Thursday, September 19, 2024

ಪ್ರಾಯೋಗಿಕ ಆವೃತ್ತಿ

ಕಾಂಗ್ರೆಸ್ ಪಕ್ಷಕ್ಕೆ ಹಲವು ಮುಖಂಡರ ಸೇರ್ಪಡೆ: ಕಾಂಗ್ರೆಸ್ ಗೆಲುವಿಗೆ ಪಿ.ಎಂ.ನರೇಂದ್ರಸ್ವಾಮಿ ಕರೆ

ಇನ್ನು 4-5 ತಿಂಗಳಲ್ಲಿ ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು,ಕಾಂಗ್ರೆಸ್ ಕಾರ್ಯಕರ್ತರು ಯಾವುದೇ ಗೊಂದಲ ಮಾಡಿಕೊಳ್ಳದೆ ಗೆಲುವಿಗಾಗಿ ಶ್ರಮಿಸಬೇಕೆಂದು ಕೆಪಿಸಿಸಿ ಉಪಾಧ್ಯಕ್ಷ, ಮಾಜಿ‌ ಸಚಿವ ಪಿ.ಎಂ.ನರೇಂದ್ರಸ್ವಾಮಿ ಮನವಿ ಮಾಡಿದರು.

ಮಳವಳ್ಳಿ ತಾಲ್ಲೂಕಿನ ಗಾಜನೂರು ಗ್ರಾಮದಲ್ಲಿ ಗಾಜನೂರು,ಕ್ಯಾತೇಗೌಡನದೊಡ್ಡಿ, ಗೌಡಗೆರೆ, ನಿಡಘಟ್ಟ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಹಲವು ಪಕ್ಷಗಳಿಂದ ಮುಖಂಡರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಅವರು ಮಾತನಾಡಿದರು.

ಕಳೆದ ಹಲವು ಚುನಾವಣೆಗಳಲ್ಲಿ ಈ ಭಾಗದ ಗ್ರಾಮಗಳ ಜನರು ನನಗೆ,ಕಾಂಗ್ರೆಸ್ ಪಕ್ಷಕ್ಕೆ ಬಲ ತುಂಬಿದ್ದು, ನಿಮ್ಮ ಅಭಿಮಾನವನ್ನು ಎಂದಿಗೂ ಮರೆಯುವುದಿಲ್ಲ. ನನ್ನ ಅಧಿಕಾರದ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿರುವ ತೃಪ್ತಿ ನನಗಿದೆ.ನನ್ನ ಅಧಿಕಾರದ ಅವಧಿಯಲ್ಲಿ ಮಾಡಿರುವ ಅಭಿವೃದ್ಧಿ ಕಾಮಗಾರಿ ನೋಡಿ, ಕ್ಷೇತ್ರದ ಅಭಿವೃದ್ದಿಗಾಗಿ ಯಾರನ್ನು ಗೆಲ್ಲಿಸಿದರೇ ಒಳಿತು ಎನ್ನುವುದು ನಿಮಗೆ ಈಗಾಗಲೇ ಮನವರಿಕೆಯಾಗಿದೆ. ಅಭಿವೃದ್ಧಿ ಹಾಗೂ ಭವಿಷ್ಯದ ದೃಷ್ಟಿಯಿಂದ ಮುಂಬರುವ ಚುನಾವಣೆಯಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಸಕ್ರಿಯವಾಗಬೇಕೆಂದು ಸಲಹೆ ನೀಡಿದರು.

ಬೆಲೆಯೇರಿಕೆ,ದುರಾಡಳಿತ ನಡೆಸುತ್ತಿರುವ ಕೇಂದ್ರ ಮತ್ತು ರಾಜ್ಯದ ಬಿಜೆಪಿ ಬಗ್ಗೆ ಜನರು ಅಸಮಾಧಾನ ಗೊಂಡಿದ್ದಾರೆ. ಪಕ್ಷವನ್ನು ಸಂಘಟನೆ ಮಾಡುವ ಮೂಲಕ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನನ್ನು ಅಧಿಕಾರಕ್ಕೆ ತರಲು ಮುಂದಾಗಬೇಕು ಎಂದು ಕರೆ ನೀಡಿದರು.

