Friday, September 20, 2024

ಪ್ರಾಯೋಗಿಕ ಆವೃತ್ತಿ

ಬೆಂಗಳೂರು-ಮೈಸೂರು ಹೆದ್ದಾರಿಯ ಅಪೂರ್ಣ ಕಾಮಗಾರಿ ಪೂರ್ಣಗೊಳಿಸಿ : ಡಿಸಿ

ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಮಂಡ್ಯ ಜಿಲ್ಲಾ ವ್ಯಾಪ್ತಿಯಲ್ಲಿರುವ ಅಪೂರ್ಣ ಕಾಮಗಾರಿ ಹಾಗೂ ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸಲು ಶೀಘ್ರ ಕ್ರಮಕೈಗೊಳ್ಳಬೇಕೆಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಹೆಚ್.ಎನ್ ಗೋಪಾಲಕೃಷ್ಣ ಸೂಚಿಸಿದರು.

ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ದಶಪಥ ರಸ್ತೆಯ ಸರ್ವಿಸ್ ರಸ್ತೆ  ಕಾಮಗಾರಿ ಪೂರ್ಣಗೊಳ್ಳದೆ ಇರುವುದರಿಂದ ಸಂಚಾರಕ್ಕೆ ಅನಾನುಕೂಲ ಉಂಟಾಗಿದ್ದು, ಮಂಡ್ಯ ಜಿಲ್ಲೆಗೆ ಒಳಪಡುವ 55 ಕಿ.ಮೀ ವ್ಯಾಪ್ತಿಯಲ್ಲಿ ಕಳೆದ ಮೂರು ತಿಂಗಳಲ್ಲಿ ಹಲವಾರು ಅಪಘಾತವಾಗಿ ಸಾವು ನೋವು ಸಂಭವಿಸಿದೆ ಇದನ್ನು ಸೂಕ್ಷ್ಮವಾಗಿ ಪರಿಗಣಿಸಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಿ ಎಂದರು.

ಸರ್ವಿಸ್ ರಸ್ತೆಯ ಜಂಕ್ಷನ್ ನಲ್ಲಿ ದೀಪ ಅಳವಡಿಸಿ

ರಸ್ತೆ ಗುಣಮಟ್ಟ ಕಾಪಾಡಿಕೊಳ್ಳಿ, ರಸ್ತೆಯ ಆಗಮನ ಮತ್ತು ನಿರ್ಗಮನದಲ್ಲಿ ಸೂಚನಾ ಫಲಕ ಅಳವಡಿಸಿ, ಸರ್ವಿಸ್ ರಸ್ತೆಯ ಜಂಕ್ಷನ್ ನಲ್ಲಿ ದೀಪ ಅಳವಡಿಸಿ, ಹೈವೇನಲ್ಲಿ ವೇಗ ಮಿತಿ ಪರೀಕ್ಷಾ ವಾಹನ ಒದಗಿಸಬೇಕು, ರಸ್ತೆಯ 2 ಬದಿಗಳಲ್ಲಿ ವಿದ್ಯುತ್ ಟವರ್ ಕಳ್ಳತನದ ಬಗ್ಗೆ ಸುರಕ್ಷಿತ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ರಸ್ತೆ ಬದಿಯ ಬೇಲಿ ಕೀಳುವುದರಿಂದ ಅಪಘಾತವಾಗುವ ಸಂಭವ ವಿರುತ್ತದೆ. ಬೇಲಿ ಕೀಳುವವರ ಮೇಲೆ ಪ್ರಕರಣ ದಾಖಲಿಸಿ, ದಶಪಥ ರಸ್ತೆಗೆ ಒಳಪಡುವ ಮದ್ದೂರು, ಮಂಡ್ಯ, ಶ್ರೀರಂಗಪಟ್ಟಣ  ಗ್ರಾಮಗಳಲ್ಲಿ ರಸ್ತೆ ಸುರಕ್ಷತಾ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಬೇಕು ಎಂದರು.

ಲೋಕೋಪಯೋಗಿ, ಪಂಚಾಯತ್ ರಾಜ್, ನಗರ ಸ್ಥಳೀಯ ಸಂಸ್ಥೆಗಳ ರಸ್ತೆಗಳು ಎಲ್ಲೆಲ್ಲಿ ಗುಂಡಿ ಇರುತ್ತೆ ಅಲ್ಲಿ ಗುಂಡಿ ಮುಚ್ಚಿ ಹಾಗೂ ರಸ್ತೆಯ ಅವ್ಯವಸ್ಥೆ ಸರಿಪಡಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು. ಸಂಚಾರಿ ನಿಯಮವನ್ನು ಉಲ್ಲಂಘಿಸುವವರಿಗೆ ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಸಿ.ಸಿ ಕ್ಯಾಮರಾ ಅಳವಡಿಸಿ ದಂಡ ವಿಧಿಸುವ ವ್ಯವಸ್ಥೆಯನ್ನು ಅಳವಡಿಸುವ ಬಗ್ಗೆ ಚಿಂತಿಸಲಾಗುತ್ತಿದೆ ಎಂದು ತಿಳಿಸಿದರು.

ಕೂಡಲೇ ರಸ್ತೆ ಡುಬ್ಬ ನಿರ್ಮಾಣ ಮಾಡಿ

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್ ಯತೀಶ್ ಮಾತನಾಡಿ, ಬೆಂಗಳೂರು ಮೈಸೂರು ದಶಪಥ ಹೆದ್ದಾರಿಯ ಮಂಡ್ಯ ಸರ್ವಿಸ್ ರೋಡ್ ನಿಂದ ಮದ್ದೂರಿನ ಮುಖ್ಯ ರಸ್ತೆಗೆ ಸೇರುವ ರಸ್ತೆಯಲ್ಲಿ ರಸ್ತೆ ಡುಬ್ಬ ಇಲ್ಲದ ಕಾರಣ ಮುಖ್ಯ ರಸ್ತೆಯಲ್ಲಿ ಅಪಘಾತಗಳು ಸಂಭವಿಸುತ್ತಿದ್ದು, ಕೂಡಲೇ ರಸ್ತೆ ಡುಬ್ಬ ನಿರ್ಮಾಣ ಮಾಡಿ ಅಲ್ಲಿನ ಅವ್ಯವಸ್ಥೆ ಸರಿಪಡಿಸಿ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಾದ ಎನ್.ಹೆಚ್ ಮೃತ್ಯಂಜಯ, ರಾಜೇಂದ್ರಕುಮಾರ್, ಪ್ರಸಾದ್, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಹರ್ಷ, ಪ್ರಾದೇಶಿಕ ಸಾರಿಗೆ ಅಧಿಕಾರಿ ವಿವೇಕಾನಂದ, ಕೆ.ಎಸ್.ಆರ್.ಟಿ.ಸಿ ವಿಭಾಗೀಯ ನಿಯಂತ್ರಣ ಅಧಿಕಾರಿ ನಾಗರಾಜು, ಜಿ.ಪಂ ಅಭಿಯಂತರ  ಶಿವಚಂದ್ರು, ನಗರಸಭೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ರವಿಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!