Friday, September 20, 2024

ಪ್ರಾಯೋಗಿಕ ಆವೃತ್ತಿ

ಎಸ್.ಡಿ.ಜಯರಾಂ ಆಸ್ಪತ್ರೆಯಿಂದ ಉಚಿತ ಸಮಾಲೋಚನೆ – ರಿಯಾಯಿತಿ ಚಿಕಿತ್ಸೆ : ಡಾ. ಸಿ.ಎಂ ಪರಮೇಶ್ವರ್

ಮಂಡ್ಯನಗರದ ಎಸ್.ಡಿ.ಜಯರಾಂ ಆಸ್ಪತ್ರೆಯಲ್ಲಿ ಉಚಿತ ಸಮಾಲೋಚನೆ ಹಾಗೂ ರಿಯಾಯಿತಿ ದರದಲ್ಲಿ ಚಿಕಿತ್ಸೆಗಳನ್ನು ನೀಡಲಾಗುವುದೆಂದು ಡಾ.ಸಿ.ಎಂ ಪರಮೇಶ್ವರ್ ತಿಳಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಡ ಕುಟುಂಬದವರು, ಆಟೋ ಚಾಲಕರು, ಬೀದಿಬದಿ ವ್ಯಾಪಾರಿಗಳು, ಸರಕು ಸಾಮಾಗ್ರಿ, ಟೆಂಪೋ, ತಳ್ಳುಗಾಡಿ ವ್ಯಾಪಾರಿಗಳಿಗೆ ಇಂದಿನಿಂದ ನಿರಂತರವಾಗಿ ಎಸ್.ಡಿ.ಜಯರಾಮ್‌ ಆಸ್ಪತ್ರೆಯಲ್ಲಿ ಉಚಿತ ಸಮಾಲೋಚನೆ, ಶಸ್ತ್ರಚಿಕಿತ್ಸೆಗೆ 25%, ಮೆಡಿಸಿನ್ 10% ಹಾಗೂ ಲ್ಯಾಬ್ ಸೇವೆಯಲ್ಲಿ 30% ರಿಯಾಯಿತಿ ದೊರೆಯುತ್ತದೆ. ಆಸ್ಪತ್ರೆ ವತಿಯಿಂದ ಗುರುತಿನ ಚೀಟಿಗಳನ್ನು ವಿತರಿಸುತ್ತಿದ್ದು, ಅದನ್ನು ತಂದವರಿಗೆ ಉಚಿತ ಸಮಾಲೋಚನೆ ದೊರೆಯಲಿದೆ. ಆದ್ದರಿಂದ ಈ ವ್ಯಾಪ್ತಿಗೆ ಒಳಪಡುವ ನಾಗರೀಕರು ಈ ಯೋಜನೆಯ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಕೋರಿದರು.

ಜಿಲ್ಲೆಯ ಜನಪರ ರಾಜಕಾರಣಿ ಎಸ್.ಡಿ.ಜಯರಾಮ್ ರವರ ಆಶಯಗಳನ್ನು ಮತ್ತು ಕನಸುಗಳನ್ನು ಸಾಕಾರಗೊಳಿಸುವ ಉದ್ದೇಶದಿಂದ 2006ರಿಂದ ಎಸ್.ಡಿ.ಜಯರಾಮ್ ಸಮಗ್ರ ಗ್ರಾಮೀಣಾಭಿವೃದ್ಧಿ ಸಂಸ್ಥೆಯು ಹಲವಾರು ಜನಪರ ಕೆಲಸಗಳನ್ನು ಮಾಡಿಕೊಂಡು ಬರುತ್ತಿದೆ. ಎಸ್.ಡಿ.ಜಯರಾಂ ನರ್ಸಿಂಗ್ ಕಾಲೇಜಿನ ಮೂಲಕ 240 ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲಾಗುತ್ತಿದೆ, ಅಲ್ಲದೇ ಗುಣಮಟ್ಟದ ಶಿಕ್ಷಣ ನೀಡುವುದಕ್ಕಾಗಿ ಇನ್ವೆಂಚರ್ ಅಶೋಕ ಶಾಲೆಯನ್ನು ಸ್ಥಾಪಿಸಿ ರಿಯಾಯಿತಿ ದರದಲ್ಲಿ ಶಿಕ್ಷಣ ನೀಡಲಾಗುತ್ತಿದೆ. ಹಲವಾರು ಜನಪರ ಕೆಲಸಗಳನ್ನು 17 ವರ್ಷಗಳಿಂದ ಮಾಡಿಕೊಂಡು ಬರಲಾಗುತ್ತಿದೆ ಎಂದರು.

ಪ್ರತಿ ಸೋಮವಾರ ಕಣ್ಣಿನ ಚಿಕಿತ್ಸೆ
ಮಂಡ್ಯದಲ್ಲಿ ಪ್ರಪ್ರಥಮ ಬಾರಿಗೆ ಕಣ್ಣಿನ ಆಸ್ಪತ್ರೆ ಸ್ಥಾಪನೆ ಮಾಡಿದ್ದು, ಎಸ್.ಡಿ ಜಯರಾಂ ಸಂಸ್ಥೆ. ಈ ಸಂಸ್ಥೆಯೂ ಹಿಂದಿನಿಂದಲೂ ಅವಶ್ಯಕತೆ ಇರುವವರಿಗೆ ಕಣ್ಣಿನ ಚಿಕಿತ್ಸೆ ನೀಡುತ್ತಾ ಬರುತ್ತಿದೆ. ಅದರಂತೆ ಪ್ರತಿ ಸೋಮವಾರ 40 ಮಂದಿಗೆ ಬೆಂಗಳೂರಿಗೆ ಕರೆದೊಯ್ದು ಕಣ್ಣಿನ ಚಿಕಿತ್ಸೆ ಕೊಡಿಸುವ ಕೆಲಸವನ್ನು ಈ ಹಿಂದಿನಿಂದಲೂ ನಡೆಸಿಕೊಂಡು ಬರುತ್ತಿದ್ದೇವೆ ಎಂದರು.

