Thursday, September 19, 2024

ಪ್ರಾಯೋಗಿಕ ಆವೃತ್ತಿ

ಆರೋಗ್ಯವಿಮೆ- ಜೀವ ವಿಮೆ ಮೇಲಿನ GST ರದ್ದತಿಗೆ ಆಗ್ರಹ: ಇಂಡಿಯಾ ಒಕ್ಕೂಟ ಪ್ರತಿಭಟನೆ

ಆರೋಗ್ಯ ವಿಮೆ, ಜೀವ ವಿಮೆ ಮೇಲೆ ವಿಧಿಸಲಾಗಿರುವ ಜಿಎಸ್‌ಟಿ ತೆರಿಗೆಯನ್ನು ವಾಪಸ್‌ ಪಡೆಯಬೇಕೆಂದು ಆಗ್ರಹಿಸಿ ಪ್ರತಿಪಕ್ಷಗಳ ಇಂಡಿಯಾ ಒಕ್ಕೂಟದ ನಾಯಕರು ಸಂಸತ್ತಿನ ಹೊರಗೆ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ತೃಣಮೂಲ ಕಾಂಗ್ರೆಸ್‌ನ ರಾಜ್ಯಸಭೆಯ ಸದಸ್ಯ ಡೆರೆಕ್ ಓಬ್ರಿಯಾನ್ ನೇತೃತ್ವದ ನಾಯಕರು ಇದೇ ಬೇಡಿಕೆಯನ್ನು ಮುಂದಿಟ್ಟುಕೊಂಡು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಬಿಜೆಪಿಯ ಹಿರಿಯ ನಾಯಕ ಮತ್ತು ಕೇಂದ್ರ ಸಚಿವ ನಿತಿನ್ ಗಡ್ಕರಿ ಬರೆದ ಪತ್ರವನ್ನು ಉಲ್ಲೇಖಿಸಿದರು.

ಸೋಮವಾರ ರಾಜ್ಯಸಭೆಯ ಶೂನ್ಯ ವೇಳೆಯಲ್ಲಿ ಮಾತನಾಡಿದ ಓಬ್ರಿಯಾನ್, “ಬೇಡಿಕೆ ನೇರವಾಗಿದೆ. ವೈದ್ಯಕೀಯ ಮತ್ತು ಆರೋಗ್ಯ ವಿಮೆಯ ಮೇಲೆ ವಿಧಿಸಲಾಗಿರುವ ಶೇ. 18 ರಷ್ಟು ಜಿಎಸ್‌ಟಿ ತೆರಿಗೆಯನ್ನು ಕಡಿಮೆ ಮಾಡಬೇಕಿದೆ. ಏಕೆಂದರೆ ಇದು ಜನರಿಗೆ, ಮುಖ್ಯವಾಗಿ ಮಧ್ಯಮ ವರ್ಗದವರಿಗೆ ಹೊರೆಯಾಗುತ್ತಿರುವ ಸಮಸ್ಯೆಯಾಗಿದೆ ಎಂದರು.
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡ ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರ ಬರೆದಿದ್ದರು. ಇತ್ತೀಚಿನ ಬಜೆಟ್ ಚರ್ಚೆಯ ಸಂದರ್ಭದಲ್ಲಿ ಹಲವು ವಿರೋಧ ಪಕ್ಷದ ನಾಯಕರು ಸಂಸತ್ತಿನಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ್ದರು.

ವಿಶ್ವದ ಇತರ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದಲ್ಲಿ ಜಿಎಸ್‌ಟಿ ತೆರಿಗೆ ಪ್ರಮಾಣ ಅತ್ಯಂತ ಹೆಚ್ಚಾಗಿದೆ. ಇದಲ್ಲದೆ ಕೇಂದ್ರ ಸರ್ಕಾರ ರೂಪಿಸಿರುವ ವಿಮಾ ನೀತಿಯಲ್ಲೂ ಹೆಚ್ಚಿನ ಅಸಮತೋಲನವಿದೆ ಎಂದು ಪ್ರತಿಪಕ್ಷಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಜೀವ ಹಾಗೂ ವೈದ್ಯಕೀಯ ವಿಮಾ ಪ್ರೀಮಿಯಂ ಮೇಲಿನ ಜಿಎಸ್‌ಟಿ ಹಿಂದಕ್ಕೆ ಪಡೆಯಬೇಕು ಎನ್ನುವುದು ನೌಕರರ ಒಕ್ಕೂಟ ಮುಖ್ಯವಾಗಿ ಪ್ರಸ್ತಾಪಿಸಿದ ಸಂಗತಿ. ಜೀವ ವಿಮೆ ಹಾಗೂ ವೈದ್ಯಕೀಯ ವಿಮೆ ಪ್ರೀಮಿಯಂ ಎರಡಕ್ಕೂ ಶೇ 18ರ ಜಿಎಸ್‌ಟಿ ವಿಧಿಸಲಾಗುತ್ತಿದೆ. ಜೀವ ವಿಮೆ ಪ್ರೀಮಿಯಂ ಖಾತೆಗಳ ಮೇಲೆ ಜಿಎಸ್‌ಟಿ ವಿಧಿಸುವುದು, ಜೀವನದ ಅನಿಶ್ಚಿತತೆಗಳ ಮೇಲೆ ತೆರಿಗೆ ವಿಧಿಸಿದಂತೆ” ಎಂದು ನಿತಿನ್‌ ಗಡ್ಕರಿ ನಿರ್ಮಲಾ ಸೀತಾರಾಮನ್‌ ಅವರಿಗೆ ಬರೆದ ಪತ್ರದಲ್ಲಿ ಹೇಳಿದ್ದಾರೆ.

ಜೀವ ಹಾಗೂ ವೈದ್ಯಕೀಯ ವಿಮಾ ಪ್ರೀಮಿಯಂಗಳ ಮೇಲಿನ ಸರಕು ಹಾಗೂ ಸೇವಾ ತೆರಿಗೆಯನ್ನು ಶೇ 18ರಿಂದ ಶೇ 12ಕ್ಕೆ ಇಳಿಸುವಂತೆ ಜೀವ, ಜನರಲ್ ಮತ್ತು ಆರೋಗ್ಯ ವಿಮಾ ಉದ್ಯಮಗಳು ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತಿವೆ. ಆದರೆ ಜೀವ ಹಾಗೂ ಆರೋಗ್ಯ ವಿಮೆಗಳ ಪ್ರೀಮಿಯಂ ಮೇಲಿನ ಜಿಎಸ್‌ಟಿಯನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕು ಎಂದು ಗಡ್ಕರಿ ಪ್ರತಿಪಾದಿಸಿದ್ದಾರೆ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!