Friday, September 20, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಸಚಿವ ಶಿವಾನಂದ ಪಾಟೀಲ್ ವಜಾಕ್ಕೆ ಕಾವೇರಿ ಹೋರಾಟಗಾರರ ಆಗ್ರಹ

ರೈತ ಸಮುದಾಯವನ್ನು ಅವಮಾನಿ ಹೇಳಿಕೆ ನೀಡಿರುವ ಸಚಿವ ಶಿವಾನಂದ ಪಾಟೀಲ್ ರಾಜೀನಾಮೆಗೆ ಆಗ್ರಹಿಸಿ ಕಾವೇರಿ ಹೋರಾಟಗಾರರು ಕಣ್ಣು ಮತ್ತು ಬಾಯಿಗೆ ಕಪ್ಪುಪಟ್ಟಿ ಕಟ್ಟಿಕೊಂಡು ಮಂಗಳವಾರ ಮಂಡ್ಯದಲ್ಲಿ  ಪ್ರತಿಭಟನೆ ನಡೆಸಿದರು.

ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಮಂಡ್ಯನಗರದ ಸರ್ ಎಂ ವಿ ಪ್ರತಿಮೆ ಎದುರು ಕಾವೇರಿ ಹೋರಾಟಗಾರರು ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಸಚಿವ ಶಿವಾನಂದ ಪಾಟೀಲ್ ಭಾವಚಿತ್ರ ಸುಟ್ಟು ಆಕ್ರೋಶ ಹೊರ ಹಾಕಿದರು.

‘ಬರ ಪರಿಹಾರದ ಹಣಕ್ಕಾಗಿ ಬರಗಾಲ ಬರಲಿ ಎಂದು ರೈತರು ಕಾಯ್ತಾರೆ’ ಎಂದಿರುವ ಸಚಿವರು ರಾಜೀನಾಮೆ ನೀಡಬೇಕು, ಇಲ್ಲದಿದ್ದರೆ ಮುಖ್ಯಮಂತ್ರಿ ಸಂಪುಟದಿಂದ ವಜಾಗೊಳಿಸಬೇಕು, ಕಾಂಗ್ರೆಸ್ ಪಕ್ಷದಿಂದ ಉಚ್ಚಾಟನೆ ಮಾಡಬೇಕು ಎಂದು ಒತ್ತಾಯಿಸಿದರು. ಈ ಹಿಂದೆ ಸಹ ಲಕ್ಷ ಲಕ್ಷ ಪರಿಹಾರದ ಹಣಕ್ಕೆ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು ಶಿವಾನಂದ ಪಾಟೀಲ್ ಅವಮಾನಿಸಿದ್ದರು, ರೈತರ ಬಗ್ಗೆ ಕೀಳು ಮನೋಭಾವ ಹೊಂದಿರುವ ಈತ ಜನಪ್ರತಿನಿಧಿಯಾಗಲು ಯೋಗ್ಯನಲ್ಲ ಎಂದು ಕಿಡಿಕಾರಿದರು.

ಜಿಲ್ಲಾ ರೈತ ಹಿತರಕ್ಷಣ ಸಮಿತಿಯ ಸುನಂದ ಜಯರಾಂ ಮಾತನಾಡಿ, ಆಳುವ ಸರ್ಕಾರಕ್ಕೆ ಕಣ್ಣು ಇಲ್ಲ, ಕಿವಿಯು ಇಲ್ಲ, ಕಾವೇರಿ ಹೋರಾಟ ನಿರಂತರವಾಗಿ ನಡೆಯುತ್ತಿದ್ದರೂ ನೀರು ಉಳಿಸಿಕೊಳ್ಳುವ ಪ್ರಯತ್ನವನ್ನು ಮಾಡಲೇ ಇಲ್ಲ, ಮುಖ್ಯಮಂತ್ರಿ ಸಿದ್ದರಾಮಯ್ಯ ಜಾಣ ಪೆದ್ದನ ಪ್ರೀತಿ ವರ್ತಿಸುತ್ತಿದ್ದಾರೆ, ರೈತರನ್ನ ಅವಮಾನಿಸಿರುವ ಸಚಿವನನ್ನು ಇನ್ನೂ ಸಹ ಸಂಪುಟದಲ್ಲಿ ಉಳಿಸಿಕೊಂಡಿದ್ದಾರೆಂದು ಕಿಡಿಕಾರಿದರು.

