Thursday, September 19, 2024

ಪ್ರಾಯೋಗಿಕ ಆವೃತ್ತಿ

ನೆನಪಿದೆಯೇ ಜುಲೈ ತಿಂಗಳ 1948ರ ಲಂಡನ್ ಒಲಿಂಪಿಕ್ಸ್ (ಬರಿಗಾಲಲ್ಲಿ ಆಡಿದ ಭಾರತ ತಂಡ, ದ ಫ್ಲೈಯಿಂಗ್ ಹೌಸ್ ವೈಫ್ ಮತ್ತು ಎಡಗೈ ಶೂಟರ್)

ಹರೀಶ್ ಗಂಗಾಧರ್

ಒಲಿಂಪಿಕ್ ಎಂದೊಡನೆ ಎಲ್ಲಾ ತಪ್ಪು ಕಾರಣಗಳಿಗಾಗಿ ನನಗೆ ನೆನಪಾಗುವುದು ಹಿಟ್ಲರ್ ಅದ್ದೂರಿಯಾಗಿ ಆಯೋಜಿಸಿದ 1936 ಬರ್ಲಿನ್ ಒಲಿಂಪಿಕ್ಸ್ ಮತ್ತು ಇಸ್ರೇಲಿ ಕ್ರೀಡಾಪಟುಗಳ ಮಾರಣಹೋಮ ನೆಡೆದ 1972ರ ಮ್ಯುನಿಕ್ ಒಲಿಂಪಿಕ್. ಬರ್ಲಿನಲ್ಲಿನ ಜೆಸ್ಸಿ ಒವೆನ್ಸ್ ಸಾಧನೆ ಮತ್ತು ಮ್ಯುನಿಕಿನಲ್ಲಿ ಮಾರ್ಕ್ ಸ್ಪಿಟ್ಜ್ ಸಾಧನೆ ಮಾಡಿದರು. ಆ ಸಾಧನೆಗಳನ್ನ ಮರೆಮಾಚುವಂತೆ ದೈತ್ಯ ಹಿಟ್ಲರ್ ಮತ್ತು ಇಸ್ರೇಲಿ ಕ್ರೀಡಾಪಟುಗಳ ಹತ್ಯೆ ನನ್ನನ್ನ ಕಾಡಿದೆ. ಈ ಎರಡು ಅಸಾಧಾರಣ ಒಲಿಂಪಿಕ್ಸ್ಗಳ ನಡುವೆ ನಡೆದ 1948ರ ಲಂಡನ್ ಒಲಿಂಪಿಕ್ಸ್ ನಮ್ಮೆಲರ ಸಾಮೂಹಿಕ ನೆನಪಿನಿಂದ ಅಳಿಸಿಹೋಗಿದೆ. 1948ರ ಜುಲೈ ತಿಂಗಳಲ್ಲಿ ನಡೆದ ಈ ಒಲಿಂಪಿಕ್ಸ್ ಮೆಲಕು ಹಾಕುವ ಪ್ರಯತ್ನ ಈ ಬರಹದ್ದು.

