Thursday, September 19, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ರಸ್ತೆಯಲ್ಲಿ ತಿರುಗಾಡುವ ಮಹಿಳೆಯರಿಗೆ ಬೈಕ್ ನಲ್ಲಿ ಬಂದು ಲೈಂಗಿಕ ಕಿರುಕುಳ ನೀಡುತ್ತಿರುವ ಪುಂಡರು !

✍️ ಪೂರ್ಣಿಮಾ
ರಾಜ್ಯ ಕಾರ್ಯದರ್ಶಿ, ಕರ್ನಾಟ ಜನಶಕ್ತಿ

ಇವತ್ತಿನ ಸಮಾಜದಲ್ಲಿ ಹೆಣ್ಣುಮಕ್ಕಳ ಮೇಲೆ ಲೈಂಗಿಕ ಕಿರುಕುಳ ಮತ್ತು ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿದ್ದು, ಅವು ಬೇರೆ ಬೇರೆ ಆಯಾಮವನ್ನು ಪಡೆದುಕೊಂಡು ಮಹಿಳೆಯರನ್ನು ಗುರಿಯಾಗಿಸಿಕೊಂಡಿವೆ…ಅಲ್ಲದೇ ಗಂಭೀರ ಸ್ವರೂಪವನ್ನು ಪಡೆದುಕೊಳ್ಳುತ್ತಿವೆ.

ಮಂಡ್ಯದಲ್ಲಿ ಇತ್ತೀಚೆಗೆ ಅತ್ಯಾಚಾರ ಪ್ರಕರಣಗಳು ಕೊಲೆಗಳು ಮತ್ತು ಕಳ್ಳತನದ ಪ್ರಕರಣಗಳು ಹೆಚ್ಚುತ್ತಿದ್ದು ನಾಗರೀಕರಲ್ಲಿ ಆತಂಕ ಪಡುವ ಪರಿಸ್ಥಿತಿ ಉಂಟಾಗಿದೆ. ನ.6ರಂದು ಹಗಲು ಹೊತ್ತಿನಲ್ಲಿಯೇ ಶಾಲೆಯ ಶಿಕ್ಷಕಿಯೊಬ್ಬರು ನಡೆದು ಕೊಂಡು ಹೋಗುವಾಗ ಹಿಂದಿನಿಂದ ಬೈಕ್ ನಲ್ಲಿ ಬಂದ ವ್ಯಕ್ತಿಯೊಬ್ಬ ಲೈಂಗಿಕ ಕಿರುಕುಳ ನೀಡಿ ಪರಾರಿಯಾಗಿರುವ ಘಟನೆ ಕಾವೇರಿ ನಗರದ 3 ನೇ ಕ್ರಾಸ್ ನಲ್ಲಿ ನಡೆದಿದೆ.

ಘಟನೆ ನಡೆದ ಸ್ಥಳಕ್ಕೆ ನಾನು ಸೇರಿದಂಗೆ ಮಹಿಳಾ ಮುನ್ನಡೆಯ ಕಮಲ, ನೆಲದನಿ ಬಳಗದ ಲಂಕೇಶ್ ಹಾಗೂ ಜನಶಕ್ತಿಯ ಸಿದ್ದರಾಜು ತಂಡ ಭೇಟಿ ನೀಡಿದಾಗ, ಇಂತಹ ಘಟನೆಗಳು ಪದೇ ಪದೇ ಮರುಕಳುಸುತ್ತಿದ್ದು ಪೋಲಿಸ್ ಇಲಾಖೆಗೆ ದೂರು ನೀಡಿದರು ಪ್ರಯೋಜನವಾಗುತ್ತಿಲ್ಲ ಎಂಬ ಮಾತು ಸ್ಥಳೀಯರಿಂದ ಕೇಳಿ ಬಂದಿದೆ.

ಅಲ್ಲದೇ, ಪ್ರಕರಣಗಳನ್ನು ದಾಖಲು ಮಾಡಿದರೆ ಮರ್ಯಾದೆ ಹಾಳುಗುತ್ತದೆ ಎಂಬ ಭಯದಿಂದ ಮಹಿಳೆಯರಿಗೆ ಮತ್ತು ಕುಟುಂಬದವರಿಗೆ ದೂರು ದಾಖಲು ಮಾಡಲು ನಿರಾಕರಿಸುತ್ತಿದ್ದಾರೆ, ಇದರಿಂದಾಗಿ ಇಂತಹ ಪುಂಡರ ಹಾವಳಿಗೆ ನಿಯಂತ್ರಣ ಇಲ್ಲವಾಗಿದೆ.

