Thursday, September 19, 2024

ಪ್ರಾಯೋಗಿಕ ಆವೃತ್ತಿ

ಪತ್ನಿಯನ್ನು ತೊರೆದ ಮೋದಿ ರಾಮಮಂದಿರ ಉದ್ಘಾಟನೆಗೆ ಅರ್ಹರೇ…?: ಸುಬ್ರಮಣಿಯನ್ ಸ್ವಾಮಿ ಪ್ರಶ್ನೆ

ಅಯೋಧ್ಯೆ ರಾಮಮಂದಿರದ ಮೂರ್ತಿ ಪ್ರತಿಷ್ಠಾಪನೆಗೆ ದಿನಗಣನೆ ಆರಂಭವಾಗಿರುವಂತೆಯೇ ಪ್ರಧಾನಿ ನರೇಂದ್ರ ಮೋದಿ ಅವರಿಂದ ರಾಮಮಂದಿರ ಉದ್ಘಾಟನೆಗೊಳಿಸುವುದಕ್ಕೆ ಬಿಜೆಪಿಯ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ ಆಕ್ಷೇಪ ಎತ್ತಿದ್ದು, “ಪತ್ನಿಯನ್ನು ತೊರೆದ ಮೋದಿ ರಾಮಮಂದಿರ ಉದ್ಘಾಟನೆಗೆ ಅರ್ಹರೇ?” ಎಂದು ಪ್ರಶ್ನಿಸಿದ್ದಾರೆ.

ರಾಮಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಹಲವು ನಾಯಕರು ಪರ-ವಿರೋಧ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿರುವಂತೆಯೇ ಸುಬ್ರಮಣಿಯನ್ ಸ್ವಾಮಿ ಈ ಪ್ರಶ್ನೆ ಎತ್ತಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಸುಬ್ರಮಣಿಯನ್ ಸ್ವಾಮಿ, “ಸೀತೆಯನ್ನು ರಕ್ಷಿಸಲು ಯುದ್ಧ ಮಾಡಿ, ಕಷ್ಟಗಳನ್ನು ಎದುರಿಸಿದ ರಾಮನ ಜನ್ಮಭೂಮಿಯಲ್ಲಿ ಮಂದಿರ ನಿರ್ಮಾಣವಾಗುತ್ತಿದೆ. ಆದರೆ ಪತ್ನಿಯನ್ನೇ ತೊರೆದ ಪ್ರಧಾನಿ ನರೇಂದ್ರ ಮೋದಿ ಅವರು ಅದರ ಉದ್ಘಾಟನಾ ಪೂಜೆ ಹೇಗೆ ನೆರವೇರಿಸುತ್ತಾರೆ?” ಎಂದು ಕೇಳಿದ್ದಾರೆ.

“>

“ರಾಮ ಸುಮಾರು ಒಂದೂವರೆ ದಶಕದಷ್ಟು ಕಾಲ ವನವಾಸವನ್ನು ಅನುಭವಿಸಿದ. ಅಪಹರಣಗೊಂಡ ಸೀತೆಯನ್ನು ರಕ್ಷಿಸಲು ಯುದ್ಧ ಮಾಡಿದ. ಆದರೆ ಮೋದಿ ಅವರು ತಮ್ಮ ಪತ್ನಿಯನ್ನು ತ್ಯಜಿಸಿದವರು ಎಂಬುದು ಎಲ್ಲರಿಗೂ ತಿಳಿದ ವಿಷಯ. ಹಾಗಿದ್ದರೆ, ಅವರು ಹೇಗೆ ಈ ಪೂಜೆ ನೆರವೇರಿಸುತ್ತಾರೆ? ಶ್ರೀರಾಮನ ಮೂರ್ತಿಯ ಪ್ರಾಣ ಪ್ರತಿಷ್ಠಾಪನಾ ಕಾರ್ಯವನ್ನು ಮೋದಿ ಅವರು ನೆರವೇರಿಸಲು ರಾಮನ ಭಕ್ತರು ಹೇಗೆ ಅವಕಾಶ ನೀಡುತ್ತಾರೆ” ಎಂದೂ ಸುಬ್ರಮಣಿಯನ್ ಸ್ವಾಮಿ ತಮ್ಮ ಎಕ್ಸ್ ಪೋಸ್ಟ್‌ನಲ್ಲಿ ಪ್ರಶ್ನಿಸಿದ್ದಾರೆ.

ನರೇಂದ್ರ ಮೋದಿ ಹಲವು ವರ್ಷಗಳಿಂದ ರಾಜಕೀಯದಲ್ಲಿದ್ದರೂ, ಅವರ ವೈವಾಹಿಕ ಜೀವನದ ಬಗ್ಗೆ ಮಾಹಿತಿ ಬಯಲಾಗಿರಲಿಲ್ಲ. 2014ರಲ್ಲಿ ಮೋದಿ ತಮ್ಮ ಚುನಾವಣಾ ಅಫಿಡವಿಟ್ ಸಲ್ಲಿಸುವಾಗ ವೈವಾಹಿಕ ಜೀವನದ ಬಗ್ಗೆ ಮಾಹಿತಿ ಒದಗಿಸಿದ್ದರು. ಅವರು ನಿವೃತ್ತ ಶಿಕ್ಷಕಿ ಜಶೋದಾಬೆನ್ ಅವರನ್ನು ವಿವಾಹವಾಗಿದ್ದರು. ಬಳಿಕ ಪತ್ನಿಯಿಂದ ದೂರ ಆಗಿದ್ದರು. ಅವರ ಸಮುದಾಯದ ಸಂಪ್ರದಾಯದಂತೆ ಮೋದಿ ಮತ್ತು ಜಶೋದಾ ಬೆನ್ ವಿವಾಹ ಬಹಳ ವರ್ಷಗಳ ಮುಂಚೆಯೇ ನಡೆದಿತ್ತು ಎಂಬ ವಿಚಾರ ಬಯಲಾಗಿತ್ತು.

ಜನವರಿ 22 ರಂದು ನಡೆಯಲಿರುವ ರಾಮ ಮಂದಿರ ಉದ್ಘಾಟನಾ ಸಮಾರಂಭದಲ್ಲಿ ಸುಮಾರು 4,000 ಸಂತರು ಮತ್ತು ನೂರಾರು ಅಧಿಕಾರಿಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ. ದೇಶದ ಬಹುತೇಕ ಪಕ್ಷಗಳ ಮುಖಂಡರಿಗೆ ರಾಮ ಮಂದಿರ ಟ್ರಸ್ಟ್ ಆಹ್ವಾನ ಕೊಟ್ಟಿದೆ. ಸಿಪಿಐ (ಎಂ) ಪಕ್ಷ ಆಹ್ವಾನವನ್ನು ತಿರಸ್ಕರಿಸಿದ್ದು, ಬಿಜೆಪಿ ಧಾರ್ಮಿಕ ಕಾರ್ಯಕ್ರಮವನ್ನು ರಾಜಕೀಯಗೊಳಿಸುತ್ತಿದೆ ಎಂದಿದೆ.

ಕೃಪೆ:ಈದಿನ.ಕಾಂ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!