1940ರಲ್ಲಿ ಟೋಕಿಯೋದಲ್ಲಿ, 1944ರಲ್ಲಿ ಲಂಡನಿನಲ್ಲಿ ನಡೆಯಬೇಕಿದ್ದ ಎರಡನೇ ಮಹಾಯುದ್ಧದಿಂದ ರದ್ದಾದವು. ಜಗತ್ತೇ ಬಣಗಳಾಗಿ, ಬುಲೆಟ್, ಬಾಂಬುಗಳಿಂದ ಲಕ್ಷಾಂತರ ಮುಗ್ಧರು ಹೆಣವಾಗುತ್ತಿದ್ದ ದಿನಗಳಲ್ಲಿ ಕ್ರೀಡೆ ಆಯೋಜಿಸುವುದಾದರೂ ಹೇಗೆ? ಅಪಾರ ಸಾವು ನೋವಿನ ನಂತರ 1945ರಲ್ಲಿ ಮಹಾಯುದ್ಧ ಕೊನೆಗೊಂಡಿತು. ವಿಷಮಗೊಂಡಿದ್ದ ಭುವಿಯನ್ನ ಶಾಂತತೆಯೆಡೆಗೆ ಮುನ್ನಡೆಸುವ ಜವಾಬ್ದಾರಿ ಲಂಡನ್ ನಗರದ ಮೇಲಿತ್ತು. ಅದರಂತೆ 1948ರಲ್ಲಿ ಒಲಿಂಪಿಕ್ಸ್ ಆಯೋಜನೆಗೊಂಡಿತು. ಮಹಾಯುದ್ಧದ ವೇಳೆ ಜರ್ಮನಿ ನೀಡಿದ ಆಘಾತವನ್ನ ಮರೆಯದ ಇಂಗ್ಲೆಂಡ್ ತನ್ನ ನೆಲದಲ್ಲಿ ನೆಡೆದ ಒಲಿಂಪಿಕ್ಸ್ನಲ್ಲಿ ಭಾಗವಹಿಸಲು ಜರ್ಮನಿಗೆ ಆಹ್ವಾನ ನೀಡಲಿಲ್ಲ. ಏನೇನೋ ಸಬೂಬು ಹೇಳಿ ಜಪಾನನ್ನೂ ಕೂಡ ಹೊರಗಿಡಲಾಯಿತು. ಅರಬ್ ದೇಶಗಳ ಆಕ್ಷೇಪಣೆಯಿಂದ ಇಸ್ರೇಲಿ ಕ್ರೀಡಾಪಟುಗಳಿಗೆ ಅವಕಾಶ ನಿರಾಕರಿಸಲಾಯಿತು. ಲಂಡನ್ ಒಲಿಂಪಿಕ್ಸ್ ತವರಾದ ವೆಂಬ್ಲಿ ಕ್ರೀಡಾಂಗಣ ರಾಜಕೀಯ ಪಗಡೆ ಹಾಸಾಯಿತು.

ಲಂಡನ್ ಒಲಿಂಪಿಕ್ಸ್ ಭಾರಿ ಸಂಯಮ ಹಾಗು ಆರ್ಥಿಕ ಬಿಗುವಿನಿಂದ ಆಯೋಜಿಸಿದ ಕ್ರೀಡಾಕೂಟ. ಯುದ್ಧದ ಭೀಕರ ಪರಿಣಾಮಗಳು, ಆರ್ಥಿಕ ಬಿಕ್ಕಟ್ಟು ಯಾವುದೇ ಆಡಂಬರಕ್ಕೆ ಅವಕಾಶ ನೀಡಲಿಲ್ಲ. ಚಿನ್ನದ ಪದಕಗಳನ್ನೂ ಕೂಡ ಹೊನ್ನಿನ ತಗಡಿನಿಂದ ಮಾಡಿಸಲಾಗಿತ್ತು. ವೆಂಬ್ಲಿ ಕ್ರೀಡಾಂಗಣವನ್ನ ಬಹಳ ಶ್ರಮದಿಂದ ಸಜ್ಜುಗೊಳಿಸಲಾಗಿತ್ತು. ಬೇರೆ ಒಲಿಂಪಿಕ್ಸ್ ಗಳಲ್ಲಿ ಕ್ರೀಡಾಪಟುಗಳಿಗೆ ವಿಶೇಷ ಗ್ರಾಮವೊಂದನ್ನ ನಿರ್ಮಿಸಲಾಗುತ್ತಿತ್ತು ಆದರೆ ಲಂಡನಿಗೆ ಬಂದ ಕ್ರೀಡಾಳುಗಳು ಮಿಲಿಟರಿ ಕ್ಯಾಂಪ್ಗಳಲ್ಲಿ ಮತ್ತು ಸ್ಕೂಲುಗಳಲ್ಲಿ ತಂಗಬೇಕಾಯಿತು!

