Thursday, September 19, 2024

ಪ್ರಾಯೋಗಿಕ ಆವೃತ್ತಿ

ಹಕ್ಕುಪತ್ರಕ್ಕೆ ಆಗ್ರಹಿಸಿ ಪೌರಕಾರ್ಮಿಕರ ಸಂಘದ ಪ್ರತಿಭಟನೆ

ಮಂಡ್ಯದ ನೆಹರು ನಗರದಲ್ಲಿರುವ ಪೌರಕಾರ್ಮಿಕರ ಕಾಲೋನಿಯಲ್ಲಿರುವ 28 ವಸತಿ ಗೃಹಗಳಿಗೆ ಹಕ್ಕು ಪತ್ರ ಹಾಗೂ ಹಾಲಹಳ್ಳಿ ಕೊಳಗೇರಿ ನಿವಾಸಿಗಳಿಗೆ ಹಕ್ಕು ಪತ್ರ ನೀಡಲು ಆಗ್ರಹಿಸಿ ಕರ್ನಾಟಕ ರಾಜ್ಯ ಪೌರಕಾರ್ಮಿಕರ ಸಂಘದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಗುರುವಾರ ಬೆಳಿಗ್ಗೆ ನಗರದ ವಿಶ್ವೇಶ್ವರಯ್ಯ ಪ್ರತಿಮೆ ಬಳಿಯಿಂದ ಹೊರಟ ನೂರಾರು ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿದರು.

ಮಂಡ್ಯ ನಗರದ ನೆಹರೂ ನಗರದಲ್ಲಿರುವ ಪೌರಕಾರ್ಮಿಕರ ಕಾಲೋನಿಯಲ್ಲಿ ಸುಮಾರು ಇಪ್ಪತ್ತೆಂಟು ಖಾಯಂ ಪೌರಕಾರ್ಮಿಕರು ನಗರಸಭೆಯಿಂದ ನೀಡಿದ ಮನೆಗಳಲ್ಲಿ ಸುಮಾರು ಮೂರು ತಲೆಮಾರುಗಳಿಂದ ವಾಸವಾಗಿದ್ದಾರೆ. ಈ ವಸತಿ ಮನೆಗಳು ತುಂಬಾ ಶಿಥಿಲಾವಸ್ಥೆಯಲ್ಲಿದ್ದು,ಯಾವ ಸಂದರ್ಭದಲ್ಲಿಯಾದರೂ ಬಿದ್ದು ಹೋಗುವ ಸ್ಥಿತಿಯಲ್ಲಿವೆ. ಮಕ್ಕಳನ್ನು ಇಟ್ಟುಕೊಂಡು ತುಂಬಾ ಭಯದಿಂದ ಜೀವನ ನಡೆಸುತ್ತಿದ್ದೇವೆ. ಮನೆಗಳನ್ನ ಸ್ವಂತ ಮಾಡಿಕೊಡಬೇಕೆಂದು ನಗರಸಭೆಯವರಿಗೆ ಅನೇಕ ಬಾರಿ ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದರು.

ರಾಜ್ಯದ ಇತರೆ ನಗರಸಭೆ, ನಗರಪಾಲಿಕೆಯಲ್ಲಿ ವಾಸವಾಗಿರುವ ಪೌರ ಕಾರ್ಮಿಕರಿಗೆ ಸ್ವಂತ ಹಕ್ಕು ಪತ್ರ ನೀಡಿರುವ ರೀತಿ ವಾಸವಿರುವ ನಮಗೂ ಸದರಿ ಮನೆಗಳನ್ನು ಸ್ವಂತ ಮಾಡಿಸಿಕೊಡಬೇಕೆಂದು ಅಂಗಲಾಚಿದರೂ ಇದುವರೆಗೂ ನಮ್ಮ ಮನವಿಯ ಬಗ್ಗೆ ಗಮನ ಹರಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಾಲಹಳ್ಳಿ ಕೊಳಚೆ ಪ್ರದೇಶದಲ್ಲಿ 632 ಮನೆಗಳನ್ನು ನಿರ್ಮಿಸಿದ್ದು, ಇಲ್ಲಿ ಪೌರ ಕಾರ್ಮಿಕರು ಮತ್ತು ಇತರೆ ದಿನಗೂಲಿ ಕೆಲಸ ಮಾಡಿ ಜೀವನ ನಡೆಸುತ್ತಿರುವ ಬಡ ಕುಟುಂಬಗಳಿವೆ. ಕೊಳಚೆ ನಿರ್ಮೂಲನಾ ಮಂಡಳಿಯವರು ಹೊಸದಾಗಿ ಮನೆಗಳನ್ನು ನಿರ್ಮಿಸಲು ಹಾಲಿ ವಾಸ ಮಾಡುತ್ತಿದ್ದ ಮನೆಗಳನ್ನು ತೆರವು ಮಾಡಿಸಿದ್ದಾರೆ. ನಂತರ ಅದೇ ಮನೆ ಕೊಡುತ್ತೇವೆ ಎಂದು ಹೇಳಿ, ಈಗ ಗೊಂದಲ ಉಂಟು ಮಾಡಿ ಮನೆ ನೀಡದೆ ಅಲೆದಾಡಿಸುತ್ತಿದ್ದಾರೆಂದು ಕಿಡಿಕಾರಿದರು.

632 ಮನೆಗಳ ಪೈಕಿ ನಮಗೆ ಆಯ್ಕೆ ಮಾಡಿಕೊಡಲು ಸಂಬಂಧಪಟ್ಟ ಕೊಳಚೆ ನಿರ್ಮೂಲನಾ ಮಂಡಳಿಯ ಅಧಿಕಾರಿಗಳಿಗೆ ಸೂಚಿಸುವುದರ ಜೊತೆಗೆ, ಮಂಡ್ಯ ನಗರಸಭೆಯ ಆಡಳಿತ ಅಧಿಕಾರಿಗಳಿಗೆ ಹಾಲಿ 28 ಮನೆಗಳಲ್ಲಿ ವಾಸವಿರುವ ಪೌರ ಕಾರ್ಮಿಕರ ಕುಟುಂಬಗಳಿಗೆ ಸ್ವಂತ ಮಾಡಿ ಹಕ್ಕು ಪತ್ರ ನೀಡಲು ಆದೇಶಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.

ರಾಜ್ಯಾಧ್ಯಕ್ಷ ಡಿ.ಆರ್.ರಾಜು, ಕಾರ್ಯಾಧ್ಯಕ್ಷ ಮಂಚಯ್ಯ, ಪ್ರಧಾನ ಕಾರ್ಯದರ್ಶಿ ದಿನೇಶ್ ಕುಮಾರ್, ಜಿಲ್ಲಾಧ್ಯಕ್ಷ ಮುಟ್ಟನಹಳ್ಳಿ ಮಹೇಶ್, ನಗರಸಭೆ ಮಾಜಿ ಸದಸ್ಯ ಸುಕುಮಾರ್, ಬಾಬು, ಪದಾಧಿಕಾರಿಗಳಾದ ಅರ್ಜುನ್, ಮಹೇಶ್, ಮಹದೇವ, ಗುರುಮೂರ್ತಿ, ಗಣೇಶ್, ನಾಗರಾಜ್, ನಾಗಯ್ಯ ಸೇರಿದಂತೆ ನೂರಾರು ಜನರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!