Wednesday, June 12, 2024

ಪ್ರಾಯೋಗಿಕ ಆವೃತ್ತಿ

ಲೈಂಗಿಕ ಹಗರಣ ; ಸರ್ಕಾರ ಮತ್ತು ಸಮಾಜದ ಜವಾಬ್ದಾರಿ……

ವಿವೇಕಾನಂದ ಎಚ್.ಕೆ

ಇಂಟೆಲಿಜೆನ್ಸ್ (department of intelligence ) ಎಂಬ ಆಂತರಿಕ ಬೇಹುಗಾರಿಕೆ ಮತ್ತು ಭದ್ರತಾ ಇಲಾಖೆಯೊಂದು ಕರ್ನಾಟಕದಲ್ಲಿ ಅಸ್ತಿತ್ವದಲ್ಲಿದೆ. ಇಡೀ ರಾಜ್ಯದ ಆಗುಹೋಗುಗಳ ಬಗ್ಗೆ ಸೂಕ್ಷ್ಮವಾಗಿ ಗಮನಿಸಿ ಒಂದು ಮುನ್ನೋಟದ ವರದಿಯನ್ನು ಸರ್ಕಾರದ ಜೊತೆ ಪ್ರತಿನಿತ್ಯ ಹಂಚಿಕೊಳ್ಳುತ್ತದೆ…

ನಮಗೆ ಅನೇಕ ವಿಷಯಗಳು ಘಟನೆಗಳಾದ ನಂತರ ತಿಳಿಯುತ್ತದೆ. ಆಗಬಹುದಾಗಿದ್ದ ಅನೇಕ ಘಟನೆಗಳನ್ನು ಈ ಇಲಾಖೆ ತಡೆದಿರುತ್ತದೆ. ಅದು ಸಾರ್ವಜನಿಕವಾಗಿ ಅಷ್ಟು ಪ್ರಚಾರವಾಗುವುದಿಲ್ಲ….

ಕೌಟಿಲ್ಯ ತನ್ನ ” ಅರ್ಥಶಾಸ್ತ್ರ ” ಎಂಬ ರಾಜನೀತಿ ಗ್ರಂಥದಲ್ಲಿ ಈ ಇಲಾಖೆಯ ಮಹತ್ವವನ್ನು ಸ್ಪಷ್ಟವಾಗಿ ಉಲ್ಲೇಖ ಮಾಡಿದ್ದಾನೆ. ಅಲ್ಲದೆ ಅದು ಹೇಗೆ ಕೆಲಸ ಮಾಡಬೇಕು ಎಂಬುದನ್ನು ವಿವರಿಸಿದ್ದಾನೆ…..

ಆದರೂ ಈ ಇಲಾಖೆಯ ಗಮನಕ್ಕೆ ಬಾರದೆ ಅನೇಕ ದುರ್ಘಟನೆಗಳು ನಡೆಯುತ್ತಲೇ ಇರುತ್ತದೆ. ರಾಜಕೀಯ ಬಂಡಾಯಗಳು ಸಹ ಈ ಇಲಾಖೆಯ ಕಣ್ಣು ತಪ್ಪಿಸಿ ಸಂಭವಿಸಿದೆ. ಆಗೆಲ್ಲಾ ಈ ಇಲಾಖೆಯ ವಿಫಲತೆಯ ಬಗ್ಗೆ ಟೀಕೆಗಳು ಬರುತ್ತವೆ…..

