Wednesday, October 23, 2024

ಪ್ರಾಯೋಗಿಕ ಆವೃತ್ತಿ

ಕಾಂಗ್ರೆಸ್ ಬಿಜೆಪಿಯ ಬಿ ಟೀಮ್ : ಸಿ.ಎಂ.ಇಬ್ರಾಹಿಂ

ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿಯ ಲೆಹರ್ ಸಿಂಗ್ ಅವರಿಗೆ ಜೆಡಿಎಸ್ ಶಾಸಕರಾದ ಶ್ರೀನಿವಾಸ್ ಗೌಡ ಹಾಗೂ ಗುಬ್ಬಿ ವಾಸು ಅವರ ಮತ ಹಾಕಿಸಿದ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಬಿಜೆಪಿಯ ಬಿ.ಟೀಮ್ ಯಾರೆಂದು ಹೇಳುತ್ತೀರಾ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ‌.ಎಂ. ಇಬ್ರಾಹಿಂ ಪ್ರಶ್ನಿಸಿದರು.

ಪಾಂಡವಪುರ ಪಟ್ಟಣದ ಹರಳಹಳ್ಳಿ ಗ್ರಾಮದ ಬಳಿಯ ಜಾಮಿಯ ಫೈಸುಲ್ ರಸೂಲ್ ಸುನ್ನಿ ಎಜುಕೇಷನ್ ಟ್ರಸ್ಟ್ ಆವರಣದಲ್ಲಿ ನಡೆದ ಜೆಡಿಎಸ್ ಅಲ್ಪಸಂಖ್ಯಾತರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಸಿದ್ದರಾಮಯ್ಯ ಅವರು ಜೆಡಿಎಸ್ ಪಕ್ಷವನ್ನು ಬಿಜೆಪಿ ಬಿ.ಟೀಮ್ ಎಂದು ಲೇವಡಿ ಮಾಡುತ್ತಾರೆ. ಆದರೆ ಬಿಜೆಪಿ ಅಭ್ಯರ್ಥಿಗೆ ಸಹಕಾರ ನೀಡುವ ಕಾಂಗ್ರೆಸ್ ಪಕ್ಷವೇ ಬಿಜೆಪಿ ಬಿ.ಟೀಮ್ ಎಂದರು.

ಹಲವಾರು ಭಾಗ್ಯಗಳನ್ನುನೀಡಿದ ಕಾಂಗ್ರೆಸ್ 120 ಸ್ಥಾನದಿಂದ 80 ಕ್ಕೆ ಇಳಿದದ್ದು ಏಕೆಂದು ಸಿದ್ದರಾಮಯ್ಯ ಹೇಳಲಿ.ಬಾದಾಮಿ, ಚಾಮುಂಡೇಶ್ವರಿ ಬಿಟ್ಟು ಕ್ಷೇತ್ರ ಹುಡುಕಿಕೊಂಡು ಓಡಾಡ್ತಿದ್ದೀರಲ್ಲ, ಕೊಟ್ಟ ಕುದುರೆ ಏರದ ನೀವು ವೀರರೇ,ಶೂರರೇ ಎಂದು ಸಿದ್ದರಾಮಯ್ಯ ವಿರುದ್ಧ ಲೇವಡಿಯಾಡಿದರು.

ಕೋಲಾರ ಕ್ಷೇತ್ರದಲ್ಲಿ ಐವತ್ತು ಸಾವಿರ ಸಾಬರ ಮತಗಳಿವೆ ಎಂದು ಅಲ್ಲಿಗೆ ಹೋಗಿದ್ದೀರಲ್ಲ.ಅಲ್ಲಿ ನಿಮಗೆ ಸೋಲು ಖಚಿತ ಎಂದರು.

ಬಿಜೆಪಿಯ ಸಿಡಿ ಸಾಧನೆ
ಮುಂಬೈಗೆ ಹೋಗಿ ಸಿಡಿ ತೆಗೆಸಿಕೊಂಡು ಬಂದು ಹೈಕೋರ್ಟ್ ನಲ್ಲಿ ಸಿಡಿ ಬಿಡುಗಡೆ ಮಾಡದಂತೆ ತಡೆಯಾಜ್ಞೆ ತೆಗೆದುಕೊಂಡಿದ್ದೇ ನಾಲ್ಕು ವರ್ಷದ ಬಿಜೆಪಿ ಸರ್ಕಾರದ ಸಾಧನೆ ಎಂದು ಟೀಕಿಸಿದರು.

