Thursday, September 19, 2024

ಪ್ರಾಯೋಗಿಕ ಆವೃತ್ತಿ

ಬಡವರಿಗೆ ಅಕ್ಕಿ ಕೊಡದ ಬಿಜೆಪಿ, ಜೆಡಿಎಸ್‌ಗೆ ಮತ ಕೊಡಬೇಡಿ: ಸಿಎಂ ಸಿದ್ದರಾಮಯ್ಯ

ರಾಜ್ಯದ ಜನರಿಗೆ ಅನ್ನಭಾಗ್ಯ ಯೋಜನೆಯಡಿ ಬಡವರಿಗೆ ಉಚಿತವಾಗಿ ತಲಾ 10 ಕೆಜಿ ಅಕ್ಕಿ ಕೊಡುವುದಕ್ಕಾಗಿ ಕೇಂದ್ರ ಸರ್ಕಾರದ ಬಳಿ ಕೆ.ಜಿ. ಗೆ 34 ರೂ. ಕೊಡುತ್ತೇವೆ ಅಕ್ಕಿ ಪೂರೈಸಿ ಎಂದು ಕೇಳಿಕೊಂಡರು, ಅವರು ಅಕ್ಕಿ ಕೊಡಲಿಲ್ಲ, ಈಗ ಕೆ.ಜಿ. ಗೆ 29 ರೂ.ನಂತೆ ಭಾರತ್ ಬ್ರಾಂಡ್ ಹೆಸರಿನಲ್ಲಿ ಮಾರುಕಟ್ಟೆಗೆ ಬಿಟ್ಟು ಹಣ ವಸೂಲಿ ಮಾಡುತ್ತಿದ್ದಾರೆ, ಇಂತಹ ಬಡವರ ವಿರೋಧಿ ಬಿಜೆಪಿ ಹಾಗೂ ಜೆಡಿಎಸ್ ಗಳಿಗೆ ಮತ ಹಾಕಬೇಡಿ ಎಂದು ಸಿಎಂ ಸಿದ್ದರಾಮಯ್ಯ ಕರೆ ನೀಡಿದರು.

ಮಳವಳ್ಳಿ ಪಟ್ಟಣ ಶಾಂತಿ ಕಾಲೇಜು ಬಳಿ ನಡೆದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಬಡವರಿಗೆ ಅಕ್ಕಿ ಕೊಡದ ಬಿಜೆಪಿ, ಜೆಡಿಎಸ್‌ಗೆ ಮತ ಕೊಡಬೇಡಿ.
ಇವತ್ತು ಕುಮಾರಸ್ವಾಮಿ, ಅಶೋಕ ಒಂದಾಗಿದ್ದಾರೆ, ಅವರನ್ನು ನಂಬಬೇಡಿ ಎಂದರು.

155 ಕೋಟಿ ಹೆಣ್ಣು ಮಕ್ಕಳು ಇವತ್ತು ಉಚಿತವಾಗಿ ಬಸ್ಸಿನಲ್ಲಿ ಓಡಾಡ್ತಿದ್ದಾರೆ. ಹಿಂದೆ ಯಾರಾದ್ರೂ ಇಂತಹ ಯೋಜನೆಗಳನ್ನ ಜಾರಿ ಮಾಡಿದ್ರ? ಬಿಜೆಪಿ, ಹೆಚ್ಡಿಕೆ, ದೇವೇಗೌಡರು ಮಾಡಿದ್ರ? ಇದನ್ನ ಸಿದ್ದರಾಮಯ್ಯ ಸರ್ಕಾರ ಮಾಡಿದ್ದು ಅನ್ನೋದನ್ನ ಮರೆಯಬೇಡಿ. ಯಾರು ಹಸಿದು ಮಲಗಬಾರದು ಅಂತಾ ಅನ್ನಭಾಗ್ಯ ಅಕ್ಕಿ ಕೊಟ್ಟವರು ಯಾರು ? ಕೇಂದ್ರದ ಅಸಹಕಾರದ ನಡುವೆಯೂ ಯೋಜನೆ ಅನುಷ್ಠಾನ ಮಾಡಿದ್ದೇವೆ ಎಂದು ಗುಡುಗಿದರು.