ಈ ಇಲಾಖೆಯ ಬಗ್ಗೆ ಈಗ ಪ್ರಸ್ತಾಪ ಮಾಡಲು ಕಾರಣ ಒಂದು ಬಹುದೊಡ್ಡ ಲೈಂಗಿಕ ಹಗರಣ ಕರ್ನಾಟಕದಲ್ಲಿ ನಡೆದಿದೆ. ಅದರಲ್ಲಿ ಒಂದು ಜಿಲ್ಲೆಯ ಪ್ರಭಾವಿ ಲೋಕಸಭಾ ಸದಸ್ಯರು ಪ್ರಮುಖ ಆರೋಪಿಯಾಗಿದ್ದಾರೆ ಎಂದು ಹೇಳಲಾಗಿದೆ. ಈ ಘಟನೆ ಕೇವಲ ಒಂದು ದಿನದಲ್ಲಿ ನಡೆದಿರುವುದಿಲ್ಲ. ಬಹುಶಃ ಅವರ ಲೋಕಸಭಾ ಸದಸ್ಯ ಅವಧಿಯ ಐದು ವರ್ಷಗಳ ಸಂಪೂರ್ಣ ಕಾಲಾವಧಿಯಲ್ಲಿ, ವಿವಿಧ ಹಂತಗಳಲ್ಲಿ ನಡೆದಿರಬೇಕು ಎನಿಸುತ್ತದೆ. ಅಲ್ಲದೇ ಅದರಲ್ಲಿ ಮಾಜಿ ಮಂತ್ರಿಯಾದ ಅವರ ತಂದೆಯವರ ಪಾತ್ರವೂ ಇರುವ ಬಗ್ಗೆ ಎಫ್ಐಆರ್ ಆಗಿದೆ. ಜೊತೆಗೆ ಈ ಬಗ್ಗೆ ಸಾರ್ವಜನಿಕರಲ್ಲಿ ಗುಸು-ಗುಸು ಕಳೆದ ಸುಮಾರು ಆರು ತಿಂಗಳಿನಿಂದ ಮಾತುಕತೆಗಳು ನಡೆಯುತ್ತಿರುತ್ತದೆ. ಅದಕ್ಕೆ ಪುಷ್ಠಿ ನೀಡುವಂತೆ ಕೆಲವು ಪೆನ್ ಡ್ರೈವ್ಗಳು ಸಿಕ್ಕಿರುತ್ತದೆ. ಅಧಿಕೃತವಾಗಿ ಅದೇ ವ್ಯಕ್ತಿ ಕೋರ್ಟಿನಿಂದ ಆ ಬಗ್ಗೆ ಮಾಹಿತಿ ಹಂಚಿಕೊಳ್ಳದಂತೆ ತಡೆಯಾಜ್ಞೆ ಸಹ ತಂದಿರುತ್ತಾರೆ……..

ಇಷ್ಟೆಲ್ಲಾ ಆದ ನಂತರ ಆಡಳಿತ ವ್ಯವಸ್ಥೆ ಮತ್ತು ಇಂಟೆಲಿಜೆನ್ಸ್ ಇಲಾಖೆ ಈ ಬಗ್ಗೆ ಒಂದು ಎಚ್ಚರಿಕೆಯನ್ನು ವಹಿಸಬೇಕಾಗಿತ್ತು. ಮಾಧ್ಯಮಗಳು ಸಹ ಕನಿಷ್ಠ ಎಲ್ಲಾ ಕಾನೂನಾತ್ಮಕ ತಡೆಯಾಜ್ಞೆಯ ಮಿತಿಗಳ ನಡುವೆಯೂ ಪರೋಕ್ಷ ಜನ ಅಭಿಪ್ರಾಯ ರೂಪಿಸಿ ಸರ್ಕಾರದ ಮೇಲೆ ಒತ್ತಡ ತರಬೇಕಾಗಿತ್ತು. ಅದು ಸಾಧ್ಯವಾಗಲಿಲ್ಲ. ಚುನಾವಣಾ ಸಂದರ್ಭದಲ್ಲಿ ಕೇವಲ ಮತದಾನಕ್ಕೆ ಒಂದು ವಾರ ಇರುವಾಗ ಆ ವಿಡಿಯೋ ಎಲ್ಲಾ ಕಡೆ ಪ್ರಸಾರವಾಯಿತು. ಆ ಸಂಸದನ ವಿಕೃತ ಕಾಮ ಎಲ್ಲ ಕಡೆಯೂ ಬಯಲಾಯಿತು. ಇಷ್ಟಾದ ನಂತರ ಇಂಟೆಲಿಜೆನ್ಸ್ ಇಲಾಖೆ ಆ ವ್ಯಕ್ತಿಯನ್ನು ಸಂಪೂರ್ಣ ತನ್ನ ಕಣ್ಗಾವಲಿನಲ್ಲಿ ಇರಿಸಬೇಕಾಗಿತ್ತು……

ಆದರೆ ಯಾವುದೋ ಪ್ರಬಲ ಶಕ್ತಿಗಳು ಇದರಲ್ಲಿ ಭಾಗಿಯಾಗಿ ಸರ್ಕಾರ ಎಸ್ಐಟಿ ತನಿಖೆ ನಡೆಸುವುದಕ್ಕೂ ಆ ವ್ಯಕ್ತಿ ಕಣ್ಮರೆಯಾಗುವುದಕ್ಕೂ ಕೆಲವೇ ಗಂಟೆಗಳ ಅಂತರವನ್ನು ಗಮನಿಸಿದರೆ ಶಾಸಕಾಂಗ ಮತ್ತು ಕಾರ್ಯಾಂಗದ ನಡುವಿನ ದುಷ್ಟ ಹೊಂದಾಣಿಕೆ ಹೊರಬರುತ್ತದೆ. ಇಂತಹ ಗಂಭೀರ ವಿಷಯಗಳನ್ನು ಇಂಟೆಲಿಜೆನ್ಸ್ ಗಮನಿಸದಿದ್ದರೆ ಆ ಇಲಾಖೆಯ ಅವಶ್ಯಕತೆಯಾದರೂ ಏನು, ಕಾನೂನಿನ ಪ್ರಕಾರ ಏನೇ ಅಡೆತಡೆ ಇರಬಹುದು, ಆದರೆ ಆ ವ್ಯಕ್ತಿ ಕಣ್ಮರೆಯಾಗುವುದಕ್ಕೆ ಅವಕಾಶ ನೀಡಬಾರದಿತ್ತು….