ಯುದ್ಧದ ದಿನಗಳಲ್ಲಿ ಜರ್ಮನಿ ಲಂಡನ್ನಿನ ಮೇಲೆ ಬಾಂಬುಗಳ ಸುರಿಮಳೆಗೈದಿತ್ತು. ಸುಮಾರು ಅರ್ಧ ಮಿಲಿಯನ್ ಜನರ ಪ್ರಾಣ ತೆತ್ತಿದ್ದರು. 1948 ಇಂಗ್ಲೆಂಡ್ ಇನ್ನು ಯುದ್ಧದ ದುಷ್ಪರಿಣಾಮಗಳಿಂದ ದಿಂದ ಚೇತರಿಸಿಕೊಂಡಿರಲಿಲ್ಲ. ಆಹಾರಕ್ಕಾಗಿ ಎಲ್ಲೆಡೆ ಆಹಾಕಾರವಿದ್ದ ದಿನಗಳವು. ಅಂತಹ ಸಮಯದಲ್ಲಿ 4300 ಕ್ರೀಡಾಳುಗಳು ಲಂಡನ್ನಿಗೆ ಬಂದಿಳಿದಿದ್ದಾರೆ! ಆ ದಿನಗಳಲ್ಲಿ ಕ್ರೀಡೆಗೆಂದು ಬಂದವರು ಜೊತೆಗೆ ಆಹಾರವನ್ನೂ ಕೊಂಡೊಯ್ಯುವ ಪರಿಸ್ಥಿತಿ ಉದ್ಭವವಾಗಿತ್ತು.

ಅರ್ಜೆಂಟೀನಾ, ಅಮೇರಿಕಾ, ಡೆನ್ಮಾರ್ಕ್, ಫ್ರಾನ್ಸ್ ತಮ್ಮ ಕ್ರೀಡಾಳುಗಳಿಗೆ ನೂರಾರು ಟನ್ ದನದ ಮಾಂಸ, ಮೊಟ್ಟೆ, ಬೆಣ್ಣೆ, ಹಂದಿಯ ಮಾಂಸ, ಬ್ರೆಡ್ಡು ರವಾನಿಸಿದ್ದವು. ಇಂಗ್ಲೆಂಡ್ ಕೂಡ ಸ್ವಲ್ಪ ಮಟ್ಟಿಗೆ ಆಹಾರ ಆಮದು ಮಾಡಿಕೊಂಡು ಯುದ್ಧದ ದಿನಗಳಲ್ಲಿ ಆಗಸದಿಂದ ಬೀಳುವ ಬಾಂಬ್ಗಳಿಂದ ಪ್ರಾಣ ಉಳಿಸಿಕೊಳ್ಳಲು ಮಾಡಿಕೊಂಡಿದ್ದ ಸುರಂಗಗಳಲ್ಲಿಟ್ಟು ಕಾಯಲಿಕ್ಕೆ ಸೈನಿಕರನ್ನ, ಕೆಲವೆಡೆ ವಿದ್ಯಾರ್ಥಿಗಳನ್ನ ನಿಯೋಜಿಸಿತ್ತು. ಬೆಣ್ಣೆ, ಬ್ರೆಡ್ಡು, ಹಾಲು, ಚಾಕೋಲೇಟ್, ಟೀ, ಹಿಟ್ಟು, ವೈನ್ ಲೂಟಿಯಾಗುತ್ತಿದ್ದ ದಿನಗಳವು.

