ಸರ್ಕಾರದಿಂದ ನೀಡುವ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ಜನಸಾಮಾನ್ಯರಿಗೆ ತಲುಪಿಸಿದರೆ ಅವರು ಲೋಕಾಯುಕ್ತ ಅಥವಾ ನ್ಯಾಯಾಲಕ್ಕೆ ಬರುವುದು ತಪ್ಪುತ್ತದೆ ಎಂದು ಉಪ ಲೋಕಾಯುಕ್ತರಾದ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಅಭಿಪ್ರಾಯ ವ್ಯಕ್ತಪಡಿಸಿದರು.
ಮಂಡ್ಯದ ಜಿ.ಪಂ.ನ ಕಾವೇರಿ ಸಭಾಂಗಣದಲ್ಲಿ ಜಿಲ್ಲೆಯ ವಿವಿಧ ಇಲಾಖೆಗಳ ಅಧಿಕಾರಿಗಳ ಜೊತೆ ಸಭೆ ನಡೆಸಿದರು.
ಸರ್ಕಾರವು ಬಡಜನರು, ಆರ್ಥಿಕವಾಗಿ ಹಿಂದುಳಿದವರು, ವಿಕಲಚೇತನರು, ವಿದ್ಯಾರ್ಥಿಗಳು, ಸಂತ್ರಸ್ತರು ಸೇರಿದಂತೆ ಸಾರ್ವಜನಿಕರಿಗೆ ವಿವಿಧ ಯೋಜನೆಗಳು ರೂಪಿಸುತ್ತದೆ. ಸಾರ್ವಜನಿಕರಿಗೆ ನೀಡಲಾಗುವ ಸೌಲಭ್ಯಗಳು ಸರಿಯಾದ ಸಮಯಕ್ಕೆ ತಲುಪಬೇಕು. ಇಲ್ಲವಾದಲ್ಲಿ ಅವರು ತೊಂದರೆಗಳಿಗೆ ಒಳಗಾಗುತ್ತಾರೆ. ಇದನ್ನು ಪರಿಹರಿಸಿಕೊಳ್ಳಲು ನ್ಯಾಯಾಲಯ, ಲೋಕಾಯುಕ್ತ ಅಥವಾ ಇನ್ನಿತರೆ ಸಂಸ್ಥೆಗಳನ್ನು ಹುಡುಕಿ ದೂರು ಸಲ್ಲಿಸುತ್ತಾರೆ. ಹಾಗಾಗದಂತೆ ನೋಡಿಕೊಳ್ಳಿ ಎಂದು ಸಲಹೆ ನೀಡಿದರು.
ಸರ್ಕಾರಿ ಕೆಲಸದಲ್ಲಿ ಸಮಯಪ್ರಜ್ಞೆ ಹಾಗೂ ಪ್ರಾಮಾಣಿಕತೆ ಅತಿ ಮುಖ್ಯ. ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ತಮ್ಮ ಕಾರ್ಯನಿರ್ವಹಣೆಯಲ್ಲಿ ಸಮಯಪ್ರಜ್ಞೆ ಹಾಗೂ ಪ್ರಾಮಾಣಿಕತೆಯನ್ನು ಅಳವಡಿಸಿಕೊಳ್ಳಬೇಕು, ಆಗ ಮಾತ್ರ ಉತ್ತಮ ಆಡಳಿತ ನೀಡಲು ಸಾಧ್ಯ ಎಂದರು.
ಅಧಿಕಾರಿಗಳು ತಾವು ಮಾಡುವ ಕೆಲಸ ಹಾಗೂ ಆತ್ಮ ಸಾಕ್ಷಿಯನ್ನು ಗೌರವಿಸಿ, ಅಧಿಕಾರದ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ನೀಡಬಹುದಾದ ಸೌಲಭ್ಯಗಳನ್ನು ಪಾರದರ್ಶಕವಾಗಿ ನಿಗದಿಪಡಿಸಿರುವ ಸಮಯದಲ್ಲಿ ಒದಗಿಸಿ. ನಿಧಾನಗತಿಯಲ್ಲಿ ನೀಡಿದ ನ್ಯಾಯ ನ್ಯಾಯವೇ ಅಲ್ಲ ಎಂದರು.
ಲೋಕಾಯುಕ್ತಕ್ಕೆ ಅರ್ಜಿ ಬಂದ ತಕ್ಷಣ ಅದನ್ನು ಪ್ರಾಥಮಿಕವಾಗಿ ಪರಿಶೀಲಿಸಿ ಸಂಬಂಧಿಸಿದ ಅಧಿಕಾರಿಗೆ ನೊಟೀಸ್ ಜಾರಿ ಮಾಡಲಾಗುವುದು. ನೋಟೀಸ್ ಜಾರಿಯಾದ ತಕ್ಷಣವೇ ಕೆಲವೇ ದಿನಗಳಲ್ಲಿ ಅಧಿಕಾರಿಗಳು ಅದನ್ನು ಪರಿಹರಿಸುತ್ತಾರೆ. ಕೆಲವು ದೂರುಗಳಲ್ಲಿ ಹೆಚ್ಚಿನ ಪರಿಶೀಲನೆಯ ಅವಶ್ಯಕತೆ ಇರುತ್ತದೆ ಅದನ್ನು ಲೋಕಾಯುಕ್ತ ಪೊಲೀಸರು ಪರಿಶೀಲಿಸಿ ವರದಿ ನೀಡಿದ ನಂತರ ದೂರುದಾರರು ಹಾಗೂ ಅಧಿಕಾರಿಗಳಿಗೆ ವಾದ ಮಂಡಿಸಲು ಅವಕಾಶ ನೀಡಿ ನಂತರ ತೀರ್ಮಾನ ಕೈಗೊಂಡು ಸರ್ಕಾರಕ್ಕೆ ವರದಿ ನೀಡಲಾಗುವುದು ಎಂದರು.
