Monday, September 16, 2024

ಪ್ರಾಯೋಗಿಕ ಆವೃತ್ತಿ

ಶೋಷಿತ ಪೌರಕಾರ್ಮಿಕರತ್ತ ಜಿಲ್ಲಾಡಳಿತ ಚಿತ್ತ ಹರಿಸಲಿ

ಇಎಸ್ಐ ಕೊಡಲ್ಲ,ಪಿಎಫ್ ಕೊಡಲ್ಲ, ಗಂ ಬೂಟ್ ಕೊಡಲ್ಲ, ಗ್ಲೌಸ್ ಕೊಡಲ್ಲ, ಮೂರು ತಿಂಗಳಾದ್ರೂ ಸಂಬಳ ಸರಿಯಾಗಿ ಕೊಡಲ್ಲ, ಆರೋಗ್ಯ ಪರೀಕ್ಷೆ ಮಾಡುವುದಿಲ್ಲ…..
ಏನು ಇವೆಲ್ಲ ಅಂತ ಕೇಳ್ತಾ ಇದ್ದೀರಾ…ಇದು ಮಂಡ್ಯ ಜಿಲ್ಲೆಯಲ್ಲಿರುವ ಬಹುತೇಕ ಗ್ರಾಮ ಪಂಚಾಯಿತಿಗಳಲ್ಲಿ ಕೆಲಸ ಮಾಡುವ ಪೌರಕಾರ್ಮಿಕರ ದೈನೇಸಿ ಪರಿಸ್ಥಿತಿ.

ನಗರ,ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳ ಸ್ವಚ್ಛ ಮಾಡುವ ಮೂಲಕ ನೈರ್ಮಲ್ಯವನ್ನು ಕಾಪಾಡುವಲ್ಲಿ ಪೌರಕಾರ್ಮಿಕರ ಪಾತ್ರ ಬಹಳ ದೊಡ್ಡದು. ಆದರೆ ಸ್ವಾತಂತ್ರ್ಯ ಬಂದು 75 ವರ್ಷವಾಗುತ್ತಾ ಬಂದರೂ ಸಮಾಜದ ಕಟ್ಟಕಡೆಯ ಶೋಷಿತ ಜನಾಂಗವಾದ ಪೌರಕಾರ್ಮಿಕರ ಬದುಕು ಇನ್ನೂ ಸುಧಾರಿಸದಿರುವುದು ಶೋಚನೀಯ ಸಂಗತಿ.

ಅದರಲ್ಲೂ ಗ್ರಾಮ ಪಂಚಾಯಿತಿಗಳಲ್ಲಿ ಕೆಲಸ ಮಾಡುವ ಪೌರಕಾರ್ಮಿಕರನ್ನು ಶೋಷಣೆ ಮಾಡುವುದು ಇಂದಿಗೂ ಕೂಡ ಕಡಿಮೆಯಾಗಿಲ್ಲ. ಅವರಿಗೆ ಯಾವುದೇ ಸೌಲಭ್ಯಗಳನ್ನು ನೀಡದೆ ಕೆಲಸ ಮಾಡಿಸುತ್ತಿರುವುದು ಅಕ್ಷಮ್ಯ ಅಪರಾಧವಾಗಿದೆ. ಇನ್ನಾದರೂ ಪೌರಕಾರ್ಮಿಕರನ್ನು ಮನುಷ್ಯರಂತೆ ನಡೆಸಿಕೊಳ್ಳಿ, ಅವರಿಗೂ ಸಮಾಜದಲ್ಲಿ ಸಮಾನವಾಗಿ ಬದುಕುವ ಹಕ್ಕಿದೆ ಎಂಬುದನ್ನು ಸರ್ಕಾರ ಹಾಗೂ ಜಿಲ್ಲಾಡಳಿತ ಅರ್ಥಮಾಡಿಕೊಳ್ಳಲಿ ಎಂಬ ಸದುದ್ದೇಶದಿಂದ ಈ ವರದಿಯನ್ನು ನುಡಿ ಕರ್ನಾಟಕ.ಕಾಮ್ ವರದಿ ಮಾಡುತ್ತಿದೆ.