ಫುಟ್ಬಾಲ್ ಇತಿಹಾಸದ ಅತ್ಯಂತ ವಿಚಿತ್ರ ಪಂದ್ಯವೊಂದು ಲಂಡನ್ ಒಲಿಂಪಿಕ್ಸ್ ನಲ್ಲಿ ನಡೆಯಿತು. ಭಾರತದ ಫುಟ್ಬಾಲ್ ತಂಡ ಫ್ರೆಂಚ್ ತಂಡಕ್ಕೆ ಎದುರಾಳಿ. ಏಷ್ಯಾದ ಹೊರಗೆ ಯಾವುದೇ ಅಂತಾರಾಷ್ಟ್ರೀಯ ಪಂದ್ಯಗಳನ್ನಾಡದ ಭಾರತ ತಂಡದ ಫುಟ್ಬಾಲ್ ಆಟಗಾರರು ಬರಿಗಾಲಲ್ಲೇ ಮೈದಾನಕ್ಕಿಳಿದಿದ್ದರು! ವಸ್ತ್ರಸಂಹಿತೆಯ ಪ್ರಕಾರ ಅಂದಿನ ಸ್ವೀಡಿಷ್ ತೀರ್ಪುಗಾರ ಭಾರತವನ್ನ ತಕ್ಷಣ ಅನರ್ಹಗೊಳಿಸಬಹುದಿತ್ತು. ಆದರೆ ಅಂದು ಅಂಪೈರ್ ಭಾರತ ತಂಡವನ್ನ ಬರಿಗಾಲಲ್ಲೇ ಆಡಲು ಬಿಟ್ಟಿದ್ದ. ಫ್ರೆಂಚರಿಗೆ ಭಾರತ ಸುಲಭ ತುತ್ತಾಗಬಹುದೆಂದು ಅಂದುಕೊಂಡಿದ್ದವರಿಗೆ ಅಚ್ಚರಿ ಕಾದಿತ್ತು. ಭಾರತ ತಂಡ ಫ್ರೆಂಚ್ ತಂಡಕ್ಕೆ ತೀವ್ರ ಪೈಪೋಟಿ ನೀಡಿತು. ಫ್ರೆಂಚ್ ಮೊದಲ ಗೋಲ್ ಹೊಡೆದರೂ ಸಾರಂಗಪರಿ ಧನರಾಜ್ ರಾಮನ್ ಹೊಡೆದ ಗೋಲ್ ಭಾರತವನ್ನ ಐತಿಹಾಸಿಕ ಗೆಲುವಿನ ಹೊಸ್ತಿಲಿಗೆ ತಂದು ನಿಲ್ಲಿಸಿತ್ತು. ಪಂದ್ಯದ ಅಂತ್ಯಕ್ಕೆ ಐದು ನಿಮಿಷಗಳಿರುವಾಗ ಭಾರತ ತಂಡಕ್ಕೆ ಪೆನಾಲ್ಟಿ ಅವಕಾಶ ಸಿಕ್ಕಿತ್ತು. ಶೈಲೇಂದ್ರ ನಾಥ್ ಮಾನ ಅವಕಾಶ ಕೈಚೆಲ್ಲಿದರು. ಫ್ರೆಂಚ್ ತಂಡ ಕೊನೆಯ ಗಳಿಗೆಯಲ್ಲಿ ಗೋಲ್ ಹೊಡೆದು ವಿಜಯಿಯಾದರು.

ಲಂಡನ್ ನಲ್ಲಿ ನೀಡಿದ ಈ ಅದ್ಭುತ ಪ್ರದರ್ಶನದಿಂದ 1950ರಲ್ಲಿ ಬ್ರೆಜಿಲ್ ನಲ್ಲಿ ನಡೆಯಬೇಕಿದ್ದ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ಆಡಲು ಭಾರತ ತಂಡ ಅರ್ಹತೆಗಳಿಸಿತು. ಆದರೆ ಈ ಬಾರಿ ಬರಿಗಾಲಲ್ಲಿ ಆಡುವಂತಿಲ್ಲವೆಂದು ಫಿಫಾ ಪಟ್ಟುಹಿಡಿಯಿತು. ಶೂ ತೊಟ್ಟು ಪ್ರತಿಷ್ಠಿತ ಪಂದ್ಯಾವಳಿ ಆಡುವುದಕ್ಕಿಂತ ಬ್ರೆಜಿಲ್ ದೇಶಕ್ಕೆ ಹೋಗದೆ ಇರುವುದೇ ಇರುವುದೇ ಒಳಿತೆಂದು ಭಾರತ ನಿರ್ಧರಿಸಿತು!