ನರೇಂದ್ರಸ್ವಾಮಿಗೆ ಸಚಿವ ಸ್ಥಾನ

ಮಳವಳ್ಳಿಯಲ್ಲಿ ನರೇಂದ್ರಸ್ವಾಮಿ ನೇತೃತ್ವದಲ್ಲಿ 400 ಕೋಟಿಗೂ ಹೆಚ್ಚಿನ ಮೊತ್ತದ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ, ಉದ್ಘಾಟಿಸಿದ್ದೇನೆ, ಅವರು ಶಾಸಕರಾಗಿ ಸಮರ್ಥರಾಗಿ ಎದುರಿಸುತ್ತಿರುವುದಕ್ಕೆ ಈ ಸಮಾವೇಶ ಸಾಕ್ಷಿಯಾಗಿದೆ, ನರೇಂದ್ರಸ್ವಾಮಿ ಎಲ್ಲಾ ಮಂತ್ರಿಗಳ ಜೊತೆ ಚೆನ್ನಾಗಿದ್ದಾರೆ. ಅದನ್ನ ಬಳಸಿಕೊಂಡು ಕ್ಷೇತ್ರಕ್ಕೆ ಅಭಿವೃದ್ಧಿ ಕಾಮಗಾರಿಗಳ ಮಂಜೂರು ಮಾಡಿಸ್ತಿದ್ದಾರೆ. ನೀವೆಲ್ಲರೂ ನರೇಂದ್ರಸ್ವಾಮಿಯನ್ನ ಮಂತ್ರಿ ಮಾಡಿ ಅಂತಿದ್ದೀರಿ. ಇವಾಗ ಖಾಲಿ ಇಲ್ಲ, ಸಂಪುಟ ಪುನರ್‍ರಚನೆ ಸಂದರ್ಭದಲ್ಲಿ ಅವಕಾಶ ನೀಡುತ್ತೇವೆ ಎಂದು ಭರವಸೆ ನೀಡಿದರು.

ಇವಾಗ ನೀವು ಸಚಿವ ಸ್ಥಾನಕ್ಕೆ ಒತ್ತಾಯ ಮಾಡಿದ್ರು ಸೂಕ್ತ ಸಮಯವಲ್ಲ. ನೀವು ಸದಾ ಮಳವಳ್ಳಿಯಲ್ಲಿ ನಮ್ಮ ಅಭ್ಯರ್ಥಿಗಳನ್ನ ಆಶೀರ್ವಾದ ಮಾಡ್ತಿದ್ದೀರಿ. ಅದಕ್ಕಾಗಿ ನಿಮಗೆ ಕೃತಜ್ಞತೆ ಸಲ್ಲಿಸ್ತೀನಿ. ನನಗೆ, ನಮ್ಮ ಅಭ್ಯರ್ಥಿ ಆಶೀರ್ವಾದ ಮಾಡ್ತಾ, ಬೆಂಬಲಿಸುವ ನಿಮಗೆ ವಿಶೇಷ ಅಭಿನಂದನೆ ಸಲ್ಲಿಸುತ್ತೇನೆ, ಮಳವಳ್ಳಿ ಕ್ಷೇತ್ರ ನನ್ನ ಮತ ಕ್ಷೇತ್ರ ಎಂಬಂತೆ ಭಾವನೆ ಇದೆ ಎಂದು ನುಡಿದರು.

₹470 ಕೋಟಿ ವೆಚ್ಚದ ಯೋಜನೆ ಮಂಜೂರು

ಕಳೆದ ಚುನಾವಣೆಯಲ್ಲಿ ನಾವು ಅನೇಕ ಭರವಸೆ ಕೊಟ್ಟಿದ್ದೊ… ಅದರ ಅನುಗುಣವಾಗಿ 470 ಕೋಟಿ ವೆಚ್ಚದ ಯೋಜನೆ ಮಂಜೂರು ಮಾಡಿದ್ದೇನೆ, ಅಷ್ಟು ಸಾಲದೆಂಬಂತೆ ಇನ್ನೂ ಅನೇಕ ಮನವಿಯನ್ನ ಶಾಸಕರು ಕೊಟ್ಟಿದ್ದಾರೆ. ಆ ಮನವಿಯನ್ನ ಸ್ವೀಕರಿಸಿ, ಅನುಷ್ಠಾನಕ್ಕೆ ತರುತ್ತೇವೆ. ಅಧಿಕಾರಕ್ಕೆ ಬಂದ 8 ತಿಂಗಳಲ್ಲಿ ನುಡಿದಂತೆ ನಡೆದಿದ್ದೇವೆ. ಬಿಜೆಪಿ, ಜೆಡಿಎಸ್‌ ರೀತಿ ಕೊಟ್ಟ ಮಾತಿಗೆ ತಪ್ಪಿಸಿಕೊಳ್ಳುವವರಲ್ಲ. ನಾವು ಕೊಟ್ಟ  ಮಾತನ್ನ ನೂರಕ್ಕೆ ನೂರು ಅನುಷ್ಠಾನಕ್ಕೆ ತರ್ತೇವೆ. ಏತನೀರಾವರಿ ಯೋಜನೆಯನ್ನ ನಾನೇ ಚಾಲನೆ ಕೊಟ್ಟಿದ್ದೆ.
ಈಗ ನೀವೇ ಉದ್ಘಾಟಿಸಿ ಅಂತಿದ್ದಾರೆ. ಅದನ್ನ ನಾನೇ ಉದ್ಘಾಟಿಸುತೇನೆ ಎಂದರು.