ಜಿಲ್ಲೆಯಾದ್ಯಂತ ಪೌರಕಾರ್ಮಿಕರು ಸರ್ಕಾರಿ ಮತ್ತು ಗುತ್ತಿಗೆ ಆಧಾರದಲ್ಲಿ ತಮ್ಮ ಕಾಯಕ ಮಾಡುತ್ತಿದ್ದಾರೆ. ಪೌರಕಾರ್ಮಿಕರಿಲ್ಲದ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ, ಗ್ರಾಮ ಪಂಚಾಯಿತಿಗಳನ್ನು ಕಲ್ಪಿಸಿಕೊಳ್ಳುವುದು ಅಸಾಧ್ಯ. ಅವರು ಒಂದು ದಿನ ಮುಷ್ಕರ ನಡೆಸಿದರೆ ಇಡೀ ಊರು ಕೊಳೆತು ನಾರುತ್ತದೆ. ಎಲ್ಲೆಂದರಲ್ಲಿ ಕಸ ಚೆಲ್ಲಾಡಿ ಮೂಗು ಮುಚ್ಚಿ ಕೊಂಡು ಓಡಾಡುವ ದುಸ್ಥಿತಿ ಬರುತ್ತದೆ.ಮೋರಿ-ಚರಂಡಿಗಳೆಲ್ಲಾ ಕಟ್ಟಿಕೊಂಡು ದುರ್ವಾಸನೆ ಅವರಿಸುತ್ತದೆ.

ಕೆಲಸದ ಅವಧಿಯಲ್ಲಿ ತಾವು ಮಾಡಬೇಕಾದ ಕೆಲಸವನ್ನು ಸ್ವಲ್ಪವೂ ಅಸಹ್ಯ ಪಡದೆ ಮಾಡುವ ಕೆಲಸಗಾರರು ಇದ್ದಾರೆ ಅಂದರೆ ಅದು ಪೌರಕಾರ್ಮಿಕರು ಮಾತ್ರ. ಗ್ರಾಮ ಪಂಚಾಯಿತಿಗಳಲ್ಲಿ ಕೆಲಸ ಮಾಡುವ ಪೌರಕಾರ್ಮಿಕರು ಅಸಹ್ಯ ಪಡದೆ ಹಳ್ಳಿಯ ಜನರು ಬಿಸಾಡಿದ ಕಸವನ್ನು, ಮಲವನ್ನು ಶುಚಿತ್ವಗೊಳಿಸುತ್ತಾ ಜೀವನ ಸವೆಸುತ್ತಿದ್ದಾರೆ. ಸರ್ಕಾರಿ ಪೌರಕಾರ್ಮಿಕರಾದರೂ, ಗುತ್ತಿಗೆ ಪೌರಕಾರ್ಮಿಕರಾದರೂ ಸಮಾಜದಲ್ಲಿ ಸಾಮಾಜಿಕವಾಗಿ ಅವರ ಸ್ಥಾನ-ಮಾನ ಅಷ್ಟಕಷ್ಟೆ.

