Sunday, May 19, 2024

ಪ್ರಾಯೋಗಿಕ ಆವೃತ್ತಿ

ಮೂಲ ಸೌಲಭ್ಯ ವಂಚಿತ ವಿವೇಕಾನಂದ ನಗರ : ನಿವಾಸಿಗಳಿಂದ ಮತದಾನ ಬಹಿಷ್ಕಾರ ನಿರ್ಧಾರ

ಮಂಡ್ಯ ನಗರದ ಹೃದಯ ಭಾಗದಲ್ಲಿ ಚಿಕ್ಕಮಂಡ್ಯ ಕೆರೆಯಂಗಣದ ವಿವೇಕಾನಂದ ಬಡಾವಣೆ ಸಂಪೂರ್ಣವಾಗಿ ಮೂಲ ಸೌಲಭ್ಯಗಳಿಂದ  ವಂಚಿತವಾಗಿದ್ದು, ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯ ಖಂಡಿಸಿ ಈ ಬಾರಿಯ ವಿಧಾನಸಭೆ ಚುನಾವಣೆಯ ಮತದಾನವನ್ನು ಬಡಾವಣೆಯ ನಿವಾಸಿಗಳು ಬಹಿಷ್ಕಾರ ಮಾಡಲಿದ್ದೇವೆಂದು ವಿವೇಕಾನಂದ ನಗರದ ಬಡಾವಣೆ ನಿವಾಸಿಗಳ ಸಂಘದ ಮುಖಂಡ ಕೀಲಾರ ಕೃಷ್ಣ ತಿಳಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಡಾವಣೆಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ, ಚರಂಡಿ, ಯುಜಿಡಿ, ರಸ್ತೆ, ಬೀದಿ ದೀಪಗಳ ಸೌಲಭ್ಯಗಳಿಲ್ಲ, ಚಿರತೆ, ನಾಯಿಗಳ ಹಾವಳಿ ಹೆಚ್ಚಾಗಿದೆ, ಕಸವನ್ನು ಸಂಗ್ರಹಿಸಲು ನಗರಸಭೆ ವಾಹನಗಳು ಬರುತ್ತಿಲ್ಲ, ಇದರಿಂದಾಗಿ ಇಲ್ಲಿ ಜೀವಿಸುತ್ತಿರುವವರು ಬದುಕುವುದೇ ಕಷ್ಟವಾಗಿದೆ ಎಂದು ಅಳಲು ತೋಡಿಕೊಂಡರು.

1998 ರಲ್ಲಿಸರ್ಕಾರದ ನಿರ್ದೇಶನದಂತೆ ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದವರು ವಿವೇಕಾನಂದ ನಗರ ಎಂಬ ನಗರ ಬಡಾವಣೆಯನ್ನು ನಿರ್ಮಿಸಿ, ಸಾರ್ವಜನಿಕರಿಗೆ ಸುಮಾರು 2800 ನಿವೇಶನವನ್ನು ನೀಡಿದೆ. ಈ ಬಡಾವಣೆಯಲ್ಲಿ ಈಗ 500 ದಿಂದ 600 ಮನೆಗಳಿದ್ದು, ಈ ಮನೆಗಳಿಗೆ ಮೂಲಭೂತ ಸೌಕರ್ಯವಾದ ಕುಡಿಯುವ ನೀರು, ಯು.ಜಿ.ಡಿ, ಚರಂಡಿ, ವಿದ್ಯುತ್‌ ದೀಪ ಹಾಗೂ ರಸ್ತೆಗಳಿಗೆ ಕ್ಲಾಸ್ ಮತ್ತು ಹೆಸರುಗಳನ್ನು ಇಡದೆ ಮತ್ತು ಉದ್ಯಾನವನಗಳನ್ನು ಸರಿಯಾದ ರೀತಿಯಲ್ಲಿ ನಿರ್ಮಿಸಿಲ್ಲ, ನಗರಸಭೆಯೂ ಬಡಾವಣೆಯ ಕಸವನ್ನು ವಿಲೇವಾರಿ ಮಾಡಲು ಕಸದ ವಾಹನವನ್ನು ಕಳುಹಿಸದೆ, ಬಡಾವಣೆಯ ಕಂಡ ಕಂಡ ಕಡೆಗಳೆಲ್ಲಾ ತ್ಯಾಜ್ಯ ವಸ್ತುಗಳನ್ನು ಬಿಸಾಡಿದ್ದು ಇದರಿಂದ ಬೀದಿ ನಾಯಿಗಳ ಹಾವಳಿ ಬಡಾವಣೆಯಲ್ಲಿ ಹೆಚ್ಚಾಗಿದೆ ಎಂದು ದೂರಿದರು.

ಈ ಎಲ್ಲಾ ಸಮಸ್ಯೆಗಳ ಬಗ್ಗೆ ಬಡಾವಣೆಯ ನಿವಾಸಿಗಳು ಸುಮಾರು 20 ವರ್ಷದಿಂದ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರು ಮತ್ತು ಅಧ್ಯಕ್ಷರಿಗೆ ಮತ್ತು ಜನ ಪ್ರತಿನಿಧಿಗಳಿಗೆ ಪತ್ರ ಮುಖೇನ ಹಾಗೂ ಖುದ್ದಾಗಿ ಕೇಳಿಕೊಂಡರೂ ಸಹ ಅವರು ನಿವೇಶನದ ಅಭಿವೃದ್ಧಿಗಾಗಿ ಹಾಗೂ ಮೂಲಭೂತ ಸೌಕರ್ಯವನ್ನು ಕಲ್ಪಿಸಿಕೊಡದೆ, ಮೂಖ ಪ್ರೇಕ್ಷಕರಂತೆ ವರ್ತಿಸುತ್ತಿದ್ದಾರೆ ಈ ಎಲ್ಲಾ ಹಿನ್ನೆಲೆಯಲ್ಲಿ ಮತದಾನ ಬಹಿಷ್ಕರಿಸುತ್ತಿದ್ದೇವೆ ಎಂದು ಹೇಳಿದರು.

ಗೋಷ್ಠಿಯಲ್ಲಿ ಮುಖಂಡರಾದ ಭೀಮೇಶ್, ಶಿವಪ್ರಕಾಶ್, ಚಂದ್ರು, ಪುಟ್ಟೇಗೌಡ, ಶ್ರೀನಿವಾಸ್, ರಾಜು ಹಾಗೂ ಟಿ. ರಾಜು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!