1936ರ ಬರ್ಲಿನ್ ಒಲಿಂಪಿಕ್ಸ್ ಎಂದರೆ ಜೆಸ್ಸಿ ಒವೆನ್ಸ್ ಎಂತಾದರೆ, 1948ರ ಲಂಡನ್ ಒಲಿಂಪಿಕ್ಸ್ ಹಾಲೆಂಡ್ ದೇಶದ ಫ್ಯಾನಿ ಬ್ಲ್ಯಾಂಕರ್ಸ್ -ಕೊಯೆನ್ ನದ್ದು. (Fanny Blankers-Koen). ಫ್ಯಾನಿ 1936ರ ಒಲಿಂಪಿಕ್ಸ್ ನಲ್ಲಿ ಭಾಗವಹಿಸಿದಾಗ ಆಕೆಗೆ ಕೇವಲ 17ವರ್ಷ. ಬರ್ಲಿನಲ್ಲಾವುದೇ ಪದಕ ಗೆಲ್ಲಲಿಲ್ಲವಾದರೂ ದಿಗ್ಗಜ ಜೆಸ್ಸಿ ಒವೆನ್ಸ್ ಅನ್ನು ಕಣ್ಣಾರೆ ಕಂಡು ಸ್ಪೂರ್ತಿ ಪಡೆದಿದ್ದಳು . ಜೆಸ್ಸಿ ಒವೆನ್ಸ್ ಮಾಡಿದ ಸಾಧನೆಯನ್ನ ಸರಿಗಟ್ಟಬೇಕೆಂದುಕೊಂಡವಳಿಗೆ ಇತಿಹಾಸ ಬಾರಿ ಪೆಟ್ಟನ್ನೇ ನೀಡಿತ್ತು. 1936-1948 ನಡುವೆ ನಡೆಯಬೇಕಿದ್ದ ಎರಡು ಒಲಿಂಪಿಕ್ಸ್ಗಳು ಮಹಾಯುದ್ಧದಿಂದ ರದ್ದಾಗಿದ್ದವು.