ಅದೂ ಆತ ವಿದೇಶಕ್ಕೆ ಓಡಿಹೋಗಿದ್ದಾನೆ ಎಂದರೆ ಖಂಡಿತ ಇಲಾಖೆ ವಿಫಲವಾಗಿದೆ ಎಂದೇ ಹೇಳಬೇಕಾಗುತ್ತದೆ. ಈಗ ಆತ ಅಲ್ಲಿ ಕುಳಿತು ತನ್ನ ಇಲ್ಲಿನ ಸಂಪರ್ಕಗಳನ್ನು ಉಪಯೋಗಿಸಿಕೊಂಡು ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸುವುದಲ್ಲದೆ ಸಾಕ್ಷಗಳನ್ನು ಬೆದರಿಸುವ, ಆಮಿಷ ಒಡ್ಡುವ, ನಾಶಪಡಿಸುವ ಎಲ್ಲ ಸಾಧ್ಯತೆಗಳು ಇರುತ್ತದೆ. ಅಲ್ಲದೆ ಸರ್ಕಾರ ಸಹ ಆತನನ್ನು ಬಂಧಿಸಲು ಸಾಕಷ್ಟು ಹಣ ಖರ್ಚು ಮಾಡಬೇಕಾಗುತ್ತದೆ……

ಒಂದು ವೇಳೆ ನಿರೀಕ್ಷಣಾ ಜಾಮೀನು ದೊರೆತ ನಂತರ ಆ ವ್ಯಕ್ತಿಯನ್ನು ಕಠಿಣವಾಗಿ ತನಿಖೆ ಮಾಡುವುದು ಸರ್ಕಾರಕ್ಕೂ ಕಷ್ಟವಾಗುತ್ತದೆ. ಸಾಮಾನ್ಯ ಜನರಿಗೆ ಒಂದು ನ್ಯಾಯ, ಇಂತಹವರಿಗೆ ಇನ್ನೊಂದು ನ್ಯಾಯ. ಇದು ಈ ಸಮಾಜದ ಒಳ್ಳೆಯ ವ್ಯಕ್ತಿಗಳು ಭ್ರಮನಿರಸನವಾಗಲು ಕಾರಣವಾಗುತ್ತದೆ. ಪೊಲೀಸ್ ಕರ್ತವ್ಯವೆಂದರೆ ಕೇವಲ ಅಪರಾಧಿಗಳನ್ನು ಹಿಡಿಯುವುದು ಮಾತ್ರವಲ್ಲ ಅಪರಾಧಗಳನ್ನು ತಡೆಯುವುದು ಸಹ ಅವರ ಮೊದಲ ಆದ್ಯ ಕರ್ತವ್ಯವಾಗಿರುತ್ತದೆ…..

ಮೊದಲೇ ಹೇಳಿದಂತೆ ಮನುಷ್ಯನಿಗೆ ಧೈರ್ಯದ ಜೊತೆ ಅಷ್ಟೇ ಪ್ರಮಾಣದಲ್ಲಿ ಭಯವೂ ಇರಬೇಕು. ಆಸೆಯ ಜೊತೆ ಮಿತಿಯ ಯಾರಿಗೂ ತಿಳಿದಿರಬೇಕು. ಆಗ ಸ್ವಲ್ಪ ಒಳ್ಳೆಯದು ಸ್ವಲ್ಪ ಕೆಟ್ಟದ್ದು ಸಂಭವಿಸುತ್ತದೆ. ಇಲ್ಲದಿದ್ದರೆ ಈ ಎರಡನ್ನೂ ಮೀರಿ ವಿಕೃತಗಳು ನಡೆಯುತ್ತವೆ. ಬಹುಶಃ ಈ ತಂದೆ ಮಕ್ಕಳ ಹುಚ್ಚಾಟಗಳು ಅವರ ದುರಹಂಕಾರದ ಪ್ರತೀಕವೇ ಇರಬೇಕು. ಇಷ್ಟೆಲ್ಲ ತಿಳುವಳಿಕೆ, ಜಾಗೃತ ವ್ಯವಸ್ಥೆ, ವಯಸ್ಸು, ಎಲ್ಲಾ ಆದ ನಂತರವೂ ಈ ರೀತಿಯ ದುಷ್ಕೃತ್ಯಗಳಿಗೆ ಕೈ ಹಾಕುವ ಮನಸ್ಸು ಹೇಗೆ ಬರುತ್ತದೆ, ನನಗಂತೂ ತುಂಬಾ ಆಶ್ಚರ್ಯವಾಗುತ್ತದೆ……

