Sunday, May 19, 2024

ಪ್ರಾಯೋಗಿಕ ಆವೃತ್ತಿ

ರಾಜ್ಯಸಭೆ ಚುನಾವಣೆಯಲ್ಲಿ ‘ಕೈ’ ಅಭ್ಯರ್ಥಿಗಳ ಗೆಲುವು ಖಚಿತ: ಚಲುವರಾಯಸ್ವಾಮಿ

ನಾಳೆ ನಡೆಯಲಿರುವ ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಮೂವರು ಅಭ್ಯರ್ಥಿಗಳು ನಿರಾತಂಕವಾಗಿ ಗೆಲುವು ಸಾಧಿಸಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್. ಚೆಲುವರಾಯಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.

ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಸಭೆ ಚುನಾವಣೆಯಲ್ಲಿ ಗೆಲ್ಲುವ ತಂತ್ರಗಾರಿಕೆಗಾಗಿ ರೆಸಾರ್ಟ್ ರಾಜಕೀಯ ಮಾಡುತ್ತಿಲ್ಲ, ಕೆಲಸದ ಒತ್ತಡದ ನಡುವೆ ವಿಶ್ರಾಂತಿಗಾಗಿ ಶಾಸಕರು ರೆಸಾರ್ಟ್ ಗೆ ತೆರಳಿದ್ದಾರೆ, ಅಷ್ಟಕ್ಕೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಗೆಲ್ಲಲು ಅಗತ್ಯವಾದ ಸಂಖ್ಯೆ ನಮ್ಮಲ್ಲಿದೆ, ಒಬ್ಬ ಅಭ್ಯರ್ಥಿಗೆ ತಲ 45 ಮತ ದೊರೆತು ಅನಂತರವೂ ಹೆಚ್ಚುವರಿ ಮತ ಉಳಿಯಲಿವೆ ಹಾಗಾಗಿ ಗೆಲುವಿನ ಬಗ್ಗೆ ಯಾವುದೇ ಚಿಂತೆ ಇಲ್ಲ ಹೇಳಿದರು.

ಯಾವುದೇ ಭಯ ಇಲ್ಲ

ಕಾಂಗ್ರೆಸ್ ಗೆ ಅಡ್ಡ ಮತದಾನದ ಭೀತಿ ಇದೆ ಎಂಬ ಪ್ರತಿಪಕ್ಷಗಳ ಆರೋಪದ ಬಗ್ಗೆ ಮಾತನಾಡಿದ ಅವರು, ನಮಗೆ ಮಾತ್ರ ಭಯ ಇರೋದು, ಬಿಜೆಪಿ -ಜೆಡಿಎಸ್ ಗೆ ಯಾವುದೇ ಭಯವಿಲ್ಲವೇ ಎಂದು ವ್ಯಂಗ್ಯವಾಡಿದರು.

ರಾಜ್ಯಸಭೆ ಚುನಾವಣೆಯನ್ನು ಸುಲಭವಾಗಿ ಗೆಲ್ಲುತ್ತೇವೆ, ಗೆಲ್ಲಲು ನಮಗೆ ಯಾರ ಅವಶ್ಯಕತೆ ಇಲ್ಲ, ಅದಕ್ಕಾಗಿ  ಪ್ರತಿಪಕ್ಷ ಶಾಸಕರ ಬಳಿ ಮತಯಾಚಿಸಿಲ್ಲ, ಲೋಕಸಭೆ ಚುನಾವಣೆ ಗೆಲುವಿಗಾಗಿ ತಂತ್ರಗಾರಿಕೆ ರೂಪಿಸಲು ಚರ್ಚಿಸುವ ಸಲುವಾಗಿ ಶಾಸಕರೆಲ್ಲ ರೆಸಾರ್ಟ್ ನಲ್ಲಿ ಸೇರುತ್ತಿದ್ದೇವೆ ಎಂದರು.

ಶೀಘ್ರ ಅಭ್ಯರ್ಥಿ ಘೋಷಣೆ

ಲೋಕಸಭಾ ಚುನಾವಣೆಗೆ ಮಂಡ್ಯ ಕ್ಷೇತ್ರದ ಅಭ್ಯರ್ಥಿ ಘೋಷಣೆ ಶೀಘ್ರವಾಗಲಿದೆ, ಪಕ್ಷದಲ್ಲಿ ಅಭ್ಯರ್ಥಿ ಆಯ್ಕೆಗೆ ನಿಯಮಾವಳಿ ಇದೆ, ಅದರಂತೆ ರಾಜ್ಯ ಹಾಗೂ ಕೇಂದ್ರ ಸಮಿತಿ ಚರ್ಚಿಸಿ, ಅನಂತರ ಅಭ್ಯರ್ಥಿ ಘೋಷಣೆ ಮಾಡಲಿದೆ, ಮಂಡ್ಯ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಬಗ್ಗೆ ಯಾವುದೇ ಗೊಂದಲ ಇಲ್ಲ, ಜಿಲ್ಲೆಯ ಶಾಸಕರು, ಮುಖಂಡರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಸೇರಿ ಎಲ್ಲರೂ ಒಗ್ಗೂಡಿ ಅಭ್ಯರ್ಥಿಯ ಆಯ್ಕೆ ಬಗ್ಗೆ ತೀರ್ಮಾನ ಮಾಡಿದ್ದೇವೆ ಎಂದರು.