ಲಂಡನ್ ಒಲಿಂಪಿಕ್ಸ್ ಶುರುವಾಗುವ ವೇಳೆಗೆ ಫ್ಯಾನಿ 30ವರ್ಷದವಳಾಗಿದ್ದಳು. ಆಕೆಗೆ ವಿವಾಹವಾಗಿ ಇಬ್ಬರು ಮಕ್ಕಳಿದ್ದರು. ಮನೆಮಡದಿಯಾದರು ಆಕೆ ಮಹದಾಸೆಗಳನ್ನ ಮಣ್ಣುಪಾಲು ಮಾಡಿರಲಿಲ್ಲ. ನಿರಂತರ ಅಭ್ಯಾಸದಲ್ಲಿ ತೊಡಗಿದ್ದಳು. ತುಂಡು ಚಡ್ಡಿ ತೊಟ್ಟು ಓಡುವಾಗ ಜನರ ಅಣಕಕ್ಕೆ, ಕೆಂಗಣ್ಣಿ ಫ್ಯಾನಿ ಗುರಿಯಾಗಿದ್ದೂ ಇದೆ. ಪತಿ ಯಾನ್ ಬ್ಲ್ಯಾಂಕರ್ಸ್ ತರಬೇತುದಾರಾನಾದುದರಿಂದ ಜನರ ನಿಂದನೆಯನ್ನ ನಿರ್ಲಕ್ಷ್ಯಸಿಸಿ ಆಕೆ ಸಾಧನೆಯತ್ತ ತನ್ನ ದೃಷ್ಟಿ ನೆಟ್ಟಳು. ಲಂಡನ್ ಒಲಿಂಪಿಕ್ಸ್ ನಲ್ಲಿ ಆಕೆ ಮಾಡಿದ ಸಾಧನೆ ಬಹುಶ ಸಾರ್ವಕಾಲಿಕ ಶ್ರೇಷ್ಠ ಸಾಧನೆಯೆಂದರೆ ಸುಳ್ಳಲ್ಲ. 100, 200 ಮೀಟರ್ ಓಟ. 80ಮೀಟರ್ ಹರ್ಡಲ್ ಓಟ ಮತ್ತು 4×100ರಿಲೆ ಓಟದಲ್ಲಿ ಆಕೆ ಚಿನ್ನದ ಪದಕ ಗೆದ್ದಳು. ವಿವಾಹಿತೆಯೊಬ್ಬಳು, ಮಕ್ಕಳನ್ನ ಹೆತ್ತವಳು ಸಾಧನೆ ಮಾಡಲಾರರು ಎಂಬ ನಂಬಿಕೆಯನ್ನ ಮಣ್ಣುಮಾಡಿದಳು. ಮೊದಲು ನಿಂದಿಸುತ್ತಿದ್ದ ಜನ ಆಕೆಗೆ ನೀಡಿದ ಬಿರುದು- ಫ್ಲೈಯಿಂಗ್ ಹೌಸ್ ವೈಫ್ (The Flying Housewife) ಎಂದು. ಒಲಿಂಪಿಕ್ಸ್ ನಂತರ ಆಂಸ್ಟರ್ಡ್ಯಾಮ್ ನಗರದಲ್ಲಿ ಆಕೆಯ ಮೆರವಣಿಗೆ ನೆಡೆಯಿತು. ಶುಭ ಹಾರೈಸಲು ಬಾರಿ ಸಂಖ್ಯೆಯಲ್ಲಿ ನೆರೆದಿದ್ದರು. ಅಭಿಮಾನಿಯೊಬ್ಬ ಫ್ಯಾನಿಗೆ ಸೈಕಲ್ ವೊಂದನ್ನ ಕೊಡುಗೆ ನೀಡಿದನಂತೆ. ” ಕೆಲ ಮೀಟರ್ ಓಡಿದಕ್ಕೆ ಇಷ್ಟು ದುಬಾರಿ ಕೊಡುಗೆಯೇ” ಎಂದು ಫ್ಯಾನಿ ಉದ್ಗರಿಸಿದ್ದಳಂತೆ! ಫ್ಯಾನಿ “೨೦ನೇ ಶತಮಾನದ ಶ್ರೇಷ್ಠ ಕ್ರೀಡಾಪಟು”ವೆಂದು ಅಂತರರಾಷ್ಟ್ರೀಯ ಒಲಿಂಪಿಕ್ ಅಸೋಸಿಯೇಷನ್ 1999ರಲ್ಲಿ ಘೋಷಿಸಿತು.

ಲಂಡನ್ ಒಲಿಂಪಿಕ್ಸ್ ಕಥನ ಸಾರ್ಜೇಂಟ್ ಕರೋಲಿ ಟಕಾಕ್ಸ್ (karoly Takacs) ಪ್ರಸ್ತಾಪವಿಲ್ಲದೆ ಸಂಪೂರ್ಣವಾಗುವುದಿಲ್ಲ. ಟಕಾಕ್ಸ್ ಹಂಗೇರಿಯ ಶ್ರೇಷ್ಠ ಶೂಟರ್. ಅವನ ಬಲಗೈ ಬಳಸಿ ಟ್ರಿಗರ್ ಎಳೆದರೆ ಗುಂಡು ಗುರಿತಲುಪದೇ ಇರುತ್ತಿರಲಿಲ್ಲ. ಪ್ರತಿ ಬಾರಿಯೂ bulls eye. ಆತ 1936ರ ಒಲಿಂಪಿಕ್ಸ್ ನಲ್ಲಿ ಭಾಗವಹಿಸಬೇಕಿತ್ತು. ಹಂಗೇರಿ ಸೇನೆಯ ಮೇಲಧಿಕಾರಿಗಳಿಗೆ ಮಾತ್ರ ಒಲಿಂಪಿಕ್ಸ್ನಂತಹ ಪ್ರತಿಷ್ಠಿತ ಶೂಟರ್ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಅನುಮತಿಯಿದ್ದ ಕಾರಣದಿಂದ ಆತನಿಗೆ ಅವಕಾಶ ಕೈತಪ್ಪಿತ್ತು. ನಿರಾಶನಾಗದೆ ಶ್ರದ್ಧೆಯಿಂದ ದುಡಿದು ಸೇನೆಯಲ್ಲಿ ಲೆಫ್ಟ್ನೆಂಟ್ ಆದ.