ಒಳಚರಂಡಿ ಸ್ವಚ್ಛ ಮಾಡುವ ಸಮಯದಲ್ಲಿ ಹಲವಾರು ಪೌರಕಾರ್ಮಿಕರು ಜೀವ ಕಳೆದುಕೊಂಡ ಘಟನೆಗಳು ಸಾಕಷ್ಟು ಸಂಭವಿಸಿದೆ.ಅಂತಹ ಸಂದರ್ಭದಲ್ಲಿ ಒಂದೋ,ಎರಡೋ ಲಕ್ಷ ಕೊಟ್ಟು ಕೈ ತೊಳೆದುಕೊಂಡ ಪ್ರಸಂಗಗಳು ಸಾಕಷ್ಟಿವೆ. ಗ್ಲೌಸ್,ಗಂಬೂಟ್ ಹಾಕದೆ ಚರಂಡಿಗಳಿಗೆ ಇಳಿದು ಬ್ಲೇಡ್, ಮೊಳೆ ಚುಚ್ಚಿಸಿಕೊಂಡು ಕಾಲಿನಲ್ಲಿ ಗಾಯವಾಗಿ,ಗಾಯ ಗ್ಯಾಂಗ್ರಿನ್ ಆಗಿ ಕಾಲು ಕತ್ತರಿಸಿಕೊಂಡ,ಸಾವನ್ನಪ್ಪಿದ ನಿದರ್ಶನಗಳು ನೂರಾರಿವೆ. ಇಷ್ಟೆಲ್ಲಾ ದುರ್ಘಟನೆಗಳು ಸಂಭವಿಸುತ್ತಿದ್ದಾಗಲೂ ಸರ್ಕಾರ, ಗುತ್ತಿಗೆದಾರರು ಪೌರಕಾರ್ಮಿಕರಿಗೆ ಕೆಲಸ ಮಾಡುವ ಸ್ಥಳಗಳಲ್ಲಿ ನೀಡಬೇಕಾದ ಮೂಲಭೂತ ಪರಿಕರಗಳಾದ ಗಂ ಬೂಟ್, ಗ್ಲೌಸ್, ಮಾಸ್ಕ್ ಸೇರಿದಂತೆ ಇತರ ಪರಿಕರಗಳನ್ನು ಒದಗಿಸುವಲ್ಲಿ ಇಂದಿಗೂ ವಿಫಲವಾಗಿರುವುದು, ಪೌರಕಾರ್ಮಿಕರನ್ನು ಮನುಷ್ಯರಂತೆ ಪರಿಗಣಿಸದೆ ಇರುವುದಕ್ಕೆ ಸ್ಪಷ್ಟ ಸಾಕ್ಷಿಯಾಗಿದೆ. ಮೂಲಭೂತ ಸೌಕರ್ಯ ನೀಡದೆ ಪೌರಕಾರ್ಮಿಕರನ್ನು ದುಡಿಸಿಕೊಳ್ಳುವ ಇಂತಹ ಘಟನೆಗಳು ಮಂಡ್ಯದ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಕಂಡುಬರುತ್ತದೆ.

ಮಂಡ್ಯ ತಾಲ್ಲೂಕಿನ ಬೇಲೂರು ಗ್ರಾಮ ಪಂಚಾಯತಿಯಲ್ಲಿ ಕೆಲಸ ಮಾಡುತ್ತಿರುವ ಪೌರಕಾರ್ಮಿಕರಿಗೆ ಕೆಲಸ ಮಾಡಲು ಅಗತ್ಯವಾಗಿರುವ ಗಂಬೂಟು, ಗ್ಲೌಸ್ ಕೊಡದೆ ಕೆಲಸ ಮಾಡಿಸಲಾಗುತ್ತಿದೆ. ಈ ವಸ್ತುಗಳನ್ನು ಧರಿಸಿ ಕೆಲಸ ಮಾಡಿಸಬೇಕೆಂದು ಕಾನೂನು ಹೇಳುತ್ತದೆ. ಇಲ್ಲದಿದ್ದರೆ, ಇದು ಪೌರಕಾರ್ಮಿಕರಿಗೆ ಜೀವಕ್ಕೆ ಹಾನಿಯನ್ನುಂಟು ಮಾಡುವ ಹಂತಕ್ಕೆ ತಲುಪುತ್ತದೆ ಎನ್ನುವುದು ಗೊತ್ತಿದ್ದರೂ ಪಂಚಾಯಿತಿ ಪಿಡಿಒ,ಅಧ್ಯಕ್ಷರು ಇವರತ್ತ ಗಮನ ಹರಿಸಿಲ್ಲ.