ಮನುಷ್ಯನ ಆಸೆಗಳಿಗೆ ಒಂದು ಮಿತಿ ಇರುತ್ತದೆ. ಕೆಲವರು ಅತಿರೇಕಕ್ಕೆ ಹೋಗಿ ಅದರ ಪರಿಣಾಮಗಳನ್ನು ಗಮನಿಸದೆ ತಮ್ಮ ತೆವಲುಗಳನ್ನು ತೀರಿಸಿಕೊಳ್ಳುತ್ತಾರೆ. ಆದರೆ ಇದು ಅದೆಲ್ಲವನ್ನು ಮೀರಿದ್ದು. ಇವರಿಂದ ಈ ರಾಜ್ಯ, ಈ ದೇಶ ಈ ಸಮಾಜದ ರಕ್ಷಣೆ ಹೇಗೆ ಸಾಧ್ಯ…..

ಈಗ ಈ ಘಟನೆಯ ತನಿಖೆ, ಅಪರಾಧಿಗಳ ಬಂಧನ ಮತ್ತು ಶಿಕ್ಷೆಯ ಮೂಲಕ ಪೊಲೀಸ್ ವ್ಯವಸ್ಥೆ ಮತ್ತು ನ್ಯಾಯಾಂಗ ವ್ಯವಸ್ಥೆ ಒಂದು ಸಂದೇಶವನ್ನು ರಾಜ್ಯಕ್ಕೆ ಆ ಮೂಲಕ ದೇಶಕ್ಕೆ ನೀಡಬೇಕಾಗುತ್ತದೆ. ಮಹಿಳೆಯರ ಮೇಲಿನ ಈ ರೀತಿಯ ದೌರ್ಜನ್ಯಗಳು ಯಾವುದೇ ಸಂದರ್ಭದಲ್ಲಿ, ಯಾವುದೇ ಪರಿಸ್ಥಿತಿಯಲ್ಲಿ, ಎಷ್ಟೇ ಅಸಹಾಯಕರಾಗಿದ್ದಾಗಲೂ, ಶೋಷಕರು ಎಷ್ಟೇ ಪ್ರಬಲವಾಗಿದ್ದರೂ, ಇದರಿಂದ ಮಾತ್ರ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಅವರಿಗೆ ಶಿಕ್ಷೆಯಾಗುತ್ತದೆ ಎಂದು ಸ್ಪಷ್ಟವಾಗಿ ತನ್ನ ಕ್ರಿಯೆಯ ಮೂಲಕ ಸಂದೇಶ ನೀಡಬೇಕು……

ಹಾಗೆಯೇ ಸಮಾಜದ ಎಲ್ಲ ಸಂವೇದನಾಶೀಲ ಮನಸ್ಸುಗಳು ಇಡೀ ಸಮಾಜಕ್ಕೆ ಈ ರೀತಿಯ ದುಷ್ಕೃತ್ಯಗಳನ್ನು ಸಹಿಸುವುದಿಲ್ಲ ಎಂಬುದನ್ನು ಸಾರಿ ಸಾರಿ ಹೇಳಬೇಕಿದೆ. ಯಾವ ಕಾರಣಕ್ಕೂ ಯಾವುದೇ ಮುಲಾಜಿಗೆ ಒಳಗಾಗದೆ ಈ ವಿಷಯದಲ್ಲಿ ಕಠಿಣ ಕ್ರಮಗಳನ್ನು ಕೈಗೊಳ್ಳಲೇಬೇಕು. ಇದು ಕೇವಲ ಮಹಿಳೆಯರು ಮಾತ್ರ ಪ್ರತಿಭಟಿಸಬೇಕಾದ ವಿಷಯವಲ್ಲ. ಪುರುಷರು ಸ್ವ ಇಚ್ಛೆಯಿಂದ ಭಾಗವಹಿಸಬೇಕು. ಏಕೆಂದರೆ ಇದು ಅತ್ಯಂತ ಅಸಹಜ ವಾತಾವರಣದ ಸಮಾಜವನ್ನು ಸೃಷ್ಟಿಸುತ್ತದೆ. ಇದು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಕೌಟುಂಬಿಕ ವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ದುಡಿಯುವ ಮಹಿಳೆಯರ ಮೇಲೆ ಕೆಟ್ಟ ಭಾವನೆ ಮೂಡಿಸುತ್ತದೆ…..

