Wednesday, September 18, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ ನಗರಸಭೆ ಕಾಂಗ್ರೆಸ್ ತೆಕ್ಕೆಗೆ ಬೀಳೋದು ಪಕ್ಕಾ!

ಮಂಡ್ಯ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ನಾಳೆ (ಆ.28) ಚುನಾವಣೆ ನಡೆಯಲಿದ್ದು, ಭಾರೀ ಕುತೂಹಲ ಮೂಡಿಸಿದೆ.

ಮಂಡ್ಯ ನಗರಸಭೆಯಲ್ಲಿ ಬಹುಮತ ಹೊಂದಿರುವ ಜೆಡಿಎಸ್ ಶತಾಯಗತಾಯ ಎರಡನೇ ಅವಧಿಗೂ ಅಧಿಕಾರ ಉಳಿಸಿಕೊಳ್ಳಲು ಪ್ರಯತ್ನ ನಡೆಸಿದರೆ, ಮತ್ತೊಂದೆಡೆ ಜೆಡಿಎಸ್ ಅನ್ನು ಅಧಿಕಾರಕ್ಕೆ ಏರದಂತೆ ತಡೆದು ತಾನು ಅಧಿಕಾರ ಹಿಡಿಯಲು ಕಾಂಗ್ರೆಸ್ ತಂತ್ರಗಾರಿಕೆ ನಡೆಸಿದೆ.

nudikarnataka.com

ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಹೆಚ್.ಡಿ. ಕುಮಾರಸ್ವಾಮಿ ಮತ್ತು ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಅವರಿಗೆ ಮಂಡ್ಯ ನಗರಸಭೆ ಚುನಾವಣೆ ಪ್ರತಿಷ್ಠೆಯ ವಿಷಯವಾಗಿದ್ದು, ಇದುವರೆಗಿನ ರಾಜಕೀಯ ಲೆಕ್ಕಾಚಾರಗಳನ್ನು ನೋಡಿದರೆ ಕಾಂಗ್ರೆಸ್ ತೆಕ್ಕೆಗೆ ಮಂಡ್ಯ ನಗರಸಭೆ ಬೀಳುವುದು ಪಕ್ಕಾ ಎನ್ನುವ ವಾತಾವರಣ ಕಂಡು ಬರುತ್ತಿದೆ.

35 ಸದಸ್ಯರ ಬಲದ ಮಂಡ್ಯ ನಗರಸಭೆಯಲ್ಲಿ ಜೆಡಿಎಸ್ 18, ಕಾಂಗ್ರೆಸ್ 10, ಬಿಜೆಪಿ 2 ಹಾಗೂ 5 ಪಕ್ಷೇತರ ಸದಸ್ಯರಿದ್ದಾರೆ. ಇವರೊಂದಿಗೆ ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕ ಪಿ.ರವಿಕುಮಾರ್ ಗೌಡ ಹಾಗೂ ಕೇಂದ್ರ ಸಚಿವ ಹೆಚ್‍.ಡಿ. ಕುಮಾರಸ್ವಾಮಿ ಅವರು ಕೂಡ ಮತ ಚಲಾಯಿಸುವ ಹಕ್ಕು ಹೊಂದಿದ್ದು, ಒಟ್ಟಾರೆ ಸಂಖ್ಯಾಬಲ 37ಕ್ಕೇರಿದೆ.

ಕಾಂಗ್ರೆಸ್ ತಂತ್ರಗಾರಿಕೆ

ಮಂಡ್ಯ ನಗರಸಭೆಯನ್ನು ಮತ್ತೆ ತನ್ನ ಹಿಡಿತಕ್ಕೆ ತೆಗೆದುಕೊಳ್ಳುವ ಮೂಲಕ ಜೆಡಿಎಸ್ ಅಧಿಕಾರ ಉಳಿಸಿಕೊಳ್ಳುವ ಪ್ರಯತ್ನ ನಡೆಸಿದ್ದರೆ, ಕಾಂಗ್ರೆಸ್ ಪಕ್ಷವು ಜೆಡಿಎಸ್ ಅನ್ನು ಅಧಿಕಾರದ ಗಾದಿಯಿಂದ ಪಕ್ಕಕ್ಕೆ ಸರಿಸಿ ತಾನು ಅಧಿಕಾರದ ಚುಕ್ಕಾಣಿ ಹಿಡಿಯಲು ತಂತ್ರಗಾರಿಕೆ ಹೆಣೆದಿದೆ.

nudikarnataka.com

ಕೃಷಿ ಸಚಿವ ಚಲುವರಾಯಸ್ವಾಮಿ ಅವರ ಮಾರ್ಗದರ್ಶನದಲ್ಲಿ ಶಾಸಕ ಗಣಿಗ ರವಿಕುಮಾರ್ ಮಂಡ್ಯ ನಗರಸಭೆಯನ್ನು ಕಾಂಗ್ರೆಸ್ ತೆಕ್ಕೆಗೆ ಸೇರಿಸಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಟಕ್ಕರ್ ಕೊಡಲು ನಾನಾ ತಂತ್ರಗಾರಿಕೆ ನಡೆಸುತ್ತಿದ್ದಾರೆ.

