Friday, September 20, 2024

ಪ್ರಾಯೋಗಿಕ ಆವೃತ್ತಿ

ಮತದಾನದ ಹಕ್ಕು ಇಲ್ಲದಿದ್ದರೆ ಶೋಷಿತರನ್ನು ಮನುಷ್ಯರಂತೆ ಪರಿಗಣಿಸುತ್ತಿರಲಿಲ್ಲ : ಡಾ. ವಾಸು

ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ನೀಡಿದ ಮತದಾನದ ಹಕ್ಕಿನಿಂದಾಗಿ ದಲಿತರು, ಶೋಷಿತರು ಹಾಗೂ ಬಡವರನ್ನು ಮನುಷ್ಯರಂತೆ ಕಾಣಲಾಗುತ್ತಿದೆ, ಒಂದು ವೇಳೆ ಮತದಾನದ ಹಕ್ಕು ಇಲ್ಲವಾಗಿದ್ದರೆ ಅವರನ್ನ ಪ್ರಾಣಿಗಳಿಗಿಂತ ಕಡೆಯಾಗಿ ಕಾಣಲಾಗುತ್ತಿತ್ತು ಎಂದು ಈ ದಿನ.ಕಾಂ ಮುಖ್ಯಸ್ಥ ಹಾಗೂ ಸಾಮಾಜಿಕ ಕಾರ್ಯಕರ್ತ ಡಾ.ವಾಸು ಅಭಿಪ್ರಾಯಪಟ್ಟರು.

ಮಂಡ್ಯ ನಗರದ ಕಾಳಪ್ಪ ಶ್ರಮಿಕ ಬಡಾವಣೆಯಲ್ಲಿ ಶುಕ್ರವಾರ ಸಂಜೆ ನಡೆದ ಡಾ.ಬಿ.ಆರ್.ಅಂಬೇಡ್ಕರ್ ಅವರ 132ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸ್ವಾತಂತ್ರ ಪೂರ್ವದಲ್ಲಿ ಕೇವಲ ಉಳ್ಳವರಿಗೆ ಮಾತ್ರ ಮತದಾನ ಹಕ್ಕು ಇತ್ತು. ಆಗ ಬಡವರನ್ನು ಯಾರು ಪರಿಗಣಿಸುತ್ತಿರಲಿಲ್ಲ. ಆದರೆ ಎಲ್ಲರಿಗೂ ಮತದಾನದ ಹಕ್ಕು ದೊರೆತ ನಂತರ ಶೋಷಿತರನ್ನು ಮನುಷ್ಯರನ್ನಾಗಿ ಕಾಣಲಾಗುತ್ತಿದೆ.

ಈಗಲೂ ನ್ಯಾಯಾಲಯಗಳಲ್ಲಿ ಭೂರಹಿತರು ಯಾವುದೇ ಪ್ರಕರಣದಲ್ಲಿ ಜಾಮೀನು ಪಡೆದುಕೊಳ್ಳಬೇಕಾದರೆ ಅಸ್ತಿವಂತರ ಬಳಿ ಹೋಗಿ ಆರ್.ಟಿ.ಸಿ.ಗಳನ್ನು ಕೇಳಿ ಪಡೆದುಕೊಂಡು ಜಾಮೀನು ಪಡೆಯಬೇಕಾಗಿದೆ. ಇಲ್ಲವೇ ಸರ್ಕಾರಿ ಉದ್ಯೋಗಿಯೊಬ್ಬರು ಗ್ಯಾರಂಟಿಯನ್ನು ಕೊಡಬೇಕಾಗಿದೆ. ಸ್ವಾತಂತ್ರ ಬಂದ 75 ವರ್ಷಗಳ ನಂತರವೂ ಇಂತಹ ಕಾನೂನುಗಳಿರುವುದು ಸರಿಯಾದುದ್ದಲ್ಲ. ಒಂದು ವೇಳೆ ಆಸ್ತಿ ಇಲ್ಲದವರು ಯಾವ ರೀತಿ ಜಾಮೀನು ಪಡೆಯಬೇಕು ? ಇದನ್ನು ಯೋಚಿಸಬೇಕಲ್ಲವೇ ಎಂದರು.

ಆಸ್ತಿವಂತರಾದ ನೀರವ್ ಮೋದಿ, ವಿಜಯ್ ಮಲ್ಯನಂತರು ಆಸ್ತಿ ಇದ್ದರೂ ಸಾಲ ಮಾಡಿ ದೇಶವನ್ನು ಬಿಟ್ಟು ಹೋಗಿಲ್ಲವೇ ? ಹೀಗಿರುವಾಗ ಜಾಮೀನಿಗೆ ಆಸ್ತಿ ಪತ್ರ ಕೇಳುವ ಕಾನೂನು ಈಗ ಅಗತ್ಯವೇ ಎಂದು ಪ್ರಶ್ನಿಸಿದರು.

