Thursday, September 19, 2024

ಪ್ರಾಯೋಗಿಕ ಆವೃತ್ತಿ

ನರಗಲು ಮೋಹನ್ ನಾಪತ್ತೆಯಾದನೋ? ಅಪಹರಣವಾದನೋ?

ನಾಗಮಂಗಲ ತಾಲ್ಲೂಕಿನ ಕಸಬಾ ಹೋಬಳಿ ನರಗಲು ಗ್ರಾಮದ ಯುವಕನನ್ನು ಗಣಿ ಮತ್ತು ಜಮೀನಿನ ಮಾಲೀಕರು ಅಪಹರಿಸಿದ್ದಾರೆ ಎಂದು ಭಾನುವಾರವೇ ದೂರು ನೀಡಿದ್ದರೂ ಬಿಂಡಿಗನವಿಲೆ ಪೊಲೀಸರು ನಾಪತ್ತೆ ಪ್ರಕರಣ ಎಂದು ದೂರು ದಾಖಲಿಸಿಕೊಂಡು ಕ್ರಮ ಕೈಗೊಂಡಿಲ್ಲ ಎಂದು ಯುವಕನ ತಾಯಿ ಮತ್ತು ಪತ್ನಿ ದೂರಿರುವ ಘಟನೆ ವರದಿಯಾಗಿದೆ.

ಪ್ರಕರಣದ ವಿವರ: ನರಗಲು ಗ್ರಾಮದ ಯುವಕ ಮೋಹನ್ ಎಂಬಾತ ಕಳೆದ ಭಾನುವಾರದಿಂದ ನಾಪತ್ತೆಯಾಗಿದ್ದ.ಮೋಹನ್ ನಾಪತ್ತೆಯಾಗಿಲ್ಲ ಅವನನ್ನು ಅಪಹರಿಸಲಾಗಿದೆ ಎಂಬುದು ಆತನ ತಾಯಿ ಮತ್ತು ಪತ್ನಿ ಯಮುನಾ ಆರೋಪ.

ಮೋಹನ್ ಜಮೀನು ಮತ್ತು ಆತನ ದೊಡ್ಡಪ್ಪನ ಮಗ ನರಗಲು ಗ್ರಾಮದ ಕುಮಾರ್ ಇಬ್ಬರದು ಅಕ್ಕಪಕ್ಕದ ಜಮೀನು. ಕುಮಾರ್ ತಮ್ಮ ಜಮೀನನ್ನು ತಮಿಳುನಾಡು ಮೂಲದ ವ್ಯಕ್ತಿಗೆ ಜಲ್ಲಿ ಮತ್ತು ಸುಣ್ಣದಕಲ್ಲು ತಯಾರಿಸಲು ನೀಡಿದ್ದಾರೆ. ಇದರೊಟ್ಟಿಗೆ ಪಕ್ಕದ ಮೋಹನ್ ಅವರ ಜಮೀನನ್ನು ತಮಗೆ ಮಾರುವಂತೆ ಕುಮಾರ್ ಒತ್ತಡ ಹೇರಿದ್ದಾನೆ.ಅಲ್ಲದೆ ಗಣಿ ಗುತ್ತಿಗೆ ಪಡೆದ ತಮಿಳುನಾಡು ಮೂಲದ ವ್ಯಕ್ತಿ ಕೂಡ ಹಲವರಿಂದ ಒತ್ತಡ ತರುತ್ತಿದ್ದ ಎಂದು ಯುವಕನ ತಾಯಿ ಮತ್ತು ಪತ್ನಿ ಆರೋಪಿಸಿದ್ದಾರೆ.