ಈಗಾಗಲೇ ಮೊದಲ ಅವಧಿಗೆ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ ಜೆಡಿಎಸ್ ಪಕ್ಷದ ಎಚ್.ಎಸ್. ಮಂಜು ಅವರನ್ನು ಲೋಕಸಭಾ ಚುನಾವಣೆಯ ಸಂದರ್ಭದಲ್ಲಿಯೇ ಕಾಂಗ್ರೆಸ್ ತನ್ನತ್ತ ಸೆಳೆದಿತ್ತು. ಈಗ ಅವರೇ ಮುಂದಿನ ಹದಿನಾಲ್ಕು ತಿಂಗಳ ಅವಧಿಗೆ ಮತ್ತೆ ನಗರಸಭೆ ಅಧ್ಯಕ್ಷ ಗಾದಿಗೇರಲು ಬಂಡವಾಳ ತೊಡಗಿಸಿದ್ದಾರೆ. ಎಚ್.ಎಸ್. ಮಂಜು ತನ್ನೊಂದಿಗೆ ಜೆಡಿಎಸ್ ಸದಸ್ಯರಾದ ಭಾರತೀಶ್ ಹಾಗೂ ರಜಿನಿ ಅವರನ್ನು ಸೇರಿಸಿಕೊಂಡು ಜೆಡಿಎಸ್ ಪಕ್ಷಕ್ಕೆ ಬಿಸಿ ಮುಟ್ಟಿಸಿದ್ದಾರೆ. ಇನ್ನು ಇಬ್ಬರು ಜೆಡಿಎಸ್ ಸದಸ್ಯರನ್ನು ಚುನಾವಣೆಯ ದಿನ ಕಾಂಗ್ರೆಸ್ ಪಕ್ಷದ ಪರವಾಗಿ ವಾಲಿಸುವ ಭರವಸೆಯನ್ನು ನೀಡಿದ್ದಾರೆ.ಇದು ಅಧಿಕಾರ ಹಿಡಿಯಲು ಹೊರಟಿರುವ ಜೆಡಿಎಸ್ ವರಿಷ್ಟರ ತಳಮಳಕ್ಕೆ ಕಾರಣವಾಗಿದೆ.

nudikarnataka.com

ವಿಪ್ ಜಾರಿ

ಕಾಂಗ್ರೆಸ್ ಜೊತೆ ಸೇರಿ ಅಧ್ಯಕ್ಷ ಸ್ಥಾನ ಏರಲು ಹೊರಟಿರುವ ಮಂಜು ಪ್ರಯತ್ನಕ್ಕೆ ಬ್ರೇಕ್ ಹಾಕಲು ಹೊರಟಿರುವ ಜೆಡಿಎಸ್ ವರಿಷ್ಠರು, ಜಿಲ್ಲಾಧ್ಯಕ್ಷ ಡಿ.ರಮೇಶ್ ಮೂಲಕ ತಮ್ಮ ಪಕ್ಷದ ಎಲ್ಲಾ 18 ಸದಸ್ಯರಿಗೂ ವಿಪ್ ಜಾರಿ ಗೊಳಿಸಿ ಸ್ವೀಕೃತಿ ಪಡೆದುಕೊಂಡಿದ್ದಾರೆ. ವಿಪ್ ಜಾರಿ ಮಾಡಿ ಅಧಿಕಾರದಿಂದ ಕೆಳಗಿಳಿಸುವ ಹೊತ್ತಿಗೆ ಅವಧಿಯೇ ಮುಗಿದು ಹೋಗುತ್ತದೆ ಎಂಬ ದೂರಾಲೋಚನೆಯಿಂದಲೇ ಜೆಡಿಎಸ್ ನ 3 ರಿಂದ 4 ಸದಸ್ಯರು ಕಾಂಗ್ರೆಸ್ ಪರ ಕೈ ಎತ್ತಲಿದ್ದಾರೆ ಎಂಬ ಮಾತುಗಳು ಹರಿದಾಡುತ್ತಿದೆ.

