Thursday, September 19, 2024

ಪ್ರಾಯೋಗಿಕ ಆವೃತ್ತಿ

ಹದಗೆಟ್ಟ ರಸ್ತೆಗಳು: ವಾಹನ ಸವಾರರು-ಜನಸಾಮಾನ್ಯರು ಹೈರಾಣು

ಮಂಡ್ಯ ನಗರದ ಪ್ರಮುಖ ರಸ್ತೆಗಳು ಗುಂಡಿಗಳಿಂದ ತುಂಬಿದ್ದು, ಗುಂಡಿ ಬಿದ್ದ ರಸ್ತೆಗಳಲ್ಲಿ ಜನಸಾಮಾನ್ಯರು ಮತ್ತು ವಾಹನ ಸವಾರರು ಓಡಾಡಲು ಹೈರಾಣು ಆಗಿದ್ದಾರೆ.

ಮಂಡ್ಯ ನಗರದ ಪ್ರಮುಖ ರಸ್ತೆಗಳಾದ ಗುತ್ತಲು ರಸ್ತೆ, ವಿವಿ ರಸ್ತೆ, 100 ಅಡಿ ರಸ್ತೆ ಹೊಳಲು ರಸ್ತೆ ಸೇರಿದಂತೆ ಹಲವು ಪ್ರಮುಖ ರಸ್ತೆಗಳಲ್ಲಿ ನೂರಾರು ಗುಂಡಿಗಳು ನಿರ್ಮಾಣವಾಗಿದ್ದು, ಜನರು ರಸ್ತೆಗಳಲ್ಲಿ ಭಯ-ಆತಂಕದಿಂದ ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ನೂರಡಿ ರಸ್ತೆ

ಮಳೆ ಆರಂಭಕ್ಕೂ ಮುನ್ನವೇ ಮಂಡ್ಯದಲ್ಲಿ ರಸ್ತೆಗಳು ಗುಂಡಿ ಬಿದ್ದಿದ್ದವು. ಭಾರಿ ಮಳೆ ಸುರಿದ ನಂತರ ಮತ್ತಷ್ಟು ಆಳದ ಗುಂಡಿಗಳು ನಿರ್ಮಾಣವಾಗಿ ಅಪಾಯಕ್ಕೆ ಆಹ್ವಾನ ನೀಡುತ್ತಿವೆ. ಗುಂಡಿಗಳನ್ನು ಮುಚ್ಚುವ ಕೆಲಸವನ್ನು ಸರ್ಕಾರ, ಜಿಲ್ಲಾಡಳಿತ, ಲೋಕೋಪಯೋಗಿ ಇಲಾಖೆ, ನಗರಸಭೆ ಮಾಡಿಲ್ಲದಿರುವುದು ಜನತೆಯ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ನಗರದ ಗುತ್ತಲು ರಸ್ತೆಯ ಪ್ರಾರಂಭದಿಂದಲೂ ಜಯಲಕ್ಷ್ಮಿ ಟಾಕೀಸಿನವರೆಗೆ ರಸ್ತೆಯಲ್ಲಿ ನೂರಾರು ಗುಂಡಿಗಳಿವೆ. ಈ ರಸ್ತೆಯಲ್ಲಿ ಸಂಚರಿಸುವುದು ಬಹಳ ಕಷ್ಟವಾಗಿದೆ. ಅದರಲ್ಲೂ ರಾತ್ರಿ ಹೊತ್ತು, ಮಳೆಗಾಲದಲ್ಲಿ ಗುಂಡಿಗಳು ಕಾಣದೆ ವಾಹನ ಸವಾರರು ಬಿದ್ದು ಗಾಯಗೊಂಡಿರುವ ಘಟನೆಗಳು ಸಾಕಷ್ಟಿವೆ.

