Tuesday, May 21, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಸಾಮಾಜಿಕ ಪಿಡುಗುಗಳ ನಿರ್ಮೂಲನೆಗೆ ಮುಂದಾಗಬೇಕು : ಡಾ.ವೈ.ಕೆ.ಭಾಗ್ಯ

ಸಾಮಾಜಿಕ ಪಿಡುಗುಗಳ ನಿರ್ಮೂಲನೆಗೆ ಮಹಿಳೆಯರು ಮುಂದಾಗಬೇಕಾಗಿದೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜಶಾಸ್ತ್ರ ಪ್ರಾಧ್ಯಾಪಕರಾದ ಡಾ.ವೈ.ಕೆ.ಭಾಗ್ಯ ತಿಳಿಸಿದರು.

ಮಂಡ್ಯ ತಾಲ್ಲೂಕಿನ ಕೊತ್ತತ್ತಿ ಗ್ರಾಮದಲ್ಲಿ ರಾಷ್ಟ್ರೀಯ ಕಾರ್ಮಿಕ ಶಿಕ್ಷಣ ಮಂಡಳಿ, ಪರಿಸರ ರೂರಲ್ ಡೆವಲಪ್‌ಮೆಂಟ್ ಸೊಸೈಟಿ ವತಿಯಿಂದ ವಿಶ್ವ ಮಹಿಳಾ ದಿನದ ನಿಮಿತ್ತ ಜರುಗಿದ ಮಹಿಳೆಯರ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಬಾಲ್ಯವಿವಾಹ, ಹೆಣ್ಣುಭ್ರೂಣಹತ್ಯೆಯಂಥ ಘಟನೆಗಳು ಇಂದಿಗೂ ಜರುಗುತ್ತಿರುವುದು ವಿಷಾದನೀಯವಾಗಿದ್ದು, ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಪುರುಷರಷ್ಟೆ ಸಮಾನವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದಾಗ್ಯೂ ಮಹಿಳೆಯರನ್ನು ಸಮಾನತೆಯಿಂದ ಕಾಣುವ ಔದಾರ‍್ಯವನ್ನು ಬೆಳೆಸಿಕೊಳ್ಳದಿರುವುದು ಅಚ್ಚರಿಯುಂಟು ಮಾಡುತ್ತಿದೆ ಎಂದರು.

ಮಹಿಳೆ ರಾಜಕೀಯವಾಗಿ ಶೇ.50ರಷ್ಟು ಮೀಸಲಾತಿಯನ್ನು ಪಡೆಯಲು ಹೋರಾಟ ಮಾಡಬೇಕಾಗಿದೆ. ಲಿಂಗ ತಾರತಮ್ಯವನ್ನು ಹೋಗಲಾಡಿಸಲು ಪ್ರತಿನಿತ್ಯದ ಕಾರ್ಯಗಳಲ್ಲಿ ನಾವು ಮಗ್ನರಾಗಬೇಕಾಗಿದೆ. ಈ ನಿಟ್ಟಿನಲ್ಲಿ ಶೈಕ್ಷಣಿಕವಾಗಿ ಮಹಿಳೆ ಸಬಲರಾಗಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಹಿಳೆಯರ ಸಬಲೀಕರಣಕ್ಕೆ ಹಲವು ಯೋಜನೆಗಳನ್ನು ರೂಪಿಸಿದರೂ ಗ್ರಾಮೀಣ ಪ್ರದೇಶದ ಕಡೆಭಾಗದ ಮಹಿಳೆಗೂ ಯೋಜನೆಗಳು ಸಮರ್ಪಕವಾಗಿ ತಲುಪಿಸುವಂತೆ ಸ್ವಯಂಸೇವಾ ಸಂಸ್ಥೆಗಳು ಕಾರ್ಯನಿರ್ವಹಿಸಬೇಕಾಗಿದೆ ಎಂದು ಹೇಳಿದರು.

ರಾಷ್ಟ್ರೀಯ ಕಾರ್ಮಿಕ ಶಿಕ್ಷಣ ಮತ್ತು ಅಭಿವೃದ್ಧಿ ಮಂಡಳಿಯ ಬೆಂಗಳೂರಿನ ಪ್ರಾದೇಶಿಕ ಕಛೇರಿಯ ಶಿಕ್ಷಣಾಧಿಕಾರಿ ಸತೀಶ್‌ಕುಮಾರ್ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿ, ಮಂಡಳಿಯು ಸಂಘಟಿತ ಮತ್ತು ಅಸಂಘಟಿತವಾಗಿರುವ ಮಹಿಳೆಯರಿಗೆ ಅರಿವಿನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಸಂಘಟಿತವಾಗಿರುವ ಉದ್ಯೋಗಸ್ಥ ಮಹಿಳೆಯರಿಗೆ ಅಂದರೆ ಕಾರ್ಮಿಕ ಕ್ಷೇತ್ರದಲ್ಲಿ ದುಡಿಯುತ್ತಿರುವವರಿಗೆ ಸಾರ್ವಜನಿಕರಿಗೆ ಯಾವ ರೀತಿ ಸನ್ನದ್ಧರಾಗಬೇಕೆಂಬುದನ್ನು ಹಾಗೂ ಅಸಂಘಟಿತವಾಗಿರುವ ಗ್ರಾಮೀಣ ಮಹಿಳೆಯರಲ್ಲಿ ಆರೋಗ್ಯ, ಶುಚಿತ್ವ, ಉಳಿತಾಯ ಮನೋಭಾವ, ಪರಿಸರ ಸಂರಕ್ಷಣೆ ಹಾಗೂ ಮೂಲಭೂತ ಸೌಕರ‍್ಯಗಳ ಕುರಿತಾಗಿ ಜಾಗೃತಿ ಮೂಡಿಸಲು ಇಂಥ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲಾಗಿದೆ. ಇದರ ಸದುಪಯೋಗಪಡೆದುಕೊಳ್ಳಬೇಕಾಗಿದೆ ಎಂದರು.

ಪರಿಸರ ರೂರಲ್ ಡೆಮಲಪ್‌ಮೆಂಟ್ ಸೊಸೈಟಿ ಅಧ್ಯಕ್ಷ ಮಂಗಲ ಎಂ.ಯೋಗೀಶ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾದ ಆರ್ಥಿಕ ಸಾಕ್ಷರತೆ ಕುರಿತು ಕೆ.ಪಿ.ಅರುಣಕುಮಾರಿ, ಆರೋಗ್ಯ ಜಾಗೃತಿ ಕುರಿತು ಡಾ.ಸೌಮ್ಯ, ಸ್ವಯಂ ಉದ್ಯೋಗ ಕುರಿತು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಸಂಯೋಜಕಿ ಶ್ವೇತಾ ವಿಷಯ ಮಂಡಿಸಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!