Friday, September 20, 2024

ಪ್ರಾಯೋಗಿಕ ಆವೃತ್ತಿ

ಅಕಾಡೆಮಿ- ಪ್ರಾಧಿಕಾರಗಳಿಗೆ ನೇಮಕ ಮಾಡಲು ಆಯ್ಕೆ ಸಮಿತಿ; ಮತಾಂಧರು ಒಳ ಪ್ರವೇಶಿಸದಂತೆ ಸ್ಕ್ರೀನಿಂಗ್ – ಸಿಎಂ ಸಿದ್ದರಾಮಯ್ಯ

ಅಕಾಡೆಮಿ, ಪ್ರಾಧಿಕಾರಗಳಿಗೆ ನೇಮಕ ಮಾಡಲು ಒಂದು ಆಯ್ಕೆ ಸಮಿತಿ ಮಾಡುತ್ತೇವೆ. ಈ ಆಯ್ಕೆ ಸಮಿತಿ ಮತಾಂಧ ಮತ್ತು ಸಮಾಜ ವಿಭಜಿಸುವ ಮನಸ್ಥಿತಿಯವರು ಒಳಗೆ ಪ್ರವೇಶಿಸದಂತೆ ಸ್ಕ್ರೀನಿಂಗ್ ನಡೆಸುತ್ತಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಜನಮನ ಪ್ರತಿಷ್ಠಾನ ಮತ್ತು ಸಮತಾ ಅಧ್ಯಯನ ಕೇಂದ್ರ ದೇವರಾಜ ಅರಸು ಭವನದಲ್ಲಿ ಹಮ್ಮಿಕೊಂಡಿದ್ದ ‘ಪ್ರಬುದ್ಧ ಕರ್ನಾಟಕ ಜನಮನ ಸಮಾವೇಶ’ದ ಸಂವಾದದಲ್ಲಿ ಪಾಲ್ಗೊಂಡು ಅವರು ಸಭಿಕರ ಪ್ರಶ್ನೆಗಳಿಗೆ ಉತ್ತರಿಸಿದರು.

ಹಿಂದಿನ ಸರ್ಕಾರದಲ್ಲಿ ಅನೈತಿಕ ಪೊಲೀಸ್ ಗಿರಿ ಅತ್ಯಂತ ನಿರ್ಲಜ್ಜತನದಿಂದ ಆಚರಿಸಲ್ಪಡುತ್ತಿತ್ತು. ನಾವು ಅಧಿಕಾರಕ್ಕೆ ಬರುತ್ತಿದ್ದಂತೆ ಅನೈತಿಕ ಪೊಲೀಸ್ ಗಿರಿಗೆ ಬರೆ ಎಳೆದಿದ್ದೇವೆ. ಸಮ ಸಮಾಜ ನಿರ್ಮಾಣ ಆಗದ ಹೊರತು ದಲಿತರ, ಅಲ್ಪ ಸಂಖ್ಯಾತರ, ಹಿಂದುಳಿದವರ ಮೇಲೆ ದೌರ್ಜನ್ಯ ನಿಲ್ಲುವುದಿಲ್ಲ. ಹೀಗಾಗಿ ಕುವೆಂಪು ಅವರ ಮಾತಿನಂತೆ ರಾಜ್ಯವನ್ನು ಶಾಂತಿಯ ತೋಟ ಮಾಡುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಪ್ರಯತ್ನಿಸುತ್ತಿದೆ ಎಂದರು.

“>

ಮಕ್ಕಳು ವಿಶ್ವಪ್ರಜ್ಞೆ ಬೆಳೆಸಿಕೊಂಡು ವೈಚಾರಿಕವಾಗಿ ಸನ್ನದ್ಧಗೊಳ್ಳುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಕೆಲಸ ಮಾಡಲಿದೆ. ಬೋಧಕರು ಜಾತ್ಯತೀತವಾಗಿಲ್ಲದಿದ್ದರೆ, ಶಿಕ್ಷಕರಲ್ಲೇ ವೈಚಾರಿಕತೆ ಇಲ್ಲದಿದ್ದರೆ ಮಕ್ಕಳಲ್ಲಿ ಜ್ಞಾನದ ವಿಕಾಸ ಸಾಧ್ಯವಾಗುವುದಿಲ್ಲ ಎಂದ ಅವರು, ಜಾಗತಿಕ ಮಟ್ಟದ ಬಂಡವಾಳವನ್ನು ಆಕರ್ಷಿಕಸಬೇಕು ಎಂದರೆ ಶಾಂತಿ, ಸುವ್ಯವಸ್ಥೆ ಮತ್ತು ಉದ್ಯಮ ಸ್ನೇಹಿ ವಾತಾವರಣ ಇರಬೇಕು. ಬಂಡವಾಳ ಹೂಡಿಕೆಯಿಂದ ಉದ್ಯೋಗ ಸೃಷ್ಟಿಯಾಗಿ ಜಿಡಿಪಿ ಹೆಚ್ಚುತ್ತದೆ. ಹೀಗಾಗಿ ಜಾತಿ-ಧರ್ಮದ ಸಂಘರ್ಷ ಇಲ್ಲದ ಶಾಂತಿಯುತ ಸಮಾಜ ಇರಬೇಕೆಂದು ಅಭಿಪ್ರಾಯಪಟ್ಟರು.