ಪತ್ರಕರ್ತರಿಗೆ ವಿಮೆ
ಮಂಡ್ಯದ ಪತ್ರಕರ್ತರಿಗೆ ಸಾಮೂಹಿಕವಾಗಿ ವಿಮೆ ಸೌಲಭ್ಯ ಒದಗಿಸಲು ತಾವು ಬದ್ದವಾಗಿದ್ದು, ಈ ಬಗ್ಗೆ ಸಂಘದ ಪದಾಧಿಕಾರಿಗಳು ಆಸಕ್ತಿ ವಹಿಸಿದರೆ ಎಲ್ಲಾ ಪರ್ತಕರ್ತರಿಗೆ ವಿಮೆ ಸೌಲಭ್ಯ ಒದಗಿಸಲಾಗುವುದೆಂದು ಭರವಸೆ ನೀಡಿದರು.

ಯಶಸ್ವಿನಿ ಯೋಜನೆ ಒಳಪಟ್ಟ ಪ್ರಥಮ ಆಸ್ಪತ್ರೆ
ಎಸ್.ಡಿ.ಜಯರಾಂ ಆಸ್ಪತ್ರೆಯೂ ಸಹಕಾರಿ ಇಲಾಖೆಯ ಯಶಸ್ವಿನಿ ಯೋಜನೆ ವ್ಯಾಪ್ತಿಗೆ ಒಳಪಟ್ಟ ಪ್ರಥಮ ಖಾಸಗಿ ಆಸ್ಪತ್ರೆಯಾಗಿದೆ. ಸರ್ಕಾರ ನಿಗದಿ ಪಡಿಸಿದ ಬೆಲೆಗೆ ವೈದ್ಯಕೀಯ ಚಿಕಿತ್ಸೆಗಳನ್ನು ನೀಡಲಾಗುತ್ತಿದೆ. ಇತ್ತಿಚೇಗೆ ಯಶಸ್ವಿನಿ ಯೋಜನೆಗೆ ಪ್ಯಾಕೇಜನ್ನು ಸರ್ಕಾರ ಕಡಿತಗೊಳಿಸಿದ್ದರೂ ಜನರ ಆರೋಗ್ಯದ ದೃಷ್ಠಿಯಿಂದ ನಮ್ಮ ಆಸ್ಪತ್ರೆ ಯಶಸ್ವಿನಿ ಯೋಜನೆಯನ್ನು ಒಳಗೊಂಡಿದೆ ಎಂದು ನುಡಿದರು.

ಅಶೋಕ್ ಜಯರಾಂ ಪರ ಪ್ರಚಾರ
ನಾನು ಯಾವುದೇ ರಾಜಕೀಯ ಪಕ್ಷದಲ್ಲಿ ಗುರುತಿಸಿಕೊಂಡಿಲ್ಲ, ನಾನು ಯಾವ ಪಕ್ಷದ ಕಾರ್ಯಕರ್ತನೂ ಅಲ್ಲ ಎಂದು ಸ್ಪಷ್ಟಪಡಸಿದ ಅವರು, ನನಗೆ ರಾಜಕೀಯದ ಬಗ್ಗೆ ಸಹಾನೂಭೂತಿ ಇದೆ, ಆ ಕಾರಣಕ್ಕಾಗಿ ಅಶೋಕ್ ಜಯರಾಂ ಪರವಾಗಿ ಕೆಲಸ ಪ್ರಚಾರ ಮಾಡುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. ಮುಂದಿನ ದಿನಗಳಲ್ಲಿ ಸಂಪೂರ್ಣ ಉಚಿತ ಚಿಕಿತ್ಸೆ ನೀಡುವ ಮನದಾಸೆ ನನ್ನದಾಗಿದೆ, ಆ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತೇನೆ ಎಂದರು.

ಬಿಜೆಪಿ ಟಿಕೆಟ್ ಖಚಿತ 
ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಯುವ ಮುಖಂಡ ಅಶೋಕ್ ಜಯರಾಂಗೆ ಬಿಜೆಪಿ ಟಿಕೆಟ್ ಸಿಗುವ ಬಗ್ಗೆ ಸಂಪೂರ್ಣವಾಗಿ ವಿಶ್ವಾಸವಿದೆ. ಈ ಬಗ್ಗೆ ನನಗೆ ಯಾವುದೇ ಅನುಮಾನಗಳಿಲ್ಲ ಎಂದು ಸ್ಪಷ್ಟಪಡಿಸಿದರು. ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, ಹೆಚ್.ಡಿ.ದೇವೇಗೌಡ ಕುಟುಂಬಕ್ಕೂ ತಮ್ಮ ಕುಟುಂಬಕ್ಕೂ ಉತ್ತಮವಾದ ಸಂಬಂಧವಿದೆ. 2 ಕುಟುಂಬಗಳ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂದು ಸ್ಪಷ್ಟಪಡಿಸಿದರು.

ಗೋಷ್ಠಿಯಲ್ಲಿ ಎಸ್.ಡಿ.ಜಯರಾಂ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಮಾದೇಶ್, ಮುಖಂಡರಾದ ಕಲ್ಲಹಳ್ಳಿ ನಾಗೇಂದ್ರ, ಕಾರಸವಾಡಿ ಮಹದೇವು, ಅಕ್ಷಯ್ ಮತ್ತಿತರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!