Friday, September 20, 2024

ಪ್ರಾಯೋಗಿಕ ಆವೃತ್ತಿ

”ಕೈ” ಸರ್ಕಾರದಲ್ಲಿ ₹78,000 ಕೋಟಿ ವೆಚ್ಚದ ಸವಲತ್ತು ವಿತರಣೆ: ಚಲುವರಾಯಸ್ವಾಮಿ

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ 6 ತಿಂಗಳಲ್ಲಿ ವಿವಿಧ ಇಲಾಖೆಗಳಡಿಯಲ್ಲಿ ₹ 78,000 ಕೋಟಿ ವೆಚ್ಚದ ಸವಲತ್ತುಗಳನ್ನು ರಾಜ್ಯದ ಜನತೆಗೆ ವಿತರಣೆ ಮಾಡಲಾಗಿದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.

ನಾಗಮಂಗಲ ಪಟ್ಟಣದ ಬಡಗೂಡಮ್ಮ ದೇವಾಲಯ ಆವರಣದಲ್ಲಿ ಡಿಸಿಸಿ ಬ್ಯಾಂಕ್ ಆಯೋಜನೆಗೊಳಿಸಿದ್ದ ಕಾರ್ಯಕ್ರಮದಲ್ಲಿ ಸ್ವಸಹಾಯ ಗುಂಪುಗಳಿಗೆ ಬಡ್ಡಿರಹಿತ ಸಾಲ ಮಂಜೂರಾತಿ ಪತ್ರಗಳ ವಿತರಣೆ ಹಾಗೂ ಸರ್ಕಾರದ ವಿವಿಧ ಯೋಜನೆಗಳ ಮಾಹಿತಿ ವಿನಿಮಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ನಾವೆಲ್ಲ ರಾಜ್ಯ ಜನರ ಸೇವೆಯಲ್ಲಿ ತೊಡಗಿದ್ದೇವೆ, 4 ಗ್ಯಾರಂಟಿಗಳನ್ನು ಅನುಷ್ಟಾನಗೊಳಿಸಿ ರಾಜ್ಯವನ್ನು ಅಭಿವೃದ್ದಿ ಪಥದಲ್ಲಿ ಕೊಂಡೊಯ್ಯುತ್ತಿದ್ದೇವೆ, ಇದನ್ನು ನೋಡಿ ವಿರೋಧ ಪಕ್ಷಗಳಿಗೆ ಹೊಟ್ಟೆ ಉರಿ ಬಂದಿದೆ, ನಮ್ಮ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿರುವ ವಿಪಕ್ಷ ನಾಯಕರನ್ನು ಜನತೆ ಪ್ರಶ್ನೆ ಮಾಡಬೇಕು ಎಂದು ಕರೆ ನೀಡಿದರು.

₹ 17 ಕೋಟಿ ಬಡ್ಡಿ ರಹಿತ ಸಾಲ ವಿತರಣೆ

ನಾಗಮಂಗಲ ವಿಧಾನಸಭಾ ಕ್ಷೇತ್ರದ ಕೊಪ್ಪ, ಬೆಳ್ಳೂರು ಹಾಗೂ ನಾಗಮಂಗಲ ಪಟ್ಟಣದಲ್ಲಿ ನಡೆಸಿದ ಕಾರ್ಯಕ್ರಮಗಳ ಮೂಲಕ ಒಟ್ಟು ₹ 17 ಕೋಟಿ ಬಡ್ಡಿರಹಿತ ಸಾಲವನ್ನು ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳಿಗೆ ವಿತರಣೆ ಮಾಡಲಾಗಿದೆ ಎಂದ ಅವರು, ಇಂದಿನ ನಾಗಮಂಗಲ ಸಮಾರಂಭದಲ್ಲಿ ಒಂದು ಗುಂಪಿಗೆ ತಲಾ ₹ 5 ಲಕ್ಷದಂತೆ, ₹ 8.24 ಕೋಟಿ ಬಡ್ಡಿರಹಿತ ಸಾಲವನ್ನು ಸ್ವಸಹಾಯ ಸಂಘಗಳಿಗೆ ವಿತರಣೆ ಮಾಡಲಾಗಿದೆ ಎಂದು ವಿವರಿಸಿದರು.

ಹಿಂದೆ ಅಧಿಕಾರದಲ್ಲಿದ್ದವರು ಹೀಗೆ ಜನರಿಗೆ ಬಡ್ಡಿರಹಿತ ಸಾಲ ನೀಡಲು ಏಕೆ ? ಶ್ರಮಿಸಲಿಲ್ಲ, ಅವರಿಗೆ ಜನತೆಯ ಕಲ್ಯಾಣ ಬೇಕಿರಲಿಲ್ಲವೇ ? ಎಂದು ಪರೋಕ್ಷವಾಗಿ ಮಾಜಿ ಶಾಸಕ ಸುರೇಶ್ ಗೌಡ ಅವರಿಗೆ ತಿರುಗೇಟು ನೀಡಿದರು.

ಡಿಸಿಸಿ ಬ್ಯಾಂಕಿಗೆ ನಾಲ್ವರು ನಿರ್ದೇಶಕರು

ಸ್ವಾತಂತ್ರ್ಯ ಬಂದ 75 ವರ್ಷಗಳ ಇತಿಹಾಸದಲ್ಲೇ ಮಂಡ್ಯ ಡಿಸಿಸಿ ಬ್ಯಾಂಕಿಗೆ ನಾಲ್ವರು ನಿರ್ದೇಶಕರು ಆಯ್ಕೆಯಾಗಿರಲಿಲ್ಲ, ಅಂದರೆ ತಮ್ಮ ಅಧಿಕಾರದಲ್ಲಿ ಡಿಸಿಸಿ ಬ್ಯಾಂಕಿನ ಅಧ್ಯಕ್ಷ ಸೇರಿದಂತೆ  ಮೂವರು ನಿರ್ದೇಶಕರು ನಾಗಮಂಗಲ ತಾಲ್ಲೂಕಿನಿಂದ ಆಯ್ಕೆಯಾಗಿರುವುದು ದಾಖಲೆಯಾಗಿದೆ ಎಂದು ನುಡಿದರು.

ವೇದಿಕೆಯಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಸಿ.ಜೋಗಿಗೌಡ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸಿಇಓ ವನಜಾಕ್ಷಿ, ನಿರ್ದೇಶಕರಾದ ನರಸಿಂಹಯ್ಯ, ದಿನೇಶ್, ಚಂದ್ರಶೇಖರ್, ಹಾಲಹಳ್ಳಿ ಅಶೋಕ್, ಜಿಲ್ಲಾ ನೋಂದಣಾಧಿಕಾರಿ ಕಾಂತರಾಜೇ ಆರಸ್, ಮುಖಂಡರಾದ ಧನಲಕ್ಷ್ಮಿ ಚಲುವರಾಯಸ್ವಾಮಿ, ಹೆಚ್.ಟಿ.ಕೃಷ್ಣೇಗೌಡ, ತಿಮ್ಮರಾಯಿಗೌಡ, ಸತೀಶ್, ಚೇತನ್ ಕುಮಾರ್, ಎಂ.ಜೆ.ರಾಜೇಶ್ ಇತರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!