ಅಧ್ಯಕ್ಷ ಗಾದಿಗಾಗಿ ಪಕ್ಷಾಂತರ

ಜೆಡಿಎಸ್ ಪಕ್ಷಕ್ಕೆ ಅಧಿಕಾರ ಕೊಡಿಸಲು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಸಾಕಷ್ಟು ಕಸರತ್ತು ನಡೆಸಿದ್ದಾರೆ. ಜೆಡಿಎಸ್ ನ 15 ಸದಸ್ಯರು ಹಾಗೂ ಬಿಜೆಪಿಯ ಇಬ್ಬರು ಸದಸ್ಯರು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರನ್ನು ದೆಹಲಿ ಪ್ರವಾಸದ ವೇಳೆ ಭೇಟಿ ಮಾಡಿದ್ದಾರೆ. ತನಗೆ ಅಧ್ಯಕ್ಷ ಸ್ಥಾನ ನೀಡಬೇಕು ಎಂದು ಹಠ ಹಿಡಿದಿದ್ದ ಕಾಂಗ್ರೆಸ್ ಪಕ್ಷದ ಹಿರಿಯ ಸದಸ್ಯ ಟಿ.ಕೆ. ರಾಮಲಿಂಗಯ್ಯ ಜೆಡಿಎಸ್ ಪಕ್ಷಕ್ಕೆ ಹಾರಿರುವುದು ಸಖತ್ ಇಂಟರೆಸ್ಟಿಂಗ್ ಆಗಿದೆ.

ಜೆಡಿಎಸ್ ನ ಎಚ್.ಎಸ್. ಮಂಜು ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಕರೆತಂದು ಅಧ್ಯಕ್ಷ ಗಾದಿಗೆ ಮತ್ತೆ ಏರಿಸಲು ಮುಂದಾಗಿರುವ ಜಿಲ್ಲಾ ಕಾಂಗ್ರೆಸ್ ನಾಯಕರ ನಡೆಯಿಂದ ಸಿಟ್ಟಿಗೆದ್ದಿರುವ ಟಿ.ಕೆ.ರಾಮಲಿಂಗಯ್ಯ ಕಾಂಗ್ರೆಸ್ ಗೆ ಕೈ ಕೊಟ್ಟು ಜೆಡಿಎಸ್ ಜೊತೆ ಕೈ ಜೋಡಿಸಿದ್ದಾರೆ. ಇದರಿಂದ 10 ಸದಸ್ಯ ಬಲವಿದ್ದ ಕಾಂಗ್ರೆಸ್ ಸದಸ್ಯರ ಸಂಖ್ಯೆ 9ಕ್ಕೆ ಇಳಿದಿದೆ.

ಮಂಡ್ಯ ಕ್ಷೇತ್ರದ ಶಾಸಕ ಪಿ.ರವಿಕುಮಾರ್ ಗೌಡ ಅವರು ಮತದ ಹಕ್ಕು ಹೊಂದಿರುವುದರಿಂದ ಕಾಂಗ್ರೆಸ್ ಬಲ 10ಕ್ಕೇರಿದೆ. ಜೆಡಿಎಸ್ ನ ಮೂವರು ಸದಸ್ಯರು, ಐವರು ಪಕ್ಷೇತರರು ಕಾಂಗ್ರೆಸ್ ಪಕ್ಷದ ಪರವಿದ್ದು, ಒಟ್ಟಾರೆ 18ಕ್ಕೇರಿದೆ. ಈ ಮಧ್ಯೆ ಜೆಡಿಎಸ್ ನ ಒಬ್ಬರು ಅಥವಾ ಇಬ್ಬರು ಚುನಾವಣೆಯ ದಿನದಂದು ಕಾಂಗ್ರೆಸ್ ಪರ ನಿಲ್ಲಲಿದ್ದಾರೆ ಎಂಬ ಆಶಾಭಾವನೆಯನ್ನು ಕಾಂಗ್ರೆಸ್ ವರಿಷ್ಟರು ಹೊಂದಿದ್ದಾರೆ. ಒಂದು ವೇಳೆ ಈ ಸಾಧ್ಯತೆ ಸಂಭವಿಸಿದರೆ ಮಂಡ್ಯ ನಗರಸಭೆಯ ಗದ್ದುಗೆ ಕಾಂಗ್ರೆಸ್ ಪಕ್ಷದ ಪಾಲಾಗಲಿದೆ.

ಈಗಾಗಲೇ ಕೃಷಿ ಸಚಿವ ಚಲುವರಾಯಸ್ವಾಮಿ ಅವರು ತನ್ನ ಪ್ರಯತ್ನದಿಂದ ನಾಗಮಂಗಲ ಪುರಸಭೆಯಲ್ಲಿ ಜೆಡಿಎಸ್ ಬಹುಮತವಿದ್ದರೂ, ಅದನ್ನು ಅಧಿಕಾರದಿಂದ ಕೆಳಗಿಳಿಸುವುವಲ್ಲಿ ಯಶಸ್ವಿಯಾಗಿದ್ದಾರೆ. ಈ ಹಿನ್ನಲೆಯಲ್ಲಿ ನಾಳೆ(ಆ.28) ನಡೆಯುವ ಮಂಡ್ಯ ನಗರಸಭೆ ಅಧ್ಯಕ್ಷ- ಉಪಾಧ್ಯಕ್ಷರ ಚುನಾವಣೆ ಭಾರೀ ಕುತೂಹಲ ಮೂಡಿಸಿರುವುದಂತೂ ಸತ್ಯ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!