ಜೂನ್ 4 ರಂದು ಜಿಲ್ಲೆಯಲ್ಲಿ ಸ್ವೀಕರಿಸಿರುವ ದೂರುಗಳನ್ನು ಇಲಾಖಾ ಮುಖ್ಯಸ್ಥರಿಗೆ ಇಂದೇ ನೀಡಲಾಗುವುದು. ಸ್ವೀಕರಿಸಿದ ಅರ್ಜಿಗಳಲ್ಲಿ ಅಧಿಕಾರಿಗಳು ತಮ್ಮ ಹಂತದಲ್ಲೇ ಸೌಲಭ್ಯ ಒದಗಿಸಿಕೊಡುವ ದೂರುಗಳಿವೆ. ಅಧಿಕಾರಿಗಳು ದೂರಿಗೆ ಸಂಬಂಧಿಸಿದಂತೆ ಕಾಲಾವಕಾಶ ನೀಡಿ ದೂರನ್ನು ತಮ್ಮ ಹಂತದಲ್ಲೇ ಪರಿಹರಿಸಿ ವರದಿ ನೀಡಬೇಕೆಂದು ಸಲಹೆ ನೀಡಿದರು.
ಹಕ್ಕು ಮತ್ತು ಕರ್ತವ್ಯ ಒಂದೇ ನಾಣ್ಯದ ಎರಡು ಮುಖಗಳು. ಸಾರ್ವಜನಿಕರ ಹಕ್ಕಿನ ಉಲ್ಲಂಘನೆಯಾದರೆ ಅಧಿಕಾರಿ ಮತ್ತು ಸಿಬ್ಬಂದಿಯ ಕರ್ತವ್ಯದ ಲೋಪವಾಗಿದೆ ಎಂದು ಅರ್ಥ. ಕಚೇರಿಗಳಿಗೆ ಬರುವ ಅರ್ಜಿಯನ್ನು ಕುಲಂಕೂಷವಾಗಿ ಪರಿಶೀಲಿಸಿ ನ್ಯಾಯಬದ್ಧವಾದ ಪ್ರಕ್ರಿಯೆ ಅನುಸರಿಸಿ ನಿಗದಿಪಡಿಸಿದ ಸಮಯದಲ್ಲಿ ಅರ್ಜಿ ವಿಲೇವಾರಿ ಮಾಡಿ ಎಂದರು.
ಲೋಕಾಯುಕ್ತ ಸಂಸ್ಥೆಯು ನಿಯಮಾನುಸಾರವಾಗಿ ಕಾರ್ಯನಿರ್ವಹಿಸುತ್ತದೆ. ಹಾಗಾಗಿ ಲೋಕಾಯುಕ್ತ ಸಂಸ್ಥೆಗೆ ಇರುವಂತಹ ಶಕ್ತಿಯನ್ನು ಅರಿತುಕೊಂಡು ಅಧಿಕಾರಿಗಳು ಜವಾಬ್ದಾರಿಯುತವಾಗಿ ಸಾರ್ವಜನಿಕರ ಕುಂದುಕೊರತೆ ಕೇಳಿ ಪರಿಹರಿಸಲು ಕ್ರಮವಹಿಸಿ ಎಂದರು.
ಇದೇ ವೇಳೆ ಜಿಲ್ಲಾಧಿಕಾರಿ ಎಸ್.ಅಶ್ವತಿ ಅವರು ಮಾತನಾಡಿ, ಸರ್ಕಾರಿ ಕೆಲಸಗಳು ದೀನ, ದಲಿತರು, ಶೋಷಿತರು, ಹಿಂದುಳಿದ ವರ್ಗದವರ ಸಬಲೀಕರಣಕ್ಕೆ ಪೂರಕವಾಗಿರಬೇಕು. ಅಧಿಕಾರಿಗಳು/ ಸಿಬ್ಬಂದಿಗಳು ಗುಣಮಟ್ಟದ ಕೆಲಸಗಳನ್ನು ಮಾಡಿ, ಪ್ರಾಮಾಣಿಕತೆ ಮತ್ತು ನಿಷ್ಠೆಯನ್ನು ಅಳವಡಿಸಿಕೊಳ್ಳಿ ಎಂದರು.
ಸಭೆಯಲ್ಲಿ ಬೆಂಗಳೂರು ಲೋಕಾಯುಕ್ತ ಅಪರ ನಿಬಂಧಕರಾದ ಸೋಮರಾಜು, ಲೋಕಾಯುಕ್ತ ಉಪನಿಬಂಧಕರಾದ ಚೆನ್ನಕೇಶವ ರೆಡ್ಡಿ, ಲೋಕಾಯುಕ್ತ ಪೊಲೀಸ್ ಅಧೀಕ್ಷಕರಾದ ಪುಟ್ಟ ಮಾದಯ್ಯ,ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿ.ಆರ್.ಜೆ. ದಿವ್ಯಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ಯತೀಶ್ ಹಾಗೂ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.