Monday, September 16, 2024

ಪ್ರಾಯೋಗಿಕ ಆವೃತ್ತಿ

ಆಕ್ಸ್‌ಫರ್ಡ್ ಕುಲಪತಿ ಹುದ್ದೆಗೆ ಜೈಲಿನಿಂದಲೇ ಅರ್ಜಿ ಸಲ್ಲಿಸಿದ ಇಮ್ರಾನ್ ಖಾನ್

ಜೈಲಿನಲ್ಲಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರು ಬ್ರಿಟನ್‌ನ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಕುಲಪತಿ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ಅವರ ಪಕ್ಷ ಹೇಳಿದೆ.

ಖಾನ್ ಅವರ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ಪಕ್ಷದ ಲಂಡನ್ ಮೂಲದ ವಕ್ತಾರ ಸಯದ್ ಝುಲ್ಫಿಕರ್ ಬುಖಾರಿ, ಅರ್ಜಿ ಸಲ್ಲಿಸಲು ಖಾನ್ ತಮ್ಮ ತಂಡಕ್ಕೆ ಸೂಚಿಸಿರುವುದಾಗಿ ಹೇಳಿದ್ದಾರೆ ಎಂದು ವರದಿಯಾಗಿದೆ.

“ಇದು ಔಪಚಾರಿಕ ಹುದ್ದೆಯಾಗಿದೆ. ಆದರೆ ಅತ್ಯಂತ ಪ್ರತಿಷ್ಠೆ ಮತ್ತು ಪ್ರಾಮುಖ್ಯತೆಯನ್ನು ಹೊಂದಿದೆ. ಇಮ್ರಾನ್ ಖಾನ್ ಆಕ್ಸ್‌ಫರ್ಡ್‌ನಿಂದ ಕೇಳಿ ಬರುತ್ತಿರುವ ಜನಪ್ರಿಯ ಹೆಸರುಗಳಲ್ಲಿ ಒಂದಾಗಿದೆ. ಅವರನ್ನು ಕುಲಪತಿಯಾಗಿ ನೋಡುವುದು ದೊಡ್ಡ ವಿಷಯ ಎಂದು ಝುಲ್ಫಿಕರ್ ಬುಖಾರಿ ಹೇಳಿದ್ದಾಗಿ ವರದಿ ತಿಳಿಸಿದೆ.

ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದ ವೆಬ್‌ಸೈಟ್ ಪ್ರಕಾರ, ಕುಲಪತಿಗಳ 10 ವರ್ಷಗಳ ಅವಧಿಯ ಅಭ್ಯರ್ಥಿಗಳ ಪಟ್ಟಿಯನ್ನು ಅಕ್ಟೋಬರ್‌ನಲ್ಲಿ ಸಾರ್ವಜನಿಕಗೊಳಿಸಲಾಗುವುದು, ಮತದಾನವನ್ನು ಅದೇ ತಿಂಗಳಾಂತ್ಯಕ್ಕೆ ನಿಗದಿಪಡಿಸಲಾಗಿದೆ.

ಇತರ ಪ್ರಮುಖ ಅರ್ಜಿದಾರರಲ್ಲಿ ಬ್ರಿಟನ್‌ನ ಮಾಜಿ ವಿದೇಶಾಂಗ ಕಾರ್ಯದರ್ಶಿ ವಿಲಿಯಂ ಹೇಗ್ ಮತ್ತು ಮಾಜಿ ಇಯು ಟ್ರೇಡ್ ಕಮಿಷನರ್ ಪೀಟರ್ ಮ್ಯಾಂಡೆಲ್ಸನ್ ಸೇರಿದ್ದಾರೆ ಎಂದು ಬ್ರಿಟಿಷ್ ಮಾಧ್ಯಮಗಳು ತಿಳಿಸಿವೆ.

ಫೆಬ್ರವರಿಯಲ್ಲಿ, ಹಾಂಗ್ ಕಾಂಗ್‌ನ ಕೊನೆಯ ಬ್ರಿಟಿಷ್ ಗವರ್ನರ್ ಕ್ರಿಸ್ ಪ್ಯಾಟನ್ ಆಕ್ಸ್‌ಫರ್ಡ್‌ನ ಕುಲಪತಿ ಹುದ್ದೆಯಿಂದ ಕೆಳಗಿಳಿಯುವ ನಿರ್ಧಾರವನ್ನು ಪ್ರಕಟಿಸಿದ್ದರು.

ಇಮ್ರಾನ್ ಖಾನ್ 1975ರಲ್ಲಿ ಆಕ್ಸ್‌ಫರ್ಡ್‌ನಿಂದ ತತ್ವಶಾಸ್ತ್ರ, ರಾಜಕೀಯ ಮತ್ತು ಅರ್ಥಶಾಸ್ತ್ರದಲ್ಲಿ ಪದವಿ ಪಡೆದರು. ಅವರು ತಮ್ಮ ಕ್ರಿಕೆಟ್ ವೃತ್ತಿ ಜೀವನದಲ್ಲಿ ಬ್ರಿಟಿಷ್ ಗಾಸಿಪ್ ನಿಯತಕಾಲಿಕೆಗಳಲ್ಲಿ ಆಗಾಗ್ಗೆ ಸುದ್ದಿಯಾಗುತ್ತಿದ್ದರು.

ಖಾನ್ ಅವರು 2018 ರಿಂದ 2022 ರವರೆಗೆ ಪಾಕಿಸ್ತಾನದ ಪ್ರಧಾನಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು.  ಭ್ರಷ್ಟಾಚಾರದಿಂದ ಹಿಡಿದು ಹಿಂಸಾಚಾರವನ್ನು ಪ್ರಚೋದಿಸುವವರೆಗಿನ ಆರೋಪದಲ್ಲಿ ಕಳೆದ ಒಂದು ವರ್ಷದಿಂದ ಖಾನ್ ಜೈಲುವಾಸ ಅನುಭವಿಸುತ್ತಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!