Thursday, September 19, 2024

ಪ್ರಾಯೋಗಿಕ ಆವೃತ್ತಿ

ಗ್ಯಾರಂಟಿಗಳ ವಿರುದ್ದ ಮಾತನಾಡುವವರಿಗೆ ಕಡಿವಾಣ ಹಾಕಿ; ದಿನೇಶ್ ಗೂಳಿಗೌಡ ಆಗ್ರಹ

ಲೋಕಸಭಾ ಚುನಾವಣೆ ಫಲಿತಾಂಶದಲ್ಲಿ ಕರ್ನಾಟಕದಲ್ಲಿ ಉಂಟಾದ ಅಲ್ಪ ಹಿನ್ನಡೆಯಿಂದ ಕಾಂಗ್ರೆಸ್ ಪಕ್ಷದ ಕೆಲವು ಶಾಸಕರು, ಸಚಿವರು, ಮುಖಂಡರು ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಬೇಕು ಎಂಬ ಹೇಳಿಕೆಗಳನ್ನು ಬಹಿರಂಗವಾಗಿ ನೀಡುತ್ತಿದ್ದು ಇಂತಹ ಹೇಳಿಕೆಗಳನ್ನು ಯಾರೂ ನೀಡದಂತೆ ಮುಖ್ಯಮಂತ್ರಿಗಳು ಹಾಗೂ ಕೆಪಿಸಿಸಿ ಅಧ್ಯಕ್ಷರು ಕಠಿಣ ಸೂಚನೆಯನ್ನು ಕೊಡಬೇಕು ಎಂದು ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಮನವಿ ಮಾಡಿದ್ದಾರೆ.

ಈ ಕುರಿತು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಪತ್ರ ಬರೆದಿರುವ ಅವರು, ಈ ಚುನಾವಣೆಯಲ್ಲಿ ಮತಗಳಿಕೆ ಪ್ರಮಾಣದಲ್ಲೂ ಗಣನೀಯ ಏರಿಕೆಯಾಗಿದೆ. ಗ್ಯಾರಂಟಿ ಯೋಜನೆಗಳಿಂದ ಜನಮನ್ನಣೆ ಗಳಿಸಿರುವುದು ಕಳೆದ ವಿಧಾನಸಭೆ ಹಾಗೂ ಈಗಿನ ಲೋಕಸಭಾ ಚುನಾವಣೆಗಳಲ್ಲಿ ಪಡೆದ ಮತಗಳಿಕೆ ಪ್ರಮಾಣವನ್ನು ನೋಡಿದರೆ ತಿಳಿಯುತ್ತದೆ. ಈಚೆಗೆ ಬಂದ ಲೋಕಸಭಾ ಚುನಾವಣಾ ಫಲಿತಾಂಶದಲ್ಲಿ ಪಕ್ಷ 9 ಕ್ಷೇತ್ರಗಳನ್ನು ಗೆದ್ದರೂ ಮತಗಳಿಕೆಯಲ್ಲಿ ಗಣನೀಯವಾಗಿ ಹೆಚ್ಚಳ ಕಾಣಲಾಗಿದೆ ಎಂದು ತಿಳಿಸಿದ್ದಾರೆ.

ಈ ಲೋಕಸಭೆಯಲ್ಲಿ ನಮ್ಮ ಕಾಂಗ್ರೆಸ್ ಪಕ್ಷವು ಮತಗಳಿಕೆಯಲ್ಲಿ ಶೇಕಡಾ 14ರಷ್ಟು ಹೆಚ್ಚಳ ಕಂಡಿದೆ. ಅಂದರೆ, 2019ರಲ್ಲಿ ಶೇಕಡಾ 31.5ರಷ್ಟಿದ್ದ ಮತ ಪ್ರಮಾಣವು ಈ ಬಾರಿ 45.5ಕ್ಕೆ ಏರಿಕೆಯಾಗಿದೆ. ಅದೇ ಶೇಕಡಾ 51.5ರಷ್ಟಿದ್ದ ಬಿಜೆಪಿ ಮತ ಗಳಿಕೆಯು ಈ ಬಾರಿ ಶೇಕಡಾ 46ಕ್ಕೆ ಕುಸಿತ ಕಂಡಿದೆ. ಇದು ಕಾಂಗ್ರೆಸ್ ಬಗ್ಗೆ ಜನರು ಇಟ್ಟಿರುವ ನಂಬಿಕೆಯನ್ನು ತೋರಿಸುತ್ತದೆ ಎಂದು ವಿವರಿಸಿದ್ದಾರೆ.

2023ರಲ್ಲಿ ನಡೆದ ವಿಧಾನಸಭಾ ಚುನಾವಣೆಯನ್ನು ನೋಡುವುದಾದರೆ, ಕಾಂಗ್ರೆಸ್ 136 ಸ್ಥಾನ ಗಳಿಸಿದರೆ, ಬಿಜೆಪಿ 66 ಸ್ಥಾನ ಹಾಗೂ ಜೆಡಿಎಸ್ 19 ಸ್ಥಾನಗಳನ್ನು ಗಳಿಸಿತ್ತು. ಶೇಕಡಾವಾರು ಮತಗಳಿಕೆ ಪ್ರಮಾಣವನ್ನು ಗಮನಿಸುವುದಾದರೆ, ಕಾಂಗ್ರೆಸ್ ಶೇಕಡಾ 42.88, ಬಿಜೆಪಿಯು ಶೇಕಡಾ 36 ಹಾಗೂ ಜೆಡಿಎಸ್ ಶೇಕಡಾ 13.29 ರಷ್ಟು ಮತಗಳಿಕೆ ಮಾಡಿತ್ತು. ಇಲ್ಲಿಯೂ ಸಹ ಕಾಂಗ್ರೆಸ್ ಪಕ್ಷದ ಮತ ಪ್ರಮಾಣದಲ್ಲಿ ಗಣನೀಯ ಏರಿಕೆ ಕಂಡಿತ್ತು. ಹೀಗಾಗಿ ಸ್ಥಾನಗಳು ಕಡಿಮೆಯಾಗಿವೇ ವಿನಃ ಜನರ ನಂಬಿಕೆ ಅಲ್ಲ ಎಂಬುದು ಇದರಿಂದಲೇ ಸಾಬೀತಾಗಿದೆ ಎಂದು ತಿಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!