Friday, September 20, 2024

ಪ್ರಾಯೋಗಿಕ ಆವೃತ್ತಿ

ವೀಳ್ಯೆದೆಲೆ ಬೆಳೆಗಾರರ ಸಂಕಷ್ಟಕ್ಕೆ ನೆರವಾಗದ ಶಾಸಕ ಅನ್ನದಾನಿ : ದೊಡ್ಡಯ್ಯ

ಮಳವಳ್ಳಿ ತಾಲ್ಲೂಕಿನಲ್ಲಿ ಬಹುಸಂಖ್ಯೆಯಲ್ಲಿರುವ ಗಂಗಾಮತಸ್ಥ ಜನಾಂಗದ ಹಲವು ಬಡ ರೈತರು ಭೂಮಿಯನ್ನು ಗುತ್ತಿಗೆಗೆ ಪಡೆದು ವೀಳ್ಯೆದೆಲೆ ಬೆಳೆಯಲು ಮುಂದಾಗಿದ್ದಾರೆ. ಆ ವರ್ಗ ಸಂಕಷ್ಟದಲ್ಲಿದ್ದಾಗ ಶಾಸಕ ಅನ್ನದಾನಿ ನೆರವಾಗಲಿಲ್ಲ. ವೀಳ್ಯೆದೆಲೆ ಬೆಳೆಗಾರರ ಸಂಕಷ್ಟದ ಕುರಿತು ಸದನದಲ್ಲಿ ಚರ್ಚಿಸಲು ಮುಂದಾಗಲಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಮಳವಳ್ಳಿ ಪುರಸಭೆ ಮಾಜಿ ಅಧ್ಯಕ್ಷ ದೊಡ್ಡಯ್ಯ ಅತೃಪ್ತಿ ಹೊರಹಾಕಿದರು.

ಮಳವಳ್ಳಿ ತಾಲ್ಲೂಕಿನಲ್ಲಿ ನಿರ್ಣಾಯಕವಾಗಿರುವ ಗಂಗಾಮತಸ್ಥರು ಶೈಕ್ಷಣಿಕವಾಗಿ ಹಾಗೂ ಆರ್ಥಿಕ ತೀರಾ ಹಿಂದುಳಿದಿದ್ದಾರೆ. ಕೆಲವರು ವೀಳ್ಯೆದೆಲೆ ಬೆಳೆಗಾರರಾಗಿ ಬದುಕು ಕಟ್ಟಿಕೊಂಡಿದ್ದಾರೆ. ಅತಿವೃಷ್ಠಿ ಹಾಗೂ ಕರೋನ ಸಂಕಷ್ಟದಲ್ಲಿದ್ದ ಆ ವರ್ಗದ ರೈತರ ಕಷ್ಟ ಕುರಿತು ಸದನದಲ್ಲಿ ಚರ್ಚಿಸಿ ಪ್ಯಾಕೇಜ್ ಪ್ರಕಟಿಸಲು ಸರ್ಕಾರದ ಮೇಲೆ ಒತ್ತಡ ತನ್ನಿ ಎಂದು ಹಲವು ಬಾರಿ ಮಾಡಿದ ನನ್ನ ಮನವಿಗೆ ಶಾಸಕ ಅನ್ನದಾನಿ ಕಿಂಚಿತ್ತು ಆಸಕ್ತಿ ತೋರದಿರುವುದು ನಮ್ಮ ದೌರ್ಬಾಗ್ಯ ಎಂದು ಬೇಸರ ವ್ಯಕ್ತಪಡಿಸಿದರು.

ತಾಲ್ಲೂಕಿನ ಗಂಗಾಮತಸ್ಥ ಜನಾಂಗದವರ ಮತ ಪಡೆದು ಎರಡು ಬಾರಿ ಶಾಸಕರಾಗಿರುವ ಡಾ. ಅನ್ನದಾನಿ ನಮ್ಮ ಜನಾಂಗದ ಸ್ವಾಭಿಮಾನದ ಸಂಕೇತವಾಗಿರು ಅಂಬಿಗರ ಚೌಡಯ್ಯ ಭವನ ನಿರ್ಮಾಣಕ್ಕೆ ಪಟ್ಟಣದ ಗಡಿಭಾಗದಲ್ಲಿರುವ ದಂಡಿನ ಮಾರಮ್ಮ ದೇವಾಲಯದ ಸಮೀಪದಲ್ಲಿರುವ 38 ಗುಂಟೆ ಜಮೀನು ಮಂಜೂರು ಮಾಡಿಸುವಂತೆ ಮಾಡಿದ ಮನವಿಗೆ ಎಳ್ಳಷ್ಟು ಆಸಕ್ತಿ ತೋರದಿರುವುದು ನಮ್ಮ ಜನಾಂಗದ ಬಗ್ಗೆ ಅವರಿಗಿರುವ ನಿರಾಸಕ್ತಿಯನ್ನು ತೋರಿಸುತ್ತದೆ ಎಂದು ಆಕ್ರೋಶ ಹೊರ ಹಾಕಿದರು.

