Thursday, September 19, 2024

ಪ್ರಾಯೋಗಿಕ ಆವೃತ್ತಿ

ಸತ್ವ ಕಾವೇರಿ ಸಿರಿ ನಿವೇಶನ ಹಂಚಿಕೆ ವಿಳಂಬ| ನ್ಯಾಯಾಲಯದ ಮೆಟ್ಟಿಲೇರಿದ ಗ್ರಾಹಕನ ಹಣ ತರಾತುರಿಯಲ್ಲಿ ವಾಪಸ್

ಮಂಡ್ಯದ ಅಸಿಟೆಟ್ ಫ್ಯಾಕ್ಟರಿಯ ಬಳಿ ನಿರ್ಮಾಣವಾಗಿರುವ ‘ಸತ್ವ ಕಾವೇರಿ ಸಿರಿ’ ಎಂಬ ಹೆಸರಿನಲ್ಲಿ ಅಭಿವೃದ್ಧಿಪಡಿಸಿರುವ ಚಿನ್ನಮಸ್ತ ಪ್ರಾಪರ್ಟೀಸ್ ರವರ ಬಡಾವಣೆಯಲ್ಲಿ ನಿವೇಶನ ಹಂಚಿಕೆ ವಿಳಂಬವಾಗಿರುವುದರ ವಿರುದ್ದ ಮಂಡ್ಯ ಜಿಲ್ಲಾ ಗ್ರಾಹಕರ ವೇದಿಕೆಯ ಮೆಟ್ಟಿಲೇರಿದ ವ್ಯಕ್ತಿಯೊಬ್ಬರ ಹಣವನ್ನು ಚಿನ್ನಮಸ್ತ ಪ್ರಾಪರ್ಟೀಸ್ ತರಾತುರಿಯಲ್ಲಿ ಹಿಂದಿರುಗಿಸಿದೆ.

ನಿವೇಶನಕ್ಕಾಗಿ ಹಣ ಕಟ್ಟಿದ್ದ ವಕೀಲರೂ ಆಗಿರುವ ರಾಜಗೋಪಾಲ್ ಎಂ.ಸಿ ಅವರು ನ್ಯಾಯವಾದಿ ಬಿ.ಟಿ.ವಿಶ್ವನಾಥ್ ಅವರ ಮೂಲಕ ಮಂಡ್ಯ ಜಿಲ್ಲಾ ಗ್ರಾಹಕರ ವೇದಿಕೆಯಲ್ಲಿ ದೂರು ದಾಖಲಿಸಿದ್ದರು. ನಿವೇಶನ ಕೊಳ್ಳಲು ಹಣ ಕಟ್ಟಿದ ಗ್ರಾಹಕರಿಗೆ 1 ವರ್ಷವಾದರೂ ನಿವೇಶನ ನೀಡದೇ, ಅವರು ಕಟ್ಟಿದ ಹಣವನ್ನು ಹಿಂತಿರುಗಿಸದೆ ಸತಾಯಿಸುತ್ತಿರುವ ಬಗ್ಗೆ ಅರ್ಜಿದಾರ ರಾಜಗೋಪಾಲ್ ಎಂ.ಸಿ ಅವರು, ತಮ್ಮ ಹಣ ಹಿಂದಿರುಗಿಸಲು ಮತ್ತು ಪರಿಹಾರವಾಗಿ 2 ಲಕ್ಷ ರೂಪಾಯಿಗಳನ್ನು ನೀಡಲು ಆದೇಶ ಮಾಡುವಂತೆ ನ್ಯಾಯಾಲಯದ ಮೆಟ್ಟಿಲೇರಿದ್ದರು. ಅನಂತರ ಚಿನ್ನಮಸ್ತ ಕಂಪನಿಗೆ ಗ್ರಾಹಕರ ನ್ಯಾಯಾಲಯ ನೋಟೀಸ್ ಜಾರಿ ಮಾಡಿತ್ತು. ನೋಟೀಸ್ ಜಾರಿಯ ಬೆನ್ನಲ್ಲೇ ನ್ಯಾಯಾಲಯಕ್ಕೆ ಹಾಜರಾದ ಕಂಪನಿಯು ತರಾತುರಿಯಲ್ಲಿ ಅರ್ಜಿದಾರ ಎಂ.ಸಿ ರಾಜಗೋಪಾಲ್ ಕಟ್ಟಿದ ಪೂರ್ಣ ಹಣ 1,51,235 ರೂಪಾಯಿಗಳನ್ನು ಚೆಕ್ ರೂಪದಲ್ಲಿ ಹಿಂದಿರುಗಿಸಿದೆ.

ನ್ಯಾಯಾಲಯದ ವೆಚ್ಚಗಳನ್ನು ಮತ್ತು ತಮಗಾದ ನಷ್ಟ ಹಿಂಸೆಗೆ ಕೇಳಿದ ಪರಿಹಾರದ ಪೈಕಿ ಮತ್ತಷ್ಟು ಹಣವನ್ನು ಚಿನ್ನಮಸ್ತ ಕಂಪನಿಯು ಪಾವತಿಸಬೇಕಿದೆ ಎಂದು ಅರ್ಜಿದಾರರು ಕೋರಿದ್ದು, ಇದರ ವಿಚಾರಣೆಯು ಇದೇ ಆಗಸ್ಟ್ 14ರಂದು ಮತ್ತೇ ನಡೆಯಲಿದೆ. ಅರ್ಜಿದಾರರ ಪರ ನ್ಯಾಯವಾದಿ ಬಿ.ಟಿ ವಿಶ್ವನಾಥ್ ಹಾಗೂ ವಕೀಲರಾದ ಪಲ್ಲವಿ ಅವರು ವಾದ ಮಂಡಿಸಿದ್ದರು.

ಈ ಪ್ರಕರಣದಲ್ಲಿ ನೊಂದ ಗ್ರಾಹಕರಂತೂ ಸತ್ವ ಕಾವೇರಿ ಸಿರಿ ಕಚೇರಿಗೆ ನಿವೇಶನ ಅಥವಾ ಕಟ್ಟಿದ ಹಣ ವಾಪಸು ಮಾಡಲು ಕೋರಿ ಅಲೆದಲೆದು ಸುಸ್ತಾಗಿದ್ದರು. ಸದ್ಯಕ್ಕೆ ಕಂಪನಿ ನಿವೇಶನಕ್ಕಾಗಿ ಅವರು ಕಟ್ಟಿದ್ದ ಅಸಲು ಮೊತ್ತವನ್ನು ಕಂಪನಿಯು ವಾಪಸ್ಸು ಮಾಡಿದೆ ಎಂದು ನ್ಯಾಯವಾದಿ ಬಿ.ಟಿ.ವಿಶ್ವನಾಥ್ ( ಮೊ.9880979986) ಅವರು ನುಡಿಕರ್ನಾಟಕ.ಕಾಂ ಗೆ ಮಾಹಿತಿ ನೀಡಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!