ದುರದೃಷ್ಟವಶಾತ್ ಒಮ್ಮೆ ಆತನ ಬಲಗೈಯಲ್ಲಿದ್ದ ದೋಷಪೂರಿತ ಗ್ರೆನೇಡೊಂದು ಸ್ಫೋಟಿಸಿತು. ಟಕಾಕ್ಸ್ ಬಲಗೈ ಛಿದ್ರಗೊಂಡಿತು. ಅಲ್ಲಿಗೆ ಟಕಾಕ್ಸ್ ಒಲಿಂಪಿಕ್ಸ್ ಪದಕ ಗೆಲ್ಲುವ ಕನಸು ಕೂಡ ಭಗ್ನಗೊಂಡಿತು ಅಂದಿಕೊಂಡಿರ? ಹೂ ಹೂ. ಟಕಾಕ್ಸ್ ತನ್ನ ಎಡಗೈಯಲ್ಲಿ ತರಬೇತಿ ಆರಂಭಿಸಿದ. ಬಹುಬೇಗ ಎಲ್ಲಾ ಚಾಂಪಿಯನ್ಷಿಪಗಳಲ್ಲೂ ಜಯಿಸಿದ. ಒಲಿಂಪಿಕ್ಸ್ ಆಡಲು ಅರ್ಹನಾದ.

ಒಲಿಂಪಿಕ್ಸ್ ಫೈನಲ್ ಸುತ್ತಿನಲ್ಲಿ ಟಕಾಕ್ಸ್ ಎದುರಾಳಿ ಅರ್ಜೆಂಟೀನಾದ ಕಾರ್ಲೋಸ್ ಡಿಯಾಜ್ ಸಾಯೆನ್ಜ್ ವಾಲಿಯೆಂಟೇ. “ನೀನು ಲಂಡನ್ಗೇಕೆ ಬಂದೆ?” ಎಂದು ಕಾರ್ಲೋಸ್ ಟಕಾಕ್ಸ್ನನ್ನು ಚೇಡಿಸಿದನಂತೆ. ಸ್ಥಿತಪ್ರಜ್ಞಾನಾದ ಟಕಾಕ್ಸ್ ಸರಳವಾಗಿ “ನಾನು ಕಲಿಯಲು ಬಂದೆ” ಎಂದನಂತೆ. ಕೊನೆಯ ಸುತ್ತಿನಲ್ಲಿ ಟಕಾಕ್ಸ್ ಪ್ರದರ್ಶನ ನೋಡಿದ್ದ, ದ್ವೀತಿಯ ಬಹುಮಾನ ಗೆದ್ದ ಕಾರ್ಲೋಸ್ ಹೇಳಿದನಂತೆ ” ಶುಭಾಶಯಗಳು ಟಕಾಕ್ಸ್, ನೀನು ತುಂಬಾನೇ ಕಲಿತುಬಿಟ್ಟಿದ್ದೀಯ.” ಎಂದು. ಟಕಾಕ್ಸ್ ಮುಂದುವರೆದು 1952ರ ಹೆಲ್ಸಿಂಕಿ ಒಲಿಂಪಿಕ್ಸ್ನಲ್ಲೂ ಚಿನ್ನದ ಪದಕ ಪಡೆದ. ಇಂದಿಗೂ ಹಂಗೇರಿಯಲ್ಲಿ ಟಕಾಕ್ಸ್ ಹೋರಾಟ, ಶ್ರಮ ಮತ್ತು ಆಶಾವಾದದ ಪ್ರತೀಕ.