ಈ ನಡುವೆ ಭಾನುವಾರ ಮಧ್ಯಾಹ್ನ 3 ಗಂಟೆ ಸುಮಾರಿನಲ್ಲಿ ಮನೆಯಲ್ಲಿ ಸ್ನಾನಕ್ಕೆ ನೀರು ಕಾಯಿಸಲು ಹೇಳಿ ಹೊರಹೋದ ಮಗ ಮೋಹನ್ ಸಂಜೆಯಾದರೂ ಮನೆಗೆ ಬಾರದಿದ್ದನ್ನು ಕಂಡ ತಾಯಿ ಮತ್ತು ಪತ್ನಿ ಆತನ ಮೊಬೈಲ್ ಗೆ ಫೋನಾಯಿಸಿದ್ದಾರೆ. ಆದರೆ ಮೊಬೈಲ್ ಫೋನ್ ಸ್ವಿಚ್ ಅಫ್ ಆಗಿತ್ತು. ಎಂದೂ ಮೊಬೈಲ್ ಸ್ವಿಚ್ ಅಫ್ ಮಾಡಿಕೊಳ್ಳದವನು ಇಂದು ಯಾಕೆ ಸ್ವಿಚ್ ಅಫ್ ಮಾಡಿಕೊಂಡಿದ್ದಾನೆ ಎಂದು ಅನುಮಾನಗೊಂಡು ಅವನ ಎಲ್ಲಾ ಸ್ನೇಹಿತರನ್ನು ವಿಚಾರಿಸಿದ್ದಾರೆ.

ಆದರೆ ಯಾರಿಂದಲೂ ಮಾಹಿತಿ ದೊರೆಯದಿದ್ದಾಗ ಮೋಹನ್ ತಾಯಿ ಭಾನುವಾರ ರಾತ್ರಿಯೇ ಬಿಂಡಿಗನವಿಲೆ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಆದರೆ ಪೊಲೀಸರು ಏನು ಕ್ರಮಕೈಗೊಳ್ಳದಿದ್ದಾಗ ಮೋಹನ್ ಪತ್ನಿ ಗಣಿ ಮಾಲೀಕ ಮತ್ತು ಮತ್ತು ದಾಯಾದಿ ಕುಮಾರ್ ಮೇಲೆ ತನ್ನ ಗಂಡನನ್ನು ಅಪಹರಣ ಮಾಡಿದ್ದಾರೆಂದು ದೂರು ನೀಡಿದ್ದಾರೆ.ಆದರೆ ಪ್ರಕರಣವನ್ನು ನಾಪತ್ತೆ ಎಂದು ದಾಖಲಿಸಿಕೊಂಡ ಪೊಲೀಸರು ನಿರಾಸಕ್ತಿ ತೋರಿದ್ದಾರೆ.

ಇದರಿಂದ ರೋಸಿಹೋದ ಯುವಕನ ತಾಯಿ ಮತ್ತು ಪತ್ನಿ ಗ್ರಾಮಸ್ಥರ ಸಹಾಯದೊಂದಿಗೆ ಶಾಸಕ ಸುರೇಶ್ ಗೌಡರ ಬಳಿಗೆ ಬಂದು ಅಲವತ್ತು ಕೊಂಡಿದ್ದಾರೆ. ಪೂರಕವಾದ ಸಿಸಿ ಟಿವಿ ಪೋಟೇಜ್ ಸೇರಿದಂತೆ ಪ್ರಕರಣಕ್ಕೆ ಪೂರಕವಾದ ಸಾಕ್ಷಗಳನ್ನು ಪೊಲೀಸರಿಗೆ ನೀಡಿರುವ ಮೋಹನ್ ಪತ್ನಿ ಅವರನ್ನು ಬೇಗ ಹುಡುಕಿಕೊಡಬೇಕು ಎಂದು ಪೋಲಿಸರನ್ನು ಒತ್ತಾಯಿಸಿದ್ದಾರೆ.

ಒಟ್ಟಾರೆ ನರಗಲು ಗ್ರಾಮದ ಮೋಹನ್ ನಾಪತ್ತೆಯಾಗಿದ್ದಾನೋ,ಇಲ್ಲಾ ಆತನ ತಾಯಿ,ಪತ್ನಿ ಆರೋಪಿಸುವಂತೆ ಅಪಹರಣ ಆಗಿದ್ದಾನೋ ಎಂದು ಪೋಲಿಸರು ಪತ್ತೆ ಹಚ್ಚಬೇಕು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!