ಬಿಜೆಪಿ ಸರ್ಕಾರ ಒಂದು ಭ್ರಷ್ಟ ಸರ್ಕಾರವಾಗಿದೆ. ಸರ್ಕಾರದಲ್ಲಿ ಸಾಧನೆಗಿಂತ ಹಗರಣಗಳೇ ಹೆಚ್ಚಾಗಿವೆ. ರಾಜ್ಯದಲ್ಲಿ ಜಾತಿ-ಜಾತಿಗಳ ನಡುವೆ, ಧರ್ಮಗಳ ನಡುವೆ ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಿದೆ. ಮುಸ್ಲಿಂ ಓಲೈಕೆ ಮಾಡಿಕೊಳ್ಳುವ ಕಾಂಗ್ರೆಸ್ ಪಕ್ಷದವರು ಹಿಜಾಬ್ ವಿವಾದ ಬಂದಂತಹ ಸಂದರ್ಭದಲ್ಲಿ ಬಾಯಿ ಬಿಚ್ಚಲಿಲ್ಲ. ಕುಮಾರಸ್ವಾಮಿ ಅವರೇ ಮಾತ್ರ ಹಿಜಾಬ್ ವಿವಾದದ ಬಗ್ಗೆ ಬಹಿರಂಗವಾಗಿ ವಿರೋಧಿಸಿ ಮುಸ್ಲಿಂಮರ ಪರವಾಗಿ ನಿಂತರು. ಬಿಜೆಪಿಯವರನ್ನು ಸೋಲಿಸಲು ಕಾಂಗ್ರೆಸ್‌ನಿಂದ ಸಾಧ್ಯವಿಲ್ಲ ಈ ರಾಜ್ಯದ ಗೌಡರು, ರೈತಾಪಿ ವರ್ಗದ ಜನರು ಬಿಜೆಪಿಯನ್ನು ಕಿತ್ತೊಗೆಯಲಿದ್ದಾರೆ ಎಂದರು.

ರಾಜ್ಯದಲ್ಲಿ 2023ಕ್ಕೆ ಜಾ.ದಳ ಅಧಿಕಾರಕ್ಕೆ ಬಂದು ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ, ಸಿ.ಎಸ್.ಪುಟ್ಟರಾಜು ಅವರು ಮಂತ್ರಿಯಾಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ.

ಸಿ.ಎಸ್.ಪುಟ್ಟರಾಜು ಅವರು ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳು ಕ್ಷೇತ್ರದ ಜನರ ಕಣ್ಣ ಮುಂದಿದೆ. ಹಾಗಾಗಿ ಕ್ಷೇತ್ರದ ಜನತೆ ಪುಟ್ಟರಾಜು ಅವರನ್ನು ಈ ಭಾರಿ ಅಧಿಕ ಮತಗಳ ಅಂತರದಿಂದ ಗೆಲ್ಲಿಸಿ ರಾಜ್ಯದಲ್ಲಿ ಮತ್ತೊಮ್ಮೆ ಸಚಿವರನ್ನಾಗಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಅತಂತ್ರ ಸ್ಥಿತಿ ಬಂದಾಗ ಕಾಂಗ್ರೆಸ್ ಪಕ್ಷದ ಹೈ ಕಮಾಂಡ್ ವರಿಷ್ಠರು, ರಾಜ್ಯ ನಾಯಕರು ದೇವೇಗೌಡರ ಮನೆಗೆ ಬಾಗಿಲಿಗೆ ಬಂದು ಬೇಡಿಕೊಂಡು ಮೈತ್ರಿ ಸರ್ಕಾರ ರಚನೆ ಮಾಡಿದರು. ಆದರೆ, ಕಾಂಗ್ರೆಸ್‌ನವರು ತಮ್ಮ ಶಾಸಕರನ್ನು ಮುಂಬೈಗೆ ಕಳುಹಿಸಿ ಕುಮಾರಸ್ವಾಮಿ ಅವರ ಸರ್ಕಾರ ತೆಗೆದರು ಎಂದು ಕಿಡಿಕಾರಿದರು.

ಈ ಸಂದರ್ಭದಲ್ಲಿ ಜಾ.ದಳ ರಾಷ್ಟ್ರೀಯ ಉಪಾಧ್ಯಕ್ಷ ಜಫ್ರುಲ್ಲಾಖಾನ್, ಜೆಡಿಎಸ್  ಶಾಸಕ ಪುಟ್ಟರಾಜು, ಮಹಿಳಾ ವಿಭಾಗದ ರಾಜ್ಯ ಕಾರ್ಯದರ್ಶಿ ನಜ್ಮಾನಜೀರ್, ಹೈಕೋರ್ಟ್ ವಕೀಲ ಎಂ.ಎಸ್.ಮುಕ್ರಂಪಾಷ, ವಸ್ತು ಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷ ಅಬ್ದುಲ್ಲಾ, ಜಾ.ದಳ ತಾಲ್ಲೂಕು ಅಧ್ಯಕ್ಷ ಮಲ್ಲೇಶ್, ಮೌಲಾನಾ ಅಬ್ದುಲ್‌ಸಲಾಂ, ಪುರಸಭೆ ಅಧ್ಯಕ್ಷೆ ಅರ್ಚನಾ ಚಂದ್ರು, ಉಪಾಧ್ಯಕ್ಷೆ ಶ್ವೇತಾ ಉಮೇಶ್, ಸದಸ್ಯ ಇಮ್ರಾನ್ ಷರೀಫ್, ನಜೀರ್ ಅಹಮದ್, ಎಲೆಕೆರೆ ಸಮಿಯುಲ್ಲಾ, ಅಬ್ದುಲ್ ವಾಹಿದ್, ಲಿಂಗರಾಜು ಸೇರಿದಂತೆ ಹಲವರು ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!