Thursday, September 19, 2024

ಪ್ರಾಯೋಗಿಕ ಆವೃತ್ತಿ

ಚೆಲುವರಾಯಸ್ವಾಮಿ ಅವರನ್ನು ಮಂತ್ರಿ ಮಾಡಿದ್ದು ಇದೇ ಜೆಡಿಎಸ್ : ಮಹಾಲಿಂಗೇಗೌಡ

ಇಂದಿನ ರಾಜಕೀಯ ಪರಿಸ್ಥಿತಿಯಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಟೀಕಿಸುತ್ತಿರುವ ಕಾಂಗ್ರೆಸ್ ನಾಯಕ ಎನ್.ಚೆಲುವರಾಯಸ್ವಾಮಿ ಅವರನ್ನು ಇದೇ ಜೆಡಿಎಸ್ ಪಕ್ಷ ಶಾಸಕ ಹಾಗೂ ಮಂತ್ರಿ ಯನ್ನಾಗಿ ಮಾಡಿತ್ತು, ಇದನ್ನು ಅವರು ನೆನೆಪಿಸಿಕೊಳ್ಳಲಿ ಎಂದು ಜಿಲ್ಲಾ ಜೆಡಿಎಸ್ ವಕ್ತಾರ ಮಹಾಲಿಂಗೇಗೌಡ ಮುದ್ದನಘಟ್ಟ ತಿರುಗೇಟು ನೀಡಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಲುವರಾಯಸ್ವಾಮಿ ಅವರು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರ ಬಗ್ಗೆ ಹೇಳಿರುವ ಹೇಳಿಕೆಯನ್ನು ಖಂಡಿಸುತ್ತೇನೆ. ಮಂಡ್ಯ ಜಿಲ್ಲೆಯ ರೈತಾಪಿ ವರ್ಗ ಕುಮಾರಣ್ಣ ಅವರ ಸರ್ಕಾರದಲ್ಲಿ ಮಾಡಿದ ಸಾಲ ಮನ್ನಾದ ಋಣ ತೀರಿಸಲು 2023ರ ಚುನಾವಣೆಯಲ್ಲಿ ಟೊಂಕ ಕಟ್ಟಿ ಕಾಯುತ್ತಿದ್ದಾರೆ, ಅದು ನಿಮಗೆ ಗೊತ್ತಾಗುತ್ತದೆ ಎಂದು ಚೆಲುವರಾಯಸ್ವಾಮಿ ಅವರಿಗೆ ತಿರುಗೇಟು ನೀಡಿದರು.

ತಾವು ಎಷ್ಟು ವರ್ಷಗಳ ಕಾಲ ಜೆಡಿಎಸ್‌ ಪಕ್ಷದಲ್ಲಿ ಇದ್ದಿರಿ ? ತಾವು ಶಾಸಕರಾಗಿರಲಿಲ್ಲವೇ ? ಮಂತ್ರಿ ಗಳಾಗಿರಲಿಲ್ಲವೇ ? ನಾಗಮಂಗಲ ತಾಲ್ಲೂಕು ನಿಮ್ಮ ಕಾಲದಲ್ಲಿ ಅಭಿವೃದ್ಧಿ ಹೊಂದಿದೆ ಎಂದು ಹೇಳುತ್ತೀರಿ, ಅದು ಯಾವ ಪಕ್ಷದ ಕೊಡುಗೆ’ ಎಂದು ಹೇಳುವಿರಾ ಎಂದು ಪ್ರಶ್ನಿಸಿದರು.

ಕುಮಾರಸ್ವಾಮಿ ಅವರು ಮೊದಲ ಬಾರಿಗೆ 20 ತಿಂಗಳು ಸಿಎಂ ಆಗಿದ್ದಾಗ ನೀವು ಉಸ್ತುವಾರಿ ಸಚಿವರಾಗಿ ಈ ಜಿಲ್ಲೆಗೆ ಅಭಿವೃದ್ಧಿ ಕೆಲಸ ಮಾಡಲಿಲ್ಲವೇ, ಮಾಡಿದ್ದೀರಿ ತಾನೆ, ಇದು ಯಾವ ಪಕ್ಷದ ಕೊಡುಗೆ, ಇದು ಜೆಡಿಎಸ್ ಪಕ್ಷದ ಕೊಡುಗೆ ಅಲ್ಲವೇ ? ಕುಮಾರಸ್ವಾಮಿ ಅವರ ನೇತೃತ್ವದ ಸರ್ಕಾರ ಅನೇಕ ರೈತಾಪಿ, ಜನಪರ ಯೋಜನೆ ಗಳನ್ನು ರೂಪಿಸುತ್ತಿರುವಾಗ ನಿಮ್ಮದೇ ಪಕ್ಷದ ಕಾಂಗ್ರೆಸ್ ನಾಯಕರ ಒಳ ಸಂಚಿನಿಂದ ಆಪರೇಷನ್ ಕಮಲ ನಡೆದು ಸರ್ಕಾರ ಉರುಳಿತು, ಇದಕ್ಕೆ ಕಾರಣಾರಾರು ಎಂದು ಪ್ರಶ್ನಿಸಿದರು.

ಜನಮನ ಮೆಚ್ಚಿದ ಪಂಚರತ್ನ 

ಶಿಕ್ಷಣವೇ ಆಧುನಿಕ ಶಕ್ತಿ, ಆರೋಗ್ಯ ಸಂಪತ್ತು, ರೈತ ಚೈತನ್ಯ, ಯುವನವ ಮಾರ್ಗ ಮತ್ತು ಮಹಿಳಾ ಸಬಲೀಕರಣ ಹಾಗೂ ವಸತಿ ಆಸರೆ ಎಂಬ ಜೆಡಿಎಸ್ ನ ಪಂಚರತ್ನ ಯೋಜನೆಗಳು ರಾಜ್ಯದ ಜನರ ಮನಸೊರೆಗೊಂಡಿವೆ, ಈಗಾಗಲೇ ಪಂಚರತ್ನ ಯಾತ್ರೆಗೆ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ಕುರುಡುಮಲೆಯ ಆಂಜನೇಯ ಸ್ವಾಮಿ ದೇವಾಲಯದಿಂದ ಚಾಲನೆ ನೀಡಲಾಗಿದೆ, ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಗೋಷ್ಠಿಯಲ್ಲಿ ಜೆಡಿಎಸ್ ಮುಖಂಡರಾದ ವೆಂಕಟೇಶ್, ಅನಿಲ್ ಕುಮಾರ್, ಶಶಿಕುಮಾರ್, ವಿಶ್ವನಾಥ್, ಪ್ರಮೋದ್ ಕುಮಾರ್ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!