ಮುಸಲ್ಮಾನನಾಗಿ ಹುಟ್ಟುತ್ತೇನೆ ಎಂದಿದ್ದ ದೇವೇಗೌಡ

ಜೆಡಿಎಸ್‌, ಬಿಜೆಪಿ ಈಗ ಒಂದಾಗಿವೆ. ಮುಂದಿನ ದಿನದಲ್ಲಿ ಹುಟ್ಟಿದ್ರೆ ಮುಸಲ್ಮಾನನಾಗಿ ಹುಟ್ಟುತ್ತೇನೆ ಅಂತಾ ದೇವೇಗೌಡರು ಹೇಳಿದರು. ಈಗ ಕೋಮುವಾದಿ ಬಿಜೆಪಿ ಜೊತೆ ಸೇರಿದ್ದಾರೆ.ಮಿಸ್ಟರ್ ದೇವೇಗೌಡರೇ ನೀವೇ ನಿಮ್ಮ ಮಗನನ್ನ ಬಿಜೆಪಿ ಜೊತೆ ಕಳಿಸಿದ್ದೇನೆ ಅಂತೀರ. ನೀವು ಜಾತ್ಯತೀತ ಅಂತಾ ಇಟ್ಕೊಳ್ಳೋಕೆ ನೈತಿಕತೆ ಇಲ್ಲ.
ಈಗಲೇ ಸೆಕ್ಯೂಲರ್ ಪದ ಕೈಬಿಟ್ಟು ಬಿಡಿ. ಕಳೆದ ಚುನಾವಣೆಯಲ್ಲಿ ಬಿಜೆಪಿ ಸೋಲಿಸಲು ಶ್ರಮಿಸಿದ್ದೋ.
ಅದಕ್ಕೆ 136 ಸೀಟ್ ಗೆದ್ದು ಅಧಿಕಾರಕ್ಕೆ ಬಂದಿದ್ದೇವೆ. ಈಗ ಬಿಜೆಪಿ ಜೆಡಿಎಸ್‌ ಡೋಂಗಿಗಳ ತರ ಆಡ್ತಿವೆ, ಉಪಕಾರ ಮಾಡಿದವರನ್ನ ಮರೆತಿದ್ದೀರಾ ? ಎಂದು ‍ಛೇಡಿಸಿದರು.

ಇದಕ್ಕೂ ಮೊದಲು ಸಿಎಂ ಸಿದ್ದರಾಮಯ್ಯ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ, ಉದ್ಘಾಟನಾ ನೆರವೇರಿಸಿದರು. ವೇದಿಕೆಗೆ ಆಗಮಿಸುವ ಮುನ್ನ ಅಶ್ವಮೇಧ ಬಸ್ ಗಳಿಗೆ ಚಾಲನೆ ನೀಡಿದರು. ಸಿಎಂ ಸಿದ್ದರಾಮಯ್ಯ ವೇದಿಕೆರೆ ಆಗಮಿಸುತ್ತಿದ್ದಂತೆ ಸಾರ್ವಜನಿಕರ ಹರ್ಷೋದ್ಗಾರ ಮುಗಿಲು ಮುಟ್ಟಿತು.

ಸಿಎಂ ಜೊತೆ ಕೃಷಿ ಸಚಿವರಾದ ಚಲುವರಾಯಸ್ವಾಮಿ, ಸತೀಶ್ ಜಾರಕಿಹೋಳಿ, ಭೈರತಿ ಸುರೇಶ್, ಶಾಸಕ ನರೇಂದ್ರಸ್ವಾಮಿ ಸೇರಿ ಜಿಲ್ಲೆಯ ಶಾಸಕರು ಹಾಗೂ ಸ್ಥಳೀಯ ಮುಖಂಡರು ಪಾಲ್ಗೊಂಡಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!