Thursday, September 19, 2024

ಪ್ರಾಯೋಗಿಕ ಆವೃತ್ತಿ

ದರೋಡೆಗೆ ಸಂಚು : ಇಬ್ಬರಿಗೆ ಧರ್ಮದೇಟು

ಚಿನ್ನದ ವ್ಯಾಪಾರಿಗಳನ್ನು ಅಡ್ಡಗಟ್ಟಿ ದರೋಡೆ ಮಾಡಲು ಯತ್ನಿಸಿದ ಇಬ್ಬರನ್ನು ಗ್ರಾಮಸ್ಥರು ಸೆರೆ ಹಿಡಿದು ಮರಕ್ಕೆ ಕಟ್ಟಿ ಹಾಕಿ, ಥಳಿಸಿದ ಘಟನೆ ಗುರುವಾರ ಬೆಳಿಗ್ಗೆ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಬನ್ನಘಟ್ಟ ಗ್ರಾಮದ ಬಳಿ ನಡೆದಿದೆ.

ಎರಡು ಕಾರಿನಲ್ಲಿ ಬಂದಿದ್ದ 10 ಕ್ಕೂ ಹೆಚ್ಚು ಆಗಂತುಕರು, ಚಿನ್ನದ ವ್ಯಾಪಾರಿಗಳಾದ ಬೆಳಗಾವಿಯ ಬಾಲಾಜಿ, ಶಿರಾಜ್ ಇದ್ದ ಕಾರಿನ ಮೇಲೆ ಮಚ್ಚು, ಲಾಂಗ್ ಗಳಿಂದ ಹಲ್ಲೆ ಮಾಡಿ ಗನ್ ತೋರಿಸಿ ಬೆದರಿಸಿ ಚಿನ್ನದ ಆಭರಣಗಳು ಹಾಗೂ ಅವರ ಬಳಿಯಿದ್ದ ಹಣ ದೋಚಲು ಮುಂದಾಗಿದ್ದರು.

ಆಗ ಕಾರಿನ ಚಾಲಕ ಹಾಗೂ ಚಿನ್ನದ ವ್ಯಾಪಾರಿಗಳಾದ ಬಾಲಾಜಿ, ಶಿರಾಜ್ ಜೋರಾಗಿ ಕೂಗಿಕೊಂಡಿದ್ದಾರೆ. ಇವರ ಕಿರುಚಾಟ ಕೇಳಿ ಬನ್ನಘಟ್ಟ ಗ್ರಾಮಸ್ಥರು ದರೋಡೆಕೋರರ ಗ್ಯಾಂಗಿನ ಮೇಲೆ ಕಲ್ಲುಗಳನ್ನು ತೂರಿದರು.

ಯಾವಾಗ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಕಲ್ಲು ತೂರಲಾರಂಭಿಸಿದರೋ, ಆಗ ದರೋಡೆಕೋರರ ಗ್ಯಾಂಗ್ ಭಯದಿಂದ ಕಾರಿನಲ್ಲಿ ಪರಾರಿಯಾಗಿದ್ದಾರೆ. ಗ್ಯಾಂಗಿನ ಇಬ್ಬರು ತಲೆಗೆ ಕಲ್ಲೇಟು ಬಿದ್ದು, ಅವರು ಕಾರು ಹತ್ತಿ ಪರಾರಿಯಾಗಲು ಸಾಧ್ಯವಾಗದೆ ಗ್ರಾಮಸ್ಥರ ಕೈಗೆ ಸಿಕ್ಕಿ ಬಿದ್ದಿದ್ದಾರೆ.

ಗ್ರಾಮಸ್ಥರು ಇಬ್ಬರು ದರೋಡೆಕೋರರನ್ನು ಮರಕ್ಕೆ ಕಟ್ಟಿ ಹಿಗ್ಗಾ ಮುಗ್ಗಾ ಥಳಿಸಿದ್ದಾರೆ. ಈ ಸಂದರ್ಭದಲ್ಲಿ ಅವರ ಬಳಿ ಇದ್ದ ರಿವಾಲ್ವರ್ ಹಾಗೂ ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.

ಬೆಳಗಾವಿಯಿಂದ ಮೈಸೂರಿಗೆ ಚಿನ್ನ, ಹಣ ತೆಗೆದುಕೊಂಡು ಹೋಗುತ್ತಿದ್ದ ಬಾಲಾಜಿ, ಶಿರಾಜ್ ಅವರಿಗೂ ಗಾಯಗಳಾಗಿದೆ. ದರೋಡೆಕೋರರ ಮಚ್ಚು, ಲಾಂಗುಗಳ ಆರ್ಭಟಕ್ಕೆ ಚಿನ್ನದ ವ್ಯಾಪಾರಿಗಳಿದ್ದ ಕಾರು ಸಂಪೂರ್ಣ ಜಖಂಗೊಂಡಿದೆ.

ಇಬ್ಬರು ದರೋಡೆಕೋರರನ್ನು ಮರಕ್ಕೆ ಕಟ್ಟಿ ಹಾಕಿ ಗನ್ ಕಿತ್ತು ಕೊಂಡು ಥಳಿಸಿದ ಗ್ರಾಮಸ್ಥರು ಪೋಲೀಸರಿಗೆ ಮಾಹಿತಿ ನೀಡಿದರು.  ಸ್ಥಳಕ್ಕೆ ಪಾಂಡವಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.

ಪರಾರಿಯಾದವರ ಪತ್ತೆಗಾಗಿ ಪೋಲೀಸರು ‌ಹುಡುಕಾಟ ನಡೆಸಿದ್ದಾರೆ. ಈ ಸಂಬಂಧ ಪಾಂಡವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಈ ಹಿಂದೆ ಮಂಡ್ಯ ತಾಲ್ಲೂಕಿನ ಬಸರಾಳು ಹೋಬಳಿಯ ಗಂಟಗೌಡನಹಳ್ಳಿ ಬಳಿ ಚಿನ್ನದ ವ್ಯಾಪಾರಿಗಳನ್ನು ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಥಳಿಸಿ ಒಂದು ಕೋಟಿಗೂ ಅಧಿಕ ಮೌಲ್ಯದ ಚಿನ್ನಾಭರಣ ಲೂಟಿ ಮಾಡಿ ಪರಾರಿಯಾಗಿದ್ದರು.

ಈ ಪ್ರಕರಣ ನಡೆದ ನಾಲ್ಕು-ಐದು ದಿನಗಳ ಅಂತರದಲ್ಲಿ ಆರು ಮಂದಿ ದರೋಡೆಕೋರರನ್ನು ಬಂಧಿಸಿ ಚಿನ್ನಾಭರಣ ವಶಪಡಿಸಿಕೊಂಡಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!