ಪ್ರತಿನಿತ್ಯ ಸೈಕಲ್ ತುಳಿಯುವುದರಿಂದ ಎಲ್ಲಾ ವಯಸ್ಸಿನವರ ಆರೋಗ್ಯ ವೃದ್ಧಿಸುತ್ತದೆ ಎಂದು ಅಚೀವರ್ಸ್ ಅಕಾಡೆಮಿ ಮುಖ್ಯಸ್ಥ ಡಾ. ರಾಘವೇಂದ್ರ ಹೇಳಿದರು.
ಶ್ರೀರಂಗಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ಅಕಾಡೆಮಿ ವತಿಯಿಂದ ಆಯೋಜಿಸಿದ್ದ ವಿಶ್ವ ಸೈಕಲ್ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಪ್ರತಿವರ್ಷ ಜೂನ್ 3 ರಂದು ವಿಶ್ವ ಸೈಕಲ್ ಅಥವಾ ಬೈಸಿಕಲ್ ದಿನವನ್ನಾಗಿ ಆಚರಿಸಲಾಗುತ್ತಿದೆ.
ಸೈಕಲ್ ಬಳಕೆಯಿಂದ ಪರಿಸರಕ್ಕೆ ಯಾವುದೇ ಧಕ್ಕೆ ಆಗುವುದಿಲ್ಲ. ಪೆಟ್ರೋಲ್, ಡೀಸೆಲ್ ವಾಹನಗಳು ವಿಷಕಾರಕ ಅನಿಲವನ್ನು ಹೊರಸೂಸುವ ಮೂಲಕ ಮನುಷ್ಯನ ಆರೋಗ್ಯ ಹಾಗೂ ಪರಿಸರ ಮಾಲಿನ್ಯಕ್ಕೆ ಧಕ್ಕೆ ಉಂಟು ಮಾಡುತ್ತದೆ ಎಂದರು. ಆದರೆ ಸೈಕಲ್ ಕಡಿಮೆ ಖರ್ಚಿನಲ್ಲಿ ಪ್ರಯಾಣದ ಜೊತೆ ನಮ್ಮ ಆರೋಗ್ಯವನ್ನುವೃದ್ಧಿಸುವ ಪರಿಸರ ಸ್ನೇಹಿ ವಾಹನವಾಗಿದೆ. ಎಲ್ಲರೂ ನಿತ್ಯ ಸೈಕಲ್ ಅಥವಾ ಬೈಸಿಕಲ್ ಬಳಕೆ ಮಾಡಬೇಕು ಎಂದು ಹೇಳಿದರು.
ಇದೇ ವೇಳೆ ಹಲವು ವಿದ್ಯಾರ್ಥಿಗಳು ಸೈಕಲ್‌ನೊಂದಿಗೆ ಸ್ಟೇಡಿಯಂನಿಂದ ಹೊರಟು ಪ್ರಮುಖ ಬೀದಿಗಳಲ್ಲಿ ತೆರಳಿ ಶ್ರೀರಂಗನಾಥಸ್ವಾಮಿ ದೇವಸ್ಥಾನ, ಕಿರಂಗೂರು, ಬಾಬುರಾಯನಕೊಪ್ಪಲು, ಕರಿಘಟ್ಟ, ನಿಮಿಷಾಂಬ ದೇವಸ್ಥಾನ, ಗಂಜಾಂ ಸೇರಿದಂತೆ ಸುತ್ತಮುತ್ತ ಪ್ರದೇಶಗಳಿಗೆ ತೆರಳಿ ಸೈಕಲ್ ಬಳಕೆಯಿಂದಾಗಿ ಪ್ರಯೋಜನಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು.
ಜಾಥ ಕಾರ್ಯಕ್ರಮದಲ್ಲಿ ದೇವರಾಜು, ಸತೀಶ್, ಪುಷ್ಪಕ್, ಅನನ್ಯ, ಇಂದ್ರಜ್, ವೀರೇಶ್, ಮಂಜುನಾಥ್, ಅಕ್ಷಯ್ ಹಾಗೂ ಅಕಾಡೆಮಿಯ ವಿದ್ಯಾರ್ಥಿಗಳು ಇದ್ದರು.