರರ ರಕ್ಷಣೆಗೆ ಆದ್ಯತೆ ನೀಡಲಾಗಿದೆ ಎಂದು ಹೇಳಿದರು.

ಮೇಕೆದಾಟು ಯೋಜನೆ ಆರಂಭಿಸುವಾಗಲೇ ಹಿಂದಿನ ಕಾಂಗ್ರೆಸ್ ಸರ್ಕಾರ ತಪ್ಪು ಮಾಡಿತ್ತು. ಹೀಗಾಗಿ ಅದು ಅಂತಾರಾಜ್ಯ ವಿವಾದವಾಗಿದೆ. ಸುಪ್ರೀಂ ಕೋರ್ಟ್ ಅನುಮತಿ ನೀಡಿದರೆ ನಮ್ಮ ಸರಕಾರ ಅನುದಾನ ಬಿಡುಗಡೆ ಮಾಡಲಿದೆ. ಡಿಪಿಆರ್‌ಗೆ ಒಪ್ಪಿಗೆ ಸಿಕ್ಕದ ಬಳಿಕ ಆದಷ್ಟು ಬೇಗ ಟೆಂಡರ್ ಮಾಡಲಿದ್ದೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಬಿಜೆಪಿ ಮುಖಂಡ ಅಶೋಕ್ ಜಯರಾಂ ಮಾತನಾಡಿ, ಅದಾನಿ ಗ್ರೂಪ್ ಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೂ ಯಾವುದೇ ಸಂಬಂಧವಿಲ್ಲ. ನರೇಂದ್ರ ಮೋದಿಯವರು ಪ್ರಧಾನಿಯಾಗುವ ಮುಂಚೆಯೇ ಅದಾನಿ ಬಿಲಿಯನೇರ್ ಆಗಿದ್ದರು. ಅದಾನಿಯವರ ಕಂಪನಿಗಳ ಶೇರು ಕೊಂಡಿರುವ ಎಲ್ಐಸಿ, ಎಸ್ಬಿಐ ಸಂಸ್ಥೆಗಳಿಗೆ ಯಾರಿಗೂ ಕೂಡ ಅದಾನಿ ಷೇರು ಕೊಳ್ಳಿರಿ ಎಂದು ಕೇಂದ್ರ ಸರ್ಕಾರ ಹಸ್ತಕ್ಷೇಪ ಮಾಡಿಲ್ಲ ಎಂದು ಪಶ್ನೆಯೊಂದಕ್ಕೆ ಉತ್ತರಿಸಿದರು.

ಮಂಡ್ಯ ಜಿಲ್ಲೆಯ ರೈಸ್ ಮಿಲ್ ಗಳಲ್ಲಿ ಪಡಿತರ ಅಕ್ಕಿ ದಂಧೆ ನಡೆಯುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಅಕ್ಕಿ ದಂಧೆ ನಡೆಯುತ್ತಿದೆ‌. ಎಲ್ಲರೂ ಮಾಡುತ್ತಿಲ್ಲ. ಕೆಲವರಷ್ಟೇ ಮಾಡುತ್ತಿದ್ದಾರೆ. ಮುಕ್ತ ಮಾರುಕಟ್ಟೆಗೆ ಅವಕಾಶ ನೀಡಿರುವುದರಿಂದ ಅಕ್ಕಿಗೆ ಜಿಎಸ್ಟಿ ಮತ್ತು ಇ ವೇ ಬಿಲ್ ನೀಡುತ್ತಿದ್ದಾರೆ. ಹೀಗಾಗಿ ಈ ಬಗ್ಗೆ ಜಿಲ್ಲಾಧಿಕಾರಿ ಅವರಿಗೆ ಮನವಿ ಮಾಡುವುದಾಗಿ ಬಿಜೆಪಿ ನಾಯಕ ಚಂದಗಾಲು ಶಿವಣ್ಣ ಉತ್ತರ ನೀಡಿದರು.

ಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ವಿವೇಕ್, ಸಿ.ಟಿ.ಮಂಜುನಾಥ್, ನಾಗಾನಂದ್ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!