ಒಂದು ಗ್ರಾಮ ಪಂಚಾಯತಿ ವ್ಯಾಪ್ತಿಗೆ ಏಳೆಂಟು ಗ್ರಾಮಗಳು ಬರುತ್ತವೆ. ಇಲ್ಲಿರುವ ಜನಸಂಖ್ಯೆಗೆ ಅನುಗುಣವಾಗಿ ಪೌರ ಕಾರ್ಮಿಕರನ್ನು ನೇಮಿಸಿ ಕೊಳ್ಳುವುದಿಲ್ಲ. ಇರುವ ಆರರಿಂದ ಏಳು ಜನರು ಕೆಲಸ ಮಾಡಬೇಕಾದ ಹೀನಾಯ ಪರಿಸ್ಥಿತಿ ಇಲ್ಲಿದೆ. ಸಂಬಳವನ್ನು ಮೂರು- ನಾಲ್ಕು ತಿಂಗಳಾದರೂ ಕೊಡುವುದಿಲ್ಲ. ಅನಿಶ್ಚಿತತೆಯ ಬದುಕು ಸಾಗಿಸುತ್ತಿರುವ ಪೌರಕಾರ್ಮಿಕರು ದಿನನಿತ್ಯದ ಖರ್ಚಿಗಾಗಿ, ಮಕ್ಕಳ ಶಿಕ್ಷಣಕ್ಕಾಗಿ ಅಧಿಕ ಬಡ್ಡಿಗೆ ಸಾಲ ತಂದು ತೀರಿಸಬೇಕಾದಂತಹ ವಾತಾವರಣ ನಿರ್ಮಾಣವಾಗಿದೆ.

ಗ್ರಾಮ ಪಂಚಾಯಿತಿಯಲ್ಲಿ ಕೆಲಸ ಮಾಡುವ ಪೌರಕಾರ್ಮಿಕರಿಗೆ ಏಕೆ ಈ ಕಡ್ಡಾಯಗೊಳಿಸಿರುವ ವಸ್ತುಗಳನ್ನು ನೀಡುವುದಿಲ್ಲ ಎಂಬ ಪ್ರಶ್ನೆಗೆ ಪೌರಕಾರ್ಮಿಕರ ಸಮುದಾಯದ ಮುಖಂಡರು ಹೇಳುವುದೇನೆಂದರೆ, ನಮ್ಮವರನ್ನು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮನುಷ್ಯರಾಗಿ ಪರಿಗಣಿಸದಿರುವುದು ಮೊದಲ ಕಾರಣವಾದರೆ, ಇವರು ಇರುವುದೇ ಇಂತಹ ಕೆಲಸಗಳನ್ನು ಮಾಡುವುದಕ್ಕೆ ಎಂಬ ತಾತ್ಸಾರದ ಮನಸ್ಸು ಮತ್ತೊಂದು ಎರಡನೇ ಕಾರಣ ಎಂದು ಪೌರಕಾರ್ಮಿಕ ಕಾಲೋನಿಯ ಮುಖಂಡರೊಬ್ಬರ ಕಟು ಮಾತಾಗಿದೆ.

ಮಂಡ್ಯ ಜಿಲ್ಲಾಧಿಕಾರಿ ಅಶ್ವತಿ ಹಾಗೂ ಜಿಲ್ಲಾ ಪಂಚಾಯತ್ ಸಿಇಓ ದಿವ್ಯಾ ಪ್ರಭು ಪೌರಕಾರ್ಮಿಕರ ಕಡೆ ಗಮನ ಹರಿಸಿ ಅವರಿಗೆ ಸಿಗಬೇಕಾದ ಮೂಲಭೂತ ಸೌಕರ್ಯಗಳು ಹಾಗೂ ಸಕಾಲಕ್ಕೆ ಸಂಬಳ ಸಿಗುವಂತೆ ಮಾಡಬೇಕೆಂದು ಪೌರಕಾರ್ಮಿಕರ ಆಗ್ರಹವಾಗಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!