ಮಂಡ್ಯದಲ್ಲಿ ಕ್ಯಾಸಿನೋ – ಜೂಜು ನಡೆಯುತ್ತಿದೆ ಎಂದು ಜೆಡಿಎಸ್ ನ ಶಾಸಕ ರವೀಂದ್ರ ಶ್ರೀಕಂಠಯ್ಯ ಮಂಡ್ಯದ ಸುದ್ದಿಗೋಷ್ಟಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರಿನಿಂದ ಮಂಡ್ಯಕ್ಕೆ ಬರುವ ಜುಗಾರಿ ಕೋರರಿಗೆ ರಾಜಾತಿಥ್ಯ ಕೊಡಲಾಗುತ್ತದೆ. ಬದಲಿ ವಾಹನದಲ್ಲಿ ಜೂಜಾಟ ನಡೆಯುವ ಸ್ಥಳಕ್ಕೆ ಕರೆದುಕೊಂಡು ಹೋಗಿ ಜೂಜಾಡಿಸುತ್ತಿದ್ದಾರೆ. ಪೊಲೀಸ್ ಇಲಾಖೆ ಏನು ಮಾಡುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿರುದ್ಧ ವಾಗ್ದಾಳಿ ನಡೆಸಿದರು.
ಮಂಡ್ಯ ನಗರದ ಹೊರವಲಯದಲ್ಲಿ 19 ದಿನ ಕ್ಯಾಸಿನೋ ನಡೆದಿದೆ. ನನಗೆ ತಿಳಿದಿರುವ ಹಾಗೆ ಕೇವಲ ಮೂರೇ ದಿನಕ್ಕೆ 17ಲಕ್ಷ ಕಲೆಕ್ಷನ್ ಆಗಿದೆ. ಕೆಲವರು ಜಿಲ್ಲೆಯನ್ನು ಜೂಜು ಕೇಂದ್ರವನ್ನಾಗಿ ಪರಿವರ್ತನೆ ಮಾಡಿದ್ದಾರೆ ಎಂದು ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ಆರೋಪಿಸಿದರು.
ಭೂ ಸ್ವಾಧೀನದಲ್ಲಿ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಸಂಬಂಧಿಸಿದಂತೆ 147 ಕೋಟಿ ಅವ್ಯವಹಾರ ನಡೆದಿದೆ. ಇದರಲ್ಲಿ ಜಿಲ್ಲಾಡಳಿತ ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದೆ ಎಂದು ಗಂಭೀರ ಆರೋಪ ಮಾಡಿದರು.
ಎಂಟತ್ತು ದಲ್ಲಾಳಿಗಳ ಚಿತಾವಣೆಯಿಂದ ಅರ್ಹ ರೈತರಿಗೆ ಸರ್ಕಾರ ಕಡಿಮೆ ಪರಿಹಾರ ನೀಡಿ, ಉಳ್ಳವರು ಹಾಗೂ ಬಲಾಢ್ಯರ ಜಮೀನುಗಳಿಗೆ ಭೂ ಪರಿವರ್ತನೆಯ ಅಕ್ರಮ ದಾಖಲೆ ಸೃಷ್ಟಿಸಿ ತಲಾ ಒಬ್ಬರಿಗೆ ಹತ್ತಾರು ಕೋಟಿ ಪರಿಹಾರ ನೀಡಿರುವ ಗುಟ್ಟೇನು ಎಂದು ಪ್ರಶ್ನಿಸಿದರು.
ಈ ಬಗ್ಗೆ ಕಂದಾಯ ಇಲಾಖೆಯ ಮಾಹಿತಿ ಕೇಳಿದರೆ ನಮ್ಮ ಬಳಿ ಇಲ್ಲ. ರಾಮನಗರದ ಭೂ ಸ್ವಾಧೀನ ಇಲಾಖೆ ಬಳಿ ಕೇಳಿ ಅಂತಾರೆ. ಅಲ್ಲಿಯ ಅಧಿಕಾರಿ ಗೌಪ್ಯತೆ ಕಾಪಾಡುವ ಕಾರಣಕ್ಕಾಗಿ ಕೊಡಲ್ಲ ಅಂತಾರೆ. ಎಸಿ ನ್ಯಾಯಾಲಯದಲ್ಲಿ ಹಣಕ್ಕಾಗಿ ಸಣ್ಣ ಪುಟ್ಟ ಪ್ರಕರಣಗಳು ಇತ್ಯರ್ಥವಾಗಲು ಐದಾರು ವರ್ಷ ಅಲೆದಾಡಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಎಲ್ಲಾ ಅಧಿಕಾರಿಗಳು ಹಣಕ್ಕಾಗಿ ಬಾಯಿ ಬಿಡುತ್ತಿದ್ದಾರೆ. ಇವರ ಅಕ್ರಮಗಳನ್ನು ಒಂದೊಂದಾಗಿ ಜನರ ಮುಂದಿಡುವುದಾಗಿ ತಿಳಿಸಿದರು.