ಸ್ವಾಭಿಮಾನದಿಂದ ಬದುಕುತ್ತಿರುವ ರೈತ ಶ್ರಮದಿಂದಲೇ ಜೀವನ ಮಾಡುತ್ತಾನೆ, ಯಾವುದೇ ಪಲಾಪೇಕ್ಷೆ ಇಲ್ಲದೆ ನಿಸ್ವಾರ್ಥದಿಂದ ಭೂಮಿ ನಂಬಿ ಕೃಷಿ ಮಾಡುವ ರೈತನ ಬಗ್ಗೆ ಇಷ್ಟೊಂದು ಕೀಳಾಗಿ ಮಾತನಾಡಿರುವ ಸಚಿವ ಶಿವಾನಂದ ಪಾಟೀಲ್ ಯೋಗ್ಯನಲ್ಲ, ಈತನನ್ನು ತಕ್ಷಣ ಸಂಪುಟದಿಂದ ವಜಾ ಮಾಡಬೇಕು ಎಂದು ಒತ್ತಾಯಿಸಿದರು.

ಕಾಂಗ್ರೆಸ್ ಪಕ್ಷದ ವರಿಷ್ಠರು ಈತನ ವಿರುದ್ಧ ಕ್ರಮಕ್ಕೆ ಮುಂದಾಗಬೇಕು, ಪಕ್ಷದ ಪ್ರಾರ್ಥಮಿಕ ಸದಸ್ಯತ್ವವನ್ನು ರದ್ದು ಮಾಡುವ ಮೂಲಕ ರೈತ ವಿರೋಧಿ ಮನಸ್ಥಿತಿ ದಮನ ಮಾಡಬೇಕು ಎಂದು ಹೇಳಿದರು.
ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ ಬೋರಯ್ಯ, ರೈತ ಸಂಘದ ಇಂಡುವಾಳು ಚಂದ್ರಶೇಖರ್,ಮುದ್ದೇಗೌಡ, ಕೃಷ್ಣಪ್ರಕಾಶ್,ದಸಂಸ ಎಂ.ವಿ ಕೃಷ್ಣ,ಜೈ ಕರ್ನಾಟಕ ಪರಿಷತ್ ನ ಎಸ್. ನಾರಾಯಣ್,ಸುಶೀಲಮ್ಮ ನೇತೃತ್ವ ವಹಿಸಿದ್ದರು.

ಮುಂದುವರಿದ ಉಪವಾಸ

ಕಾವೇರಿ ಕೊಳ್ಳದ ಜಲಾಶಯಗಳಿಂದ ತಮಿಳುನಾಡಿಗೆ ನೀರು ಹರಿಸುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯ ಸರದಿ ಉಪವಾಸ ಮಂಗಳವಾರವು ಮುಂದುವರಿಯಿತು.

ಸರದಿ ಉಪವಾಸದಲ್ಲಿ ನಿವೃತ್ತ ಇಂಜಿನಿಯರ್ ಕೆಂಪೇಗೌಡ, ಹುಳ್ಳೇನಹಳ್ಳಿ ಎಚ್.ಸಿ ಚನ್ನೇಗೌಡ, ಕೀಲಾರ ಕೆ.ಬಿ ಕೆಂಪೇಗೌಡ, ಕೋಣನಹಳ್ಳಿ ಕರಿಯಪ್ಪ, ಸಿದ್ದಯ್ಯನ ಕೊಪ್ಪಲು ಎಸ್ ಎಲ್ ಸಿದ್ದೇಗೌಡ ಹಾಗೂ ಮಂಡ್ಯ ಕಾವೇರಿ ನಗರದ ಎಸ್ ಪಿ ನಾರಾಯಣಸ್ವಾಮಿ ಭಾಗಿಯಾಗಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!