Thursday, September 19, 2024

ಪ್ರಾಯೋಗಿಕ ಆವೃತ್ತಿ

ಶಿಕ್ಷಕರು ವಿದ್ಯಾರ್ಥಿಗಳನ್ನು ಉತ್ತಮ ಪ್ರಜೆಗಳನ್ನಾಗಿಸಿ- ಡಾ.ಗುರುರಾಜ ಕರ್ಜಗಿ

ವರದಿ: ಅಣ್ಣೂರು ಸತೀಶ್

ದೇಶದ ಅಭಿವೃದ್ದಿಗೆ ಬುನಾದಿ ಹಾಕುವ ಶಿಕ್ಷಕರು ವಿದ್ಯಾರ್ಥಿಗಳನ್ನು ಉತ್ತಮ ಪ್ರಜೆಗಳನ್ನಾಗಿ ಮಾಡಬೇಕೆಂದು ಶಿಕ್ಷಣ ತಜ್ಞ ಡಾ.ಗುರುರಾಜ ಕರ್ಜಗಿ ತಿಳಿಸಿದರು.

ಮದ್ದೂರು ತಾಲ್ಲೂಕಿನ ಭಾರತೀನಗರದ ಭಾರತೀ ಕುವೆಂಪು ಸಭಾಂಗಣದಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇಶ ಇಂದು ಬದುಕುಳಿಯುತ್ತಿದ್ದರೆ ಅದು ಶಿಕ್ಷಕರಿಂದ. ಯಾವುದೇ ರಾಜಕಾರಣಿಯಿಂದಲ್ಲ ಅಥವಾ ಆಡಳಿತಾತ್ಮಕ ಅಧಿಕಾರಿಗಳಿಂದಲ್ಲ. ಶಿಕ್ಷಕರು ಮಕ್ಕಳಿಗೆ ವಿದ್ಯೆ ಧಾರೆ ಎರೆದು ಸಮಾಜದ ಸತ್ಪ್ರಜೆಗಳನ್ನಾಗಿ ಮಾಡಿ ದೇಶದ ಅಭಿವೃದ್ದಿಗೆ ಶ್ರಮಿಸುತ್ತಿದ್ದಾರೆ ಎಂದರು.

ಜಿ.ಮಾದೇಗೌಡರು ಗ್ರಾಮೀಣ ಭಾಗದಲ್ಲಿ ವಿದ್ಯಾಸಂಸ್ಥೆ ತೆರೆದು ಲಕ್ಷಾಂತರ ವಿದ್ಯಾರ್ಥಿಗಳಿಗೆ  ದಾರಿದೀಪ ವಾಗಿದ್ದಾರೆ. ಮಾದೇಗೌಡರ ಹೆಸರು ಪ್ರಜ್ವಲಿಸಿದಂತೆ ಈ ಶಿಕ್ಷಣ ಸಂಸ್ಥೆಯಲ್ಲಿ ಓದಿದಂತಹ ಅನೇಕ ವಿದ್ಯಾರ್ಥಿಗಳು ಸಹ ರಾಜ್ಯ ಮತ್ತು ದೇಶಕ್ಕೆ ಬೆಳಕು ಚೆಲ್ಲಿದ್ದಾರೆಂದು ಶ್ಲಾಘಿಸಿದರು.

ಭಾರತೀ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಹಾಗೂ ಶಾಸಕ ಮಧು ಜಿ.ಮಾದೇಗೌಡ ಮಾತನಾಡಿ, ಶಿಕ್ಷಕರ ದಿನಾಚರಣೆ ಮಹತ್ವವಾದ ದಿನ. ಡಾ.ಸರ್ವಪಲ್ಲಿ ರಾಧಾಕೃಷ್ಣ ಅವರ ಹುಟ್ಟುಹಬ್ಬವನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸುತ್ತಿರುವದು ನಮ್ಮೆಲ್ಲರ ಸೌಭಾಗ್ಯವಾಗಿದೆ. ಡಾ.ಗುರುರಾಜ ಕರ್ಜಗಿ ಅವರನ್ನು ನಮ್ಮ ಸಂಸ್ಥೆಗೆ ಬಹಳಷ್ಟು ಸಲ ಕರೆಸಬೇಕೆಂಬ ಪ್ರಯತ್ನದಲ್ಲಿದ್ದೆವು. ಆದರೆ ಇಂದು ಅದು ಯಶಸ್ವಿ ಕಂಡಿದ್ದು ನಮ್ಮೆಲ್ಲಾ ಶಿಕ್ಷಕರಿಗೂ ಖುಷಿತಂದಿದೆ ಎಂದರು.

ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ

ಇದೇ ಸಂದರ್ಭದಲ್ಲಿ ಹಾಸನದ ಸರ್ಕಾರಿ ಗೃಹವಿಜ್ಞಾನ ಕಾಲೇಜಿನ ಪ್ರಾಧ್ಯಾಪಕಿ ಡಾ.ಎಚ್.ಎನ್.ವಿದ್ಯಾ ಅವರಿಗೆ ಡಾ.ಪ್ರಭಾವತಿ ನಂಜಯ್ಯ ಅವರು ಉತ್ತಮ ಅಧ್ಯಾಪಕಿ ಪ್ರಶಸ್ತಿ ಪ್ರದಾನ ಮಾಡಿ ಅಭಿನಂದಿಸಲಾಯಿತು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಜ್ಞಾನವಂತರು ಮತ್ತು ವಿದ್ಯಾವಂತರು ದೇಶ-ವಿದೇಶಗಳಲ್ಲಿ ಉನ್ನತ ಉದ್ಯೋಗಳನ್ನು ಅಲಂಕರಿಸಿದ್ದರಿಂದ ಇಂದು ವೃದ್ದಾಶ್ರಮಗಳು ತಲೆಎತ್ತುತ್ತಿವೆ ಎಂದು ವಿಷಾದ  ವ್ಯಕ್ತಪಡಿಸಿದರು.

ಇದೇ ವೇಳೆ ಭಾರತೀ ಸಂಸ್ಥೆಯ ಶಿಕ್ಷಕರಿಗೆ ಮತ್ತು ನೌಕರರಿಗೆ ಆಯೋಜಿಸಿದ್ದ ವಿವಿಧ ಕ್ರೀಡೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಯಿತು. ಕಾರ್ಯಕ್ರಮಕ್ಕೂ ಮೊದಲು ಡಾ.ಸರ್ವಪಲ್ಲಿರಾಧಕೃಷ್ಣ ಮತ್ತು ಜಿ.ಮಾದೇಗೌಡರ ಭಾವಚಿತ್ರಕ್ಕೆ ವೇದಿಕೆ ಗಣ್ಯರು ಪುಷ್ಪನಮನ ಸಲ್ಲಿಸಿದರು.

ವೇದಿಕೆಯಲ್ಲಿ ನಿವೃತ್ತ ಪ್ರಾಧ್ಯಾಪಕಿ ಡಾ.ಪ್ರಭಾವತಿ ನಂಜಯ್ಯ, ಭಾರತೀ ಎಜುಕೇಷನ್ ಟ್ರಸ್ಟ್ ಸಿಇಓ ಆಶಯ್ ಮಧು ಮಾದೇಗೌಡ, ಕಾರ್ಯದರ್ಶಿ ಬಿ.ಎಂ.ನಂಜೇಗೌಡ, ಕಾರ್ಯದರ್ಶಿ ಸಿದ್ದೇಗೌಡ, ಟ್ರಸ್ಟಿಗಳಾದ ಜಯರಾಮು, ಮುದ್ದಯ್ಯ, ಕಾರ್ಕಹಳ್ಳಿ ಬಸವೇಗೌಡ, ಪ್ರಾಂಶುಪಾಲರಾದ ಡಾ.ಪಿ.ನಾಗೇಂದ್ರ, ಪ್ರೊ.ಎಸ್.ನಾಗರಾಜು, ತಮಿಜ್ಮಣಿ, ಪುಟ್ಟಸ್ವಾಮೀಗೌಡ, ಡಾ.ಸುರೇಶ್, ಎಚ್.ಪಿ.ಪ್ರತಿಮಾ, ಜಿ.ಕೃಷ್ಣ, ಡಾ.ಟಿ.ಬಾಲಸುಬ್ರಮಣ್ಯಂ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!