ಆದ್ದರಿಂದ ಈ 2024ರ ಆಧುನಿಕ ಸಮಾಜದಲ್ಲಿ ಪುರುಷ ಮತ್ತು ಮಹಿಳೆಯರ ಸ್ವಾತಂತ್ರ್ಯ, ಸಮಾನತೆ ಸಮ ಪ್ರಮಾಣದಲ್ಲಿ ಹಂಚಿಕೆಯಾಗುತ್ತಿರುವಾಗ, ಬಹುತೇಕ ಭಾರತೀಯ ಸಮಾಜದ ಜನ ಲೈಂಗಿಕ ವಿಷಯದಲ್ಲಿ ಮಡಿವಂತಿಕೆಯ ಕಾರಣಕ್ಕೋ, ಧಾರ್ಮಿಕ ಕಾರಣಕ್ಕೋ, ಆಧ್ಯಾತ್ಮಿಕ ಕಾರಣಕ್ಕೋ, ಅತ್ಯಂತ ಭಾವನಾತ್ಮಕ ಮನಸ್ಥಿತಿ ಹೊಂದಿ ಸಭ್ಯವಾಗಿ ನಡೆದುಕೊಳ್ಳುವುದು ಪ್ರಾಯೋಗಿಕವಾಗಿ ಆಚರಣೆಯಲ್ಲಿರುವಾಗ, ಕೆಲವೇ ಕೆಲವು ನೀಚರ ಈ ಕೃತ್ಯಗಳು ಸಮಾಜದ ಕ್ರಮಬದ್ಧತೆಗೆ ಮಾರಕವಾಗಬಾರದು……

ನನ್ನ ವೈಯಕ್ತಿಕ ಅನುಭವದಲ್ಲಿ ಹೇಳುವುದಾದರೆ, ಈ ವಿಷಯದಲ್ಲಿ ಶೇಕಡಾ 90% ಕ್ಕೂ ಹೆಚ್ಚು ಭಾರತೀಯರು ಸ್ವಲ್ಪ ಒಳ್ಳೆಯದು ಅಥವಾ ಸ್ವಲ್ಪ ಕೆಟ್ಟದ್ದು ಮಾಡಬಹುದು. ಆದರೆ ಈ ವಿಕೃತಗಳನ್ನು ಮಾಡಲು ಖಂಡಿತ ಹೆದರುತ್ತಾರೆ ಮತ್ತು ಆ ಮನೋಭಾವವನ್ನು ಹೊಂದಿರುವುದಿಲ್ಲ. ಆದ್ದರಿಂದ ಈ ಸದ್ಯ ಸಮಾಜವನ್ನು ಅದೇ ರೀತಿ ಉಳಿಸುವುದು ಬಹಳ ಮುಖ್ಯ. ವಿಕೃತ ಮನಸ್ಥಿತಿಯು ವಿಕೃತಿಯ ಕಾರಣಕ್ಕೆ ಬಂದರೆ ಅದು ಒಂದು ರೀತಿಯ ಅಪರಾಧ. ಕೆಲವು ಅಮಲು ಕ್ರಿಮಿನಲ್ ಗಳು ಇದರಲ್ಲಿ ಸೇರುತ್ತಾರೆ. ಆದರೆ ಹಣ, ಅಧಿಕಾರ ಅಂತಸ್ತಿನ ದುರಹಂಕಾರದಿಂದ ಮೂಡಿದರೆ ಅದು ಕ್ಷಮಿಸಲಾಗದ ಅಪರಾಧ. ಅವರಿಗೆ ಅತಿಹೆಚ್ಚು ಕಠಿಣ ಶಿಕ್ಷೆ ನೀಡಲೇಬೇಕಾಗುತ್ತದೆ. ಈಗ ಇದರಲ್ಲಿ ಭಾಗಿಯಾದರು ಆ ವಿಭಾಗಕ್ಕೆ ಸೇರಿದವರು…..

ಇಡೀ ಘಟನೆಯಲ್ಲಿ ಮಾಧ್ಯಮಗಳ ಪಕ್ಷಪಾತ ಮತ್ತು ನೈತಿಕ ಪ್ರಜ್ಞೆಯನ್ನು ಪ್ರಶ್ನಿಸುತ್ತಾ……

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!