Thursday, September 19, 2024

ಪ್ರಾಯೋಗಿಕ ಆವೃತ್ತಿ

ಮಲೇರಿಯಾ ಮುಕ್ತ ಜಿಲ್ಲೆ ನಿರ್ಮಾಣಕ್ಕೆ ಸಹಕರಿಸಿ : ಭವಾನಿ ಶಂಕರ್

ಮಲೇರಿಯಾವನ್ನು ಮಂಡ್ಯ ಜಿಲ್ಲೆಯಿಂದ ಮುಕ್ತಗೊಳಿಸಲು ಸಾರ್ವಜನಿಕರು ಸಹಕರಿಸಬೇಕು ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಕೆ.ಜೆ.ಭವಾನಿ ಶಂಕರ್ ಮನವಿ ಮಾಡಿದರು.

ಮಂಡ್ಯ ನಗರಸಭೆಯ ಧರಣಪ್ಪ ಸಭಾಂಗಣದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಧಿಕಾರಿಗಳ ಕಚೇರಿ ವತಿಯಿಂದ ನಗರಸಭಾ ಸಿಬ್ಬಂದಿ ಹಾಗೂ ಪೌರಕಾರ್ಮಿಕರಿಗೆ ಏರ್ಪಡಿಸಿದ್ದ ವಿಶ್ವ ಮಲೇರಿಯಾ ದಿನಾಚರಣೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.

ಪ್ರಸಕ್ತ ಸಾಲಿನಲ್ಲಿ ನವೀನ ವಿಧಾನಗಳನ್ನು ಬಳಸೋಣ – ಮಲೇರಿಯಾ ಕಡಿಮೆ ಮಾಡಿ ಜೀವ ಉಳಿಸೋಣ ಎಂಬ ಘೋಷಣೆಯಡಿ ಮಲೇರಿಯಾ ವಿರೋಧಿ ದಿನಾಚರಣೆಯನ್ನು ಆಚರಿಸಲಾಗುತ್ತಿದೆ ಎಂದರು.

ಅತ್ಯಂತ ಸಣ್ಣ ಕ್ರಿಮಿ ಸೊಳ್ಳೆಯಿಂದ ಹರಡಬಹುದಾದ ಮಲೇರಿಯಾ, ಚಿಕೂನ್‌ಗುನ್ಯಾ, ಮೆದುಳು ಜ್ವರ, ಆನೆಕಾಲು ರೋಗ ಮುಂತಾದ ಕಾಯಿಲೆಗಳಿಂದ ವಿಶ್ವದಾದ್ಯಂತ ಲಕ್ಷಾಂತರ ಸಂಖ್ಯೆಯ ರೋಗಿಗಳು ನರಳುತ್ತಿರುವುದು ಮಾತ್ರವಲ್ಲ, ಸಹಸ್ರಾರು ಸಂಖ್ಯೆಯ ಜನ ಮರಣ ಹೊಂದುತ್ತಿರುವುದು ನೋವಿನ ಸಂಗತಿಯಾಗಿದೆ ಎಂದರು.

ಜಿಲ್ಲಾದ್ಯಂತ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಮಲೇರಿಯಾ ನಿಯಂತ್ರಿಸುವ ನಿಟ್ಟಿನಲ್ಲಿ ಸಕ್ರಿಯವಾಗಿ ನಿರ್ವಹಿಸುತ್ತಿದ್ದು ಎಲ್ಲೆಡೆ ಜಾಗೃತಿ ಮಾಡಲಾಗುತ್ತಿದೆ. ನಗರಸಭೆ ಸದಸ್ಯ ಶ್ರೀಧರ್ ಮಾತನಾಡಿ, ಪೌರಕಾರ್ಮಿಕರು ಆರೋಗ್ಯ ರಕ್ಷಕರ ಜೊತೆ ಆರೋಗ್ಯ ಸೇನಾನಿಗಳಾಗಿ ಕೆಲಸ ನಿರ್ವಹಿಸುತ್ತಿದ್ದಾರೆ ಎಂದರು.

ಹಿಂದೆ ಮಲೇರಿಯಾ ರೋಗ ದೊಡ್ಡ ಕಾಯಿಲೆಯಾಗಿ ಪರಿಣಮಿಸಿತ್ತು. ಪೌರ ಕಾರ್ಮಿಕರು ಮಳೆಗಾಲದಲ್ಲಿ ಸ್ವಚ್ಛತೆಗೆ ಹೆಚ್ಚು ಒತ್ತು ಕೊಡಬೇಕು. ಮಳೆ ನೀರು ಟೈರ್, ಕರಟ, ಚರಂಡಿ ಮೊದಲಾದವು ಸೊಳ್ಳೆಗಳ ಉತ್ಪತ್ತಿ ತಾಣ. ಹಾಗಾಗಿ ನೀರು ನಿಲ್ಲದಂತೆ ಸ್ವಚ್ಛತೆಗೆ ಆದ್ಯತೆ ಕೊಟ್ಟು ಅರಿವು ಮೂಡಿಸಿ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ನಗರಸಭೆ ಪರಿಸರ ಇಂಜಿನಿಯರ್ ರುದ್ರೇಗೌಡ, ಸಹಾಯಕ ಕೀಟಶಾಸ್ತ್ರಜ್ಞೆ ಜಾನೆಟ್ ಮೆನಾಜೆಸ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ವೇಣುಗೋಪಾಲ್, ಹಿರಿಯ ಆರೋಗ್ಯ ನಿರೀಕ್ಷಣ ಅಧಿಕಾರಿಗಳಾದ ಎಂ.ಎಸ್. ಸೋಮಶೇಖರ್, ಸಿ.ಕೆ. ಚಂದ್ರಶೇಖರ್,ಹಿರಿಯ ಪ್ರಯೋಗಶಾಲಾ ತಾಂತ್ರಿಕ ಅಧಿಕಾರಿ ಶಂಭುಲಿಂಗೇಗೌಡ ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!