ಕ್ರೀಡೆಯೆಂದರೆ ಇಂದಿಗೂ ಕೆಲವರು ಮೂಗು ಮುರಿಯುತ್ತಾರೆ. ಕ್ರೀಡೆಯಂದರೆ ವಿಲಾಸಿ ಜೀವಿಗಳ ಶೋಕಿ, ಅದೊಂದು ದುಬಾರಿ ಹವ್ಯಾಸವೆಂದುಕೊಂಡು, ಕ್ರೀಡೆಯನ್ನ ಸಾರಾಸಗಟಾಗಿ ತಳ್ಳಿ ಹಾಕುವವರಿದ್ದಾರೆ. ಕೆಲ ಕ್ರೀಡೆಗಳು ವಿಲಾಸಿ ಜನರಿಗೆ ಮಾತ್ರ ಸೀಮಿತವಾಗಿರಬಹುದು ಆದರೆ ಕ್ರೀಡೆಯಲ್ಲಿ ನಿಮಗೆ ಸದಾ ಹ್ಯೂಮನ್ ಸ್ಟೋರೀಸ್ ಸಿಗುತ್ತಲೇ ಇರುತ್ತವೆ. ಇಲ್ಲಿ ಎಲ್ಲಾ ಅಡೆತಡೆಗಳನು ಮೀರಿ ಸಾಧನೆ ಮಾಡಿದ ಜೆಸ್ಸಿ ಒವೆನ್ಸ್, ಫ್ಯಾನಿ, ಟಕಾಕ್ಸ್ ನಂತಹ ಸಾಧಕರಿದ್ದಾರೆ. ಸ್ಟೆರೊಯ್ಡ್ಸ್ ಸೇವಿಸಿ ಓಟ ಗೆದ್ದ ಬೆನ್ ಜಾನ್ಸನ್ ನಂತಹ ಖಳನಾಯಕರಿದ್ದಾರೆ.

ಕ್ರೀಡೆ ಎಲ್ಲಾ ಕಾಲದ ಆಗುಹೋಗುಗಳಿಗೆ ಸದಾ ಸ್ಪಂದಿಸುತ್ತಾ ಸಾಗಿದೆ. ಹಿಟ್ಲರ್ ಬರುವನ್ನು ಮೊದಲೇ ಸೂಚಿಸಿದೆ. ಆತನ ವರ್ಣಭೇದ ನೀತಿಗೆ ಎಂದಿಗೂ ಗೆಲುವುಸಿಗದೆಂದು ಮಹಾಯುದ್ಧದ ಮುನ್ನವೇ ಸಾರಿದೆ. ಮಹಾಯುದ್ಧಗಳು ನೆಡೆದಾಗ ಕ್ರೀಡೆ ದಿಗಿಲುಗೊಂಡು ಅವಿತಿದೆ. ರಾಜಕೀಯ, ಕಲೆ, ಸಮಾಜ, ವಿಜ್ಞಾನ, ಜಾಗತಿಕ ಬೆಳವಣಿಗೆಗಳು, ವಿತ್ತ ನೀತಿಗಳು, ರಾಜ್ಯಶಾಸ್ತ್ರ, ವರ್ಗ/ಜಾತಿ ಸಂಘರ್ಷ, ರಾಜತಾಂತ್ರಿಕತೆ ಮತ್ತು ದೇಶದ ಸ್ವಾಸ್ತ್ಯವನ್ನ ಕ್ರೀಡೆಯ ಮೂಲಕವು ಓದಬಹುದೆಂಬುದು ಸತ್ಯ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!