Thursday, September 19, 2024

ಪ್ರಾಯೋಗಿಕ ಆವೃತ್ತಿ

ಸಹಕಾರಿ ಬಂಧುಗಳಿಗೆ ಅನ್ಯಾಯವಾಗಲು ಬಿಡಲ್ಲ : ಅಮಿತ್ ಶಾ

ದೇಶದಲ್ಲಿ ಸಹಕಾರಿಗಳಿಗೆ, ಸಹಕಾರ ಸಂಘಗಳ ಸದಸ್ಯರಿಗೆ ಹಾಗೂ ರೈತರಿಗೆ ಯಾವುದೇ ಕಾರಣಕ್ಕೂ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಕೇಂದ್ರದ ಗೃಹ ಹಾಗೂ ಸಹಕಾರ ಸಚಿವ ಅಮಿತ್ ಶಾ ಭರವಸೆ ನೀಡಿದರು.

ಮದ್ದೂರು ತಾಲ್ಲೂಕಿನ ಗೆಜ್ಜಲಗೆರೆಯಲ್ಲಿ ನೂತನ ಮೆಗಾ ಡೈರಿಯನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದ ಅವರು, ಇಂದು ಒಟ್ಟು 260 ಕೋಟಿ ರೂ.ವೆಚ್ಚದಲ್ಲಿ ಮೆಗಾ ಡೈರಿಯನ್ನು ಸ್ಥಾಪಿಸಲಾಗಿದೆ. ಇದರಿಂದ ದಿನಕ್ಕೆ 10 ಲಕ್ಷ ಲೀಟರ್ ಹಾಲು ಸಂಸ್ಕರಣೆ ಮಾಡಿ, ಪ್ಯಾಕ್ ಮಾಡಲು ಸಾಧ್ಯವಾಗಲಿದೆ. ಮುಂದಿನ ದಿನಗಳಲ್ಲಿ ಇದರ ಸಾಮರ್ಥ್ಯವನ್ನು 14 ಲಕ್ಷ ಲೀಟರ್ ಗೆ ಏರಿಸುವ ಉದ್ಧೇಶವಿದೆ ಎಂದು ನುಡಿದರು.

ಮಂಡ್ಯ ಜಿಲ್ಲೆಯಲ್ಲಿ 22 ಸಾವಿರ ರೈತರು ಪ್ರತಿ ತಿಂಗಳು ಹಾಲು ಉತ್ಪಾದಕರ ಸಂಘಗಳಿಂದ ಹಣ ಪಡೆಯುತ್ತಿದ್ದಾರೆ, ಈ ಹಣವನ್ನು ಬ್ಯಾಂಕುಗಳ ಮೂಲಕ ನೇರವಾಗಿ ರೈತರ ಖಾತೆಗಳಿಗೆ ಹಾಕಲಾಗುತ್ತಿದೆ. ಪ್ರತಿ ತಿಂಗಳು ಈ ಭಾಗದ 16 ಜಿಲ್ಲೆಗಳ 26 ಲಕ್ಷ ಹಾಲು ಉತ್ಪಾದಕರಿಗೆ, ಸುಮಾರು 28 ಕೋಟಿ  ರೂ.ಹಣವನ್ನು ವರ್ಗಾವಣೆ ಮಾಡಲಾಗುತ್ತಿದೆ ಎಂದರು.

ಸಹಕಾರಿ ಕ್ಷೇತ್ರವು 1972 ರಿಂದ 2022ರವರೆಗಿನ ಅವದಿಯಲ್ಲಿ ಗಮನಾರ್ಹವಾದ ಬದಲಾವಣೆ ಕಂಡಿದೆ. ಈ ಕ್ಷೇತ್ರದ ವಹಿವಾಟಿನಲ್ಲಿ 100 ರೂ.ವ್ಯವಹಾರ ನಡೆದರೆ, ಇದರಲ್ಲಿ 80 ರೂ.ಗಳಷ್ಟು ನೇರವಾಗಿ ರೈತನಿಗೆ ಲಾಭವಾಗುತ್ತಿದೆ. ಇಂತಹ ಮೆಗಾ ಡೈರಿಗಳಿಂದ ರೈತರ ಬದುಕಿನಲ್ಲಿ ಉತ್ತಮ ಬದಲಾವಣೆಗಳಾಗಿವೆ ಎಂದು ಹೇಳಿದರು.

ಮುಂದಿನ ದಿನಗಳಲ್ಲಿ ಪ್ರತಿ ಪಂಚಾಯಿತಿ ಮಟ್ಟದಲ್ಲಿ ಪ್ರೈಮರಿ ಡೈರಿಗಳನ್ನು ಸ್ಥಾಪಿಸುವುದು ನಮ್ಮ ಉದ್ದೇಶವಾಗಿದೆ. ನಾನು ರಾಜ್ಯ ಸರ್ಕಾರಕ್ಕೆ ಧನ್ಯವಾದ ಸಲ್ಲಿಸಲು ಬಯಸುತ್ತೇನೆ, ಸರ್ಕಾರವು ಪ್ರತಿ ತಿಂಗಳು 1250 ಕೋಟಿ ರೂ.ಗಳಷ್ಟು ಹಣವನ್ನು, ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡುವ ಕೆಲಸ ಮಾಡುತ್ತಿದೆ. ಕ್ಷೀರಭಾಗ್ಯ ಯೋಜನೆಯಡಿ 55 ಲಕ್ಷ ಲೀ. ಹಾಲನ್ನು ಸುಮಾರು 64 ಲಕ್ಷ ಮಕ್ಕಳಿಗೆ ವಿತರಣೆ ಮಾಡಲಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ಆದಿಚುಂಚನಗಿರಿ ಪೀಠಾಧ್ಯಕ್ಷ ನಿರ್ಮಲಾನಂದಸ್ವಾಮೀಜಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ ಜೋಷಿ, ಸಚಿವರಾದ ಎಸ್ ಟಿ ಸೋಮಶೇಖರ್, ಕೆ ಗೋಪಾಲಯ್ಯ, ನಾರಾಯಣ ಗೌಡ, ಶಾಸಕರಾದ ಸಿ.ಎಸ್.ಪುಟ್ಟರಾಜು, ಡಿ.ಸಿ.ತಮ್ಮಣ್ಣ, ಸುರೇಶ್ ಗೌಡ, ವಿಧಾನ ಪರಿಷತ್ ಸದಸ್ಯ ಮಧು ಮಾದೇಗೌಡ, ಮನ್ಮುಲ್ ಅಧ್ಯಕ್ಷ ಬಿ.ಆರ್.ರಾಮಚಂದ್ರು, ಉಪಾಧ್ಯಕ್ಷ ರಘುನಂದನ್, ವ್ಯವಸ್ಥಾಪಕ ನಿರ್ದೇಶಕ ಡಾ.ಮಂಜೇಶ್, ನಿರ್ದೇಶಕರಾದ ಎಚ್.ಟಿ.ಮಂಜು, ಡಾಲು ರವಿ, ಶಿವಕುಮಾರ್, ನೆಲ್ಲಿಗೆರೆ ಬಾಲು,ಎಸ್.ಪಿ.ಸ್ವಾಮಿ ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!