Friday, September 20, 2024

ಪ್ರಾಯೋಗಿಕ ಆವೃತ್ತಿ

ಮಳವಳ್ಳಿ| ನಿರ್ಮಾಪಕ ಉಮಾಪತಿ ವಿರುದ್ದ ನಟ ದರ್ಶನ್ ಹೇಳಿಕೆಗೆ ಖಂಡನೆ

ಸಮಾಜ ಅಭಿವೃದ್ಧಿಗೆ ದುಡಿಯುತ್ತಿರುವ ಒಕ್ಕಲಿಗರ ಸಂಘದ ರಾಜ್ಯ ನಿರ್ದೇಶಕ ಹಾಗೂ ಚಲನಚಿತ್ರ ನಿರ್ಮಾಪಕ ಉಮಾಪತಿ ಅವರ ಬಗ್ಗೆ ಕೀಳುಭಾಷೆಯಲ್ಲಿ ಮಾತನಾಡಿರುವ ನಟ ದರ್ಶನ್ ಹೇಳಿಕೆ ಖಂಡನೀಯ ಎಂದು ಒಕ್ಕಲಿಗರ ಸಂಘದ ಮಳವಳ್ಳಿ ತಾಲ್ಲೂಕು ಅಧ್ಯಕ್ಷ ವಿ.ಪಿ.ನಾಗೇಶ್ ಎಚ್ಚರಿಕೆ ನೀಡಿದರು.

ಮಳವಳ್ಳಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿ ಮಾತನಾಡಿದ ಅವರು, ಉಮಾಪತಿ ಅವರು ಒಕ್ಕಲಿಗರ ಸಂಘದ ನಿರ್ದೇಶಕರಾದ ಮೇಲೆ ಕಿಮ್ಸ್ ಆಸ್ಪತ್ರೆಯಲ್ಲಿ ಸಾಕಷ್ಟು ಬದಲಾವಣೆ ಮಾಡಿ, ಜನರಿಗೆ ಉತ್ತಮ ಆರೋಗ್ಯ ಸೇವೆ ಸಿಗುವಂತೆ ಮಾಡಿದ್ದಾರೆ. ಇಂಥವರ ಬಗ್ಗೆ ದರ್ಶನ್ ಅವರು ಆಡಿರುವ ಅತಿಯಾದ ಮಾತುಗಳು ಬದಲಾಗಬೇಕು. ಇಲ್ಲದಿದ್ದರೆ ರಾಜ್ಯದೆಲ್ಲಡೆ ಒಕ್ಕಲಿಗರ ಸಂಘ ಹಾಗೂ ಪ್ರಗತಿಪರ ಸಂಘಟನೆಗಳೊಂದಿಗೆ ಸೇರಿ ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಕೆಲ ತಿಂಗಳ ಹಿಂದೆ ರಾಬರ್ಟ್ ಚಿತ್ರ ಬಿಡುಗಡೆಯಾಗಿದ್ದಾಗ ದರ್ಶನ್ ಅವರೇ ಉಮಾಪತಿ ಅವರ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ಕನ್ನಡ ಚಿತ್ರರಂಗದ ಹಿರಿಯ ನಟರಾದ ಡಾ.ರಾಜ್ ಕುಮಾರ್, ಅಂಬರೀಶ್, ವಿಷ್ಟುವರ್ಧನ್, ಸುದೀಪ್ ಸೇರಿದಂತೆ ಎಲ್ಲ ನಟರು ನಿರ್ಮಾಪಕರ ಬಗ್ಗೆ ಅಪಾರ ಗೌರವ ಇಟ್ಟುಕೊಂಡಿದ್ದರು. ಆದರೆ ದರ್ಶನ್ ನಡವಳಿಕೆ ಸರಿಯಲ್ಲ ಎಂದು ಹೇಳಿದರು.

ವಕೀಲರ ಸಂಘದ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಸಿ.ಎಂ.ನಂಟೇಶ್ ಮಾತನಾಡಿ, ನಟ ದರ್ಶನ್ ಅವರೊಬ್ಬ ಕಲಾವಿದರಾಗಿದ್ದು, ಅವರನ್ನು ಲಕ್ಷಾಂತರ ಅಭಿಮಾನಿಗಳು ಹಿಂಬಾಲಿಸುತ್ತಿರುತ್ತಾರೆ. ಅವರು ಯುವ ಸಮುದಾಯಕ್ಕೆ ಮಾದರಿಯಾಗಬೇಕು. ಅದನ್ನು ಬಿಟ್ಟು ಸಾರ್ವಜನಿಕವಾಗಿ ಅವರ ಬಳಸುವ ಪದಗಳು ಅವರಿಗೆ ಶೋಭೆ ತರುವುದಿಲ್ಲ ಎಂದು ಕಿಡಿಕಾರಿದರು.

ಗೋ‍ಷ್ಠಿಯಲ್ಲಿ ವಕೀಲರಾದ ಹೇಮಂತ್, ನಾಗೇಶ್, ಮುಖಂಡರಾದ ಕುಮಾರ್.ಕೆ.ಸಿ.ನಾಗೇಗೌಡ ಹಾಗೂ ರಮೇಶ್ ಇದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!