ಹಾಳಾಗಿರುವ ಗುತ್ತಲು ರಸ್ತೆ

100 ಅಡಿ ರಸ್ತೆಯ ಕನಿಕಾ ಪರಮೇಶ್ವರಿ ದೇವಸ್ಥಾನದ ಬಳಿ,ಕರ್ನಾಟಕ ಬಾರ್ ಸರ್ಕಲ್, ಬ್ಯಾಂಕ್ ಆಫ್ ಬರೋಡ ಬಳಿ, ಬೆಸಗರಹಳ್ಳಿ ರಾಮಣ್ಣ ಸರ್ಕಲ್, ವಿವಿ ರಸ್ತೆಯಲ್ಲಿ ಗುಂಡಿಗಳು ನಿರ್ಮಾಣವಾಗಿ ವಾಹನ ಸವಾರರು ಸಂಚರಿಸಲು ದುಸ್ತರವಾಗಿದೆ.

ಪ್ರಮುಖ ರಸ್ತೆಗಳಷ್ಷೇ ಅಲ್ಲ ವಿವಿಧ ಬಡಾವಣೆಗಳಿಗೆ ತೆರಳುವ ರಸ್ತೆಗಳು ಸಹ ಸಂಪೂರ್ಣವಾಗಿ ಹಾಳಾಗಿದೆ.ಹಾಳಾಗದ ರಸ್ತೆಯೇ ಮಂಡ್ಯ ನಗರದಲ್ಲಿ ಇಲ್ಲ ಎನ್ನಬಹುದು.

ಮಂಡ್ಯ ಕ್ಷೇತ್ರದ ಶಾಸಕ ಎಂ. ಶ್ರೀನಿವಾಸ್ ರಸ್ತೆ ಗುಂಡಿಗಳ ಬಗ್ಗೆ ತಲೆಕೆಡಿಸಿಕೊಂಡಿಲ್ಲ.ಕ್ಷೇತ್ರದ ಜನಪ್ರತಿನಿಧಿಯಾಗಿ ರಸ್ತೆಗಳಿಗೆ ಟಾರು ಹಾಕಿಸಲು ಅನುದಾನ ತರುವಲ್ಲಿ ವಿಫಲರಾಗಿದ್ದಾರೆ. ಬಿಜೆಪಿ ಸರ್ಕಾರ ಜೆಡಿಎಸ್ ಶಾಸಕರುಗಳ ಕ್ಷೇತ್ರಕ್ಕೆ ಸಮರ್ಪಕ ಅನುದಾನ ನೀಡುತ್ತಿಲ್ಲ ಎಂದು ಸರ್ಕಾರದ ಮೇಲೆ ಆರೋಪ ಮಾಡುತ್ತಾರೆ. ಆದರೆ ಜೆಡಿಎಸ್ ಶಾಸಕರಿರುವ ಪಾಂಡವಪುರ, ಮದ್ದೂರಿನಲ್ಲಿ ರಸ್ತೆ ಏಕೆ ಮಂಡ್ಯದಷ್ಟು ಹಾಳಾಗಿಲ್ಲ ಎಂದು ರೈತ ಸಂಘದ ಸಂಘಟನಾ ಕಾರ್ಯದರ್ಶಿ ಮಧುಚಂದನ್ ಪ್ರಶ್ನಿಸುತ್ತಾರೆ.

ಜಿಲ್ಲಾ ಉಸ್ತುವಾರಿ ಮಂತ್ರಿ ಕೆ. ಗೋಪಾಲಯ್ಯ ಅವರು ಸಭೆ,ಸಮಾರಂಭಗಳಿಗೆ ಮಾತ್ರ ಸೀಮಿತವಾಗಿದ್ದು, ತಮ್ಮ ಸರ್ಕಾರವೇ ತಡೆ ಹಿಡಿದಿರುವ ನಗರದ ಅಭಿವೃದ್ಧಿಗೆ ಬರಬೇಕಾಗಿದ್ದ 50 ಕೋಟಿ ಅನುದಾನವನ್ನು ಬಿಡುಗಡೆ ಮಾಡಿಸಲಿ ಎಂದು ನಗರದ ನಿವಾಸಿ ರಾಜಣ್ಣ ಒತ್ತಾಯಿಸಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!