ಡೆಂಗ್ಯೂ ಹಾಗೂ ಚಿಕೂನ್ ಗುನ್ಯಾ ನಿಯಂತ್ರಣದಲ್ಲಿ ರೋಗ ಹರಡುವ ಈಡಿಸ್ ಸೊಳ್ಳೆಗಳ ನಿಯಂತ್ರಣವೇ ಬಹುಮುಖ್ಯವಾದ ವಿಧಾನವಾಗಿದ್ದು ಇದು ಪ್ರತಿಯೊಬ್ಬರ ಜವಾಬ್ದಾರಿ ಕೂಡ ಆಗಿದೆ ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್ ಡಿ ಬೆನ್ನೂರ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಶ್ರೀರಂಗಪಟ್ಟಣ ತಾಲೂಕಿನ ಕೆ ಆರ್ ಸಾಗರ್ ಆರೋಗ್ಯ ಸಂಸ್ಥೆಯ ವ್ಯಾಪ್ತಿಯ ಹೊಸ ಉಂಡವಾಡಿ ಗ್ರಾಮದ ಗಾಯತ್ರಿ ವಿದ್ಯಾ ಸಂಸ್ಥೆಯಲ್ಲಿ “ಡೆಂಗ್ಯೂ ಹಾಗೂ ಚಿಕೂನ್ ಗುನ್ಯಾ ರೋಗ ನಿಯಂತ್ರಣದಲ್ಲಿ ವಿದ್ಯಾರ್ಥಿಗಳ ಹಾಗೂ ಶಿಕ್ಷಕರ ಪಾತ್ರ ಕುರಿತು” ಏರ್ಪಡಿಸಿದ ಅರಿವು ಮೂಡಿಸುವ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಈಗ ಮುಂಗಾರು ಮಳೆ ಸಮಯವಾಗಿದ್ದರಿಂದ ಬಿಟ್ಟು ಬಿಟ್ಟು ಬರುತ್ತಿರುವ ಮಳೆಯಿಂದ ಮನೆಯ ಹೊರಾಂಗಣ ಹಾಗೂ ಶಾಲಾ ಹೊರಾಂಗಣದಲ್ಲಿ ಘನ ತ್ಯಾಜ್ಯ ವಸ್ತುಗಳಲ್ಲಿ ಸಂಗ್ರಹವಾಗುವ ಮಳೆಯ ನೀರಿನಲ್ಲಿ ಸೊಳ್ಳೆಗಳು ಉತ್ಪತ್ತಿಯಾಗಿ ಡೆಂಗ್ಯೂ,ಚಿಕೂನ್ ಗುನ್ಯಾ, ಮಲೇರಿಯಾದಂತಹ ಸಾಂಕ್ರಾಮಿಕ ರೋಗಗಳು ಹರಡುತ್ತವೆ ಆದ್ದರಿಂದ ಮನೆಯ ಹಾಗೂ ಶಾಲಾ ಸುತ್ತಮುತ್ತ ಒಳಾಂಗಣ,ಹೊರಾಂಗಣದಲ್ಲಿ ನೀರು ಸಂಗ್ರಹವಾಗದಂತೆ ಎಚ್ಚರಿಕೆ ವಹಿಸಬೇಕು ಎಂದರು.
ಒಂದು ವೇಳೆ ಲಾರ್ವಾಗಳು ಕಂಡು ಬಂದರೆ ತಕ್ಷಣ ತೆರವುಗೊಳಿಸಬೇಕು ಜೊತೆಗೆ ನೀರಿನ ಪರಿಕರಗಳನ್ನು ಕನಿಷ್ಠ ವಾರಕ್ಕೊಂದು ಬಾರಿಯಾದರೂ ಪರಿಶೀಲಿಸಿ ಲಾರ್ವ ಕಂಡು ಬಂದರೆ ಸ್ವಚ್ಛಗೊಳಿಸಿ, ನಂತರದಲ್ಲಿ ನೀರನ್ನು ಶೇಖರಿಸಿ ಪಾತ್ರೆಗಳನ್ನು ಸರಿಯಾಗಿ ಮುಚ್ಚಿಡಬೇಕು ಡೆಂಗ್ಯೂ ಹಾಗೂ ಚಿಕೂನ್ ಗುನ್ಯಾ ರೋಗಕ್ಕೆ ಯಾವುದೇ ನಿರ್ದಿಷ್ಟ ಚಿಕಿತ್ಸೆ ಹಾಗೂ ಲಸಿಕೆ ಇರುವುದಿಲ್ಲ ಆದರೆ ರೋಗದ ಲಕ್ಷಣಕ್ಕೆ ಅನುಗುಣವಾಗಿ ಚಿಕಿತ್ಸೆಯನ್ನು ನೀಡಲಾಗುತ್ತಿದೆ ಹಾಗೂ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ದೊರೆಯದ ಪಕ್ಷದಲ್ಲಿ ಮರಣಾಂತಿಕವಾಗಿ ಸಾವು ಕೂಡ ಸಂಭವಿಸಬಹುದಾಗಿದೆ ಎಂದರು.
ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ರಾಜ ಮಾತನಾಡಿ ಯಾವಾಗಲೂ ಮೈತುಂಬಾ ಬಟ್ಟೆ ಧರಿಸಬೇಕು,ಹಗಲು ಹೊತ್ತಿನಲ್ಲಿ ನಿದ್ರಿಸುವ,ವಿಶ್ರಾಂತಿ ಪಡೆಯುವ ಗರ್ಭಿಣಿಯರು,ಮಕ್ಕಳು ಮತ್ತು ವೃದ್ಧರು ತಪ್ಪದೇ ಸೊಳ್ಳೆ ಪರದೆ ಉಪಯೋಗಿಸಬೇಕು ಮನೆಯ ಕಿಟಕಿ, ಬಾಗಿಲುಗಳಿಗೆ ಸೊಳ್ಳೆ ನಿರೋಧಕ ಗ್ಯಾಲರಿಗಳನ್ನು ಅಳವಡಿಸಿಕೊಳ್ಳಬೇಕೆಂದು ಸ್ವಯಂ ರಕ್ಷಣಾ ವಿಧಾನಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಈ ವೇಳೆ ಸಂಸ್ಥೆಯ ಸಂಸ್ಥಾಪಕ ಪ್ರವೀಣ ಕುಮಾರ್, ಮುಖ್ಯ ಶಿಕ್ಷಕಿ ನಿರ್ಮಲಾ, ಆರೋಗ್ಯ ನಿರೀಕ್ಷಣಾಧಿಕಾರಿ ರಮ್ಯಾ, ಆಶಾ ಕಾರ್ಯಕರ್ತೆ ಮಾಲಿನಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.