ಒಂದು ವೇಳೆ ದೂರು ನೀಡಲು ಮಹಿಳೆಯರು ಮುಂದಾದರೆ ಕೋರ್ಟ, ಕಚೇರಿಯ ಮೆಟ್ಟಿಲೇರಬೇಕಾಗುತ್ತದೆ ಎಂಬ ಭಯದ ವಾತಾವರಣವನ್ನು ಪೋಲಿಸರೇ ಉಂಟು ಮಾಡಿರುವುದರಿಂದ ದೂರು ನೀಡಲು ಬಂದವರು ಆತಂಕದಿಂದ ಹಿಂದೆ ಸರಿಯುವಂತಾಗಿದೆ.

ನಿನ್ನೆ ಮಂಡ್ಯದ ಕಾವೇರಿ ನಗರದಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ದೂರು ದಾಖಲು ಮಾಡಲು ಮಂಡ್ಯ ಗ್ರಾಮಾಂತರ ಪೋಲಿಸ್ ಠಾಣೆಗೆ ಬಂದ ದಂಪತಿಗಳು ಇದೇ ಕಾರಣದಿಂದಾಗಿ ದೂರು ನೀಡದೇ ಹಿಂದೆ ಸರಿಯುವಂತಾಯಿತು. ಇದರಿಂದಾಗಿ ಪೊಲೀಸರು ಎಫ್ಐಆರ್ ಬದಲಿಗೆ ಎನ್.ಸಿ.ಆರ್ ಹಾಕಿ, ಪ್ರಕರಣದ ಗಂಭೀರತೆಯನ್ನು ನಿರ್ಲಕ್ಷಿಸುತ್ತಿದ್ದಾರೆ.

ನಿನ್ನೆ ನಡೆದ ಘಟನೆಗೆ ಸಂಬಂಧಿಸಿದಂತೆ ಸಿಸಿಟಿವಿ ಕಣ್ಗಾವಲಿನಲ್ಲಿ ಆ ವ್ಯಕ್ತಿಯ ವಿಡಿಯೋ ದಾಖಲಾಗಿದೆ, ಅದೇ ವ್ಯಕ್ತಿಯ ವಿಡಿಯೋಗಳು ಈ ಹಿಂದೆ 4 ಪ್ರಕರಣಗಳಲ್ಲಿ ದಾಖಲಾಗಿವೆ, ಎಂದೂ ಖುದ್ದು ಪೋಲಿಸರೇ ಹೇಳುತ್ತಿದ್ದರೂ, ಆತನನ್ನು ಬಂಧಿಸುವ ಕೆಲಸವನ್ನು ಮಾಡಿಲ್ಲದಿರುವುದು ಪೊಲೀಸರ ನಿರ್ಲಕ್ಷ್ಯ ವನ್ನು ಎತ್ತಿ ತೋರುತ್ತಿದೆ.

ಮಂಡ್ಯ ಪೊಲೀಸರು ಇಂತಹ ಪ್ರಕರಣಗಳಲ್ಲಿ ಎಫ್ಐಆರ್ ದಾಖಲು ಮಾಡದೇ ಮಂಡ್ಯದಲ್ಲಿ ಅಪರಾಧ(ಕ್ರೈಂ)ಗಳೇ ನಡೆಯುತ್ತಿಲ್ಲ ಎಂಬ ಸಂದೇಶ ಕೊಡಲು ಹೊರಟಿರುವರೇ ? ಅಥವಾ ನಮ್ಮ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳ ಗಮನಕ್ಕೆ ಇಂತಹ ವಿಚಾರಗಳು ಬರುತ್ತಿಲ್ಲವೆ ಎಂಬುದು ಪ್ರಶ್ನೆಯಾಗಿದೆ.

ಇಂತಹ ಪ್ರಕರಣಗಳಲ್ಲಿ ದೂರು ದಾಖಲು ಮಾಡಲು ಬರುವವರಿಗೆ ಧೈರ್ಯ ತುಂಬಿ, ಪುಂಡರ ಹೆಡೆ ಮುರಿ ಕಟ್ಟುವ ಕೆಲಸ ಪೋಲಿಸರಿಂದ ಆಗಬೇಕಿದೆ. ಇಲ್ಲವಾದರೆ ಪ್ರಕರಣಗಳನ್ನು ತಿರುಚುವ ಪ್ರಯತ್ನದ ವಿರುದ್ದ ಮಹಿಳಾ ಮುನ್ನಡೆ ಮತ್ತು ಅತ್ಯಾಚಾರ ವಿರೋಧಿ ಆಂದೋಲನದ ವತಿಯಿಂದ ಪ್ರತಿಭಟನೆಯನ್ನು ಹಮ್ಮಿಕೊಳ್ಳಬೇಕಾಗುತ್ತದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!