ನೀರು ಹರಿಸಲು ಸ್ವಲ್ಪ ಸಮಸ್ಯೆ

ಕೃಷ್ಣರಾಜಸಾಗರದ ಅಚ್ಚುಕಟ್ಟು ಪ್ರದೇಶದ ನಾಲೆಗಳಿಗೆ ನೀರು ಹರಿಸಲು ಸ್ವಲ್ಪ ಸಮಸ್ಯೆ ಎದುರಾಗಿದೆ, ಕಳೆದ ಬಾರಿ 10 ದಿನಗಳ ಕಾಲ ನಾಲೆಗಳಿಗೆ ನೀರು ಬಿಟ್ಟ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಲಾಗಿದೆ, ಜಲಾಶಯದಲ್ಲಿ ಕುಡಿಯುವ ನೀರಿಗೆ ಸಾಕಾಗುವಷ್ಟು ಮಾತ್ರ ನೀರಿದ್ದು, ಮುಂದಿನ ಜೂನ್ ವರೆಗೆ ಕುಡಿಯುವ ನೀರನ್ನು ಸಂಗ್ರಹಿಸಿ ಇಟ್ಟುಕೊಳ್ಳಬೇಕಾಗಿದೆ, ಅಧಿಕಾರಿಗಳ ಮನವರಿಕೆ ಪ್ರಯತ್ನ ಮಾಡುತ್ತಿದ್ದೇವೆ, ಒಂದೆರಡು ದಿನದಲ್ಲಿ ತೀರ್ಮಾನ ಮಾಡುತ್ತೇವೆ, ನಾಲಾ ಕಾಮಗಾರಿಗೂ ನೀರು ಬಿಡುವ ವಿಚಾರಕ್ಕೂ ಯಾವುದೇ ಸಂಬಂಧ ಇಲ್ಲ, ಕಾಮಗಾರಿ ಸ್ಥಗಿತ ಮಾಡಿ ನೀರು ಬಿಡಬಹುದಾಗಿದೆ ಎಂದು ಹೇಳಿದರು.

ಅವರನ್ನು ಬಿಟ್ಟರೆ ಬೇರೆ ಯಾರು ಏನು ಮಾಡಿಲ್ಲ

ಮಾಜಿ ಸಚಿವ ಸಿ.ಎಸ್ ಪುಟ್ಟರಾಜು ಮಹಾರಾಜರ ಕುಟುಂಬದಿಂದ ಬಂದವರು, ನಮ್ಮಪ್ಪ ಕೂಲಿ ಮಾಡುತ್ತಿದ್ದವರು, ಶಾಸಕ ರವಿಕುಮಾರ್ ತಂದೆ ಕೆಎಸ್ಆರ್ ಟಿ ಸಿ ನೌಕರರು, ಆದರೆ ಪುಟ್ಟರಾಜುಗೆ ದೊಡ್ಡ ಗೌರವ ಇದೆ, 30 ವರ್ಷ ಆಡಳಿತ ಮಾಡಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ದುಡಿದಿದ್ದಾರೆ, ಅವರನ್ನು ಬಿಟ್ಟರೆ ಬೇರೆ ಯಾರು ಏನು ಮಾಡಿಲ್ಲ ಎಂದು ವ್ಯಂಗ್ಯವಾಡಿದರು.

ಪುಟ್ಟರಾಜು ಅವರ ಹಿನ್ನೆಲೆ ಎಲ್ಲರಿಗೂ ಗೊತ್ತಿದೆ, ಅವರು ಮಂತ್ರಿಯಾಗಿದ್ದಾಗ ಕೆ ಆರ್ ಎಸ್ ನಲ್ಲಿ 40 ಅಡಿ ನೀರು ಇದ್ದಾಗ, ನೀರು ಬಿಟ್ಟಿದ್ದಾರೆ ಎಂದು ವ್ಯಂಗವಾಡಿದರು. ರಾಜ್ಯ ಮತ್ತು ರೈತರ ಹಿತದೃಷ್ಟಿಯಿಂದ ಪಾದಯಾತ್ರೆ ಮಾಡಿಕೊಳ್ಳಲಿ, ನಾವು ಪಾದಯಾತ್ರೆ ಮಾಡಿದಾಗ ಟೀಕೆ ಮಾಡಿದ್ದರು. ಆದರೆ ನಾವು ಟೀಕಿಸುವುದಿಲ್ಲ ಪಾದಯಾತ್ರೆ ಮಾಡಲಿ ಎಂದು ಹೇಳಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!