ನಮ್ಮ ಯುವ ಸಮೂಹದ ಶಕ್ತಿ ಮತ್ತು ಚೈತನ್ಯ ದುರುಪಯೋಗ ಆಗಬಾರದು, ಜಾತಿ-ಧರ್ಮದ ಹೆಸರಲ್ಲಿ ಗಲಭೆಗಳಿಗೆ ಯುವ ಸಮೂಹ ದುರ್ಬಳಕೆ ಆಗುವುದನ್ನು ತಪ್ಪಿಸುವ ರೀತಿಯಲ್ಲಿ ನಮ್ಮ ಸರ್ಕಾರ ನೀತಿ ರೂಪಿಸಿದೆ. ಇದಕ್ಕಾಗಿ ಕೌಶಲ್ಯ ತರಬೇತಿ ಜತೆಗೆ ನಿರುದ್ಯೋಗಿ ಯುವ ಸಮೂಹಕ್ಕೆ 24 ತಿಂಗಳ ಕಾಲ ಯುವನಿಧಿ ನೀಡಲು ನಿರ್ಧರಿಸಿದ್ದೇವೆ. ರಾಜ್ಯ ಸರ್ಕಾರದಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ನಾವು ಪ್ರಣಾಳಿಕೆಯಲ್ಲಿ ಹೇಳಿದ್ದೆವು. ಅದರಂತೆ ಹಂತ ಹಂತವಾಗಿ ಭರ್ತಿ ಮಾಡಿಕೊಳ್ಳುತ್ತೇವೆ. ಅಲ್ಲಿಯವರೆಗೂ ಹೊರ ಗುತ್ತಿಗೆ ನೇಮಕಾತಿಗಳಲ್ಲೂ ಮೀಸಲಾತಿ ತರುವ ಉದ್ದೇಶ ಹೊಂದಿದ್ದೇವೆ ಎಂದರು.

ಕೈಗಾರಿಕೋದ್ಯಮಿಗಳ ಜತೆ ಸಭೆ ಮಾಡಿದ್ದೇನೆ. ಅವರಿಗೆ ಯಾವ ರೀತಿಯ ಕೌಶಲ್ಯದ ವಿದ್ಯಾರ್ಥಿಗಳ ಅಗತ್ಯವಿದೆ ಎನ್ನುವ ಬಗ್ಗೆ ಚರ್ಚಿಸಿದ್ದೇನೆ. ಅದಕ್ಕೆ ತಕ್ಕಂತೆ ಶಿಕ್ಷಣವನ್ನು ರೂಪಿಸುವ, ಮಾರುಕಟ್ಟೆಯ ಬೇಡಿಕೆಗೆ ತಕ್ಕಂತೆ ಅರ್ಹರನ್ನು ಸೃಷ್ಟಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ನಮ್ಮ ಶಿಕ್ಷಣ ವ್ಯವಸ್ಥೆಯನ್ನು ಸಜ್ಜುಗೊಳಿಸುತ್ತೇವೆ.
ಶರಾವತಿ ಸಂತ್ರಸ್ಥರಿಗೆ ಶಾಶ್ವತ ಪರಿಹಾರ ನೀಡಲು ನಾವು ಬದ್ಧರಿದ್ದೇವೆ. ಮಲೆನಾಡಿನ ಜಿಲ್ಲೆಗಳಲ್ಲಿ ಹಲವು ವರ್ಷಗಳಿಂದ ಇರುವ ಶರಾವತಿ ಸಂತ್ರಸ್ಥರ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತೇವೆ ಎಂದು ನುಡಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!