ಹೇಗೆ ಹೋರಾಟ ಮಾಡಬೇಕೆಂಬುದನ್ನು ಅಂಬೇಡ್ಕರ್ ಅವರ ಬಗ್ಗೆ ಅಧ್ಯಯನ ಮಾಡುವುದರಿಂದ ತಿಳಿದುಕೊಳ್ಳಬಹುದು. ಇಲ್ಲಿನ ಕಾಳಪ್ಪ ಬಡಾವಣೆಯಲ್ಲಿ ಉಂಟಾಗಿದ್ದ ಹಲವು ತೊಂದರೆಗಳನ್ನು ಅತ್ಯಂತ ಜಾಣ್ಮೆಯಿಂದ ಹೋರಾಟ ಮಾಡಿ, ಇಂದಿಗೂ ಇಲ್ಲಿಯೇ ನಿವಾಸಿಗಳು ನೆಲೆಸುವಂತೆ ಮಾಡಲಾಗಿದೆ. ನಾವು ಎಂತಹ ಸಂದರ್ಭದಲ್ಲಿ ಎಂತಹ ಹೋರಾಟ ಮಾಡಬೇಕೆಂದನ್ನು ಅಂಬೇಡ್ಕರ್ ಅವರಿಂದ ತಿಳಿದಕೊಳ್ಳಬೇಕಿದೆ. ಇಲ್ಲಿನ ಶ್ರಮಿಕ ನಗರದ ಗುಡಿಸಲುಗಳನ್ನು ನಾವು ಚುನಾವಣಾ ನೀತಿ ಸಂಹಿತೆ ಜಾರಿ ಇದ್ದ ಸಂದರ್ಭದಲ್ಲಿ ನಿರ್ಮಾಣ ಮಾಡಿಕೊಂಡಿದ್ದೇವೆ, ಈ ಶ್ರಮಿಕ ನಗರಕ್ಕೆ ಸಂಬಂಧಿಸಿ ಹಲವು ಹೋರಾಟಗಳು ನೀತಿ ಸಂಹಿತೆ ಜಾರಿಯಾಗಿದ್ದಾಗಲೇ ನಡೆದಿವೆ, ಅದರಲ್ಲಿ ಯಶಸ್ವಿಯೂ ಆಗಿದ್ದೇವೆಂದು ಸ್ಮರಿಸಿದರು.

ಈ ಹಿಂದೆ ಬಿಜೆಪಿ ಸರ್ಕಾರವಿದ್ದಾಗ ಇಲ್ಲಿನ ಶ್ರಮಿಕ ನಿವಾಸಿಗಳನ್ನು ಎತ್ತಂಗಡಿ ಮಾಡಲು ಪ್ರಯತ್ನ ನಡೆಯಿತು. ಇವೆಲ್ಲವನ್ನು ನಾವು ಹೋರಾಟದಿಂದಲೇ ಹಿಮ್ಮೆಟ್ಟಿಸಿದ್ದೇವೆ. ಮಂಡ್ಯ ನಗರದ ಬಹುತೇಕ ಸ್ಲಂಗಳಿಗೆ ತನ್ನದೇ ಆತ ಸ್ವಂತ ಹೆಸರುಗಳಿಲ್ಲ, ಕಾಳಪ್ಪನವರ ಹೆಸರಿನಲ್ಲಿರುವ ಇದೊಂದು ನಗರ ಮಾತ್ರ ಸ್ವಂತ ಹೆಸರಿನಿಂದ ಕರೆಸಿಕೊಳ್ಳುತ್ತದೆ. ಇದಕ್ಕೆ ಹಲವು ನಮ್ಮ ಜೊತೆ ಕೈಜೋಡಿಸಿದ್ದಾರೆ. ಅಂತಹವರಲ್ಲಿ ದಲಿತ ಸಂಘರ್ಷ ಸಮಿತಿ ಗುರುಪ್ರಸಾದ್ ಕೆರಗೋಡು ಪ್ರಮುಖರು ಎಂದರು.

ಈ ದಿನ.ಕಾಂ ಮುಖ್ಯ ಸಂಪಾದಕ ಡಿ.ಉಮಾಪತಿ ಮಾತನಾಡಿದರು. ಶ್ರಮಿಕ ಶಕ್ತಿಯ ಸುಬ್ರಮಣ್ಯ ಪ್ರಾಸ್ತಾವಿಕ ಭಾಷಣ ಮಾಡಿದರು. ವೇದಿಕೆಯಲ್ಲಿ ಪ್ರಗತಿಪರ ಚಿಂತಕ ಎಂ.ವಿ.ಕೃಷ್ಣ, ಕರ್ನಾಟಕ ಜನಶಕ್ತಿ ಪ್ರಧಾನ ಕಾರ್ಯದರ್ಶಿ ಮಲ್ಲಿಗೆ, ನುಡಿ ಕರ್ನಾಟಕ.ಕಾಂ ಮುಖ್ಯಸ್ಥ ಎನ್.ನಾಗೇಶ್, ನೆಲದನಿ ಬಳಗದ ಮಂಗಲ ಲಂಕೇಶ್, ಅರುಣೋದಯ ಕಲಾತಂಡದ ಮಂಜುಳ ಉಪಸ್ಥಿತರಿದ್ದರು. ಆರ್‍ಮಗಂ ಸ್ವಾಗತಿಸಿದರೆ, ಸಹನಾ ನಿರೂಪಿಸಿದರು. ಇದೇ ಸಂದರ್ಭದಲ್ಲಿ 30 ಹೆಚ್ಚು ರಕ್ತದಾನಿಗಳು ರಕ್ತದಾನ ಮಾಡಿ ಮಾನವೀಯತೆ ಮೆರೆದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!