ಗಾಜನೂರು ಗ್ರಾಮದ ಮುಖಂಡ ಬಿ.ಶ್ರೀನಿವಾಸ್ ಮೂರ್ತಿ ಮಾತನಾಡಿ, ಪಿ.ಎಂ.ನರೇಂದ್ರಸ್ವಾಮಿ ಅವರ ಕಾಲದಲ್ಲಿ ತಾಲ್ಲೂಕಿನಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ನಡೆದಿತ್ತು.ಆದರೆ ಈಗಿನ ಶಾಸಕರ ಅವಧಿಯಲ್ಲಿ ಅಂತಹ ಅಭಿವೃದ್ಧಿ ಕಾಮಗಾರಿ ನಡೆದಿಲ್ಲ.

ನರೇಂದ್ರಸ್ವಾಮಿ ಅವರ ಕಾಲದಲ್ಲಿ ಮಂಜೂರಾಗಿದ್ದ ಕೋಟ್ಯಾಂತರ ರೂ.ವೆಚ್ಚದ ರಸ್ತೆ ಮತ್ತು ಸೇತುವೆ ಕಾಮಗಾರಿ ಈಗಿನ ಶಾಸಕರು ಪೂರ್ಣಗೊಳಿಸಿದ್ದಾರೆ.ಅವರು ಹೊಸದಾಗಿ ನಿರೀಕ್ಷಿತ ಮಟ್ಟದಲ್ಲಿ ಅನುದಾನ ತಂದಿಲ್ಲ. ಇದರ ಬಗ್ಗೆ ಸಮಗ್ರ ಮಾಹಿತಿ ನನ್ನಲಿದೆ ಎಂದರು.

ಈಗಿನ ಶಾಸಕರು ಯೋಜನೆಯನ್ನು ನಾನು ತಂದಿದ್ದೇನೆ ಎಂದು ಹಲವು ಬಾರಿ ಸುಳ್ಳು ಹೇಳಿದ್ದಾರೆ. ಅವರು ಮಾಡಿಸಿರುವ ಕಾಮಗಾರಿ ಕಳಪೆಯಿಂದ ಕೂಡಿದೆ. ಹೀಗಾಗಿ ಗ್ರಾಮೀಣ ಭಾಗದ ಸಮಗ್ರ ಅಭಿವೃದ್ಧಿಗಾಗಿ ಎಲ್ಲರೂ ಪಿ.ಎಂ.ನರೇಂದ್ರಸ್ವಾಮಿ ಅವರ ಗೆಲುವಿಗೆ ಶ್ರಮಿಸಬೇಕು ಎಂದು ಹೇಳಿದರು.

ಮುಖಂಡರಾದ ಕೆಂಪೇಗೌಡ, ಕೆಂಪೇಗೌಡ, ನಾಗೇಶ್, ಶ್ರೀಕಂಠೇಗೌಡ, ನಾಗೇಶ್, ನಾಗರಾಜು, ಟಿಎಪಿಸಿಎಂಎಸ್ ಅಧ್ಯಕ್ಷ ಕೆ.ಎಸ್.ದ್ಯಾಪೇಗೌಡ, ಗ್ರಾ.ಪಂ.ಮಾಜಿ ಅಧ್ಯಕ್ಷ ಸಿ.ಪಿ.ರಾಜು, ಕಾಂಗ್ರೆಸ್ ತಾಲ್ಲೂಕು ಯುವ ಘಟಕದ ಅಧ್ಯಕ್ಷ ಹುಸ್ಕೂರು ಕೃಷ್ಣಮೂರ್ತಿ, ಮುಖಂಡರಾದ ಸತೀಶ್, ದೀಪು, ಬಸವರಾಜು, ಕಂದೇಗಾಲ ಶ್ರೀನಿವಾಸ್ ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!