1977ರ ತುರ್ತು ಪರಿಸ್ಥಿತಿ ವೇಳೆ ಅಂದಿನ ಜನತಾ ಪಕ್ಷದ ಮೂಲಕ ರಾಜಕೀಯ ಪ್ರವೇಶಿಸಿನ ನಾನು ಕಳೆದ 46ವರ್ಷಗಳ ಅವಧಿಯಲ್ಲಿ ಜನತಾ ಪರಿವಾರದ ವಿವಿಧ ಪಕ್ಷಗಳಲ್ಲಿ ಕಾರ್ಯನಿರ್ವಹಿಸಿ ಐದು ಬಾರಿ ಪುರಸಭೆ ಸದಸ್ಯನಾಗಿ, ಒಮ್ಮೆ ಅಧ್ಯಕ್ಷನಾಗಿ ಕಾರ್ಯನಿರ್ವಹಿಸಿ ಕೈಲಾದಷ್ಟು ಜನಸೇವೆ ಮಾಡಿದ್ದೇನೆ. ಪಕ್ಷನಿಷ್ಠನಾಗಿದ್ದ ನನಗೆ ವಿಪಕ್ಷಗಳಿಂದ ಹಲವು ಅವಕಾಶಗಳ ಪ್ರಸ್ತಾಪ ವ್ಯಕ್ತವಾದರೂ ನಾನು ಪಕ್ಷವನ್ನು ಬದಲಿಸಲಿರಲಿಲ್ಲ. ಆದರೆ, ಶಾಸಕ ಅನ್ನದಾನಿ ನನ್ನ ದುಡಿಮೆಗೆ ಯಾವುದೇ ಮೌಲ್ಯ ನೀಡಲಿಲ್ಲ ಎಂದು ಅತೃಪ್ತಿ ವ್ಯಕ್ತಪಡಿಸಿದರು.

ಮಳವಳ್ಳಿ ಪಟ್ಟಣದಲ್ಲಿರುವ 2,500 ಬಡ ಗಂಗಾಮತಸ್ಥ ಕುಟುಂಬಗಳಿಗೆ ದೇವರಾಜು ಅರಸು ನಿಗಮದಿಂದ ತಲಾ 50,000 ಸಾಲ-ಸೌಲಭ್ಯ ನೀಡುವ ಆಶ್ವಾಸನೆ ಈಡೇರಿಸಲು ಮುಂದಾಗಲಿಲ್ಲ ಇದು ಬಡ ಗಂಗಾಮತಸ್ಥರಿಗೆ ಮಾಡಿದ ದ್ರೋಹವಲ್ಲವೆ ಎಂದು ಪ್ರಶ್ನಿಸಿದರು.

ಮಾಜಿ ಶಾಸಕ ನರೇಂದ್ರಸ್ವಾಮಿ ವಿರುದ್ಧ ಇಲ್ಲಸಲ್ಲದ ರಾಜಕೀಯ ಆರೋಪವೆಸಗಲು ನನನ್ನು ದುರ್ಬಳಕೆ ಮಾಡಿಕೊಂಡ ಶಾಸಕ ಅನ್ನದಾನಿ ನನ್ನ ಮೇಲೆ ದಾಖಲಾದ ಪ್ರಕರಣಗಳಿಗೆ ವಕೀಲರ ಶುಲ್ಕ ನೀಡಲು ಮುಂದಾಗದೆ, ನಾನು ನಿವೇಶನವನ್ನು ಮಾರಿಕೊಳ್ಳಬೇಕಾದ ಸ್ಥಿತಿಗೆ ತಂದು ನಿಲ್ಲಿಸಿದರು. ಇಂತಹ ಜನಪ್ರತಿನಿಧಿಯಿಂದ ದೂರವಿರಬೇಕೆಂದು ನಿಶ್ಚಯಿಸಿ ತಾಲ್ಲೂಕಿನ ಅಭಿವೃದ್ಧಿ ದೃಷ್ಟಿಯಿಂದ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡಿದ್ದೇನೆ ಎಂದು ತಿಳಿಸಿದರು.

ಮಳವಳ್ಳಿ ತಾಲ್ಲೂಕಿನ ಅಭಿವೃದ್ಧಿ ಬಗ್ಗೆ ಆಸಕ್ತಿ ಹೊಂದಿರುವ ನರೇಂದ್ರಸ್ವಾಮಿ ಅವರನ್ನು ಮುಂಬರುವ ಚುನಾವಣೆಯಲ್ಲಿ ಬೆಂಬಲಿಸುವುದಾಗಿ ತಿಳಿಸಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!