Thursday, September 19, 2024

ಪ್ರಾಯೋಗಿಕ ಆವೃತ್ತಿ

ಸಾವಿನ ಮನೆಯಲ್ಲಿಯೂ ರಾಜಕಾರಣ ಮಾಡುವ ಬಿಜೆಪಿ ಬಗ್ಗೆ ಜನರಿಗೆ ಗೊತ್ತಾಗಿದೆ: ಮಧು ಬಂಗಾರಪ್ಪ

ಅಧಿಕಾರಕ್ಕಾಗಿ ಸಾವಿನ ಮನೆಯಲ್ಲಿಯೂ ರಾಜಕಾರಣ ಮಾಡುವ ಬಿಜೆಪಿಯವರ ಸ್ವಾರ್ಥದ ಬಗ್ಗೆ ಜನರಿಗೆ ಗೊತ್ತಾಗಿದ್ದು, ಹಿಂದುತ್ವ ನಿಧಾನವಾಗಿ ನೆಲಕ್ಕೆ ಕುಸಿಯುತ್ತಿದೆ ಎಂದು ಕಾಂಗ್ರೆಸ್ ಪಕ್ಷದ ಹಿಂದುಳಿದ ವರ್ಗಗಳ ರಾಜ್ಯಾಧ್ಯಕ್ಷ ಮಧು ಬಂಗಾರಪ್ಪ ತಿಳಿಸಿದರು.

ಮಂಡ್ಯ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರ್ ಹತ್ಯೆಯಾದ ಸಂದರ್ಭದಲ್ಲಿ ಅಲ್ಲಿಗೆ ಭೇಟಿ ನೀಡಿದ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಕಾರನ್ನು ಪಂಚರ್ ಮಾಡಿ ಅವರ ಕಾರನ್ನು ಮಗುಚಿ ಹಾಕಲು ಹೊರಟಿದ್ದು ಸಂಘ ಪರಿವಾರದ ಯುವಕರೇ ಹೊರತು ಇನ್ಯಾರು ಅಲ್ಲ. ಪರೇಶ್ ಮೇಸ್ತ ಎಂಬ ಯುವಕನ ಸಾವನ್ನು ತಮ್ಮ ಸ್ವಾರ್ಥ ರಾಜಕಾರಣಕ್ಕೆ ಬಳಸಿಕೊಂಡ ಬಿಜೆಪಿಗರ ವಿರುದ್ಧ ಕರಾವಳಿ ಮತ್ತು ಶಿವಮೊಗ್ಗ ಭಾಗದ ಜನರಿಗೆ ಗೊತ್ತಾಗಿದೆ. ಇಂದು ಈ ಭಾಗದಲ್ಲಿ ಹಿಂದುತ್ವ ಪರಿಕಲ್ಪನೆ ನಿಧಾನವಾಗಿ ನೆಲಕ್ಕೆ ಕುಸಿಯುತ್ತಿದೆ ಎಂದರು.

ಬಿಜೆಪಿಗರು ಪರೇಶ್ ಮೇಸ್ತ ಸಾವನ್ನು ಮುಂದಿಟ್ಟುಕೊಂಡು ಕರಾವಳಿ ಮತ್ತು ಶಿವಮೊಗ್ಗ ಭಾಗದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಸೀಟುಗಳನ್ನು ಗೆದ್ದುಕೊಂಡರು. ಅಧಿಕಾರಕ್ಕೆ ಬಂದ ಅವರು ಪರೇಶ್ ಮೇಸ್ತಾ ಕುಟುಂಬಕ್ಕೆ ಏನೂ ಮಾಡಲಿಲ್ಲ. ಸಾವಾಗಿರುವ ಮನೆಯಲ್ಲಿ ಅಸಾಧ್ಯವಾದ ನೋವಿದ್ದರೂ ಕೂಡ ಸ್ವಾರ್ಥಕ್ಕಾಗಿ ಬಳಸಿಕೊಂಡರು. ಪರೇಶ್ ಮೇಸ್ತ ಸಾವು ಸಹಜ ಎಂದು ಸಿಬಿಐ ಹೇಳಿದೆ. ಅಂದರೆ ಬಿಜೆಪಿ ನಾಯಕರು ಅಧಿಕಾರಕ್ಕಾಗಿ ಪರೇಶ್ ಮೇಸ್ತ ಸಾವನ್ನು ಸ್ವಾರ್ಥಕ್ಕಾಗಿ ಬಳಸಿಕೊಂಡ ಬಗ್ಗೆ ಜನರಿಗೂ ಗೊತ್ತಾಗಿದೆ ಎಂದರು.

