Friday, September 20, 2024

ಪ್ರಾಯೋಗಿಕ ಆವೃತ್ತಿ

ಅದಾನಿ ಗ್ರೂಪ್ ಗೆ ಧಾರಾವಿ ಪುನರಾಭಿವೃದ್ಧಿ ಯೋಜನೆ: ಭುಗಿಲೆದ್ದ ಪ್ರತಿಭಟನೆ

ಮಹಾರಾಷ್ಟ್ರದ ಧಾರಾವಿ ಕೊಳೆಗೇರಿ ಪ್ರದೇಶ ಪುನರಾಭಿವೃದ್ಧಿ ಯೋಜನೆಯನ್ನು ಅದಾನಿ ಗ್ರೂಪ್‌ಗೆ ನೀಡಿರುವುದನ್ನು ವಿರೋಧಿಸಿ ಮಹರಾಷ್ಟ್ರದಲ್ಲಿ ಭಾರೀ ಪ್ರತಿಭಟನೆ ಭುಗಿಲೆದ್ದಿದ್ದು, ಸಾವಿರಾರು ಪ್ರತಿಭಟನಾಕಾರರು ಗೌತಮ್ ಅದಾನಿ ಅವರ ಕಚೇರಿಗೆ ಸ್ಲಮ್‌ನಿಂದ ಮೆರವಣಿಗೆ ನಡೆಸಿದ್ದಾರೆ.

ಪ್ರತಿಭಟನಾಕಾರರು ‘ಅದಾನಿಯನ್ನು ತೆಗೆದುಹಾಕಿ, ಧಾರವಿಯನ್ನು ಉಳಿಸಿ’ ಎಂದು ಬರೆದಿರುವ ಪೋಸ್ಟರ್‌ಗಳನ್ನು ಪ್ರದರ್ಶಿಸಿದ್ದು,  ಧಾರವಿ ನಿವಾಸಿಗಳಿಗೆ 500 ಚದರ ಅಡಿಯ ಮನೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಪಾದಯಾತ್ರೆಯ ನೇತೃತ್ವ ವಹಿಸಿದ್ದ ಶಿವಸೇನೆ (ಯುಬಿಟಿ ಬಣ) ಮುಖ್ಯಸ್ಥ ಉದ್ಧವ್ ಠಾಕ್ರೆ ಮಾತನಾಡಿ, ಮಹಾ ವಿಕಾಸ್ ಅಘಾಡಿ ಸರ್ಕಾರವು ಧಾರವಿ ಪುನರಾಭಿವೃದ್ಧಿ ಯೋಜನೆಗೆ (ಡಿಆರ್‌ಪಿ) ಟೆಂಡರ್ ನೀಡಿದೆ ಎಂದು ಭಾರತೀಯ ಜನತಾ ಪಕ್ಷವು ಸುಳ್ಳು ಹೇಳಿಕೆ ನೀಡುತ್ತಿದೆ. ಧಾರಾವಿ ನಿವಾಸಿಗಳು ಮಾತ್ರವಲ್ಲದೆ ಪೊಲೀಸರು, ನೈರ್ಮಲ್ಯ ಕಾರ್ಮಿಕರು ಮತ್ತು ಗಿರಣಿ ಕಾರ್ಮಿಕರಿಗೂ ಧಾರಾವಿಯಲ್ಲಿ ಮನೆ ಸಿಗಬೇಕು. ನಾನು ಅಭಿವೃದ್ಧಿಯ ವಿರೋಧಿಯಲ್ಲ. ಆದರೆ ಇದು ಅತಿ ದೊಡ್ಡ ಹಗರಣವಾಗಿದೆ. ಅದಾನಿ ಕೋಟ್ಯಂತರ ರೂ.ಗಳ ಟಿಡಿಆರ್ ಪಡೆಯುತ್ತಿದ್ದಾರೆ ಎಂದರೆ ಅವರ ಮುಂದಿನ ಪೀಳಿಗೆಗಳು ಸಹ ಕೆಲಸ ಮಾಡದೆ ನೆಮ್ಮದಿಯಿಂದ ಬದುಕಬಹುದು. ಅಷ್ಟರಮಟ್ಟಿಗೆ ಟಿಡಿಆರ್ ಅವರಿಗೆ ಸರ್ಕಾರ ಉಡುಗೊರೆಯಾಗಿ ನೀಡುತ್ತಿದೆ. ಆದರೆ ನಾವು ಅದಕ್ಕೆ ಬಿಡುವುದಿಲ್ಲ ಎಂದು ಠಾಕ್ರೆ ಹೇಳಿದ್ದಾರೆ.

ದೇವೇಂದ್ರ ಫಡ್ನವಿಸ್ ಮುಖ್ಯಮಂತ್ರಿಯಾಗಿದ್ದಾಗ 2018ರಲ್ಲಿ ಧಾರಾವಿಯನ್ನು ಮರು ಅಭಿವೃದ್ಧಿ ಪಡಿಸುವ ನಿರ್ಧಾರ ಕೈಗೊಳ್ಳಲಾಗಿತ್ತು. ಬಿಜೆಪಿಯ ಫಡ್ನವೀಸ್ ಪ್ರಸ್ತುತ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿದ್ದಾರೆ. ನನ್ನ ಸರ್ಕಾರವನ್ನು ಪತನಗೊಳಿಸಲು ಯಾರು ಹಣಕಾಸು ಒದಗಿಸಿದ್ದಾರೆಂದು ಈಗ ಯಾರಾದರೂ ಅರ್ಥಮಾಡಿಕೊಳ್ಳಬಹುದು. ನಮ್ಮ ಸರಕಾರವಿದ್ದಾಗ ಬಿಜೆಪಿಗೆ ತನ್ನ ಸ್ನೇಹಿತರಿಗೆ ಸಹಾಯ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿ ನನ್ನ ಪಕ್ಷವನ್ನು ಒಡೆಯಲಾಯಿತು ಮತ್ತು ಪಕ್ಷದ ಚಿಹ್ನೆಯನ್ನು ಕಳ್ಳತನ ಮಾಡಲಾಯಿತು ಎಂದು ಠಾಕ್ರೆ ಹೇಳಿದ್ದಾರೆ.

ಮಹಾರಾಷ್ಟ್ರದ ಉದ್ದವ್‌ ಸರಕಾರ ಅದಾನಿ ಗ್ರೂಪ್ ಜೊತೆ ಈ ಕುರಿತು ಒಪ್ಪಂದ ಮಾಡಿಕೊಂಡಿದೆ ಎಂದು ಬಿಜೆಪಿ ಮತ್ತು ಅದಾನಿ ಗ್ರೂಪ್ ಹೇಳಿಕೊಂಡಿವೆ. ಧಾರವಿ ಯೋಜನೆಯನ್ನು ನ್ಯಾಯಯುತ, ಮುಕ್ತ ಹರಾಜು ಪ್ರಕ್ರಿಯೆಯ ಮೂಲಕ ಅದಾನಿ ಗ್ರೂಪ್‌ಗೆ ನೀಡಲಾಗಿದೆ. ಎಂವಿಎ ಸರ್ಕಾರದ ಅವಧಿಯಲ್ಲಿ ಟೆಂಡರ್ ಷರತ್ತುಗಳನ್ನು ಅಂತಿಮಗೊಳಿಸಲಾಗಿದೆ ಎಂದು ಗ್ರೂಪ್ ಹೇಳಿಕೆಯಲ್ಲಿ ತಿಳಿಸಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!