Thursday, September 19, 2024

ಪ್ರಾಯೋಗಿಕ ಆವೃತ್ತಿ

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಉತ್ತಮ ಸೇವೆ : ಚೇತನ್

ಗ್ರಾಮೀಣಾಭಿವೃದ್ಧಿ, ಆರ್ಥಿಕ ಸಬಲತೆ, ಕೃಷಿ, ಸಾಮಾಜಿಕ ಕ್ಷೇತ್ರ, ಜನರ ಜೀವನಮಟ್ಟ ಸುಧಾರಣೆ ಸೇರಿದಂತೆ ಹಲವು ಸಮಾಜಮುಖಿ ಚಿಂತನೆಗಳೊಂದಿಗೆ ಕಾರ್ಯ ನಿರ್ವಹಿಸುತ್ತಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಉತ್ತಮ ಸೇವೆ ಸಲ್ಲಿಸುತ್ತಿದೆ ಎಂದು ಟ್ರಸ್ಟ್ ಜಿಲ್ಲಾ ನಿರ್ದೇಶಕ ಚೇತನ್ ತಿಳಿಸಿದರು.

ಮಳವಳ್ಳಿ ತಾಲ್ಲೂಕಿನ ಬಂಡೂರು ಶ್ರೀ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿಸಿ ಟ್ರಸ್ಟ್ ಭಾರತೀನಗರ, ಪ್ರಗತಿ ಬಂಧು ಸ್ವ ಸಹಾಯ ಸಂಘಗಳ ಒಕ್ಕೂಟ ತಳಗವಾದಿ ವಲಯ ಇವರ ಸಂಯುಕ್ತಾಶ್ರಯದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಒಕ್ಕೂಟದ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ಕೃಷಿಗೆ ಉತ್ತೇಜನ, ದುರ್ಬಲ ವರ್ಗದ ಮಹಿಳೆಯರಿಗೆ ಆಸರೆ, ಹೈನುಗಾರಿಕೆ, ಕುರಿ ಸಾಕಾಣಿಕೆ, ಸ್ವ-ಉದ್ಯೋಗಕ್ಕೆ ಸಾಲ ಸೌಲಭ್ಯದೊಂದಿಗೆ ಹಣ ಉಳಿತಾಯ ಮಾಡಿಕೊಳ್ಳುವ ಅನುಕೂಲವನ್ನು ಕಲ್ಪಿಸಿಕೊಟ್ಟಿದೆ ಎಂದರು.

ಸುಜ್ಞಾನ ನಿಧಿ ಕಾರ್ಯಕ್ರಮದಡಿಯಲ್ಲಿ ಯೋಜನೆ ಪಾಲುದಾರರ ಕುಟುಂಬಗಳ ಮಕ್ಕಳಿಗೆ ತಾಂತ್ರಿಕ ಹಾಗೂ ವೃತ್ತಿಪರ ಶಿಕ್ಷಣಕ್ಕೆ ಪ್ರತಿ ತಿಂಗಳು ಶಿಷ್ಯ ವೇತನ ನೀಡಲಾಗುತ್ತಿದೆ,ಸಂಘಗಳ ಗುಣಮಟ್ಟದ ನಿರ್ವಹಣೆದೊಂದಿಗೆ ಸರ್ಕಾರಿ ಮತ್ತು ಯೋಜನೆಯ ಸೌಲಭ್ಯಗಳನ್ನು ಒಂದೇ ಸೂರಿನಲ್ಲಿ ಒದಗಿಸಲಾಗುತ್ತಿದೆ, ಕೃಷಿ ಮತ್ತು ಕೃಷಿಯೇತರ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಕ್ರಮ ಕೈಗೊಳ್ಳಲಾಗಿದೆ ಎಂದರು.

ಹಾಲಿನ ಡೈರಿ ಹಾಗೂ ದೇವಸ್ಥಾನ ಜೀರ್ಣೋದ್ದಾರಕ್ಕೆ ಸಹಾಯ, ಸರ್ಕಾರಿ ಶಾಲೆಗಳಿಗೆ ಶಿಕ್ಷಕರ ನೇಮಕ, ಕೆರೆ ಕಟ್ಟೆಗಳಿಗೆ ಸ್ವಚ್ಚತೆ, ವಿಕಲಚೇತನರಿಗೆ ಸಹಾಯ, ಮೃತರಾದವರ ಅಂತ್ಯಸಂಸ್ಕಾರಕ್ಕೆ ಸಹಾಯ ಸೇರಿದಂತೆ ಹುಟ್ಟಿನಿಂದ ಸಾಯುವವರೆಗೂ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯೂ ಸೇವೆ ಸಲ್ಲಿಸುತ್ತಿದೆ ಎಂದರು.

ಆಧುನಿಕತೆಗೆ ಮಾರುಹೋದ ಮಕ್ಕಳು ತಮ್ಮ ತಂದೆ, ತಾಯಿಗಳನ್ನು ಸಾಕುವ ಬದಲು ವೃದ್ದಾಶ್ರಮಕ್ಕೆ ದೂಡುತ್ತಿರುವುದು ಸಮಾಜಕ್ಕೆ ಮಾರಕವಾಗಿದೆ, ಅದ್ದರಿಂದ ಯುವ ಜನರು ಮೊಬೈಲ್‌ನಿಂದ ದೂರವಿದ್ದು, ಗುರು ಹಿರಿಯರಿಗೆ ಗೌರವ ಕೊಡುವುದರ ಮೂಲಕ ಜೀವನದಲ್ಲಿ ಶಿಸ್ತು ಅಳವಡಿಸಿಕೊಳ್ಳಬೇಕೆಂದು ಹೇಳಿದರು.

ಕರ್ನಾಟಕ ಪ್ರದೇಶ ಕುರುಬರ ಸಂಘದ ಉಪಾಧ್ಯಕ್ಷ ಪುಟ್ಟ ಬಸವಯ್ಯ, ತಾ. ಪಂ. ಮಾಜಿ ಅಧ್ಯಕ್ಷ ಚಿಕ್ಕಲಿಂಗಯ್ಯ, ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ದೊಡ್ಡಯ್ಯ, ಗ್ರಾ.ಪಂ ಸದಸ್ಯ ದೇವರಾಜು, ಪತ್ರಕರ್ತ ಮಾಗನೂರು ಶಿವಕುಮಾರ್, ವಕೀಲ ಶ್ರೀಕಂಠಸ್ವಾಮಿ, ರವಿಕುಮಾರ್, ಶ್ರೀನಿವಾಸ್, ಕೃಷ್ಣಪ್ಪ ಸೇರಿದಂತೆ ಇತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!