ಕಾಂಗ್ರೆಸ್ ಪಕ್ಷದ ಸಂಘಟನೆ ಉದ್ದೇಶದಿಂದ ಡಿಸೆಂಬರ್ ತಿಂಗಳಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಹಿಂದುಳಿದ ವರ್ಗದ ಸಮಾವೇಶ ಮಾಡಲಾಗುವುದು ಎಂದರು.

ಸಮುದಾಯವನ್ನು ಆರ್ಥಿಕವಾಗಿ, ಸಾಮಾಜಿಕವಾಗಿ ಹಾಗೂ ರಾಜಕೀಯವಾಗಿ ಮುಂಚೂಣಿಗೆ ತರುವ ನಿಟ್ಟಿನಲ್ಲಿ ರಾಜ್ಯದಾದ್ಯಂತ ಪ್ರವಾಸ ಮಾಡಿ ಪಕ್ಷ ಸಂಘಟಿಸುವ ಕೆಲಸಕ್ಕೆ ಮುಂದಾಗಿದ್ದೇನೆ.
ಕಾಂಗ್ರೆಸ್ ಪ್ರಣಾಳಿಕೆಯ ಉಪಾಧ್ಯಕ್ಷನಾಗಿ ನನ್ನನ್ನು ಕಾಂಗ್ರೆಸ್ ಪಕ್ಷ ನೇಮಿಸಿದ್ದು, ಪ್ರಣಾಳಿಕೆಯ ಸಿದ್ದತೆಗಳು ನಡೆಯುತ್ತಿವೆ. ಅದರಲ್ಲಿ ಹಿಂದುಳಿದ ವರ್ಗಗಳಿಗೆ ಅನುಕೂಲ ಕಲ್ಪಿಸುವ ಯೋಜನೆಗಳನ್ನು ಸೇರಿಸಲಾಗಿದೆ ಎಂದರು.

ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಜನ-ಸಾಮಾನ್ಯರಿಗೆ ಅನುಕೂಲವಾಗುವಂತಹ ಯೋಜನೆಗಳನ್ನು ಜಾರಿಗೆ ತಂದಿತ್ತು. ಡಬಲ್ ಎಂಜಿನ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರೈತರ ರಸಗೊಬ್ಬರದ ಬೆಲೆ 1800 ರೂ ಆಯ್ತು,ಗ್ಯಾಸ್ ಬೆಲೆ 1100 ರೂ.ಆಯ್ತು. ಪ್ರತಿಮೆ ನಿರ್ಮಾಣ ಮಾಡುವುದೇ ದೊಡ್ಡ ಸಾಧನೆ ಎಂದು ಬಿಜೆಪಿ ಭಾವಿಸಿದೆ. ಬಿಜೆಪಿಗೆ ಬಡವರ ಬಗ್ಗೆ ಚಿಂತನೆ ಇಲ್ಲ. ಸುಳ್ಳು ಹೇಳಿ ಅಧಿಕಾರಕ್ಕೆ ಬಂದು ಜನತೆಗೆ ಏನು ಮಾಡಿದೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಗೆ ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದ್ದು, ಇದರಿಂದ ಪಕ್ಷಕ್ಕೆ ಶಕ್ತಿ ಬಂದಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಎಂ.ಎಸ್.ಆತ್ಮಾನಂದ, ಪಕ್ಷದ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಅಂಜನಾ ಶ್ರೀಕಾಂತ್, ಹಾಲಹಳ್ಳಿ ರಾಮಲಿಂಗಯ್ಯ, ಸುಂಡಹಳ್ಳಿ ಮಂಜುನಾಥ್ ಹಾಗೂ ನಾಗರಾಜ್ ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!